ಭೀಕರ ಪ್ರವಾಹಕ್ಕೆ ಭಾರತ, ಚೀನಾ ಹೊಣೆ: ಪರಿಹಾರ ಕೋರಿದ ನೇಪಾಳ; 1000ರ ಗಡಿ ದಾಟಿದ ಸಾವಿನ ಸಂಖ್ಯೆ

Published : Sep 02, 2026, 06:17 AM IST
nepal flood

ಸಾರಾಂಶ

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಭಾರತ, ಚೀನಾ ಮತ್ತು ಅಮೆರಿಕದ ಕೈಗಾರಿಕಾ ಮಾಲಿನ್ಯವೇ ಕಾರಣ ಎಂದು ಆರೋಪಿಸಿರುವ ನೇಪಾಳ, ಪರಿಹಾರಕ್ಕೆ ಆಗ್ರಹಿಸಿದೆ. ಈ ಪ್ರವಾಹದಲ್ಲಿ ಸಾವಿನ ಸಂಖ್ಯೆ 1000 ದಾಟಿದ್ದು, ನೀರಿನ ರಭಸಕ್ಕೆ ಅಲುಗಾಡದೆ ನಿಂತ ಮನೆಯೊಂದು ವೈರಲ್ ಆಗಿದೆ.

ಕಾಠ್ಮಂಡು: ತಮ್ಮ ರಾಷ್ಟ್ರದಲ್ಲಿ ಸಂಭವಿಸಿರುವ ಭೀಕರ ಪ್ರವಾಹಕ್ಕೆ ಚೀನಾ, ಅಮೆರಿಕ ಮತ್ತು ಭಾರತ ಹೊಣೆ ಎಂದಿರುವ ನೇಪಾಳ, ಮಾನವೀಯ ನೆರವಿನ ಜತೆಗೆ ಹವಾಮಾನ ಪರಿಹಾರಕ್ಕೂ ಆಗ್ರಹಿಸಿದೆ.

ವಿದೇಶಾಂಗ ಸಚಿವ ಶಿಸಿರ್ ಖನಾಲ್ ಮಾತನಾಡಿ, ‘ಪ್ರಮುಖ ಕೈಗಾರಿಕಾ ಆರ್ಥಿಕತೆಗಳಿಗೆ ಹೋಲಿಸಿದರೆ, ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಗೆ ನೇಪಾಳದ ಕೊಡುಗೆ ಅತ್ಯಲ್ಪ. ಆದರೆ ಅದರಿಂದಾಗುತ್ತಿರುವ ಸಮಸ್ಯೆಗೆ ನಾವೇ ಅಧಿಕ ಬೆಲೆ ತೆರಬೇಕಾಗುತ್ತಿದೆ. ಚೀನಾವು ವಿಶ್ವದಲ್ಲೇ ಅತಿ ಹೆಚ್ಚು ಕೈಗಾರಿಕಾ ಹೊರಸೂಸುವಿಕೆ ಮಾಡುವ ದೇಶವಾಗಿದ್ದು, ನಂತರದ ಸ್ಥಾನಗಳಲ್ಲಿ ಅಮೆರಿಕ ಮತ್ತು ಭಾರತ ಇವೆ. ಆದ್ದರಿಂದ ನಮಗೆ ಪರಿಹಾರ ಒದಗಿಸುವ ಜವಾಬ್ದಾರಿ ಈ ದೇಶಗಳದ್ದು. ನಾವು ನೆರವಿನ ಜತೆಗೆ ನ್ಯಾಯ ಮತ್ತು ಪರಿಹಾರವನ್ನೂ ಕೇಳುತ್ತಿದ್ದೇವೆ. ಇದು ಕಾನೂನುಬದ್ಧತೆ ಮತ್ತು ನೈತಿಕ ಹೊಣೆಗಾರಿಕೆಯ ವಿಷಯವೂ ಆಗಿದೆ’ ಎಂದು ಹೇಳಿದರು. ಅಂತಹ ಪರಿಹಾರವನ್ನು ಕೋರುವ ಔಪಚಾರಿಕ ಪ್ರಕ್ರಿಯೆಯನ್ನು ಆರಂಭಿಸಿರುವುದಾಗಿಯೂ ಖನಾಲ್‌ ತಿಳಿಸಿದರು.

ಮನೆಯ ಸುತ್ತಲೂ ನೀರು ಆವರಿಸಿದಾಗ ಹನುಮಾನ್‌ ಚಾಲೀಸಾ ಪಠಿಸುತಲ್ಲಿದ್ದೆ

ಆ.26ರಂದು ಸಂಭವಿಸಿದ ದಿಢೀರ್‌ ಪ್ರವಾಹದಿಂದ ನೇಪಾಳದ 8 ಜಿಲ್ಲೆಗಳಲ್ಲಿ ಮನೆ, ಸೇತುವೆ, ರಸ್ತೆಗಳೆಲ್ಲಾ ಕೊಚ್ಚಿಕೊಂಡು ಹೋಗುತ್ತಿದ್ದರೆ, ತ್ರಿಶೂಲಿ ಎಂಬಲ್ಲಿ ಹಸಿರು ಮನೆಯೊಂದು ಕೊಂಚವೂ ಅಲುಗದೆ ಗಟ್ಟಿಯಾಗಿ ನಿಂತಿತ್ತು. ಮನೆಯವರೆಲ್ಲಾ ಮೇಲಿನ ಮಹಡಿಯಲ್ಲಿ ನಿಂತು ಸುತ್ತಲೂ ಸೃಷ್ಟಿಯಾಗಿದ್ದ ವಿಧ್ವಂಸವನ್ನು ನೋಡುತ್ತಿದ್ದ ದೃಶ್ಯ ವೈರಲ್‌ ಆಗಿದ್ದವು.

ಆ ಕ್ಷಣವನ್ನು ಸ್ಮರಿಸಿದ ಮನೆಯ ಒಡತಿ ಲಕ್ಷ್ಮೀ ಪಾಂಡೆ, ‘ಅದೃಷ್ಟವಿದ್ದುದರಿಂದ ಬದುಕಿದೆವು. ನಮಗೆ ಪುನರ್ಜನ್ಮ ಸಿಕ್ಕಂತಾಗಿದೆ. ನೆರೆ ನೀರು ಮನೆಯೊಳಗೆ ಬರುತ್ತಿದ್ದಂತೆ 6 ಜನ ಮೇಲಿನ ಮಹಡಿಗೆ ಹೋದೆವು. ನಾನಲ್ಲಿ ನಿಂತು ಶಿವನನ್ನು ಸ್ಮರಿಸುತ್ತ ಹನುಮಾನ್‌ ಚಾಲೀಸಾ ಪಠಿಸತೊಡಗಿದೆ. ಭೂಕಂಪವಾದಾಗಲೂ ನಮಗದರ ಅನುಭವ ಆಯಿತು. ಅಕ್ಕಪಕ್ಕದ ಮನೆಗಳೆಲ್ಲಾ ಬಿದ್ದುಹೋದವು’ ಎಂದು ಭಾವುಕರಾಗಿ ನುಡಿದಿದ್ದಾರೆ.

ಅವರ ಪತಿ ಪ್ರಕಾಶ್‌ ಮಾತನಾಡಿ, ‘ಹತ್ತಿರದ ಅಂಗಡಿಯಲ್ಲಿದ್ದ ನನಗೆ ಪ್ರವಾಹ ಬರುತ್ತಿರುವುದು ತಿಳಿಯುತ್ತಿದ್ದಂತೆ ಮನೆಯತ್ತ ಓಡಿದೆ. ಎಲ್ಲರನ್ನು ಹೊರಗೆ ಕರೆತರಬೇಕು ಎಂದುಕೊಳ್ಳುವಷ್ಟರಲ್ಲಿ ನೀರು ಒಳಗೆ ಬಂದಾಗಿತ್ತು. ಆದ್ದರಿಂದ 4ನೇ ಮಹಡಿಗೆ ಓಡಿದೆವು. ಅಲ್ಲಿಗೂ ನೀರು ನುಗ್ಗಿದಾಗ ಇನ್ನೂ ಮೇಲೆ ಹತ್ತಿ ನಿಂತೆವು’ ಎಂದರು. ಮನೆಯ ಬಗ್ಗೆ ವಿವರಿಸುತ್ತಾ, ‘ಇದು 40 ವರ್ಷದಷ್ಟು ಹಳೆಯ ಮನೆ. ಉತ್ತಮ ವಸ್ತುಗಳನ್ನು ಬಳಸಿ ನಿರ್ಮಿಸಲಾಗಿದೆ. ಇದು ನದಿಗೆ ಸಮೀಪದಲ್ಲಿರುವ ಕಾರಣ, ಅಡಿಪಾಯದ ಬಗ್ಗೆ ವಿಶೇಷ ಗಮನ ಹರಿಸಿ, ರಸ್ತೆಗೆ ಬಳಸುವ ವಸ್ತುಗಳಿಂದ 3 ಪದರಗಳನ್ನು ನಿರ್ಮಾಣ ಮಾಡಲಾಗಿದೆ’ ಎಂದರು.

ನೇಪಾಳದಲ್ಲಿ 1000ರ ಗಡಿ ದಾಟಿದ ಸಾವಿನ ಸಂಖ್ಯೆ

ಭೀಕರ ಪ್ರವಾಹದಿಂದ ನಲುಗಿರುವ ನೇಪಾಳದಲ್ಲಿ ಸಾವಿನ ಸಂಖ್ಯೆ 1000ದ ಗಡಿ ದಾಟಿದೆ. ಇದೇ ವೇಳೆ ದೇಶದ 8 ಜಿಲ್ಲೆಗಳಾದ್ಯಂತ ಕೆಸರಿನಲ್ಲಿ ಹೂತಿರುವ ಶವಗಳಿಗಾಗಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಈ ನಡುವೆ, ದೇಶದಲ್ಲಿ ಮತ್ತೊಂದು ಪ್ರವಾಹದ ಆತಂಕ ಎದುರಾಗಿದೆ. ಹಲವಾರು ಜಿಲ್ಲೆಗಳಲ್ಲಿ ನದಿ ನೀರಿನ ಮಟ್ಟ ಅಪಾಯದ ಹಂತ ತಲುಪಿದ್ದು, ಅಧಿಕಾರಿಗಳು ನದಿಗಳ ಸಮೀಪ ವಾಸಿಸುವ ಜನರು ಜಾಗರೂಕರಾಗಿರುವಂತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈಗಾಗಲೇ ಪ್ರವಾಹದಿಂದ ತತ್ತರಿಸಿರುವ ನುವಾಕೋಟ್‌, ರಸುವಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮತ್ತೊಂದು ಪ್ರವಾಹದ ಭೀತಿ ತೀವ್ರವಾಗಿದೆ.

ಹಲವು ಜಿಲ್ಲೆಗಳಲ್ಲಿ ನದಿಗಳ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಶವಗಳ ಹುಡುಕಾಟಕ್ಕೆ ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಇದುವರೆಗೆ ಸುಮಾರು 12,000 ಜನರನ್ನು ರಕ್ಷಿಸಲಾಗಿದ್ದು, ಸುಮಾರು 4,000 ಜನರಿಗಾಗಿ ಶೋಧ ಮುಂದುವರಿದಿದೆ.===

ಚಿತ್ವಾನ್ ಜಿಲ್ಲೆಯಲ್ಲಿ 321, ನವಾಲ್‌ಪರಸಿ ಪೂರ್ವದಲ್ಲಿ 216, ನವಾಲ್‌ಪರಸಿ ಪಶ್ಚಿಮದಲ್ಲಿ 170, ನುವಾಕೋಟ್‌ನಲ್ಲಿ 95, ಗೋಖಾದಲ್ಲಿ 65, ಧಾಡಿಂಗ್‌ನಲ್ಲಿ 55, ತನಹುನ್‌ನಲ್ಲಿ 38 ಮತ್ತು ರಸುವಾದಲ್ಲಿ 27 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ನೇಪಾಳ ಸರ್ಕಾರವು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ 21,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನೇಪಾಳ ಜಲಪ್ರಳಯದಲ್ಲಿ ಗಟ್ಟಿಯಾಗಿ ಉಳಿದ ಒಂಟಿ ಮನೆ ರಹಸ್ಯ ಕೊನೆಗೂ ಬಯಲಾಯ್ತು
H-1B ಬಳಿಕ H-4 ವೀಸಾಕ್ಕೆ ಕೈಹಾಕಿದ ಟ್ರಂಪ್​! ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಲಕ್ಷ ಲಕ್ಷ ಭಾರತೀಯರು