
ಕಾಠ್ಮಂಡು(ಜೂ.19): ಭಾರತಕ್ಕೆ ಸೇರಿದ 3 ಭೂ ಪ್ರದೇಶ ಒಳಗೊಂಡ ಹೊಸ ನಕ್ಷೆ ತಯಾರಿ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ತರುವ ಮಸೂದೆಗೆ ನೇಪಾಳ ಅಧ್ಯಕ್ಷ ವಿದ್ಯಾ ದೇವಿ ಭಂಡಾರಿ ಗುರುವಾರ ಸಹಿ ಹಾಕಿದ್ದಾರೆ. ಚೀನಾ ಹಾಗೂ ಭಾರತ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿರುವಾಗಲೇ ಈ ಬೆಳವಣಿಗೆ ನಡೆದಿರುವುದು ಮಹತ್ವ ಪಡೆದುಕೊಂಡಿದೆ.
ಭಾರತದ ಕಾಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರಾ ಪ್ರದೇಶಗಳನ್ನು ತನ್ನ ಭಾಗದಲ್ಲಿ ಸೇರಿಸಿಕೊಂಡ ಹೊಸ ನಕ್ಷೆಯನ್ನು ಇತ್ತೀಚೆಗಷ್ಟೇ ನೇಪಾಳ ಬಿಡುಗಡೆ ಮಾಡಿತ್ತು. ಇದನ್ನು ಅಂಗೀಕರಿಸಲು ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿತ್ತು. ಇತ್ತೀಚೆಗೆ ಸಂಸತ್ತಿನ ಕೆಳಮನೆ ಸರ್ವಾನುಮತದಿಂದ ಬೆಂಬಲ ವ್ಯಕ್ತಪಡಿಸಿದ್ದು, ಸಂಸತ್ತಿನ ಮೇಲ್ಮನೆಯಾದ ನ್ಯಾಷನಲ್ ಅಸೆಂಬ್ಲಿ ಕೂಡ ಗುರುವಾರ ಸರ್ವಾನುಮತದಿಂದ ಮಸೂದೆಯನ್ನು ಅನುಮೋದಿಸಿದೆ. ಹಾಜರಿದ್ದ ಎಲ್ಲಾ 57 ಸದಸ್ಯರು ಮಸೂದೆ ಪರ ಮತ ಚಲಾಯಿಸಿದರು. ಇದರ ಬೆನ್ನಲ್ಲೇ ಅಧ್ಯಕ್ಷರ ಅಂಕಿತಕ್ಕೆ ರವಾನಿಸಲಾಗಿತ್ತು. ಅವರು ತಡ ಮಾಡದೇ ಸಹಿ ಹಾಕಿದ್ದಾರೆ.
ಚೀನಾ ಹೊಸ ಕುತಂತ್ರ: ನೇಪಾಳದ ಶಾಲೆಗಳಲ್ಲಿ ಮ್ಯಾಂಡರಿನ್ ಕಡ್ಡಾಯ!
ಮೇ 8ರಂದು ಭಾರತದ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಅವರು ಉತ್ತರಾಖಂಡದ ದಾರ್ಚುಲಾದಿಂದ ಲಿಪುಲೇಖ್ ಪಾಸ್‌ಗೆ ಸಂಪರ್ಕ ಕಲ್ಪಿಸುವ 80 ಕಿ.ಮೀ ಉದ್ದದ ಹೊಸ ಮಾರ್ಗ ಉದ್ಘಾಟಿಸಿದ್ದರು. ಮಾನಸ ಸರೋವರಕ್ಕೆ ಸುಲಭ ಸಂಪರ್ಕ ಒದಗಿಸುವ ಈ ಮಾರ್ಗ ಆರಂಭಕ್ಕೆ ಚೀನಾ ವಿರೋಧವಿದ್ದ ಕಾರಣ, ಅದು ನೇಪಾಳವನ್ನು ಈ ವಿಷಯದಲ್ಲಿ ಎತ್ತಿಕಟ್ಟಿತ್ತು.
ಪರಿಣಾಮ ಭಾರತದ ವಶದಲ್ಲಿರುವ ಭಾರತದ ಕಾಲಪಾನಿ, ಲಿಪುಲೇಖ್ ಮತ್ತು ಲಿಂಪಿಯಧುರಾ ತನ್ನದೆಂದ ದಿಢೀರನೆ ಹೊಸ ಕ್ಯಾತೆ ತೆಗೆದ ನೇಪಾಳ ಈ ಸಂಬಂಧ ಹೊಸ ನಕ್ಷೆ ರಚಿಸಿ ಅದನ್ನು ಬಿಡುಗಡೆ ಮಾಡಿತ್ತು.
ದುರ್ಬಲ ಎಂದು ಭಾವಿಸಿ ಭಾರತವನ್ನು ಕೆಣಕಬೇಡಿ: ನೆರೆ ರಾಷ್ಟ್ರಗಳಿಗೆ ಸಿಂಗ್ ಎಚ್ಚರಿಕೆ
ಆದರೆ ನಕ್ಷೆಗೆ ಭಾರತ ಆರಂಭದಿಂದಲೂ ವಿರೋಧ ವ್ಯಕ್ತಪಡಿಸಿಕೊಂಡೇ ಬಂದಿದೆ. ಕೃತಕವಾಗಿ ನಕ್ಷೆಯಲ್ಲಿ ಮಾಡಲಾದ ಯಾವುದೇ ವಿಸ್ತರಣೆಯನ್ನು ಒಪ್ಪಲಾಗದು ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ