
ಲಂಡನ್(ಜು.07): ಬ್ರಿಟನ್‌ನಲ್ಲಿ ಬೋರಿಸ್ ಜಾನ್ಸನ್ ಸರ್ಕಾರಕ್ಕೆ ಬಹುದೊಡ್ಡ ಬಿಕ್ಕಟ್ಟು ಎದುರಾಗಿದೆ. ಕಳೆದ 48 ಗಂಟೆಗಳಲ್ಲಿ 5 ಕ್ಯಾಬಿನೆಟ್ ಸಚಿವರು ಸೇರಿದಂತೆ 39 ಸಚಿವರು ರಾಜೀನಾಮೆ ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ಜಾನ್ಸನ್ ಕುರ್ಚಿ ತೊರೆಯುವಂತೆ ಒತ್ತಡ ಹೆಚ್ಚಿದೆ. ಕಳೆದ ತಿಂಗಳು, ಸರ್ಕಾರವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇಬ್ಬರು ಸಚಿವರಾದ ರಿಷಿ ಸುನಕ್ ಮತ್ತು ಸಾಜಿದ್ ಜಾವಿದ್ ಕೂಡ ಜಾನ್ಸನ್ ಅವರ ತಂಡವನ್ನು ತೊರೆದಿದ್ದಾರೆ. ಒಂದು ತಿಂಗಳಲ್ಲಿ ಬೋರಿಸ್ ಸರ್ಕಾರಕ್ಕೆ ಇದು ಎರಡನೇ ಬಾರಿ ಸಂಕಷ್ಟ ಎದುರಾಗಿದೆ.
ಆರೋಗ್ಯ ಸಚಿವ ಸಾಜಿದ್ ಜಾವಿದ್ ಮತ್ತು ಭಾರತೀಯ ಮೂಲದ ಹಣಕಾಸು ಸಚಿವ ರಿಷಿ ಸುನಕ್ ಅವರ ರಾಜೀನಾಮೆಯೊಂದಿಗೆ ಪ್ರಾರಂಭವಾದ ಸಂಚಲನ ಬುಧವಾರವೂ ಮುಂದುವರೆಯಿತು. ಹಣಕಾಸು ಸೇವೆಗಳ ಕಾರ್ಯದರ್ಶಿ ಜಾನ್ ಗ್ಲೆನ್, ಭದ್ರತಾ ಕಾರ್ಯದರ್ಶಿ ರಾಚೆಲ್ ಮೆಕ್ಲೀನ್, ರಫ್ತು ಮತ್ತು ಸಮಾನತೆ ಸಚಿವ ಮೈಕ್ ಫ್ರೀರ್, ವಸತಿ ಮತ್ತು ಸಮುದಾಯಗಳ ಜೂನಿಯರ್ ಸಚಿವ ನೀಲ್ ಒ'ಬ್ರೇನ್, ಶಿಕ್ಷಣ ಇಲಾಖೆಯ ಕಿರಿಯ ಕಾರ್ಯದರ್ಶಿ ಅಲೆಕ್ಸ್ ಬರ್ಗರ್ಟ್ ಸೇರಿದಂತೆ 39, ಜಾನ್ಸನ್ ಅವರ ಮೇಲೆ ಅವಿಶ್ವಾಸ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದಾರೆ.
ಬ್ರಿಟನ್ ರಾಜಕೀಯದಲ್ಲಿ ಎದ್ದಿರುವ ಬಿರುಗಾಳಿಯಿಂದ ಅನೇಕ ಪ್ರಶ್ನೆಗಳು ಎದ್ದಿದ್ದು, ಅಲ್ಲಿ ಮುಂದೆ ಏನಾಗುತ್ತದೆ? ಬೋರಿಸ್ ಕುರ್ಚಿಯನ್ನು ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದೇ? ಮತ್ತು ಜಾನ್ಸನ್ ರಾಜೀನಾಮೆ ನೀಡಿದರೆ, ಹೊಸ ಪ್ರಧಾನಿಯನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? ಎಂಬಿತ್ಯಾದಿ ವಿಚಾರಗಳು ಸದ್ದು ಮಾಡುತ್ತಿವೆ.
ಬೋರಿಸ್ ಜಾನ್ಸನ್ ಸ್ಥಿತಿ ಏನಾಗಬಹುದು?
ಬೋರಿಸ್ ಜಾನ್ಸನ್ ಕಳೆದ ತಿಂಗಳು ಪಾರ್ಟಿಗೇಟ್ ವಿಷಯದ ಬಗ್ಗೆ ವಿಶ್ವಾಸ ಮತ ಗೆದ್ದಿದ್ದರು. ಕನ್ಸರ್ವೇಟಿವ್ ಪಕ್ಷದ ನಿಯಮಗಳ ಪ್ರಕಾರ, 12 ತಿಂಗಳವರೆಗೆ ಅವರ ವಿರುದ್ಧ ಎರಡನೇ ಅವಿಶ್ವಾಸ ನಿರ್ಣಯವನ್ನು ತರಲು ಸಾಧ್ಯವಿಲ್ಲ. ಏತನ್ಮಧ್ಯೆ, ಈಗ ಜಾನ್ಸನ್ ಅವರ ಸ್ವಂತ ಪಕ್ಷದ ಕೆಲವು ಸಂಸದರು ಈ 12 ತಿಂಗಳ ವಿನಾಯಿತಿ ಅವಧಿಯನ್ನು ಕಡಿಮೆ ಮಾಡಲು ಅಥವಾ ತೆಗೆದುಹಾಕಲು ಬಯಸುತ್ತಿದ್ದಾರೆ. ಇನ್ನು ಕೆಲ ಸಂಸದರು ಸಂಪುಟದ ಉಳಿದ ಸಚಿವರ ಬಳಿಯೂ ತನ್ನಣತೆಯೇ ರಾಜೀನಾಮೆ ನೀಡಬೇಕು ಎಂದು ಮನವಿ ಮಾಡುತ್ತಿದ್ದಾರೆ. ಬೋರಿಸ್ ರಾಜೀನಾಮೆ ನೀಡುವಂತೆ ಒತ್ತಾಯಿಸುವುದು ಇದರ ಸರಳ ಉದ್ದೇಶವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಬೋರಿಸ್ ಜಾನ್ಸನ್ ಬಹುಮತವನ್ನು ಕಳೆದುಕೊಂಡರೆ, ಅವರು ರಾಜೀನಾಮೆ ನೀಡಿ ಹೊಸ ಚುನಾವಣೆಗಳನ್ನು ಘೋಷಿಸಬಹುದು.
ಬೋರಿಸ್ ಜಾನ್ಸನ್ ಈಗ ಏನು ಹೇಳುತ್ತಿದ್ದಾರೆ?
ಬೋರಿಸ್ ಜಾನ್ಸನ್ ಪ್ರಧಾನಿ ಕುರ್ಚಿ ಬಿಡಲು ಸಿದ್ಧರಿಲ್ಲ. ಹೀಗಿರುವಾಗ 'ನನ್ನ ರಾಜೀನಾಮೆಯು ಅವಧಿಪೂರ್ವ ಚುನಾವಣೆಗಳಿಗೆ ಕಾರಣವಾಗುತ್ತದೆ, ಅದರಲ್ಲಿ ಪಕ್ಷವು ಸೋಲನ್ನು ಎದುರಿಸಬೇಕಾಗಬಹುದು' ಎಂದಿದ್ದಾರೆ. ಅಲ್ಲದೇ ಕಷ್ಟಕರ ಸಂದರ್ಭಗಳಲ್ಲಿ ಬೃಹತ್ ಜನಾದೇಶ ಸಿಕ್ಕಾಗ, ಪ್ರಧಾನ ಮಂತ್ರಿ ಮುಂದುವರಿಯುತ್ತಾರೆ. ನಾನು ಕೂಡಾ ಅದನ್ನೇ ಮಾಡಲಿದ್ದೇನೆ.." ಎಂದು ತನ್ನ ಮುಂದಿನ ನಡೆಯನ್ನು ಸ್ಪಷ್ಟಪಡಿಸಿದ್ದಾರೆ.
ಜಾನ್ಸನ್ ಎದುರಿರುವ ಆಯ್ಕೆಗಳೇನು?
ಇಂತಹ ಪರಿಸ್ಥಿತಿಯಲ್ಲಿ, ಬೋರಿಸ್ ಜಾನ್ಸನ್ ಮೂರು ಆಯ್ಕೆಗಳನ್ನು ಹೊಂದಿದ್ದಾರೆ: -
ಮೊದಲು - ಜಾನ್ಸನ್ ಅವರು ರಾಜೀನಾಮೆ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಬೇಕು. ಹಲವು ಸಚಿವರು ಒತ್ತಡ ಹೇರಿದ್ದರೂ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಎರಡನೆಯದು- ಇನ್ನೂ ಕೆಲವು ಸಚಿವರು ರಾಜೀನಾಮೆ ನೀಡಬೇಕು ಮತ್ತು ಜಾನ್ಸನ್ ಅವರನ್ನು ಕುರ್ಚಿ ಬಿಡಲು ಒತ್ತಡ ಹೇರಬೇಕು. ಇನ್ನು ಕೆಲವು ಸಚಿವರು ಶೀಘ್ರವೇ ಸಂಪುಟದಿಂದ ನಿರ್ಗಮಿಸಲಿದ್ದಾರೆ ಎಂದು ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಯಲ್ಲಿ ಹೇಳಲಾಗುತ್ತಿದೆ.
ಮೂರನೇ ಆಯ್ಕೆ: ಪಕ್ಷದ 12 ತಿಂಗಳ ವಿನಾಯಿತಿ ನಿಯಮವನ್ನು ಬದಲಾಯಿಸಬೇಕು. ಈ ಬಗ್ಗೆ ಹಲವು ಸಚಿವರು ಸಲಹೆಗಳನ್ನು ನೀಡಿದ್ದಾರೆ.
ಹೊಸ ನಾಯಕನ ಆಯ್ಕೆ ಹೇಗೆ?
ಬ್ರಿಟನ್‌ನಲ್ಲಿ ಹೊಸ ನಾಯಕನ ನಾಮನಿರ್ದೇಶನಕ್ಕೆ 2 ಸಂಸದರ ಪ್ರಸ್ತಾವನೆ ಅಗತ್ಯ. ಹಲವು ಪಕ್ಷದ ನಾಯಕರು ಪ್ರಧಾನಿ ಹುದ್ದೆಗೆ ಹಕ್ಕು ಚಲಾಯಿಸಬಹುದು. ಪಕ್ಷದ ಸಂಸದರು ಬಹು ಸುತ್ತಿನ ಮತದಾನ ಮಾಡಬೇಕಾಗುತ್ತದೆ. ಕೇವಲ 2 ಅಭ್ಯರ್ಥಿಗಳು ಕಣದಲ್ಲಿ ಉಳಿಯುವವರೆಗೆ ಈ ಮತದಾನ ನಡೆಯಲಿದೆ. ಸಾಮಾನ್ಯವಾಗಿ ಈ ಮತದಾನ ಮಂಗಳವಾರ ಮತ್ತು ಗುರುವಾರದಂದು ನಡೆಯುತ್ತದೆ. ಕೊನೆಯ 2 ಅಭ್ಯರ್ಥಿಗಳಿಗೂ ಮತದಾನ ನಡೆಯಲಿದೆ. ಇವರಲ್ಲಿ ಯಾರು ಗೆಲ್ಲುತ್ತಾರೋ ಅವರೇ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ