ಸೇನಾಬಲದಿಂದ ಹೊರ್ಮುಜ್ ಜಲಸಂಧಿ ತೆರೆಯುವುದಾಗಿ ಟ್ರಂಪ್ ಘೋಷಣೆ, ಹೆಚ್ಚಿದ ಯುದ್ಧ ಭೀತಿ

Published : Mar 14, 2026, 09:56 PM IST
trump iran

ಸಾರಾಂಶ

ಸೇನಾಬಲದಿಂದ ಹೊರ್ಮುಜ್ ಜಲಸಂಧಿ ತೆರೆಯುವುದಾಗಿ ಟ್ರಂಪ್ ಘೋಷಣೆ, ಹೆಚ್ಚಿದ ಯುದ್ಧ ಭೀತಿ, ಏರ್‌ಸ್ಟ್ರೈಕ್ ಹಾಗೂ ಮಿಸೈಲ್ ದಾಳಿ ನಡುವೆ ಇದೀಗ ಸೇನೆಯನ್ನು ಇರಾನ್ ನತ್ತ ನುಗ್ಗಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. 

ವಾಷಿಂಗ್ಟನ್ (ಮಾ.14): ಇರಾನ್ ಮೇಲಿನ ಯುದ್ದ ತೀವ್ರಗೊಳ್ಳುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಇರಾನ್ ಈಗಾಗಲೇ ಭಾರತದ ತೈಲ ಹಾಗೂ ಗ್ಯಾಸ್ ಟ್ಯಾಂಕರ್ ಹಡುಗು ಸಾಗಲು ಅವಕಾಶ ನೀಡಿದೆ. ಆದರೆ ಟ್ರಂಪ್ ಇಂದಿನ ಘೋಷಣೆಯಿಂದ ಇದೀಗ ಭಾರತ ಮಾತ್ರವಲ್ಲ ವಿಶ್ವದ ಆತಂಕ ಹೆಚ್ಚಿದೆ. ಯುದ್ಧದಿಂದಾಗಿ ಸ್ಥಗಿತಗೊಂಡಿರುವ ಹೋರ್ಮುಜ್ ಜಲಸಂಧಿಯನ್ನು ಸೇನಾ ಬಲದಿಂದ ಪುನಃ ತೆರೆಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಅಂತರಾಷ್ಟ್ರೀಯ ತೈಲ ಸಾಗಾಟಕ್ಕೆ ಅತ್ಯಂತ ಪ್ರಮುಖವಾಗಿರುವ ಈ ಮಾರ್ಗವನ್ನು ತೆರೆಯಲು ಟ್ರಂಪ್, ಯುನೈಟೆಡ್ ಕಿಂಗ್‌ಡಮ್ (ಯುಕೆ) ಸೇರಿದಂತೆ ತಮ್ಮ ಮಿತ್ರ ರಾಷ್ಟ್ರಗಳ ಸೇನಾ ಸಹಾಯವನ್ನು ಕೋರಿದ್ದಾರೆ.

ಹೋರ್ಮುಜ್ ಜಲಸಂಧಿಯ ನಿಯಂತ್ರಣವನ್ನು ಸೇನಾ ಕಾರ್ಯಾಚರಣೆ ಮೂಲಕ ವಶಪಡಿಸಿಕೊಳ್ಳುತ್ತೇವೆ. ಜಾಗತಿಕ ಮಾರುಕಟ್ಟೆಯಲ್ಲಿನ ಬಿಕ್ಕಟ್ಟು ಪರಿಹರಿಸಲು ಮಿತ್ರ ರಾಷ್ಟ್ರಗಳು ನಮ್ಮೊಂದಿಗೆ ನಿಲ್ಲಬೇಕು ಎಂದು ಟ್ರಂಪ್ ಕರೆ ನೀಡಿದ್ದಾರೆ. ಅಷ್ಟೇ ಅಲ್ಲ, ಹೋರ್ಮುಜ್ ವಶಪಡಿಸಿಕೊಳ್ಳಲು ಚೀನಾ ಕೂಡ ತನ್ನ ಯುದ್ಧನೌಕೆಗಳನ್ನು ಕಳುಹಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಈ ಬೆಳವಣಿಗೆಯಿಂದ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತಷ್ಟು ಹೆಚ್ಚಾಗಿದೆ. ಯುದ್ಧ ತೀವ್ರಗೊಂಡ ಕಾರಣ, ಹೋರ್ಮುಜ್ ಜಲಸಂಧಿ ಮೂಲಕ ನಡೆಯುತ್ತಿದ್ದ ತೈಲ ವ್ಯಾಪಾರ ಬಹುತೇಕ ನಿಂತುಹೋಗಿದೆ. ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳು ಎಲ್‌ಪಿಜಿ ಮತ್ತು ತೈಲದ ಕೊರತೆಯ ಆತಂಕದಲ್ಲಿವೆ. ಈ ನಡುವೆ ಟ್ರಂಪ್ ಅವರ ಹೊಸ ಘೋಷಣೆ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ.

ಖಾರ್ಗ್ ದ್ವೀಪದ ಸೇನಾ ಕೇಂದ್ರಗಳ ಮೇಲೆ ಅಮೆರಿಕ ದಾಳಿ

ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪದಲ್ಲಿರುವ ಸೇನಾ ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. ಈ ದಾಳಿಯ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಅಮೆರಿಕ ಈ ವಿಷಯವನ್ನು ಖಚಿತಪಡಿಸಿದೆ. "ನಮ್ಮ ಇಂಧನ ವ್ಯವಸ್ಥೆಗಳ ಮೇಲೆ ದಾಳಿ ನಡೆದರೆ ಇಡೀ ಪ್ರದೇಶ ಕತ್ತಲಲ್ಲಿ ಮುಳುಗಲಿದೆ" ಎಂಬ ಇರಾನ್‌ನ ಎಚ್ಚರಿಕೆಯನ್ನು ಕಡೆಗಣಿಸಿ, ಅಮೆರಿಕ ಈ ದಾಳಿ ನಡೆಸಿದೆ. ಇರಾನ್‌ನ ಶೇ. 90ರಷ್ಟು ತೈಲ ರಫ್ತು ಇದೇ ಖಾರ್ಗ್ ದ್ವೀಪದಿಂದ ನಡೆಯುತ್ತದೆ. ಆದರೆ, ಅಮೆರಿಕವು ದ್ವೀಪದ ಸೇನಾ ನೆಲೆಯನ್ನೇ ಗುರಿಯಾಗಿಸಿ ದಾಳಿ ಮಾಡಿದೆ ಎಂದು ಹೇಳಿದೆ. ಮೊದಲ ಸುತ್ತಿನ ದಾಳಿಯಲ್ಲೇ ತಮ್ಮ ವಾಯು ರಕ್ಷಣಾ ವ್ಯವಸ್ಥೆ ಸಕ್ರಿಯಗೊಂಡು ಪ್ರತಿರೋಧ ಒಡ್ಡಿದೆ ಎಂದು ಇರಾನ್ ಹೇಳಿಕೊಂಡಿದೆ. ಇದರ ಬೆನ್ನಲ್ಲೇ, ಡೊನಾಲ್ಡ್ ಟ್ರಂಪ್ ದಾಳಿಯ ವಿಡಿಯೋವನ್ನು ಬಹಿರಂಗಪಡಿಸಿದ್ದಾರೆ.

ಹೋರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ಅಡ್ಡಿಪಡಿಸಿದರೆ, ಇಲ್ಲಿನ ತೈಲ ಉತ್ಪಾದನಾ ಕೇಂದ್ರಗಳ ಮೇಲೂ ದಾಳಿ ಮಾಡುವುದಾಗಿ ಅಮೆರಿಕ ಬೆದರಿಕೆ ಹಾಕಿದೆ. ಮಧ್ಯಪ್ರಾಚ್ಯಕ್ಕೆ ಯುಎಸ್‌ಎಸ್ ಟ್ರಿಪೊಲಿ ಸೇರಿದಂತೆ 3 ದೈತ್ಯ ಯುದ್ಧನೌಕೆಗಳು ಮತ್ತು 2200 ನಾವಿಕರನ್ನು ಅಮೆರಿಕ ಕಳುಹಿಸಿದೆ. ಇತ್ತ ಇರಾನ್ ಕೂಡ ಪ್ರತಿದಾಳಿ ಮುಂದುವರಿಸಿದೆ. ಬಾಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ನಡೆದ ದಾಳಿ ಇವುಗಳಲ್ಲಿ ಇತ್ತೀಚಿನದು. ಇಲ್ಲಿನ ಹೆಲಿಪ್ಯಾಡ್ ಮೇಲೆ ದಾಳಿ ನಡೆದಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ಏರ್‌ಬೇಸ್ ಮೇಲೆ ನಡೆದ ದಾಳಿಯಲ್ಲಿ ಅಮೆರಿಕದ ಐದು ಇಂಧನ ಟ್ಯಾಂಕರ್‌ಗಳು ಹಾನಿಗೊಳಗಾಗಿವೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ, ಆದರೆ ಇದು ಇನ್ನೂ ಖಚಿತಪಟ್ಟಿಲ್ಲ. ಕತಾರ್‌ನಲ್ಲಿ ಇಂದು ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ವಸತಿ ಪ್ರದೇಶಗಳನ್ನು ತಾತ್ಕಾಲಿಕವಾಗಿ ಖಾಲಿ ಮಾಡಿಸಲಾಗಿದೆ. ಕುವೈತ್‌ನಲ್ಲಿ ಇಂಧನ ಕ್ಷೇತ್ರದ ಮೇಲೆ ಯಾವುದೇ ದಾಳಿ ನಡೆದಿಲ್ಲ ಮತ್ತು ಅನಿಲ ಸೋರಿಕೆಯಾಗಿಲ್ಲ ಎಂದು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿದೆ. ಯುಎಇಯ ಸೆಂಟ್ರಲ್ ದುಬೈನಲ್ಲಿ ಇಂದು ಡ್ರೋನ್ ಅವಶೇಷಗಳು ಬಿದ್ದಿವೆ, ಆದರೆ ಯಾವುದೇ ಬೆಂಕಿ ಅಥವಾ ಗಾಯಗಳಾಗಿಲ್ಲ. ಯುಎಇ ಸೇರಿದಂತೆ ನೆರೆಯ ರಾಷ್ಟ್ರಗಳ ಮೇಲೆ ಇರಾನ್ ನಡೆಸುತ್ತಿರುವ ದಾಳಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ನೆರೆಯ ದೇಶಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸುವಂತೆ ಹಮಾಸ್ ಸಂಘಟನೆ ಇರಾನ್‌ಗೆ ಮನವಿ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

90 ಸೆಕೆಂಡುಗಳ ಬದುಕು..ಇಸ್ರೇಲ್, ಇರಾನ್‌ ಜನರ ಅನುಕ್ಷಣದ ತಳಮಳ!
ಯುದ್ಧದಿಂದ ಸರ್ಕಾರಿ ನೌಕರರ ಸಂಬಳ ಕಟ್, ಇಂಧನ ಕಟ್, ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು