ಮತ್ತೆ ತೀವ್ರಗೊಂಡ ಮಧ್ಯಪ್ರಾಚ್ಯ ಬಿಕ್ಕಟ್ಟು: ಜಗತ್ತಿಗೆ ಮತ್ತೆ ಆರ್ಥಿಕ ಸಂಕಷ್ಟದ ಭೀತಿ?

By Kannadaprabha NewsFirst Published Jan 19, 2024, 10:21 AM IST
Highlights

3 ವರ್ಷ ಜಗತ್ತಿನ ಎಲ್ಲಾ ಚಟುವಟಿಕೆ ತಡೆ ಹಿಡಿದು ಆರ್ಥಿಕತೆಗೆ ಪೆಟ್ಟು ನೀಡಿದ್ದ ಕೋವಿಡ್‌ ಮುಕ್ತಾಯವಾಯಿತು ಎನ್ನುವಾಗಲೇ ರಷ್ಯಾ ಉಕ್ರೇನ್‌ ಯುದ್ಧ ಆರಂಭವಾಗಿತ್ತು. ಅದು ಕೊಂಚ ತಣ್ಣಗಾಗುತ್ತಿದ್ದಂತೆ ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಬಿಕ್ಕಟ್ಟು ಆರಂಭವಾಗಿದ್ದು ಈ ಬೆಳವಣಿಗೆಗಳು ಮತ್ತೊಮ್ಮೆ ಜಗತ್ತಿನ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುವ ಆತಂಕಕ್ಕೆ ಕಾರಣವಾಗಿದೆ.

3 ವರ್ಷ ಜಗತ್ತಿನ ಎಲ್ಲಾ ಚಟುವಟಿಕೆ ತಡೆ ಹಿಡಿದು ಆರ್ಥಿಕತೆಗೆ ಪೆಟ್ಟು ನೀಡಿದ್ದ ಕೋವಿಡ್‌ ಮುಕ್ತಾಯವಾಯಿತು ಎನ್ನುವಾಗಲೇ ರಷ್ಯಾ ಉಕ್ರೇನ್‌ ಯುದ್ಧ ಆರಂಭವಾಗಿತ್ತು. ಅದು ಕೊಂಚ ತಣ್ಣಗಾಗುತ್ತಿದ್ದಂತೆ ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಬಿಕ್ಕಟ್ಟು ಆರಂಭವಾಗಿದ್ದು, ಇಸ್ರೇಲ್‌ ಹಮಾಸ್‌ ಯುದ್ಧ, ಪಾಕ್‌- ಇರಾನ್‌ ಪರಸ್ಪರ ದಾಳಿ, ಸರಕು ಸಾಗಣೆ ಹಡಗುಗಳ ಮೇಲೆ ಹೌತಿ ಉಗ್ರರ ದಾಳಿ ಮತ್ತು ಹೌತಿ ಉಗ್ರರ ತಡೆಯಲು ಅಮೆರಿಕ ನಡೆಸುತ್ತಿರುವ ಕಾರ್ಯಾಚರಣೆಗಳು ಹೊಸ ಸಂಘರ್ಷದ ವಾತಾವರಣ ಸೃಷ್ಟಿಸಿವೆ. ಈ ಬೆಳವಣಿಗೆಗಳು ಮತ್ತೊಮ್ಮೆ ಜಗತ್ತಿನ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುವ ಆತಂಕಕ್ಕೆ ಕಾರಣವಾಗಿದೆ.

ಇಸ್ರೇಲ್‌ ಹಮಾಸ್‌ ಯುದ್ಧ

ಇಸ್ರೇಲ್‌ ಮತ್ತು ಹಮಾಸ್ ಉಗ್ರರ ನಡುವಿನ ದಶಕಗಳ ಕಾಲದ ಬಿಕ್ಕಟ್ಟು ಇದೀಗ ಮತ್ತೆ ಹೆಚ್ಚಾಗಿದ್ದು, 2023ರ ಅ.7ರಂದು ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ದಾಳಿ ನಡೆಸಿ 1139 ಜನರನ್ನು ಹತ್ಯೆ ಮಾಡಿ, ಸುಮಾರು 240 ಜನರನ್ನು ಒತ್ತೆಯಾಳುಗಳಾಗಿ ಕರೆದೊಯ್ದಿದ್ದರು. ಇದಕ್ಕೆ ಪ್ರತಿಕಾರವಾಗಿ ದಾಳಿ ಆರಂಭಿಸಿದ ಇಸ್ರೇಲ್‌ 3 ತಿಂಗಳ ಕಾಲ ನಿರಂತರವಾಗಿ ವಾಯುದಾಳಿ ನಡೆಸಿದ್ದು, ಸಾವಿರಾರು ಮಂದಿ ಪ್ಯಾಲೆಸ್ತೀನಿಯನ್ನರನ್ನು ಹತ್ಯೆ ಮಾಡಿದೆ. ಈ ಯುದ್ಧದಲ್ಲಿ ಇಸ್ರೇಲ್‌ ಹಾಗೂ ಹಮಾಸ್ ಉಗ್ರರಲ್ಲದೇ ಹಮಾಸ್‌ ಉಗ್ರರಿಗೆ ಬೆಂಬಲವಾಗಿರುವ ಲೆಬನಾನ್‌, ಇರಾನ್‌ಗಳು ಹಾಗೂ ಇಸ್ರೇಲ್‌ಗೆ ಬೆಂಬಲವಾಗಿರುವ ಅಮೆರಿಕ ಯುದ್ಧದಲ್ಲಿ ಪರೋಕ್ಷವಾಗಿ ಭಾಗಿಯಾಗಿವೆ. ಇದರಿಂದಾಗಿ ಈ ಯುದ್ಧ ಮತ್ತಷ್ಟು ತೀವ್ರತೆ ಪಡೆದುಕೊಳ್ಳಲಿದ್ದು, ಮತ್ತಷ್ಟು ದೇಶಗಳು ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗುವ ಸಾಧ್ಯತೆಗಳು ದಟ್ಟವಾಗಿವೆ.

ಇಸ್ರೇಲ್ ಪರ ಕದನಕಣಕ್ಕೆ ಧುಮುಕಿದೆ ಅಮೆರಿಕಾ: ವಿಶ್ವಯುದ್ಧ ಸೃಷ್ಟಿಸುತ್ತಾ ಮಧ್ಯಪ್ರಾಚ್ಯದ ಶೀತಲಸಮರ..?

ಪಾಕಿಸ್ತಾನ- ಇರಾನ್‌ ಯುದ್ಧ ಭೀತಿ

ಪಾಕಿಸ್ತಾನದಲ್ಲಿರುವ ಸುನ್ನಿ ಮುಸ್ಲಿಮರ ಉಗ್ರ ಸಂಘಟನೆಯನ್ನು ಗುರಿಯಾಗಿಸಿಕೊಂಡು ಇರಾನ್‌ ಬಲೂಚಿಸ್ತಾನ ಪ್ರಾಂತ್ಯದ ಮೇಲೆ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಬಳಸಿ ದಾಳಿ ಮಾಡಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕೂಡಾ ಇರಾನ್‌ನ ಬಲೂಚಿ ಸಂಘಟನೆಗಳ ಮೇಲೆ ದಾಳಿ ನಡೆಸಿದೆ. ಇದು ಉಭಯ ದೇಶಗಳ ನಡುವೆ ಯುದ್ಧದ ಭೀತಿ ಹುಟ್ಟುಹಾಕಿದೆ. ಒಂದು ವೇಳೆ ಯುದ್ಧ ಆರಂಭವಾದರೆ ತೈಲ ಉತ್ಪಾದನೆ, ರಫ್ತು, ಸಾಗಣೆಗಳ ಮೇಲೆ ಅದು ನೇರವಾದ ಪರಿಣಾಮ ಬೀರಲಿದೆ.

ಕೆಂಪು ಸಮುದ್ರದ ಮೇಲೆ ಹೌತಿ ದಾಳಿ

ಜಗತ್ತಿನಲ್ಲಿನ ಅತಿ ಹೆಚ್ಚು ಸರಕು ಸಾಗಣೆ ಹಡಗುಗಳು ಓಡಾಡುವ ಮಾರ್ಗವಾದ ಕೆಂಪು ಸಮುದ್ರದಲ್ಲಿ ಇರಾನ್‌ ಬೆಂಬಲಿತ ಹೌತಿ ಉಗ್ರರು ಹಡಗುಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಇಸ್ರೇಲ್‌ ಯುದ್ಧ ಆರಂಭವಾದ ಬಳಿಕ ಈ ದಾಳಿಗಳ ಪ್ರಮಾಣ ಹೆಚ್ಚಾಗಿದ್ದು, ಭಾರತ ಹಾಗೂ ಅಮೆರಿಕದ ಹಡಗುಗಳ ಮೇಲೂ ದಾಳಿ ನಡೆದಿದೆ. ಈ ದಾಳಿಯಿಂದಾಗಿ ಸರಕು ಸಾಗಣೆಯಲ್ಲಿ ಸಾಕಷ್ಟು ವ್ಯತ್ಯಯ ಉಂಟಾಗಲಿದ್ದು, ಇದು ಹಲವು ದೇಶಗಳ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. ಈ ಉಗ್ರರನ್ನು ತಡೆಯಲು ಅಮೆರಿಕ ಪ್ರತಿ ದಾಳಿ ಆರಂಭಿಸಿರುವುದರಿಂದ ಇದು ಮತ್ತಷ್ಟು ವಿಸ್ತೃತ ವ್ಯಾಪ್ತಿ ಪಡೆದುಕೊಳ್ಳುವ ಸಾಧ್ಯತೆ ಇದೆ.

ತನ್ನ ಕೆಣಕಿದವರ ಜಾಗ ಖಾಲಿ ಮಾಡಿಸಿದ ಇಸ್ರೇಲ್‌, ಗಾಜಾ ಪ್ರಜೆಗಳಿಗೆ ಊರುಬಿಡಲು ಐಡಿಎಫ್‌ ಆರ್ಡರ್‌!

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗುವ ಪರಿಣಾಮಗಳು

  • ಕಚ್ಚಾತೈಲ ಉತ್ಪಾದನೆ ಕಡಿತ, ಬೆಲೆ ಭಾರೀ ಏರಿಕೆ ಭೀತಿ
  • ಕಚ್ಚಾತೈಲ ಸೇರಿ ಅಗತ್ಯ ವಸ್ತುಗಳ ಸಾಗಣೆಯಲ್ಲಿ ವ್ಯತ್ಯಯ
  • ಅಗತ್ಯ ವಸ್ತುಗಳ ಪೂರೈಕೆ ಕೊರತೆಯಿಂದ ಉತ್ಪಾದನೆ ಕುಂಠಿತ
  • ಯುದ್ಧಪೀಡಿತರ ನೆರೆಹೊರೆ ದೇಶಗಳಲ್ಲಿ ಬಡತನ ಹೆಚ್ಚುವ ಭೀತಿ
  • ಪ್ರವಾಸೋದ್ಯಮ, ಹೂಡಿಕೆ, ವ್ಯಾಪಾರದ ಮೇಲೆ ಅಡ್ಡ ಪರಿಣಾಮ
  • ಕಚ್ಚಾತೈಲ ಸೇರಿ ಅಗತ್ಯ ವಸ್ತು ಸಾಗಣೆ ವ್ಯತ್ಯಯ
     
click me!