* ವಿಶ್ವದಲ್ಲೇ ವೇಗದ ಪ್ರಗತಿ
* ಭಾರತದ ಜಿಡಿಪಿ ಚೀನಾಗಿಂತ ದುಪ್ಪಟ್ಟು
* ಈ ವರ್ಷ ಭಾರತದ ಜಿಡಿಪಿ ದರ ಶೇ.8.2: ಐಎಂಎಫ್
ವಾಷಿಂಗ್ಟನ್(ಏ.20): ಉಕ್ರೇನ್-ರಷ್ಯಾ ಯುದ್ಧ ಹಾಗೂ ಕೋವಿಡ್ ಪ್ರಭಾವದಿಂದ ವಿಶ್ವದ ಆರ್ಥಿಕತೆಯಲ್ಲಿ ಆತಂಕ ಸೃಷ್ಟಿಯಾಗಿದ್ದರೂ 2022ನೇ ಇಸವಿಯಲ್ಲಿ ಭಾರತ ಶೇ.8.2ರ ಪ್ರಗತಿ ದರ ಕಾಣಲಿದೆ. ತನ್ಮೂಲಕ ಇದು ಜಗತ್ತಿನಲ್ಲೇ ಅತಿ ವೇಗದ ಅಭಿವೃದ್ಧಿ ಹೊಂದಲಿರುವ ಆರ್ಥಿಕತೆ ಎನ್ನಿಸಿಕೊಳ್ಳಲಿದೆ. ಚೀನಾದ ಶೇ.4.4ರ ಪ್ರಗತಿ ದರಕ್ಕಿಂತ ಭಾರತ ದುಪ್ಪಟ್ಟು ವೇಗದಲ್ಲಿ ಪ್ರಗತಿ ಕಾಣಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮಂಗಳವಾರ ಹೇಳಿದೆ.
ಈ ನಡುವೆ, ಜಾಗತಿಕ ಆರ್ಥಿಕ ಬೆಳವಣಿಗೆ ದರ ಶೇ.3.6ರಷ್ಟುಇರಲಿದೆ. ಯುದ್ಧದ ಕಾರಣ 2021ರ ಶೇ.6.1ರ ಪ್ರಗತಿ ದರದಿಂದ ಭಾರೀ ಇಳಿಕೆ ಕಾಣಲಿದೆ ಎಂದು ಅದು ಹೇಳಿದೆ.
ಭಾರತ 2022ರಲ್ಲಿ ಶೇ.9.1ರ ಪ್ರಗತಿ ದರ ಕಾಣಲಿದೆ ಎಂದು ಕೆಲ ತಿಂಗಳ ಹಿಂದೆ ಐಎಂಎಫ್ ಹೇಳಿತ್ತು. ಆದರೆ ಈ ಅಂದಾಜನ್ನು ಶೇ.0.8ರಷ್ಟುಕಡಿಮೆ ಮಾಡಿ ಈಗ ಪರಿಷ್ಕರಿಸಿದೆ. ಇದೇ ವೇಳೆ 2023ರಲ್ಲಿ ಆರ್ಥಿಕ ಪ್ರಗತಿ ಶೇ.6.9ರಷ್ಟುಇರಲಿದೆ ಎಂದು ಹೇಳಿದೆ. ಉಕ್ರೇನ್ ಯುದ್ಧ, ತೈಲ ಬೆಲೆ ಏರಿಕೆ, ಆಹಾರ ಬೆಲೆ ಏರಿಕೆ ಕಾರಣ ಪ್ರಗತಿ ದರವನ್ನು ಕೊಂಚ ಇಳಿಕೆ ಮಾಡಿ ಐಎಂಎಫ್ ಪರಿಷ್ಕರಿಸಿದೆ.
2021ರಲ್ಲಿ ಭಾತ 8.9ರ ದರದಲ್ಲಿ ಬೆಳವಣಿಗೆ ಕಂಡಿತ್ತು.
ದಾಖಲೆಯ 27.07 ಲಕ್ಷ ಕೋಟಿ ತೆರಿಗೆ ಸಂಗ್ರಹ
: 2021-22 ರ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ಒಟ್ಟು 27.07 ಲಕ್ಷ ಕೋಟಿ ರು. ತೆರಿಗೆಯನ್ನು ಸಂಗ್ರಹಿಸಿದ್ದು, ಇದು ಸಾರ್ವಕಾಲಿಕ ಗರಿಷ್ಠವಾಗಿದೆ ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಶುಕ್ರವಾರ ತಿಳಿಸಿದ್ದಾರೆ.
ಆದಾಯ ತೆರಿಗೆ, ಕಾರ್ಪೊರೆಟ್ ತೆರಿಗೆ, ಕಸ್ಟಮ್ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿ ಏರಿಕೆಯಿಂದಾಗಿ ತೆರಿಗೆ ಜಿಡಿಪಿ ಅನುಪಾತ ಶೇ. 11.7ಕ್ಕೆ ಏರಿಕೆಯಾಗಿದ್ದು, ಇದು 1999ರ ನಂತರ ಎಂದರೆ ಕಳೆದ 23 ವರ್ಷಗಳಲ್ಲೇ ಅತ್ಯಧಿಕವಾಗಿದೆ ಎಂದು ತಿಳಿಸಿದ್ದಾರೆ.
‘ಬಜೆಟ್‌ನಲ್ಲಿ 22.17 ಲಕ್ಷ ಕೋಟಿ ರು. ತೆರಿಗೆ ಸಂಗ್ರಹಣೆಯನ್ನು ಅಂದಾಜಿಸಲಾಗಿತ್ತು. ಆದರೆ 2021-22ರ ಆರ್ಥಿಕ ವರ್ಷದಲ್ಲಿ ಬಜೆಟ್‌ನಲ್ಲಿ ಅಂದಾಜಿಸಿದ್ದಕ್ಕಿಂತ 5 ಲಕ್ಷ ಕೋಟಿ ಹೆಚ್ಚು ಒಟ್ಟು ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಶೇ.34 ರಷ್ಟುಏರಿಕೆ ಕಂಡುಬಂದಿದೆ. ಕಳೆದ ವರ್ಷ 20.27 ಲಕ್ಷ ಕೋಟಿ ರು. ತೆರಿಗೆ ಸಂಗ್ರಹವಾಗಿತ್ತು’ ಎಂದು ಬಜಾಜ್ ತಿಳಿಸಿದ್ದಾರೆ.
ತೆರಿಗೆ ಸಂಗ್ರಹ ಏರಿಕೆ
* ನೇರ ತೆರಿಗೆ 8.58 ಲಕ್ಷ ಕೋಟಿ ರು. ಶೇ.56.1
* ಪರೋಕ್ಷ ತೆರಿಗೆ 12.90 ಲಕ್ಷ ಕೋಟಿ ರು. ಶೇ.20
* ವೈಯಕ್ತಿಕ 7.49 ಲಕ್ಷ ಕೋಟಿ ರು. ಶೇ.43.0