* ವ್ಯಾಟಿಕನ್ ಸಿಟಿಯಲ್ಲಿ ಕ್ರೈಸ್ತರ ಪರಮೋಚ್ಚ ಧರ್ಮಗುರು ಭೇಟಿಯಾದ ಪ್ರಧಾನಿ
* ಹವಾಮಾನ ಬದಲಾವಣೆ, ಬಡತನ ನಿವಾರಣೆ ಬಗ್ಗೆ ಚರ್ಚೆ, ಭಾರತಕ್ಕೆ ಆಹ್ವಾನ
* 20 ನಿಮಿಷದ ಮಾತುಕತೆ 1 ತಾಸಿಗೆ ವಿಸ್ತರಣೆ
ವ್ಯಾಟಿಕನ್ ಸಿಟಿ(ಅ.31): ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು. 2013ರಲ್ಲಿ ಫ್ರಾನ್ಸಿಸ್ ಅವರು ಪೋಪ್ ಆದ ಬಳಿಕ ಭಾರತದ ಪ್ರಧಾನಿಯೊಬ್ಬರು ಅವರನ್ನು ಭೇಟಿ ಮಾಡಿದ್ದು ಇದೇ ಮೊದಲು. ಇಬ್ಬರ ನಡುವೆ 20 ನಿಮಿಷಗಳ ಕಾಲ ಮಾತುಕತೆ ಪೂರ್ವ ನಿಗದಿಯಾಗಿತ್ತಾದರೂ, ಮುಖಾಮುಖಿಯಾಗಿ ಇಬ್ಬರೂ ಒಂದು ತಾಸು ಪರಸ್ಪರ ಸಮಾಲೋಚನೆ ನಡೆಸಿದರು. ಇದೇ ವೇಳೆ, ಭಾರತಕ್ಕೆ ಭೇಟಿ ನೀಡುವಂತೆ ಪೋಪ್ ಅವರಿಗೆ ಮೋದಿ ಆಹ್ವಾನ ನೀಡಿದರು.
ಹವಾಮಾನ ಬದಲಾವಣೆ ಹಾಗೂ ಬಡತನ ನಿರ್ಮೂಲನೆ ವಿರುದ್ಧ ಹೋರಾಡಿ ಜಗತ್ತನ್ನು ಮತ್ತಷ್ಟುಉತ್ತಮಗೊಳಿಸುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪೋಪ್ ಹಾಗೂ ಮೋದಿ ಅವರ ನಡುವೆ ಮಾತುಕತೆ ನಡೆಯಿತು. ಈ ವೇಳೆ ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರೂ ಇದ್ದರು. ಇದೇ ವೇಳೆ ವ್ಯಾಟಿಕನ್ ನಗರ ದೇಶದ ವಿದೇಶಾಂಗ ಸಚಿವ ಕಾರ್ಡಿನಲ್ ಪೀಟ್ರೋ ಪರೋಲಿನ್ ಅವರನ್ನೂ ಪ್ರಧಾನಿ ಭೇಟಿಯಾದರು.
1999ರಲ್ಲಿ ಅಂದಿನ ಪೋಪ್ 2ನೇ ಜಾನ್ ಪಾಲ್ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭೇಟಿ ಮಾಡಿದ್ದರು.
ಪೋಪ್‌ಗೆ ಬೆಳ್ಳಿ ಮೋಂಬತ್ತಿ ಹೋಲ್ಡರ್, ಪುಸ್ತಕ ಕಾಣಿಕೆ:
ಭೇಟಿ ವೇಳೆ ಪೋಪ್ ಅವರಿಗೆ ಮೋದಿ ಅವರು ಒಂದು ಮೋಂಬತ್ತಿ ಇಡುವ ಬೆಳ್ಳಿ ಕ್ಯಾಂಡಲ್ ಹೋಲ್ಡರ್ ಹಾಗೂ ಹವಾಮಾನ ಬದಲಾವಣೆ ಕುರಿತಾದ ಪುಸ್ತಕವನ್ನು ನೀಡಿದರು.
ಇದಕ್ಕೆ ಪ್ರತಿಯಾಗಿ ಪೋಪ್ ಅವರು, ‘ಮರುಭೂಮಿ ಹಸಿರಾಗಲಿದೆ’ ಎಂದು ಬರೆದಿದ್ದ ಕಂಚಿನ ಫಲಕ ನೀಡಿ ಗೌರವಿಸಿದರು.
ಬಡ ರಾಷ್ಟ್ರಗಳಿಗೆ ಜಿ-20 ಲಸಿಕೆ?
ಜಗತ್ತಿನ ಬಡ ರಾಷ್ಟ್ರಗಳಿಗೆ ಈವರೆಗೆ ಕನಿಷ್ಠ ಪ್ರಮಾಣದ ಕೋವಿಡ್ ಲಸಿಕೆಯೂ ಸಿಗದ ಕಾರಣ, ಜಿ-20 ರಾಷ್ಟ್ರಗಳೆಲ್ಲ ಸೇರಿ ಲಸಿಕೆ ಪೂರೈಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಇಟಲಿಯಲ್ಲಿ ಶನಿವಾರ ಜಿ-20 ಶೃಂಗಸಭೆ ಆರಂಭವಾಗಿದ್ದು, ಭಾರತ, ಅಮೆರಿಕ ಸೇರಿದಂತೆ 20 ರಾಷ್ಟ್ರಗಳು ಭಾಗಿಯಾಗಿವೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಮುಂತಾದವರ ಸಮ್ಮುಖದಲ್ಲಿ ಇಟಲಿ ಪ್ರಧಾನಿ ಮಾರಿಯೋ ಡ್ರ್ಯಾಘಿ ಅವರು ಬಡ ರಾಷ್ಟ್ರಗಳಿಗೆ ಕೋವಿಡ್ ಲಸಿಕೆ ಪೂರೈಸುವಂತೆ ಕರೆ ನೀಡಿದ್ದಾರೆ. ಭಾನುವಾರ ಮೋದಿ ಅವರು ಕೋವಿಡ್, ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ ಬಗ್ಗೆ ಮಾತನಾಡಲಿದ್ದಾರೆ.
ಆಫ್ಘನ್ ಉಗ್ರರ ತಾಣವಾಗದಂತೆ ತಡೆಯಬೇಕು: ಮೋದಿ
ತಾಲಿಬಾನ್ ಕಪಿಮುಷ್ಠಿಗೆ ಸಿಲುಕಿದ ಅಷ್ಘಾನಿಸ್ತಾನ ಕುರಿತಾದ ವಿಶೇಷ ಜಿ-20 ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಆನ್‌ಲೈನ್ ಮುಖಾಂತರ ಪಾಲ್ಗೊಂಡರು.
ಇಟಲಿ ಪ್ರಧಾನಿ ಮಾರಿಯೋ ಡ್ರಾಘಿ ಅವರ ಅಧ್ಯಕ್ಷತೆಯ ಜಿ-20 ಶೃಂಗವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಆಫ್ಘನ್ ಪ್ರದೇಶವನ್ನು ಯಾವುದೇ ಕಾರಣಕ್ಕೂ ಜಾಗತಿಕ ಮತ್ತು ಪ್ರಾದೇಶಿಕವಾಗಿ ಉಗ್ರರ ತಾಣದ ಮೂಲವಾಗಿ ಪರಿವರ್ತನೆಯಾಗದಂತೆ ನೋಡಿಕೊಳ್ಳಬೇಕಿದೆ’ ಎಂದು ಪ್ರತಿಪಾದಿಸಿದರು. ಆಫ್ಘನ್ ಪ್ರಜೆಗಳು ಮತ್ತು ಎಲ್ಲರನ್ನು ಒಳಗೊಂಡ ಆಡಳಿತಕ್ಕೆ ಮಾನವೀಯ ನೆಲೆಯಲ್ಲಿ ತ್ವರಿತ ಮತ್ತು ತಡೆರಹಿತ ನೆರವಿನ ಹಸ್ತ ಚಾಚಬೇಕಿದೆ’ ಎಂದರು.
ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನು ಒಳಗೊಂಡ ಆಡಳಿತ ರಚನೆಯಾಗಬೇಕು. ಅಲ್ಲದೆ ಆಫ್ಘನ್‌ನಲ್ಲಿ ಮನೆ ಮಾಡಿರುವ ಮೂಲಭೂತವಾದಿ, ಭಯೋತ್ಪಾದನೆ ಮತ್ತು ಮಾದಕ ದ್ರವ್ಯದ ಕಳ್ಳ ಸಾಗಾಟದ ವಿರುದ್ಧ ಸಂಘಟಿತ ಹೋರಾಟಕ್ಕೆ ಮೋದಿ ಅವರು ಕರೆ ನೀಡಿದರು.