* ಫೇಸ್ ರೆಕಗ್ನಿಷನ್ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ ಯೋಧ
* ಚೀನಾ ಮೇಲೆ ನಿಗಾಕ್ಕೆ ‘ಲೋಕಲ್ ಅಸ್ತ್ರ’
* ಸೇನೆಯಿಂದ ದೇಶೀಯ ಥರ್ಮಲ್ ಇಮೇಜರ್ ಕೂಡ ಬಳಕೆ
* ಚೀನಿ ಸೈನಿಕರು ಗಡಿಗೆ ಹತ್ತಿರ ಬರುತ್ತಿದ್ದಂತೆ ಸಿಗುತ್ತೆ ಮಾಹಿತಿ
ನವದೆಹಲಿ(ಅ.31): ಗಡಿಯಲ್ಲಿ ಚೀನಾ(China) ಯೋಧರ ಚಟುವಟಿಕೆ ಹಾಗೂ ಗಸ್ತು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆ ದೇಶದ ಸೈನಿಕರ ಮೇಲೆ ಕಣ್ಗಾವಲು ಇಡಲು ಭಾರತೀಯ ಸೇನೆ(Indian Army) ಎರಡು ದೇಶೀಯ ‘ಅಸ್ತ್ರ’ಗಳನ್ನು ಕೂಡ ಬಳಕೆ ಮಾಡುತ್ತಿದೆ.
ಮೇಜರ್ ಭವ್ಯಾ ಶರ್ಮ(Major Bhavya Sharma) ಎಂಬುವರು ಫೇಸ್ ರೆಕಗ್ನಿಷನ್ ಸಾಫ್ಟ್‌ವೇರ್‌ವೊಂದನ್ನು ಅಭಿವೃದ್ಧಿಪಡಿಸಿದ್ದು, ಅದನ್ನು ಗಡಿಯಲ್ಲಿ ನಿಯೋಜನೆ ಮಾಡಲಾಗಿದೆ. ಮತ್ತೊಂದೆಡೆ ಭಾರತೀಯ ಸೇನೆಯೇ ಕೈಯಲ್ಲಿ ಹಿಡಿಯಬಹುದಾದ ಥರ್ಮಲ್ ಇಮೇಜರ್ ಅಭಿವೃದ್ಧಿಪಡಿಸಿದ್ದು, ಇದನ್ನೂ ಸರ್ವೇಕ್ಷಣೆಗೆ ಬಳಸುತ್ತಿದೆ. ಉಪಗ್ರಹ, ರಾಡಾರ್, ಸೆನ್ಸರ್, ಡ್ರೋನ್ ಹಾಗೂ ವಿಮಾನಗಳ ಜತೆಗೆ ಸೇನೆ ಈ ಸಾಧನಗಳನ್ನೂ ಬಳಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಹೇಗೆ ನಿಗಾ?:
1. ಮೇಜರ್ ಶರ್ಮಾ(Major Sharma) ಅವರ ಫೇಸ್ ರೆಕಗ್ನಿಷನ್ ಸಾಫ್ಟ್‌ವೇರ್ ಅನ್ನು ಅರುಣಾಚಲಪ್ರದೇಶದಲ್ಲಿ ನಿಯೋಜನೆ ಮಾಡಲಾಗಿದೆ. ಚೀನಾ ಯೋಧರು ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿಗೆ ಬರುತ್ತಿದ್ದಂತೆ ಅವರ ಮುಖವನ್ನು ಈ ಸಾಫ್ಟ್‌ವೇರ್ ಗುರುತಿಸುತ್ತದೆ. ಸೇನೆ ಈಗಾಗಲೇ ಸರ್ವೇಕ್ಷಣಾ ವಿಧಾನದ ಮೂಲಕ ಸಂಗ್ರಹಿಸಿರುವ ಚೀನಾ ಯೋಧರ ಮುಖಚರ್ಯೆ ಜತೆ ಹೋಲಿಕೆ ಮಾಡಿ ನೋಡುತ್ತದೆ. ಪೈಥಾನ್ ಲಾಂಗ್ವೇಜ್ ಕೋಡ್ ಅನ್ನು ಆಧರಿಸಿ ಈ ಸಾಫ್ಟ್‌ವೇರ್ ಕೆಲಸ ಮಾಡುತ್ತದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಯೋಧರ ಮುಖ ಗುರುತಿಸಿ ಮಾಹಿತಿ ನೀಡುತ್ತದೆ. ಈ ಸಾಫ್ಟ್‌ವೇರ್‌ಗೆ 5 ಸಾವಿರ ರು. ಖರ್ಚಾಗಿದ್ದು, ಇಂಟರ್ನೆಟ್ ಇಲ್ಲದೆಯೂ ಕಾರ್ಯನಿರ್ವಹಿಸುತ್ತದೆ.
2. ಸೇನೆ ತಾನೇ ಅಭಿವೃದ್ಧಿಪಡಿಸಿರುವ ಕೈಯಲ್ಲಿ ಬಳಸುವ ಥರ್ಮಲ್ ಇಮೇಜರ್ ಅನ್ನು ಎಲ್‌ಎಸಿಯ ಮುಂಚೂಣಿ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗಿದೆ. ಚೀನಾ ಸೈನಿಕರು, ವಾಹನಗಳು ಬಂದರೆ ಎಷ್ಟು ಸಂಖ್ಯೆಯಲ್ಲಿ ಯೋಧರು, ವಾಹನ ಇವೆ ಎಂಬ ಮಾಹಿತಿ ನೀಡುತ್ತದೆ. ಪ್ರಾಣಿಗಳ ಓಡಾಟವನ್ನೂ ಖಚಿತಪಡಿಸುತ್ತದೆ ಎಂದು ವರದಿಗಳು ಹೇಳಿವೆ.
ಹೊಸ ಗಡಿ ಕಾಯ್ದೆ: ಭಾರತದ ತೀವ್ರ ಒತ್ತಡಕ್ಕೆ ಮಣಿದ ಚೀನಾ!
ಪೂರ್ವ ಲಡಾಖ್‌ನಲ್ಲಿ 17 ತಿಂಗಳಿನಿಂದ ಗಡಿ ಬಿಕ್ಕಟ್ಟು ಮುಂದುವರಿದಿರುವಾಗಲೇ, ಚೀನಾ ಸಂಸತ್ತು ಅ.23ರಂದು ಹೊಸ ಗಡಿ ಮಸೂದೆ ಅಂಗೀಕರಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ಎತ್ತಿದ ಹಿನ್ನೆಲೆಯಲ್ಲಿ ನೆರೆ ದೇಶ ಮೆತ್ತಗಾಗಿದೆ. ಹೊಸ ಗಡಿ ವಿಧೇಯಕ ಹಾಲಿ ಇರುವ ಸೀಮಾ ಒಪ್ಪಂದಗಳ ಅನುಷ್ಠಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದೊಂದು ಸಾಮಾನ್ಯ ಮಸೂದೆಯಾಗಿದ್ದು, ಅನಗತ್ಯ ವದಂತಿ ಹಬ್ಬಿಸಬಾರದು ಎಂದು ಹೇಳಿದೆ.
ಹೊಸ ಮಸೂದೆಯಿಂದ ಗಡಿಯಲ್ಲಿನ ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿದಂತೆ ನಮ್ಮ ನಿಲುವು ಬದಲಾಗಿದೆ ಎಂದು ಅರ್ಥವಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ತಿಳಿಸಿದ್ದಾರೆ.
ಏನಿದು ವಿವಾದ?:
ಅ.23ರಂದು ಚೀನಾದ ಸಂಸತ್ತು ಗಡಿ ಮಸೂದೆಯನ್ನು ಅಂಗೀಕರಿಸಿತ್ತು. ಪೂರ್ವ ಲಡಾಖ್ ಸಂಘರ್ಷದ ಸಂದರ್ಭದಲ್ಲೇ ಚೀನಾ ಕೈಗೊಂಡ ಈ ನಡೆ ಭಾರತದ ಅನುಮಾನಕ್ಕೆ ಕಾರಣವಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರ ತೀವ್ರ ಆಕ್ಷೇಪ ಎತ್ತಿತ್ತು. ಗಡಿ ಪ್ರದೇಶಗಳಲ್ಲಿರುವ ಪರಿಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸಲು ಚೀನಾ ಮಸೂದೆಯ ಮೊರೆ ಹೋಗಬಾರದು ಎಂದು ಭಾರತ ಬಯಸುತ್ತದೆ. ಗಡಿ ವಿಚಾರದಲ್ಲಿ ಚೀನಾ ಮಸೂದೆ ತಂದಿರುವುದು ಕಳವಳಕಾರಿ ವಿಷಯವಾಗಿದೆ. ಗಡಿ ನಿರ್ವಹಣೆಗೆ ಸಂಬಂಧಿಸಿದಂತೆ ಹಾಲಿ ಇರುವ ದ್ವಿಪಕ್ಷೀಯ ಒಪ್ಪಂದಗಳ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ದೂರಿದ್ದರು.
ಚೀನಾದ ನೂತನ ಭೂ ಗಡಿ ಕಾನೂನಿಗೆ ಭಾರತ ಖಂಡನೆ
ಭೂ ಗಡಿಗೆ ಸಂಬಂಧಿಸಿದಂತೆ ನೂತನ ಕಾನೂನು ಜಾರಿಗೆ ತರುತ್ತಿರುವ ಚೀನಾದ ನಡೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ನೆಪಮಾತ್ರಕ್ಕೆ ಗಡಿಯಲ್ಲಿ ಅಭಿವೃದ್ಧಿ ಎನ್ನುತ್ತಿರುವ ಚೀನಾ ಈ ವಿಚಾರದಲ್ಲಿ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿದೆ ಎಂದು ಭಾರತ ಟೀಕಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ ವಕ್ತಾರ ಅರಿಂದಾಮ್ ಬಗ್ಚಿ, ಗಡಿ ಅಭಿವೃದ್ಧಿ ಎಂಬುದು ದ್ವಿಪಕ್ಷೀಯ ಒಪ್ಪಂದದ ಮೇಲೆ ನಡೆಯುವ ಕಾರ್ಯ. ಆದ್ರೆ ಈಗ ಚೀನಾ ಜಾರಿ ಮಾಡುತ್ತಿರುವ ಕಾನೂನು ಏಕಪಕ್ಷೀಯ ನಡೆಯಾಗಿದೆ. ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದಿದ್ದಾರೆ. ಚೀನಾದ ಏಕಪಕ್ಷೀಯ ನಡೆ ಗಡಿಯಲ್ಲಿ ಎರಡೂ ದೇಶಗಳಿಗೆ ಸಮಸ್ಯೆ ತಂದೊಡುತ್ತದೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ ಭಂಗಕ್ಕೆ ಕಾರಣವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಸ್ತವಿಕ ಗಡಿ ನಿಯಂತ್ರಣ ರೇಖೆಯೇ ಟಾರ್ಗೆಟ್?
ಚೀನಾದ ಹೊಸ ಗಡಿ ಕಾನೂನು 2022ರ ಜನವರಿ 1ರಿಂದ ಜಾರಿಗೆ ಬರಲಿದ್ದು, ಭೂಗಡಿ ವಿವಾದಗಳನ್ನು ಬಗೆಹರಿಸಿಕೊಳ್ಳುವಲ್ಲಿ ಇದು ಪ್ರಮುಖವಾಗಿದೆ ಎಂದು ಹೇಳಿಕೊಂಡಿದೆ. ಆದರೆ ವಾಸ್ತವದಲ್ಲಿ ಚೀನಾದ ಈ ಹೊಸ ಕಾನೂನು ಗಡಿಯಲ್ಲಿ ಆರ್ಥಿಕ ಕಾರಿಡಾರ್ ರೂಪಿಸುವುದಾಗಿದ್ದು, ಭಾರತಕ್ಕೆ ಮತ್ತೆ ಸಮಸ್ಯೆ ತಂದೊಡ್ಡಲಿದೆ. ತಾನು ಗಡಿ ಹಂಚಿಕೊಂಡಿರುವ 18 ದೇಶಗಳ ಪೈಕಿ ಭಾರತ ಸೇರಿದಂತೆ ಇತರೆ ಕೆಲ ವೈರಿ ದೇಶಗಳನ್ನು ಕೆಣಕಲೆಂದೇ ಚೀನಾ ಈ ಕಾಯ್ದೆ ಜಾರಿಗೆ ತಂದಿದೆ ಎಂದು ಹೇಳಲಾಗುತ್ತಿದೆ.
ಇಷ್ಟುದಿನ ಗಡಿಯಲ್ಲಿ ಗ್ರಾಮಗಳನ್ನಷ್ಟೇ ನಿರ್ಮಿಸುತ್ತಿದ್ದ ಚೀನಾ, ಇನ್ನು ಹೊಸ ಕಾಯ್ದೆ ಪ್ರಕಾರ ಪಟ್ಟಣಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದೆ. ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಹೆಸರಲ್ಲಿ ಗಡಿಯಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುವುದಾಗಿ ಚೀನಾ ಹೇಳುತ್ತಿದ್ದರೂ, ಆ ಮೂಲಕ ಅಕ್ಕಪಕ್ಕದ ದೇಶಗಳ ಗಡಿ ಆಕ್ರಮಿಸಿಕೊಳ್ಳುವುದು ಇದರ ಪ್ರಮುಖ ಉದ್ದೇಶ ಎನ್ನಲಾಗಿದೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ವಾಸ್ತವಿಕ ಗಡಿ ರೇಖೆಯಲ್ಲಿ ಶಾಂತಿ ಕದಡುವುದು ಇದರ ಉದ್ದೇಶ ಎಂದಿದ್ದಾರೆ. ಅಲ್ಲದೇ ನಿಮ್ಮ ಈ ಹೊಸ ಕಾನೂನಿಂದ ಉಭಯ ದೇಶಗಳ ಗಡಿ ಸಂಬಂಧದ ಮೇಲೂ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.
ಭಾರತದ ಜತೆ ಸುಮಾರು 3, 488 ಕಿಲೋಮೀಟರ್ ಗಡಿ ವಾಸ್ತವಿಕ ರೇಖೆಯುದ್ದಕ್ಕೂ ಕ್ಯಾತೆ ತೆಗೆಯುವ ಚೀನಾ, ಭೂತಾನ್ ಜತೆಗೆ 400 ಕಿಲೋಮೀಟರ್ ಗಡಿಯುದ್ದಕ್ಕೂ ವಿವಾದ ಸೃಷ್ಟಿಸುತ್ತಲೇ ಇರುತ್ತದೆ.
ಪೂರ್ವ ಲಡಾಖ್ ಗಡಿಯಲ್ಲಿ ಕಳೆದ 17 ತಿಂಗಳಿನಿಂದ ಸಂಘರ್ಷ ನಡೆಯುತ್ತಲೇ ಇದೆ. ಚೀನಾ ಈ ಬಗ್ಗೆ ಕ್ರಮ ಜರುಗಿಸದೇ ನೆಪ ಮಾತ್ರ ಹೇಳಿಕೊಂಡು ಕಾಲ ತಳ್ಳುತ್ತಿದೆ. ಅದಲ್ಲದೇ ಇದೀಗ ಹೊಸ ಕಾನೂನು ಜಾರಿ ಮಾಡಿ ಮತ್ತಷ್ಟುಬಿಕ್ಕಟ್ಟಿಗೆ ಕಾರಣವಾಗುತ್ತಿದೆ. ಗಡಿಯಲ್ಲಿ ನಂಬಿಕೆ, ಸೌಹಾರ್ಧತೆ ಅನ್ನೋದು ಎರಡೂ ರಾಷ್ಟ್ರಗಳಿಗೆ ಬಹುಮುಖ್ಯ, ಚೀನಾ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬಗ್ಚಿ ತಿಳಿಸಿದ್ದಾರೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆಗುಂಟ ಎರಡೂ ಕಡೆಯ ಸೂಕ್ಷ್ಮ ಪ್ರದೇಶಗಳಲಿ ಸುಮಾರು 50 ರಿಂದ 60 ಸಾವಿರ ಸೈನಿಕರು ಕಾವಲಿರುತ್ತಾರೆ.