
ಸಾಮಾನ್ಯವಾಗಿ ಪ್ರೇಮ ನಿವೇದನೆ ಅಥವಾ ಲವ್ ಪ್ರಪೋಷಲ್ ಮಾಡುವಾಗ ಬಹುತೇಕರು ಬಹಳಷ್ಟು ಸಿದ್ಧತೆ ಮಾಡಿರುತ್ತಾರೆ. ಯಾರು ಮಾಡದ ಸ್ಥಳದಲ್ಲಿ ಪ್ರೇಮ ನಿವೇದನೆ ಮಾಡಿ ತನ್ನ ಪ್ರೇಯಸಿಯನ್ನು ಮೆಚ್ಚಿಸಬೇಕು ಎಂದು ಅನೇಕರು ಬಯಸುತ್ತಾರೆ. ಹೀಗೆ ಅಪಾಯಕಾರಿ ಸ್ಥಳದಲ್ಲಿ ಪ್ರೇಮ ನಿವೇದನೆ ಮಾಡುವುದಕ್ಕೆ ಹೋಗಿ ಪ್ರಾಣ ಕಳೆದುಕೊಂಡ ಯುವಕರೂ ಇದ್ದಾರೆ. ಆದರೂ ಅಪಾಯಕಾರಿ ಸ್ಥಳದಲ್ಲಿ ಲವ್ ಪ್ರಪೋಷಲ್‌ನ ಕ್ರೇಜ್ ಇನ್ನೂ ಕಡಿಮೆ ಆಗಿಲ್ಲ. ಅದೇ ರೀತಿ ಇಲ್ಲೊಂದು ಕಡೆ ಯುವಕನೋರ್ವನಿಗೆ ತನ್ನ ಪ್ರೇಯಸಿಗೆ ವಿಭಿನ್ನವಾಗಿ ಹಾಗೂ ಇದುವರೆಗೆ ಯಾರೂ ಮಾಡದ ರೀತಿಯಲ್ಲಿ ಪ್ರೇಮ ನಿವೇದನೆ ಮಾಡಬೇಕು ಎಂದು ಅನಿಸಿದೆ. ಅದಕ್ಕೆ ಆತ ಆಯ್ಕೆ ಮಾಡಿಕೊಂಡಿದ್ದು, ಉರಿಯುತ್ತಿರುವ ಜ್ವಾಲಾಮುಖಿಯ ಮುಂಭಾಗ. ಹೌದು ಯುವಕನೋರ್ವ ತನ್ನ ಪ್ರೀತಿಯ ಪ್ರೇಯಸಿಗೆ ಜ್ವಾಲಾಮುಖಿಯ ಮುಂದೆಯೇ ಲವ್ ಪ್ರಪೋಷಲ್ ಮಾಡಿದ್ದು, ಈ ಕ್ಷಣದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಜ್ವಾಲಾಮುಖಿ ಮುಂದೆ ಪ್ರೇಯಸಿಗೆ ಯುವಕ ಪ್ರಪೋಸ್ ಮಾಡುತ್ತಿರುವ ಫೋಟೋ ವೈರಲ್ ಆಗುತ್ತಿದ್ದು, ಜನ ಪ್ರವಾಹೋಪಾದಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಘಟನ ನಡೆದಿರುವ ಹವಾಯ್‌ನಲ್ಲಿ ಇಲ್ಲಿನ ಕಿಲಾವಿಯಾ ಜ್ವಾಲಾಮುಖಿ ಮುಂದೆ ಯುವಕ ತನ್ನ ದೀರ್ಘಾಕಾಲದ ಗೆಳತಿಗೆ ಪ್ರೇಮ ನಿವೇದನೆ ಮಾಡಿದ್ದು, ಅದರಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ. ಯುವಕನ ಈ ವಿಭಿನ್ನ ಪ್ರೇಮ ನಿವೇದನೆಗೆ ಇಂಟರ್‌ನೆಟ್‌ನಲ್ಲಿಯೂ ಒಳ್ಳೆಯ ಸ್ಪಂದನೆ ವ್ಯಕ್ತವಾಗಿದೆ.
Pubity ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಶೇಷವೇನಿಸುವ ಪ್ರೇಮ ನಿವೇದನೆಯ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ. ಆದರೆ ಮೂಲತಃ ಈ ಪೋಟೋಗಳನ್ನು ಮಾರ್ಕ್ ಸ್ಟೀವರ್ಟ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಅವರು ನಿನ್ನೆ ನಾನು ನನ್ನ ಬಹುಕಾಲದ ಗೆಳತಿ @liv.2climb ಗೆ ಪ್ರಪೋಸ್ ಮಾಡಿದೆ. ಅವಳು ಹೌದು ಎಂದು ಹೇಳಿದಳು. ಕಿಲಾವಿಯಾ ಮುಂದೆ ಹಾಗೆ ಮಾಡುವುದು ನಿಜಕ್ಕೂ ಜೀವಮಾನದಲ್ಲಿ ಒಮ್ಮೆ ಮಾತ್ರ ಸಿಗುವ ಅನುಭವ. ಪೀಲೆ ಈ ಕ್ಷಣಕ್ಕೆ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದಾರೆ.
ಫೋಟೋಗಳಲ್ಲಿ, ಮಾರ್ಕ್ ತನ್ನ ಗೆಳತಿಗೆ ಪ್ರಪೋಸ್ ಮಾಡುತ್ತಿದ್ದಂತೆ ಹಿನ್ನೆಲೆಯಲ್ಲಿ ಸುಂದರವಾದ ಜ್ವಾಲಾಮುಖಿ ಸ್ಫೋಟ ಆಗುತ್ತಿರುವುನ್ನು ಕಾಣಬಹುದು. ಅವಳು ಹೌದು ಎಂದು ಹೇಳುತ್ತಿದ್ದಂತೆ, ಇಬ್ಬರೂ ಪ್ರೀತಿ ಮತ್ತು ಸಂತೋಷದಿಂದ ಅಪ್ಪಿಕೊಂಡಿರುವುದು ಫೋಟೋಗಳಲ್ಲಿ ಸೆರೆಯಾಗಿದೆ.
ಇದನ್ನು ನೋಡಿದ ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಅದ್ಭುತವಾದ ಪ್ರೇಮ ನಿವೇದನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇದೊಂದು ವೈಲ್ಡ್ ಹಾಗೂ ಫೈರ್ ಧನ್ಯವಾದ ಮಾರ್ಕ್ ಎಂದು ಕಾಮೆಂಟ್ ಮಾಡಿದ್ದಾರೆ. ನೀನು ನನ್ನ ಬದುಕಿನ ಲಾವಾರಸ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ತನ್ನ ನೆಚ್ಚಿನ ಹುಡುಗಿಗೆ ವಿಭಿನ್ನವಾಗಿ ಪ್ರೇಮ ನಿವೇದನೆ ಮಾಡಲು ಯುವಕರು ಎಂಥಾ ರಿಸ್ಕ್ ಬೇಕಾದರೂ ತೆಗೆದುಕೊಳ್ಳುತ್ತಾರೆ ಎಂಬುದು ಸಾಬೀತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ