
ಲೂಯಿಸ್‌ವಿಲ್ಲೆ:ಮಂಗಳವಾರ ಸಂಜೆ (ನವೆಂಬರ್ 4) ಲೂಯಿಸ್‌ವಿಲ್ಲೆಯ ಮುಹಮ್ಮದ್ ಅಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಪತನಗೊಂಡಿದೆ. ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನ (UPS cargo plane) ಪತನವಾಗಿದ್ದು, ಅವಘಡದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುಪಿಎಸ್ ಫ್ಲೈಟ್ 2976 ( ಸರಕು ವಿಮಾನ) ಲೂಯಿಸ್‌ವಿಲ್ಲೆ ಏರ್‌ಪೋರ್ಟ್‌ನಿಂದ ಹವಾಯಿಯತ್ತ ಪ್ರಯಾಣ ಬೆಳೆಸಿತ್ತು. ವಿಮಾನದಲ್ಲಿದ್ದ ಮೂವರು ಸಿಬ್ಬಂದಿ ಮೃತರಾಗಿರೋದನ್ನು ವರದಿಗಳು ಖಚಿತಪಡಿಸಿವೆ. ವಿಮಾನ ಪತನದ ತನಿಖೆಯನ್ನು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಗೆ (NTSB) ನೀಡಲಾಗಿದೆ ಎಂದು ಫೆಡರಲ್ ವಿಮಾನಯಾನ ಆಡಳಿತ (FAA) ಮಾಹಿತಿ ನೀಡಿದೆ.
ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನ ಪತನಗೊಂಡಿದ್ದು, ದೊಡ್ಡ ಪ್ರಮಾಣದ ಬೆಂಕಿ ಆವರಿಸಿದೆ. ನಿರ್ಜನ ಪ್ರದೇಶದಲ್ಲಿ ವಿಮಾನ ಪತನವಾಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿದ್ದು, ಕಾರ್ಯಾಚರಣೆಯನ್ನು ನಡೆಸುತ್ತಿದೆ. ದಟ್ಟವಾದ ಹೊಗೆ ಮುಹಮ್ಮದ್ ಅಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲೂ ಆವರಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನಗಳ ಕಾರ್ಯಾಚರಣೆಯನ್ನು ತಡೆಹಿಡಿಯಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳೀಯರು ವಿಮಾನ ಪತನದ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಲೂಯಿಸ್‌ವಿಲ್ಲೆಯ ಮುಹಮ್ಮದ್ ಅಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಯುಪಿಎಸ್‌ನ ಅತಿದೊಡ್ಡ ಜಾಗತಿಕ ಕೇಂದ್ರವಾಗಿದೆ. ಸುಮಾರು 5 ಮಿಲಿಯನ್ ಚದರ ಅಡಿ ವಿಸ್ತೀರ್ಣದಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಂಡಿದ್ದು, 12 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಇಲ್ಲಿ ಕೆಲಸ ಮಾಡುತ್ತಾರೆ. ಪ್ರತಿದಿನ ಸುಮಾರು 2 ಮಿಲಿಯನ್ ಪಾರ್ಸೆಲ್ ಮಾಡಲಾಗುತ್ತದೆ. ಹಾಗಾಗಿ ದಿನದ 24 ಗಂಟೆಯೂ ಇಲ್ಲಿ ವಿಮಾನಗಳ ಕಾರ್ಯಾಚರಣೆ ನಡೆಯುತ್ತದೆ. ಪತನವಾಗಿರುವ ಪ್ಲೇನ್, MD-11F ಮಾದರಿಯದ್ದಾಗಿದೆ.
ಇದನ್ನು ಓದಿ: ರನ್‌ವೇನಿಂದ ಟೇಕ್ ಆಫ್ ಬೆನ್ನಲ್ಲೇ ಪತನಗೊಂಡ PA-31T1 ವಿಮಾನ, ಅಪಘಾತದ ದೃಶ್ಯ ಸೆರೆ
ಲೂಯಿಸ್‌ವಿಲ್ಲೆಯ ಮುಹಮ್ಮದ್ ಅಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 8 ಕಿ.ಮೀ ವ್ಯಾಪ್ತಿಯಲ್ಲಿರುವ ಸ್ಥಳೀಯ ನಿವಾಸಿಗಳಿಗೆ ಮನೆಯಿಂದ ಹೊರಗೆ ಬರದಂತೆ ಸೂಚನೆ ನೀಡಲಾಗಿದೆ. ರಕ್ಷಣಾ ಕಾರ್ಯಾಚರಣೆ ತಡೆಯಾಗೋದನ್ನು ತಡೆಯಲು ಈ ಸೂಚನೆ ನೀಡಲಾಗಿದೆ. ಫರ್ನ್ ವ್ಯಾಲಿ ಮತ್ತು ಗ್ರೇಡ್ ಲೇನ್ ಮಾರ್ಗಗಳನ್ನು ಮುಚ್ಚಲಾಗಿದೆ. ಈ ಎರಡು ಮಾರ್ಗಗಳನ್ನು ಸಂಪೂರ್ಣವಾಗಿ ಕಾರ್ಯಚರಣೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ವಾಗಿ ಬಳಸುತ್ತವೆ.
ಇದನ್ನೂ ಓದಿ: ಪ್ರವಾಸಿಗರ ಹೊತ್ತು ಸಾಗಿದ ವಿಮಾನ ಪತನ, ದುರಂತದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ