ಮಂಗಳವಾರ ಉತ್ತರ ಇಸ್ರೇಲ್‌ನಲ್ಲಿ ಸೇನಾ ಗುರಿಗಳ ಡ್ರೋನ್ ದಾಳಿ ನಡೆಸಿರುವುದಾಗಿ ಲೆಬನಾನ್ ಉಗ್ರಪಡೆ ಹಿಜ್ಬುಲ್ಲಾ ಹೇಳಿದೆ. ಇಸ್ರೇಲ್ ತನ್ನ ಕಮಾಂಡರ್ ಫುವಾದ್ ಶುಕ್ರ್‌ನನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದ್ದರೂ, ಹಿಜ್ಬುಲ್ಲಾ ಮಾತ್ರ ಇದನ್ನು ನಿರಾಕರಿಸಿದೆ.
ಬೈರೂತ್ (ಆ.6): ಲೆಬನಾನ್‌ನ ಸಶಸ್ತ್ರ ಗುಂಪು ಹಿಜ್ಬುಲ್ಲಾ ಮಂಗಳವಾರ ಉತ್ತರ ಇಸ್ರೇಲ್‌ಗೆ ಡ್ರೋನ್ ಮತ್ತು ರಾಕೆಟ್‌ಗಳ ಮೂಲಕ ಸರಣಿ ದಾಳಿ ನಡೆಸಿದೆ. ಆದರೆ, ಇದು ಕಳೆದ ವಾರ ಇಸ್ರೇಲ್ ತನ್ನ ಕಮಾಂಡರ್ ಫುವಾದ್ ಶುಕ್ರ್‌ನನ್ನು ಕೊಂದಿದ್ದಕ್ಕೆ ಪ್ರತೀಕಾರವಲ್ಲ ಎಂದು ತಿಳಿಸಿದೆ. ಶುಕ್ರ್‌ನನ್ನು ಕೊಂದಿದ್ದಕ್ಕೆ ಭೀಕರ ಪ್ರತೀಕಾರ ಇನ್ನಷ್ಟೇ ಬರಲಿದೆ ಎಂದು ಎಚ್ಚರಿಕೆ ನೀಡಿದೆ. ಉತ್ತರ ಇಸ್ರೇಲ್‌ನ ಎಕ್ರೆ ಬಳಿಯ ಎರಡು ಮಿಲಿಟರಿ ತಾಣಗಳಲ್ಲಿ ಸರಣಿ ಡ್ರೋನ್ ದಾಳಿಳನ್ನು ಮಾಡಲಾಗಿದೆ. ಇನ್ನೊಂದು ಸ್ಥಳದಲ್ಲಿ ಇಸ್ರೇಲಿ ಮಿಲಿಟರಿ ವಾಹನದ ಮೇಲೆ ದಾಳಿ ಮಾಡಿದೆ ಎಂದು ಹಿಜ್ಬುಲ್ಲಾ ಮಾಹಿತಿ ನೀಡಿದೆ. ಸಾಕಷ್ಟು ಡ್ರೋನ್‌ಗಳು ಗಡಿ ದಾಟುತ್ತಿರುವುದನ್ನು ನಾವು ಗಮನಿಸಿದ್ದೇವೆ ಎಂದು ಇಸ್ರೇಲ್ ಸೇನೆ ಹೇಳಿದೆ. ಲೆಬನಾನ್‌ನಿಂದ ಈ ಡ್ರೋನ್‌ಗಳು ಬರುತ್ತಿದ್ದು, ಒಂದನ್ನು ಇಂಟರ್‌ಸೆಪ್ಟ್ ಮಾಡಲಾಗಿದೆ ಎಂದು ತಿಳಿಸಿದೆ. ಕರಾವಳಿ ನಗರವಾದ ನಹರಿಯಾದ ದಕ್ಷಿಣದಲ್ಲಿ ಹಲವಾರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಅದು ಹೇಳಿದೆ. ರಾಯಿಟರ್ಸ್ ಟಿವಿ ಫೂಟೇಜ್ ನಗರದ ಹೊರಗಿನ ಮುಖ್ಯ ರಸ್ತೆಯ ಬಸ್ ನಿಲ್ದಾಣದ ಬಳಿ ಒಂದು ದಾಳಿಯ ಇಂಪ್ಯಾಕ್ಟ್ ಸೈಟ್ ಅನ್ನು ತೋರಿಸಿದೆ.
ಇಸ್ರೇಲಿ ಮಿಲಿಟರಿ ಎಕ್ರೆ ಪ್ರದೇಶದ ಸುತ್ತಲೂ ಸೈರನ್‌ಗಳನ್ನು ಮೊದಲು ಮೊಳಗಿಸಿತ್ತು. ಬಳಿಕ ಇದು ಸುಳ್ಳು ಅಲಾರಾಂಗಳು ಎನ್ನಲಾಗಿತ್ತು. ದಕ್ಷಿಣ ಲೆಬನಾನ್‌ನ ಎರಡು ಹಿಜ್ಬುಲ್ಲಾ ಟಾರ್ಗೆಟ್‌ನ ಮೇಲೆ ಇಸ್ರೇಲ್‌ನ ಏರ್‌ಫೋರ್ಸ್ ದಾಳಿ ನಡೆಸಿದ್ದಾಗಿ ತಿಳಿಸಿದೆ. ಕಮಾಂಡರ್ ಫುವಾದ್ ಶುಕ್ರ್ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಹಿಜ್ಬುಲ್ಲಾ ಪ್ರತಿಜ್ಞೆ ಮಾಡಿದ ನಂತರ ಮಧ್ಯಪ್ರಾಚ್ಯದಲ್ಲಿ ಪೂರ್ಣ ಪ್ರಮಾಣದ ಯುದ್ಧ ನಡೆಯಬಹುದು ಎನ್ನುವ ಭಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನೊಂದೆಡೆ ಕಳೆದ ವಾರ ಟೆಹ್ರಾನ್‌ನಲ್ಲಿ ಪ್ಯಾಲಿಸ್ತೇನಿ ಉಗ್ರಗಾಮಿ ಗುಂಪು ಹಮಾಸ್‌ನ ಮುಖ್ಯಸ್ಥನ ಹತ್ಯೆಗೆ ಇರಾನ್ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. "ಕಮಾಂಡರ್ ಫುವಾಡ್ ಶುಕ್ರ್ ಹತ್ಯೆಗೆ ಪ್ರತಿಕ್ರಿಯೆ ಇನ್ನೂ ಬಂದಿಲ್ಲ" ಎಂದು ಹೆಜ್ಬೊಲ್ಲಾ ಮೂಲವು ತಿಳಿಸಿದೆ.
ಮಂಗಳವಾರ ಮುಂಜಾನೆ, ಗಡಿಯಿಂದ ಉತ್ತರಕ್ಕೆ ಸುಮಾರು 30 ಕಿಮೀ (19 ಮೈಲಿ) ದೂರದಲ್ಲಿರುವ ಲೆಬನಾನಿನ ಪಟ್ಟಣವಾದ ಮೇಫಡೌನ್‌ನಲ್ಲಿರುವ ಮನೆಯೊಂದರ ಮೇಲೆ ನಡೆದ ದಾಳಿಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಮತ್ತು ಭದ್ರತಾ ಮೂಲಗಳು ತಿಳಿಸಿವೆ. ಎರಡು ಹೆಚ್ಚುವರಿ ಭದ್ರತಾ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಕೊಲ್ಲಲ್ಪಟ್ಟವರು ಹಿಜ್ಬುಲ್ಲಾ ಹೋರಾಟಗಾರರು ಎಂದು ತಿಳಿಸಿದೆ. ಆದರೆ ಗುಂಪು ಇನ್ನೂ ತನ್ನ ಸಾಮಾನ್ಯ ಸಾವಿನ ಸೂಚನೆಗಳನ್ನು ಪೋಸ್ಟ್ ಮಾಡಿಲ್ಲ.
undefined
ಹಮಾಸ್ ನಾಯಕನ ಹತ್ಯೆಗೆ ಸೇಡು: ಇಸ್ರೇಲ್‌ನ ಬೈಟ್ ಹಿಲ್ಲೆಲ್ ಮೇಲೆ ಬ್ಯಾಕ್ ಟು ಬ್ಯಾಕ್ ರಾಕೆಟ್ ದಾಳಿ
ಹಿಜ್ಬುಲ್ಲಾ ಮತ್ತು ಇಸ್ರೇಲಿ ಮಿಲಿಟರಿ ಕಳೆದ 10 ತಿಂಗಳುಗಳಿಂದ ಗಾಜಾ ಯುದ್ಧಕ್ಕೆ ಸಮಾನಾಂತರವಾಗಿ ಹೋರಾಟ ನಡೆಸುತ್ತಿದೆ. ಟಿಟ್-ಫಾರ್-ಟಾಟ್ ಸ್ಟ್ರೈಕ್‌ಗಳು ಹೆಚ್ಚಾಗಿ ಗಡಿ ಪ್ರದೇಶಕ್ಕೆ ಸೀಮಿತವಾಗಿವೆ. ಕಳೆದ ವಾರ, ಇಸ್ರೇಲ್ ಲೆಬನಾನ್‌ನ ರಾಜಧಾನಿ ಬೈರುತ್‌ನ ದಕ್ಷಿಣ ಉಪನಗರಗಳಲ್ಲಿನ ಗುಂಪಿನ ಭದ್ರಕೋಟೆಯ ಮೇಲೆ ನಡೆದ ದಾಳಿಯಲ್ಲಿ ಹಿಜ್ಬುಲ್ಲಾದ ಹಿರಿಯ ಮಿಲಿಟರಿ ಕಮಾಂಡರ್ ಶುಕ್ರ್‌ನನ್ನು ಕೊಂದು ಹಾಕಿತ್ತು.
ವರ್ಲ್ಡ್ ವಾರ್ ಶುರುವಾಗೋಕೆ ಇಷ್ಟೇ ದಿನ ಬಾಕಿ.. ಭಯಾನಕ ಭವಿಷ್ಯವಾಣಿ ನುಡಿದ ನಾಸ್ಟ್ರಾಡಾಮಸ್ ಖ್ಯಾತಿಯ ಜ್ಯೋತಿಷಿ
ಹಿಜ್ಬುಲ್ಲಾದ ನಾಯಕ, ಸಯ್ಯದ್ ಹಸನ್ ನಸ್ರಲ್ಲಾ, ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದು, ಪ್ರತಿಕ್ರಿಯೆ ಯಾವ ರೀತಿಯಲ್ಲಿ ಇರಬೇಕು ಎನ್ನುವ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.