ಸದ್ಯ ನೌಕಾನೆಲೆಯಿಂದ ಮಹಿಂದಾ ಹೊರಬರಲ್ಲ!

By Suvarna NewsFirst Published May 12, 2022, 9:30 AM IST
Highlights

* ಸ್ಥಿತಿ ಸುಧಾರಿಸುವವರೆಗೂ ಟ್ರಿಂಕಾಮಲೈ ನೌಕಾನೆಲೆಯಲ್ಲೇ ವಾಸ: ರಕ್ಷಣಾ ಸಚಿವ

* ಸದ್ಯ ನೌಕಾನೆಲೆಯಿಂದ ಮಹಿಂದಾ ಹೊರಬರಲ್ಲ

* ಬಿಕ್ಕಟ್ಟು ಇತ್ಯರ್ಥಕ್ಕೆ ಬಂಡಾಯ, ವಿಪಕ್ಷಗಳ ಜೊತೆ ಅಧ್ಯಕ್ಷರ ಮಾತುಕತೆ

ಕೊಲಂಬೋ(ಮೇ.12): ಸರ್ಕಾರಿ ವಿರೋಧಿ ಹೋರಾಟಗಾರರ ಆಕ್ರೋಶದಿಂದ ದಾಳಿಗೆ ತುತ್ತಾಗುವ ಸಾಧ್ಯತೆ ಇದ್ದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರನ್ನು ಟ್ರಿಂಕಾಮಲೈ ನೌಕಾನೆಲೆಗೆ ಸ್ಥಳಾಂತರಿಸಲಾಗಿದೆ. ಸದ್ಯಕ್ಕೆ ಅವರು ಅಲ್ಲಿಂದ ಹೊರಬರುವುದಿಲ್ಲ ಎಂದು ಶ್ರೀಲಂಕಾ ಸೇನೆ ಅಧಿಕೃತ ಹೇಳಿಕೆ ನೀಡಿದೆ.

ಈ ಕುರಿತು ಬುಧವಾರ ಮಾಹಿತಿ ನೀಡಿರುವ ರಕ್ಷಣಾ ಕಾರ್ಯದರ್ಶಿ ಕಮಲ್‌ ಗುಣರತ್ನೆ, ‘ಪ್ರಧಾನಿಗಳ ಅಧಿಕೃತ ನಿವಾಸ ಟೆಂಪಲ್‌ ಟ್ರೀಸ್‌ ಮೇಲೆ ಪ್ರತಿಭಟನಾಕಾರರ ದಾಳಿ ಮತ್ತು ಮನೆಯೊಳಗೆ ನುಗ್ಗಲು ಯತ್ನಿಸಿದ ಘಟನೆಗಳ ಹಿನ್ನೆಲೆಯಲ್ಲಿ ಮಹಿಂದಾ ರಾಜಪಕ್ಸೆ ಮತ್ತು ಅವರ ಕುಟುಂಬ ಸದಸ್ಯರನ್ನು ಟ್ರಿಂಕಾಮಲೈನಲ್ಲಿರುವ ನೌಕಾನೆಲೆಗೆ ಸ್ಥಳಾಂತರಿಸಲಾಗಿದೆ. ದೇಶದಲ್ಲಿ ಪರಿಸ್ಥಿತಿ ಸುಧಾರಿಸುವವರೆಗೂ ಅವರು ಅಲ್ಲಿಯೇ ಇರಲಿದ್ದಾರೆ. ಪರಿಸ್ಥಿತಿ ಸುಧಾರಣೆಗೊಂಡ ಬಳಿಕ ಅವರು ಎಲ್ಲಿಗೆ ಬೇಕಾದರೂ ಹೋಗಲು ಸ್ವತಂತ್ರ’ ಎಂದು ತಿಳಿಸಿದರು.

Latest Videos

ಗೋಟಬಯ ಚರ್ಚೆ:

ಈ ನಡುವೆ ದೇಶದಲ್ಲಿ ಕಾಣಿಸಿಕೊಂಡಿರುವ ರಾಜಕೀಯ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ಬುಧವಾರ ಸ್ವಪಕ್ಷ ಶ್ರೀಲಂಕಾ ಪೀಪಲ್ಸ್‌ ಪಾರ್ಟಿಯ ಬಂಡಾಯ ನಾಯಕರು ಮತ್ತು ಪ್ರಮುಖ ವಿಪಕ್ಷ ಸಮಗಿ ಜನ ಬಲವೇಗಯದ ನಾಯಕರೊಂದಿಗೆ ಸಮಾಲೋಚನೆ ನಡೆಸಿದರು. ಸರ್ವಪಕ್ಷಗಳನ್ನು ಒಳಗೊಂಡ ಮಧ್ಯಂತರ ಸರ್ಕಾರ ನಡೆಸುವ ಬಗ್ಗೆ ಅಧ್ಯಕ್ಷ ಗೋಟಬಯ ಈಗಾಗಲೇ ಪ್ರಸ್ತಾಪ ಮುಂದಿಟ್ಟಿದ್ದರೂ, ಗೋಟಬಯ ರಾಜೀನಾಮೆ ನೀಡುವವರೆಗೂ ಅಂಥ ಪ್ರಸ್ತಾಪ ಒಪ್ಪಲ್ಲ ಎಂದು ವಿಪಕ್ಷಗಳು ಸ್ಪಷ್ಟಪಡಿಸಿವೆ.

ಲಂಕಾದೆಲ್ಲೆಡೆ ಶಾಂತಿ ಕಾಪಾಡಲು ಸೇನೆ ನಿಯೋಜನೆ

ದೇಶದಲ್ಲಿ ಪ್ರತಿಭಟನೆ ಮತ್ತು ಹಿಂಸಾಚಾರ ತಕ್ಷಣಕ್ಕೆ ತಹಬದಿಗೆ ಬರುವ ಸಾಧ್ಯತೆಗಳು ದೂರವಾಗಿರುವ ಹಿನ್ನೆಲೆಯಲ್ಲಿ, ಶ್ರೀಲಂಕಾ ಸರ್ಕಾರ ದೇಶಾದ್ಯಂತ ಪ್ರಮುಖ ನಗರಗಳು, ಆಯಕಟ್ಟಿನ ಪ್ರದೇಶಗಳ ಬಳಿ ಸೇನೆ ಮತ್ತು ಸೇನಾ ವಾಹನಗಳನ್ನು ನಿಯೋಜಿಸಿದೆ.

ಸರ್ಕಾರಿ ಅಥವಾ ಖಾಸಗಿ ಆಸ್ತಿಪಾಸ್ತಿ ಲೂಟಿ, ಧ್ವಂಸ ಮಾಡುವು ಕೃತ್ಯಗಳು ಕಂಡುಬಂದರೆ ಅವರ ಮೇಲೆ ಕಂಡಲ್ಲಿ ಗುಂಡಿನ ದಾಳಿ ನಡೆಸುವಂತೆ ಭೂಸೇನೆ, ನೌಕಾಪಡೆ ಮತ್ತು ವಾಯುಸೇನೆಗೆ ರಕ್ಷಣಾ ಸಚಿವಾಲಯ ಆದೇಶ ಹೊರಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಲಂಕಾಕ್ಕೆ ಸೇನೆ ರವಾನೆ ಮಾಡಿಲ್ಲ: ಭಾರತ ಸ್ಪಷ್ಟನೆ

 

 ಶ್ರೀಲಂಕಾದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ನಿಯಂತ್ರಣಕ್ಕೆ ಭಾರತ ಸರ್ಕಾರ ತನ್ನ ಸೇನೆಯನ್ನು ರವಾನಿಸುವ ಸಾಧ್ಯತೆ ಇದೆ ಎಂಬ ಸ್ಥಳೀಯ ಮಾಧ್ಯಮಗಳ ವರದಿಯನ್ನು ಭಾರತ ಸ್ಪಷ್ಟವಾಗಿ ತಳ್ಳಿಹಾಕಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಶ್ರೀಲಂಕಾದಲ್ಲಿನ ಭಾರತೀಯ ದೂತವಾಸ ಕಚೇರಿ ‘ದ್ವೀಪರಾಷ್ಟ್ರದ ಪ್ರಜಾಪ್ರಭುತ್ವ, ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಯನ್ನು’ ಭಾರತ ಸರ್ಕಾರ ಸಂಪೂರ್ಣವಾಗಿ ಬೆಂಬಲಿಸಲಿದೆ. ಭಾರತ ತನ್ನ ಸೇನೆ ರವಾನಿಸಲಿದೆ ಎಂಬ ಕೆಲ ಮಾಧ್ಯಮಗಳ ವರದಿಯನ್ನು ನಾವು ಪೂರ್ಣವಾಗಿ ನಿರಾಕರಿಸುತ್ತೇವೆ. ವರದಿಗಳು ಲಂಕಾ ವಿಷಯದಲ್ಲಿ ಭಾರತದ ನಿಲುವನ್ನು ಅನುಮೋದಿಸುವುದಿಲ್ಲ’ ಎಂದು ಹೇಳಿದೆ.

ಭಾರತದ ವಿದೇಶಾಂಗ ಸಚಿವಾಲಯ ಕೂಡಾ ಮಂಗಳವಾರ ಇದೇ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ, ನೆರೆಯ ದೇಶದ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.

click me!