
ಸೋಲ್: ದಕ್ಷಿಣ ಕೊರಿಯಾ ಜೊತೆಗಿನ ಸಂಬಂಧ ದಿನೇ ದಿನೇ ಹಳಸುತ್ತಿರುವ ಹೊತ್ತಲ್ಲೇ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತೊಂದು ಪ್ರಚೋದನಕಾರಿ ಹೆಜ್ಜೆ ಇಟ್ಟಿದ್ದಾರೆ. ಅತ್ಯಾಧುನಿಕ ಕ್ಲಸ್ಟರ್ ಬಾಂಬ್‌ಗಳನ್ನು ಅಳವಡಿಸಿದ ಶಾರ್ಟ್-ರೇಂಜ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದ್ದಾರೆ. ಭಾನುವಾರ ಬೆಳಗ್ಗೆ ಉತ್ತರ ಕೊರಿಯಾದ ಸಿನ್ಪೋ ಪ್ರದೇಶದಿಂದ ಪೂರ್ವ ಸಮುದ್ರದ ಕಡೆಗೆ ಉತ್ತರ ಕೊರಿಯಾ ಈ ಕ್ಷಿಪಣಿಗಳನ್ನು ಹಾರಿಸಿದೆ. ವಿಶೇಷ ಅಂದ್ರೆ, ಕಿಮ್ ಜಾಂಗ್ ಉನ್ ತಮ್ಮ ಮಗಳು ಕಿಮ್ ಜು ಏ ಜೊತೆ ಖುದ್ದು ಹಾಜರಿದ್ದು ಈ ಪರೀಕ್ಷೆಯ ನೇತೃತ್ವ ವಹಿಸಿದ್ದರು. ಒಂದೇ ಬಾರಿಗೆ ಹಲವು ಬಾಂಬ್‌ಗಳನ್ನು ಸಿಡಿಸುವ ಕ್ಲಸ್ಟರ್ ಬಾಂಬ್‌ಗಳ ಸಾಮರ್ಥ್ಯವನ್ನು ಪರೀಕ್ಷಿಸುವುದೇ ಇದರ ಮುಖ್ಯ ಉದ್ದೇಶವಾಗಿತ್ತು.
ಈ ಪರೀಕ್ಷೆಗೆ 'ಹ್ವಾಸೋಂಗ್‌ಫೋ-11 ರಾ' (Hwasongpho-11 Ra) ಹೆಸರಿನ ಕ್ಷಿಪಣಿಗಳನ್ನು ಉತ್ತರ ಕೊರಿಯಾ ಬಳಸಿದೆ. ಉಡಾವಣಾ ಕೇಂದ್ರದಿಂದ 136 ಕಿಲೋಮೀಟರ್ ದೂರದಲ್ಲಿದ್ದ ಒಂದು ದ್ವೀಪವನ್ನು ಗುರಿಯಾಗಿಸಿ, ಒಂದೇ ಬಾರಿಗೆ ಐದು ಕ್ಷಿಪಣಿಗಳನ್ನು ಹಾರಿಸಿದೆ. ಈ ಕ್ಷಿಪಣಿಗಳು ನಿಗದಿತ ಪ್ರದೇಶದಲ್ಲಿ ಭಾರೀ ಹಾನಿಯನ್ನುಂಟು ಮಾಡಿವೆ ಅಂತ ಉತ್ತರ ಕೊರಿಯಾದ ಸುದ್ದಿ ಸಂಸ್ಥೆ ಕೆಸಿಎನ್‌ಎ (KCNA) ಹೇಳಿಕೊಂಡಿದೆ. ಉತ್ತರ ಕೊರಿಯಾದ ಈ ನಡೆಯನ್ನು 'ಪ್ರಚೋದನಕಾರಿ' ಎಂದು ಕರೆದಿರುವ ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್, ತಕ್ಷಣವೇ ತುರ್ತು ಭದ್ರತಾ ಸಭೆ ಕರೆದಿದ್ದಾರೆ.
ರಷ್ಯಾದ ಸಹಾಯದಿಂದ ಉತ್ತರ ಕೊರಿಯಾ ತನ್ನ ನೌಕಾಪಡೆ ಮತ್ತು ಕ್ಷಿಪಣಿ ತಂತ್ರಜ್ಞಾನವನ್ನು ವೇಗವಾಗಿ ಅಪ್‌ಗ್ರೇಡ್ ಮಾಡಿಕೊಳ್ಳುತ್ತಿದೆ ಎಂದು ಅಂತರಾಷ್ಟ್ರೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಉಕ್ರೇನ್ ಯುದ್ಧದಲ್ಲಿ ರಷ್ಯಾಗೆ ಸಹಾಯ ಮಾಡಿದ್ದಕ್ಕೆ ಪ್ರತಿಯಾಗಿ, ಉತ್ತರ ಕೊರಿಯಾ ಅತ್ಯಾಧುನಿಕ ಮಿಲಿಟರಿ ತಂತ್ರಜ್ಞಾನವನ್ನು ಪಡೆಯುತ್ತಿದೆ ಎಂಬ ವರದಿಗಳೂ ಇವೆ. ಈ ಭಾಗದಲ್ಲಿ ಅಮೆರಿಕದ ಜೊತೆ ಸೇರಿ ನಾವು ಬಲಿಷ್ಠ ರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದೇವೆ. ಯಾವುದೇ ಪ್ರಚೋದನೆಗೆ ತಕ್ಕ ಉತ್ತರ ನೀಡುತ್ತೇವೆ ಎಂದು ದಕ್ಷಿಣ ಕೊರಿಯಾದ ಸೇನೆ ಎಚ್ಚರಿಕೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ