ಬದುಕು ಕಿತ್ತುಕೊಂಡ ವಿಧಿ, ನೆಲೆ ಕಿತ್ತುಕೊಳ್ಳುತ್ತಿದೆ ಬ್ರಿಟನ್: ಏರ್ ಇಂಡಿಯಾ ಅಪಘಾತದಲ್ಲಿ ಕುಟುಂಬ ಕಳೆದುಕೊಂಡ ವ್ಯಕ್ತಿಯ ಗಡೀಪಾರಿಗೆ ಆದೇಶ!

Published : Apr 21, 2026, 08:42 PM IST
Air India Crash Victim

ಸಾರಾಂಶ

ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಪತ್ನಿ ಮತ್ತು ಮಗಳನ್ನು ಕಳೆದುಕೊಂಡ ಮೊಹಮ್ಮದ್ ಶೇತ್ವಾಲಾ ಎಂಬ ಭಾರತೀಯನಿಗೆ ಬ್ರಿಟನ್ ಸರ್ಕಾರವು ದೇಶ ತೊರೆಯುವಂತೆ ಆದೇಶಿಸಿದೆ. ಮಾನವೀಯ ನೆಲೆಯಲ್ಲಿ ವಾಸ್ತವ್ಯ ವಿಸ್ತರಿಸಲು ಸಲ್ಲಿಸಿದ್ದ ಅವರ ಮನವಿಯನ್ನು ತಿರಸ್ಕರಿಸಿದೆ.

ಲಂಡನ್ (ಏ.21): 2025ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಭೀಕರ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ತನ್ನ ಪ್ರೀತಿಯ ಪತ್ನಿ ಮತ್ತು ಎರಡು ವರ್ಷದ ಪುಟ್ಟ ಮಗಳನ್ನು ಕಳೆದುಕೊಂಡ ಮೊಹಮ್ಮದ್ ಶೇತ್ವಾಲಾ ಎಂಬ ಭಾರತೀಯ ವ್ಯಕ್ತಿಗೆ ಬ್ರಿಟನ್ ಗೃಹ ಸಚಿವಾಲಯ (Home Office) ಶಾಕ್ ನೀಡಿದೆ. ಮಾನವೀಯತೆಯ ನೆಲೆಯಲ್ಲಿ ವಾಸ್ತವ್ಯ ವಿಸ್ತರಿಸಲು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿರುವ ಬ್ರಿಟನ್ ಸರ್ಕಾರ, ಏಪ್ರಿಲ್ 22ರ ಒಳಗೆ ದೇಶ ತೊರೆಯುವಂತೆ ಇಲ್ಲವೇ ಗಡೀಪಾರು ಎದುರಿಸುವಂತೆ ಗಡುವು ನೀಡಿದೆ.

ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ 171 ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ ಮೊಹಮ್ಮದ್ ಅವರ ಪತ್ನಿ ಸಾದಿಕಾಬಾನು ಮತ್ತು ಮಗಳು ಫಾತಿಮಾ ಸೇರಿದಂತೆ 260 ಮಂದಿ ಸಾವನ್ನಪ್ಪಿದ್ದರು. ಮೊಹಮ್ಮದ್ ಅವರು ತಮ್ಮ ಪತ್ನಿಯ 'ಸ್ಟೂಡೆಂಟ್ ವೀಸಾ' ಅಡಿಯಲ್ಲಿ 'ಡಿಪೆಂಡೆಂಟ್ ವೀಸಾ' ಪಡೆದು 2022ರಲ್ಲಿ ಬ್ರಿಟನ್‌ಗೆ ಬಂದಿದ್ದರು. ಪತ್ನಿ ಮೃತಪಟ್ಟ ಕಾರಣ ಅವರ ವೀಸಾ ಅವಧಿಯೂ ಮುಕ್ತಾಯಗೊಂಡಿದೆ.

"ನಾನು ಈ ತೀರ್ಪನ್ನು ಒಪ್ಪಲಾರೆ": ಮೊಹಮ್ಮದ್ ಅಳಲು

ತನ್ನ ಪರಿಸ್ಥಿತಿಯ ಬಗ್ಗೆ ಬ್ರಿಟನ್ ಮಾಧ್ಯಮಗಳೊಂದಿಗೆ ಮಾತನಾಡಿದ ಮೊಹಮ್ಮದ್, "ಸರ್ಕಾರದ ಈ ನಿರ್ಧಾರವನ್ನು ನಾನು ಒಪ್ಪಲು ಸಾಧ್ಯವಿಲ್ಲ. ನನ್ನ ಆರೋಗ್ಯ ಸರಿಯಿಲ್ಲ, ನಾನು ಮಾನಸಿಕವಾಗಿ ಕುಸಿದುಹೋಗಿದ್ದೇನೆ" ಎಂದು ನೋವು ತೋಡಿಕೊಂಡಿದ್ದಾರೆ. "ನಾನು ಮತ್ತು ಸಾದಿಕಾ ಬಡ ಕುಟುಂಬದಿಂದ ಬಂದವರು. ನಮ್ಮ ಲಂಡನ್ ಕನಸಿಗಾಗಿ ನೆರೆಹೊರೆಯವರೆಲ್ಲಾ ಹಣ ಸೇರಿಸಿಕೊಟ್ಟಿದ್ದರು. ಪತ್ನಿ ಮೃತಪಟ್ಟ ನಂತರ ಜೂನ್ ಅಂತ್ಯದಲ್ಲಿ ಲಂಡನ್ ಮನೆಗೆ ಮರಳಿದಾಗ ನನಗೆ ತಡೆಯಲಾರದೆ ಅಳು ಬಂದಿತ್ತು. ಕೆಲವು ತಿಂಗಳ ಹಿಂದಷ್ಟೇ ಮಗಳ ನಗು, ಪತ್ನಿಯ ಇರುವಿಕೆಯ ಪ್ರೀತಿ ತುಂಬಿದ್ದ ಮನೆಯಲ್ಲಿ ಈಗ ಸ್ಮಶಾನ ಮೌನವಿದೆ. ಖಿನ್ನತೆಯಿಂದ ನನಗೆ ನಿದ್ದೆ ಬರುತ್ತಿಲ್ಲ" ಎಂದು ಅವರು ಹೇಳಿದ್ದಾರೆ.

ಏರ್ ಇಂಡಿಯಾ ಕೆಲಸದ ಆಫರ್ ನೀಡಿದ್ದರೂ ಕೈತಪ್ಪಿತು!

ಲಂಡನ್‌ನಲ್ಲಿ ಡೆಲಿವರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಅವರಿಗೆ ಏರ್ ಇಂಡಿಯಾ ಸಂಸ್ಥೆಯು ಲಂಡನ್‌ನ ತಾಜ್ ಗ್ರೂಪ್‌ನಲ್ಲಿ ಕೆಲಸ ನೀಡಲು ಮುಂದೆ ಬಂದಿತ್ತು. ಆದರೆ ವೀಸಾ ಅವಧಿ ಮುಕ್ತಾಯಗೊಂಡಿದ್ದರಿಂದ ಆ ಕೆಲಸವನ್ನು ಒಪ್ಪಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ.

ಬ್ರಿಟನ್ ಗೃಹ ಇಲಾಖೆಯ ವಾದವೇನು?

ಮಾನವೀಯತೆಯ ಆಧಾರದ ಮೇಲೆ ವೀಸಾ ವಿಸ್ತರಿಸಲು ಮೊಹಮ್ಮದ್ ಮಾಡಿದ ಮನವಿಯನ್ನು ತಿರಸ್ಕರಿಸಿರುವ ಹೋಮ್ ಆಫೀಸ್, "ಮೊಹಮ್ಮದ್ ಅವರ ಕುಟುಂಬದವರು ಭಾರತದಲ್ಲಿದ್ದಾರೆ ಮತ್ತು ಅವರಿಗೆ ಭಾಷೆಯ ಸಮಸ್ಯೆ ಇಲ್ಲ, ಹಾಗಾಗಿ ಅವರು ಅಲ್ಲಿಗೆ ಹೋಗಿ ಬದುಕು ಕಟ್ಟಿಕೊಳ್ಳಬಹುದು" ಎಂದು ಪತ್ರದಲ್ಲಿ ತಿಳಿಸಿದೆ. ಅವರಿಗೆ ಏಪ್ರಿಲ್ 22ರ ವರೆಗೆ 'ಇಮಿಗ್ರೇಷನ್ ಬೇಲ್' ನೀಡಲಾಗಿದ್ದು, ಅಷ್ಟರೊಳಗೆ ಅವರು ದೇಶ ಬಿಡದಿದ್ದರೆ ಬಂಧಿಸಿ ಗಡೀಪಾರು ಮಾಡುವುದಾಗಿ ಎಚ್ಚರಿಸಿದೆ.

ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಟೀಕೆ

ಬ್ರಿಟನ್ ಸರ್ಕಾರದ ಈ ಕ್ರೂರ ನಿರ್ಧಾರವನ್ನು ಸಾಮಾಜಿಕ ಹೋರಾಟಗಾರರು ಮತ್ತು ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಫಿಜ್ಜಾ ಖುರೇಷಿ (Migrants’ Rights Network CEO) ಅವರು "ದುಃಖದಲ್ಲಿರುವ ತಂದೆಯನ್ನು ಅವರ ಗೆಳೆಯರ ಬಳಗದಿಂದ ದೂರ ಮಾಡುತ್ತಿರುವ ಹೋಮ್ ಆಫೀಸ್ ವರ್ತನೆ ಭಯಾನಕವಾಗಿದೆ. ಸರ್ಕಾರಕ್ಕೆ ಕನಿಷ್ಠ ಮಾನವೀಯತೆ ಇಲ್ಲವೇ?" ಎಂದು ಪ್ರಶ್ನಿಸಿದ್ದಾರೆ. ಸಾಮಾಜಿಕ ವಿಶ್ಲೇಷಕ ಪ್ಯಾಟ್ರಿಕ್ ವರ್ನಾನ್ "ಇದು ಕೇವಲ ಆಡಳಿತಾತ್ಮಕ ವೈಫಲ್ಯವಲ್ಲ, ನೈತಿಕ ವೈಫಲ್ಯ. ಬ್ರಿಟನ್ ಸರ್ಕಾರ ತಲೆತಗ್ಗಿಸಬೇಕು" ಎಂದು ಟೀಕಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಿಂದೂಗಳಿಗೆ ತಿಲಕ, ಪಾಕ್​ನಲ್ಲಿ ಉರಿ: ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಿಯೇ ತೀರುತ್ತೇವೆ: ಓಪನ್​ ಚಾಲೆಂಜ್ ಕೇಳಿ​
Balochistan: 6 ತಿಂಗಳಿಂದ ನಾಪತ್ತೆಯಾಗಿದ್ದ ಬಲೂಚ್‌ ಮಹಿಳೆ ಈಗ ಉಗ್ರಳಾದಳು! ಬಡಪಾಯಿ ಮಹಿಳೆಗೆ ಎಷ್ಟೆಲ್ಲ ಹಿಂಸೆ ಕೊಟ್ಟಿದೆ ಗೊತ್ತಾ ಪಾಕ್!