Nobel Prize| 86 ವರ್ಷದ ಬಳಿಕ ಪತ್ರಕರ್ತರಿಗೆ ನೊಬೆಲ್‌ ಶಾಂತಿ ಪುರಸ್ಕಾರದ ಗರಿ!

By Kannadaprabha NewsFirst Published Oct 9, 2021, 7:54 AM IST
Highlights

* ರಷ್ಯಾದ ಡಿಮಿಟ್ರಿ, ಫಿಲಿಪ್ಪೀನ್ಸ್‌ನ ಮರಿಯಾಗೆ ಜಂಟಿ ಗೌರವ

* 86 ವರ್ಷದ ಬಳಿಕ ಪತ್ರಕರ್ತರಿಗೆ ನೊಬೆಲ್‌ ಶಾಂತಿ ಪುರಸ್ಕಾರದ ಗರಿ

* ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಿಸಿದ್ದಕ್ಕೆ ಶಾಂತಿ ಪ್ರಶಸ್ತಿ ಘೋಷಣೆ

ಓಸ್ಲೋ(ಅ.09): ಪತ್ರಕರ್ತರಾದ ರಷ್ಯಾದ ಡಿಮಿಟ್ರಿ ಮುರಟೋವ್‌(Dmitry Muratov of Russia) ಮತ್ತು ಫಿಲಿಪ್ಪೀನ್ಸ್‌ನ ಮರಿಯಾ(Maria Ressa) ರೆಸ್ಸಾ 2021ನೇ ಸಾಲಿನ ಪ್ರತಿಷ್ಠಿತ ನೊಬೆಲ್‌ ಶಾಂತಿ ಪುರಸ್ಕಾರಕ್ಕೆ(Nobel Peace Prize) ಪಾತ್ರರಾಗಿದ್ದಾರೆ. ವಿಶ್ವದಾದ್ಯಂತ ಮುಕ್ತ ವಾಕ್‌ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿರುವ ವೇಳೆ, ಅಭಿವ್ಯಕ್ತಿ ಸ್ವಾತಂತ್ರ ಕಾಪಾಡಿದ್ದಕ್ಕಾಗಿ ಈ ಇಬ್ಬರಿಗೂ ಗೌರವ ನೀಡುತ್ತಿರುವುದಾಗಿ ನೊಬೆಲ್‌ ಶಾಂತಿ ಪ್ರಶಸ್ತಿ(Nobel Peace Prize) ಆಯ್ಕೆ ಸಮಿತಿ ಘೋಷಿಸಿದೆ. ಪ್ರಶಸ್ತಿಯು 8.25 ಕೋಟಿ ರು. ನಗದು ಹಾಗೂ ಚಿನ್ನದ ಪದಕ ಒಳಗೊಂಡಿದೆ.

ವಿಶೇಷವೆಂದರೆ, 1935ರ ಬಳಿಕ ಮೊದಲ ಬಾರಿಗೆ, ಅಂದರೆ 86 ವರ್ಷಗಳ ಬಳಿಕ ಪತ್ರಕರ್ತರನ್ನು(Journslist) ಈ ಗೌರವ ಹುಡುಕಿಕೊಂಡು ಬಂದಿದೆ. 1935ರಲ್ಲಿ ಜರ್ಮನಿಯ ಕಾಲ್‌ರ್‍ ವಾನ್‌ ಈ ಗೌರವ ಪಡೆದ ಕಡೆಯ ಪತ್ರಕರ್ತ.

ಪ್ರಶಸ್ತಿ ವಿಜೇತರ ಹೆಸರು ಪ್ರಕಟಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷರಾದ ಬೆರಿಟ್‌ ರೀಸ್‌-ಆ್ಯಂಡರ್ಸನ್‌ ‘ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಧೈರ್ಯದಿಂದ ಹೋರಾಡಿದ್ದಕ್ಕಾಗಿ ಪ್ರಶಸ್ತಿ ನೀಡಲಾಗಿದೆ. ಪತ್ರಿಕೋದ್ಯಮವು ಪ್ರಜಾಪ್ರಭುತ್ವದಲ್ಲಿ ಪ್ರತಿಕೂಲ ಪರಿಸ್ಥಿತಿ ಎದುರಿಸುತ್ತದೆ. ಅದರ ರಕ್ಷಣೆಗಾಗಿ ಶ್ರಮಿಸುವ ಪತ್ರಕರ್ತರನ್ನು ಈ ಇಬ್ಬರೂ ಪ್ರತಿನಿಧಿಸುತ್ತಾರೆ’ ಎಂದು ಹೇಳಿದ್ದಾರೆ.

1990ರಲ್ಲಿ ಮಿಖಾಯಿಲ್‌ ಗೋರ್ಬಚೇವ್‌ ಬಳಿಕ ಮೊದಲ ಬಾರಿಗೆ ರಷ್ಯಾಗೆ ನೊಬೆಲ್‌ ಶಾಂತಿ ಪುರಸ್ಕಾರ ಸಂದಿದ್ದರೆ, ಫಿಲಿಪ್ಪೀನ್ಸ್‌ಗೆ ಯಾವುದೇ ವಿಷಯದಲ್ಲಿ ಇದು ಮೊದಲ ನೊಬೆಲ್‌ ಪುರಸ್ಕಾರ ಎಂಬುದು ವಿಶೇಷ.

ಡಿಮಿಟ್ರಿ ಮುರಾಟೋವ್‌(Dmitry Muratov of Russia) :

ಮುರಾಟೋವ್‌ 1993ರಲ್ಲಿ ತಾವು ಸ್ಥಾಪಿಸಿದ ನೊವಾಯಾ ಗೆಜೆಟಾ ಮೂಲಕ ಪ್ರಭುತ್ವದ ವಿರುದ್ಧ ಸತತವಾಗಿ ವಿಮರ್ಶಾತ್ಮಕ ಲೇಖನ, ಸುದ್ದಿಗಳ ಮೂಲಕ ಖ್ಯಾತಿ ಹೊಂದಿದ್ದಾರೆ. ವಾಸ್ತವ ಅಂಶಗಳನ್ನು ಆಧರಿಸಿದ ನೊವಾಯಾ ಗೆಜೆಟಾ ಪತ್ರಿಕೋದ್ಯಮ ಮತ್ತು ವೃತ್ತಿ ನಿಷ್ಠೆಯು ರಷ್ಯಾ ಸಮಾಜದಲ್ಲಿ ಮಹತ್ವದ ಸುದ್ದಿಯ ಮೂಲವಾಗಿದೆ. 24 ವರ್ಷಗಳಿಂದ ಆ ಪತ್ರಿಕೆಯ ಮುಖ್ಯ ಸಂಪಾದಕರಾಗಿ ಪತ್ರಿಕೋದ್ಯಮದ ನಿಯತ್ತು ಹಾಗೂ ವಸ್ತುನಿಷ್ಠ ಪತ್ರಿಕೋದ್ಯಮ ಪಾಲಿಸುತ್ತಿದ್ದಾರೆ. ಭ್ರಷ್ಟಾಚಾರ, ಪೊಲೀಸರ ಕ್ರೌರ್ಯ, ನ್ಯಾಯಸಮ್ಮತವಲ್ಲದ ಬಂಧನ, ಚುನಾವಣಾ ಅಕ್ರಮಗಳ ಕುರಿತು ಲೇಖನಗಳನ್ನು ಪ್ರಕಟಿಸಿದ್ದಾರೆ.

ಮರಿಯಾ ರೆಸ್ಸಾ(Maria Ressa) :

ಪ್ರಭುತ್ವ ನಡೆಸುತ್ತಿರುವ ದೌರ್ಜನ್ಯ ಹಾಗೂ ಹಿಂಸೆಯ ಅದರ ವಿರುದ್ಧ ಪ್ರಖರವಾಗಿ ಧ್ವನಿ ಎತ್ತಿದ ಮರಿಯಾ ತಮ್ಮ ಡಿಜಿಟಲ್‌ ಮಿಡಿಯಾದಲ್ಲಿ ಅವುಗಳ ಬಗ್ಗೆ ಧೈರ್ಯವಾಗಿ ಲೇಖನಗಳನ್ನು ಬರೆದರು. 2012ರಲ್ಲಿ ಇವರು ಸ್ಥಾಪಿಸಿದ ರಾರ‍ಯಪ್ಲರ್‌ ತನಿಖಾ ಪತ್ರಿಕೋದ್ಯಮದಲ್ಲಿ ಹೊಸ ಪರ್ವ ಆರಂಭಿಸಿತು. ಕೊಲೆ, ಮಾದಕವಸ್ತು ಸಾಗಣೆ ಇವುಗಳ ವಿರುದ್ಧ ಬರೆಯುವ ಮೂಲಕ ಎಲ್ಲಾ ವಿಷಯಗಳನ್ನು ಜನರಿಗೆ ತಲುಪಿಸಿದರು. ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳಿಂದಾಗಿ ಮೊಟಕಾಗುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಇವರು ಹೋರಾಟ ಮಾಡುತ್ತಿದ್ದಾರೆ.

click me!