ವಿಮಾನ ದುರಂತ: ಕೇವಲ 90 ಸೆಕೆಂಡ್‌ನಲ್ಲಿ 379 ಜನರ ರಕ್ಷಿಸಿದ ಜಪಾನ್ ರಕ್ಷಣಾ ತಂತ್ರಕ್ಕೆ ಭಾರಿ ಶ್ಲಾಘನೆ

Published : Jan 04, 2024, 09:48 AM IST
ವಿಮಾನ ದುರಂತ: ಕೇವಲ 90 ಸೆಕೆಂಡ್‌ನಲ್ಲಿ 379 ಜನರ ರಕ್ಷಿಸಿದ ಜಪಾನ್ ರಕ್ಷಣಾ ತಂತ್ರಕ್ಕೆ ಭಾರಿ ಶ್ಲಾಘನೆ

ಸಾರಾಂಶ

ಜಪಾನ್‌ನ ಹನೆಡಾ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಾಗ ಅಲ್ಲಿನ ಸುರಕ್ಷಾ ಸಿಬ್ಬಂದಿ, ನಾಗರಿಕ ವಿಮಾನದಲ್ಲಿದ್ದ 379 ಜನರನ್ನು ಕೇವಲ 90 ಸೆಕೆಂಡ್‌ಗಳಲ್ಲಿ ರಕ್ಷಿಸಿದ್ದಾರೆ. ಇದಕ್ಕೆ ಈಗ ಜಗತ್ತಿನಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ.

ಟೊಕಿಯೋ: ಜಪಾನ್‌ನ ಹನೆಡಾ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಾಗ ಅಲ್ಲಿನ ಸುರಕ್ಷಾ ಸಿಬ್ಬಂದಿ, ನಾಗರಿಕ ವಿಮಾನದಲ್ಲಿದ್ದ 379 ಜನರನ್ನು ಕೇವಲ 90 ಸೆಕೆಂಡ್‌ಗಳಲ್ಲಿ ರಕ್ಷಿಸಿದ್ದಾರೆ. ಇದಕ್ಕೆ ಈಗ ಜಗತ್ತಿನಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ.ಜಪಾನ್‌ ವಿಮಾನಯಾನ ಸಂಸ್ಥೆಗಳು ಅತ್ಯಂತ ಬಿಗಿಯಾದ ಸುರಕ್ಷಾ ನಿಯಮಗಳನ್ನು ರೂಪಿಸಿಕೊಂಡಿದ್ದು, ಎಂತಹ ಸಂಕಷ್ಟ ಸನ್ನಿವೇಶ ಎದುರಾದರೂ ಶೀಘ್ರವಾಗಿ ಪ್ರಯಾಣಿಕರನ್ನು ರಕ್ಷಣೆ ಮಾಡುತ್ತವೆ. ವಿಮಾನದ ಬಾಗಿಲು ತೆರೆದು ಇಳಿಜಾರು ಮೂಲಕ 379 ಜನರನ್ನು ಕೆಳಕ್ಕೆ ಇಳಿಸಿ ರಕ್ಷಿಸಲಾಗಿದೆ. 1985ರಲ್ಲಿ ಜೆಎಎಲ್‌ ವಿಮಾನ ಸಂಸ್ಥೆಗೆ ಸೇರಿದ ವಿಮಾನವೊಂದು ಅಪಘಾತವಾದಾಗ 520 ಮಂದಿ ಏಕಕಾಲದಲ್ಲಿ ಅಸುನೀಗಿದ್ದರು. ಅಂದಿನಿಂದ ಜಪಾನ್‌ ಕಟ್ಟುನಿಟ್ಟಿನ ಸುರಕ್ಷಾ ನಿಯಮ ರೂಪಿಸಿಕೊಂಡು ಅಂತಹ ಘಟನೆ ಮರುಕಳಿಸದಂತೆ ಸಾಧನೆ ಮಾಡಿದೆ.

ಭೂಕಂಪದಿಂದ ತತ್ತರಿಸಿರುವ ದ್ವೀಪದೇಶ ಜಪಾನ್‌ನಲ್ಲಿ ಮಂಗಳವಾರ ರಾಜಧಾನಿ ಟೋಕಿಯೋದ ಹನೆಡಾ ವಿಮಾನ ನಿಲ್ದಾಣದಲ್ಲಿ ಸೇನಾ ಮತ್ತು ಪ್ರಯಾಣಿಕ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು. 379 ಜನರು ಪ್ರಯಾಣಿಸುತ್ತಿದ್ದ ನಾಗರಿಕ ವಿಮಾನ ಸಂಪೂರ್ಣ ಭಸ್ಮವಾಗಿತ್ತು.  ಅದೃಷ್ಟವಶಾತ್‌, ವಿಮಾನ ಪೂರ್ಣ ಸುಟ್ಟು ಭಸ್ಮವಾಗುವುದರೊಳಗೆ ಪ್ರಯಾಣಿಕ ವಿಮಾನದಲ್ಲಿದ್ದ ಎಲ್ಲಾ 367 ಪ್ರಯಾಣಿಕರು ಮತ್ತು 12 ಸಿಬ್ಬಂದಿಗಳನ್ನು ರಕ್ಷಿಸಲಾಗಿತ್ತು. ಆದರೆ ಸೇನೆಗೆ ಸೇರಿದ ಮತ್ತೊಂದು ವಿಮಾನದಲ್ಲಿದ್ದ 6 ಸಿಬ್ಬಂದಿ ಪೈಕಿ ಪೈಲಟ್‌ ಬಚಾವ್‌ ಆಗಿದ್ದರೆ, ಉಳಿದ 5 ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಭೂಕಂಪ ಪೀಡಿತ ಜಪಾನ್​ನಿಂದ ಸುರಕ್ಷಿತವಾಗಿ ವಾಪಸಾಗಿರುವೆ: ಕಂಗೆಟ್ಟ ಫ್ಯಾನ್ಸ್​ಗೆ ಜ್ಯೂ.ಎನ್​ಟಿಆರ್ ಮಾಹಿತಿ

ಜಪಾನ್‌ನ ಅತ್ಯಂತ ಸಂಚಾರದಟ್ಟಣೆಯ ವಿಮಾನ ನಿಲ್ದಾಣಗಳ ಪೈಕಿ ಹನೆಡಾ ಕೂಡಾ ಒಂದಾಗಿದ್ದು, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಪ್ರಯಾಣಿಕರು ಸಂಚರಿಸುವ ವೇಳೆಯೇ ಈ ದುರ್ಘಟನೆ ಸಂಭವಿಸಿತ್ತು. ಘಟನೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಈ ಕುರಿತು ತನಿಖೆಗೆ ಸರ್ಕಾರ ಆದೇಶಿಸಿದೆ.

ಏನಾಯ್ತು?:

ಜಪಾನ್‌ ಏರ್‌ಲೈನ್ಸ್‌ಗೆ ಸೇರಿದ ಜೆಎಎಲ್‌-516 ವಿಮಾನ ಮಂಗಳವಾರ ಮಧ್ಯಾಹ್ನದ ವೇಳೆಗೆ ಹೊಕೈಡೋದಿಂದ ಟೋಕಿಯೋದ ಹನೆಡಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿತ್ತು. ಇದೇ ವೇಳೆ ಹನೆಡಾ ನಿಲ್ದಾಣದಲ್ಲಿದ್ದ ಕರಾವಳಿ ಕಾವಲು ಪಡೆಗೆ ಸೇರಿದ ವಿಮಾನವು, ಜಪಾನ್‌ನ ಭೂಕಂಪ ಪೀಡಿತ ಪ್ರದೇಶಗಳಿಗೆ ಪರಿಹಾರ ಸಾಮಗ್ರಿಗಳನ್ನು ಕೊಂಡೊಯ್ಯಲು ಸಜ್ಜಾಗಿತ್ತು. ಹೀಗೆ ಎರಡು ವಿಮಾನಗಳು ಒಂದೇ ವೇಳೆಗೆ ರನ್‌ವೇಯಲ್ಲಿ ಸಂಚರಿಸಿದ ಕಾರಣ ಅಪಘಾತ ಸಂಭವಿಸಿದೆ.

ರನ್‌ವೇಯಲ್ಲಿ ಬೆಂಕಿ ಹೊತ್ತಿಕೊಂಡ ಜಪಾನ್ ಏರ್‌ಲೈನ್ಸ್ ವಿಮಾನ, ಐವರು ಸಿಬ್ಬಂದಿ ಸಾವು!

ಅಪಘಾತದ ತೀವ್ರತೆಗೆ ಜೆಎಎಲ್‌ ವಿಮಾನಕ್ಕೆ ತಕ್ಷಣವೇ ಬೆಂಕಿ ಹತ್ತಿಕೊಂಡಿದೆ. ಆದರೆ ವಿಮಾನದ ಸಿಬ್ಬಂದಿ ತಕ್ಷಣವೇ ವಿಮಾನದ ತುರ್ತು ದ್ವಾರಗಳನ್ನು ತೆರೆದ ಕಾರಣ, ವಿಮಾನದಲ್ಲಿ ಕಣ್ಣುಬಿಡಲಾಗದಷ್ಟು ಹೊಗೆ ತುಂಬಿಕೊಂಡಿದ್ದರೂ, ಎಲ್ಲರೂ ಸಿಬ್ಬಂದಿಗಳ ನೆರವಿನಿಂದ ಹೊರಗೆ ಓಡಿ ಜೀವ ಉಳಿಸಿಕೊಂಡಿದ್ದಾರೆ.

ತಕ್ಷಣವೇ ನಿಲ್ದಾಣಕ್ಕೆ 70ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳನ್ನು ಕರೆಯಿಸಿ, ಬೆಂಕಿ ಆರಿಸುವ ಯತ್ನ ಮಾಡಲಾಯಿತಾದರೂ ಅದು ಫಲ ಕೊಡದೇ ಇಡೀ ವಿಮಾನ ಸುಟ್ಟು ಭಸ್ಮವಾಗಿದೆ. ಬೆಂಕಿಯ ತೀವ್ರತೆಗೆ ವಿಮಾನ 2 ತುಂಡಾಗಿದೆ.

5 ಸಾವು:

ಈ ನಡುವೆ ಕರಾವಳಿ ಕಾವಲು ಪಡೆಯ ವಿಮಾನದಲ್ಲಿದ್ದ ಪೈಲಟ್‌ ಅಪಘಾತದಲ್ಲಿ ಪಾರಾಗಿ ಜೀವ ಉಳಿಸಿಕೊಂಡಿದ್ದರೆ, ಉಳಿದ 5 ಸಿಬ್ಬಂದಿ ಸಾವನ್ನಪ್ಪಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!