* ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್
* ಗೂಗಲ್ ಪ್ಲೇಸ್ಟೋರ್‌ನಲ್ಲಿ ಜೈಷ್ ಉಗ್ರರ ಆ್ಯಪ್
* ಇದರಲ್ಲಿ ಮೌಲಾನಾ ಅಜರ್ ಭಾಷಣ, ಸಾಹಿತ್ಯ ಲಭ್ಯ
ನವದೆಹಲಿ(ಅ.13): ಪಾಕಿಸ್ತಾನ(Pakistan) ಮೂಲದ ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್(JEM)ಗೆ ಸಂಬಂಧಿಸಿದ ಮೊಬೈಲ್ ಆ್ಯಪ್(Mobile App) ಒಂದು ಗೂಗಲ್‌ಪ್ಲೇ(Google Play) ಸ್ಟೋರ್‌ನಲ್ಲಿ ಇನ್ನೂ ಇದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಇಸ್ಲಾಮಿಕ್(Islamic) ಬೋಧನೆಗೆ ಸಂಬಂಧಿಸಿದ ಜೆಇಎಂ ಸಂಘಟನೆಗೆ ಸೇರಿದ ‘ಅಚ್ಛೀ ಬಾತೇ’ (Achi Bateen) ಎಂಬ ಮೊಬೈಲ್ ಆ್ಯಪ್ ವಿಶ್ವಾದ್ಯಂತ ಲಭ್ಯವಿರುವ ಆ್ಯಂಡ್ರಾಯಿಡ್ ಫೋನ್‌ಗಳಲ್ಲಿ ಲಭ್ಯವಿದೆ. ಆದರೆ ಈ ಆ್ಯಪ್ ಬಹಿರಂಗವಾಗಿ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ.
ಆದರೆ ಜೆಇಎಂ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್(Masood Azhar) ಮತ್ತು ಅವನ ಆಪ್ತರಿಗೆ ಸಂಬಂಧಿಸಿದ ಪುಸ್ತಕಗಳು, ಸಾಹಿತ್ಯ ಮತ್ತು ಆಡಿಯೋ ಸಂದೇಶಗಳಿಗೆ ಸಂಪರ್ಕ ಕಲ್ಪಿಸುವ ಲಿಂಕ್‌ಗಳನ್ನು ಈ ಆ್ಯಪ್ ಒಳಗೊಂಡಿದೆ.
undefined
ಈ ಆ್ಯಪ್ ಅನ್ನು ಒಮ್ಮೆ ಡೌನ್‌ಲೋಡ್ ಮಾಡಿಕೊಂಡರೆ ಈ ಆ್ಯಪ್ ಬಳಕೆದಾರನ ಜಿಪಿಎಸ್ ಲೋಕೇಷನ್(GPS Location), ನೆಟ್‌ವರ್ಕ್(Network), ಸ್ಟೋರೇಜ್(Storage), ವಿಡಿಯೋ ಮತ್ತು ಆಡಿಯೋ ಹಾಗೂ ಮೊಬೈಲ್‌ನಲ್ಲಿರುವ ಇನ್ನಿತರ ಫೈಲ್‌ಗಳನ್ನು ಈ ಆ್ಯಪ್ ಪ್ರವೇಶಿಸಲಿದೆ.
2020ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲಾದ ಈ ಆ್ಯಪ್ ಅನ್ನು ಈವರೆಗೆ 5 ಸಾವಿರಕ್ಕೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಉಚಿತ ಶಿಕ್ಷಣ ಆ್ಯಪ್ ಆಗಿರುವ ಇದು ಪಾಕಿಸ್ತಾನದ ಇಸ್ಲಾಮಿಕ್ ಬೋಧಕರ ಪುಸ್ತಕಗಳು, ಸಂದೇಶಗಳು ಮತ್ತು ಕೋಟ್‌ಗಳ ಲಿಂಕ್‌ಗಳನ್ನು ಒಳಗೊಂಡಿದೆ. ಅಲ್ಲದೆ ಈ ಆ್ಯಪ್ ಅಭಿವೃದ್ಧಿಪಡಿಸಿದವರು ಬ್ಲಾಕ್ ಪೇಜ್‌ವೊಂದನ್ನು ರಚಿಸಿದ್ದು, ಇದರಲ್ಲಿ ಮಸೂದ್ ಅಜರ್‌ನ ಅಂಕಿತನಾಮ ‘ಸಾದಿ’ ಹೆಸರಿನಲ್ಲಿ ರಚಿಸಲಾಗಿರುವ ಬರಹಗಳಿವೆ.