1962ರಲ್ಲಿ ಉದ್ಯಮಿ ಕಮೆಲ್ ಅಮೀನ್ ಥಾಬೆಟ್ ಸಿರಿಯಾದ ರಾಜಧಾನಿ ಡಮಾಸ್ಕಸ್‌ಗೆ ಆಗಮಿಸಿದ್ದ, ನಗರದಲ್ಲಿ ಆತ ಅದ್ದೂರಿ ಪಾರ್ಟಿಗಳನ್ನು ನಡೆಸುವ ಮೂಲಕ ನಗರದ ಸಾಮಾಜಿಕ ಗಣ್ಯರಲ್ಲಿ ಒಬ್ಬರಾಗುತ್ತಾನೆ. ಜೊತೆಗೆ ನಿಧಾನವಾಗಿ ದೇಶದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳನ್ನು ತನ್ನ ಆತ್ಮೀಯರಾಗಿಸಿಕೊಳ್ಳುವಲ್ಲಿ ಆತ ಯಶಸ್ವಿಯೂ ಆಗುತ್ತಾನೆ ಮುಂದೆನಾಯ್ತು ಇಲ್ಲಿದೆ ಓದಿ
ನವದೆಹಲಿ: 1962ರಲ್ಲಿ ಉದ್ಯಮಿ ಕಮೆಲ್ ಅಮೀನ್ ಥಾಬೆಟ್ (Kamel Amin Thaabet)ಸಿರಿಯಾದ ರಾಜಧಾನಿ ಡಮಾಸ್ಕಸ್‌ಗೆ ಆಗಮಿಸಿದ್ದ, ನಗರದಲ್ಲಿ ಆತ ಅದ್ದೂರಿ ಪಾರ್ಟಿಗಳನ್ನು ನಡೆಸುವ ಮೂಲಕ ನಗರದ ಸಾಮಾಜಿಕ ಗಣ್ಯರಲ್ಲಿ ಒಬ್ಬರಾಗುತ್ತಾನೆ. ಜೊತೆಗೆ ನಿಧಾನವಾಗಿ ದೇಶದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳನ್ನು ತನ್ನ ಆತ್ಮೀಯರಾಗಿಸಿಕೊಳ್ಳುವಲ್ಲಿ ಆತ ಯಶಸ್ವಿಯೂ ಆಗುತ್ತಾನೆ. ಆದರೆ ಮೂರು ವರ್ಷಗಳ ನಂತರ, ಮಧ್ಯ ಡಮಾಸ್ಕಸ್‌ನ (Damascus) ಮಾರ್ಜೆ ಸ್ಕ್ವೇರ್‌ನಲ್ಲಿ (Marjeh Square) ಆತನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗುತ್ತದೆ. ಏಕಿರಬಹುದು ಎಂಬ ಕುತೂಹಲವನ್ನು ಕೆದಕುತ್ತಾ ಹೋದಾಗ ಪತ್ತೆಯಾಗಿದ್ದು, ಇವರೊಬ್ಬ ಇಸ್ರೇಲ್ ಗೂಢಚಾರಿ ಎಂಬುದು.
ಈ ಕಮೆಲ್ ಥಾಬೆಟ್ ಮೂಲ ಹೆಸರು ಎಲಿ ಕೊಹೆನ್. ಈತ ಇಸ್ರೇಲ್‌ನ ಮೊಸಾದ್‌ಗಾಗಿ ಕೆಲಸ ಮಾಡುವ ಗಣ್ಯ ಗೂಢಚಾರಿಯಾಗಿದ್ದ. ತನ್ನ ದೇಶದ ಆಸ್ತಿ ಎನಿಸಿದ ಇಂತಹ ವ್ಯಕ್ತಿಯ ಮೃತದೇಹವನ್ನು ಮರಳಿಸುವಂತೆ ಈಗ ಇಸ್ರೇಲ್ ಘಟನೆ ನಡೆದ ಬರೋಬ್ಬರಿ 62 ವರ್ಷಗಳ ನಂತರ ಈಗ ಸಿರಿಯಾವನ್ನು ಆಗ್ರಹಿಸಿದೆ.
ಇಸ್ರೇಲಿ ಅಧಿಕಾರಿಗಳು ಈಗ ಎಲಿ ಕೊಹೆನ್ ಅವರ ದೇಹವನ್ನು ಮರುಪಡೆಯಲು ಪ್ರಯತ್ನಗಳನ್ನು ತೀವ್ರಗೊಳಿಸಿದ್ದಾರೆ. ಅಂಹಾಗೆ ಈ ಎಲಿ ಕೊಹೆನ್ ಇಸ್ರೇಲ್‌ನ ಅತ್ಯಂತ ಪ್ರಸಿದ್ಧ ಗೂಢಚಾರರಲ್ಲಿ ಒಬ್ಬರೆಂದು ಕರೆಯಲ್ಪಟ್ಟಿದ್ದರು. ಉದ್ಯಮಿ ವೇಷದಲ್ಲಿದ್ದ ಎಲಿ ಕೊಹೆನ್ ಅವರು ಸಿರಿಯಾದ ರಾಜಕೀಯ ಮತ್ತು ಮಿಲಿಟರಿ ಗಣ್ಯ ಜೊತೆಗೆ ಸಂಪಾದಿಸಿದ ಸ್ನೇಹ 1967 ರ ಆರು-ದಿನದ ಯುದ್ಧದಲ್ಲಿ ಇಸ್ರೇಲ್‌ನ ಯಶಸ್ಸಿಗೆ ಪ್ರಮುಖವಾದ ಗುಪ್ತಚರ ಮಾಹಿತಿಯನ್ನು ಒದಗಿಸಿತು. ಹೀಗಾಗಿ ಎಲಿ ಕೊಹೆನ್ ಅವರ ಸಾವಿನ ನಂತರ ದಶಕಗಳ ಕಾಲದ ಪ್ರಯತ್ನಗಳ ಹೊರತಾಗಿಯೂ, ಕೊಹೆನ್‌ನ ಸಮಾಧಿ ಸ್ಥಳ ಎಲ್ಲಿದೆ ಎಂಬುದನ್ನು ಸಿರಿಯಾ ಬಹಿರಂಗಪಡಿಸಿರಲಿಲ್ಲ, ಇಸ್ರೇಲ್ ಎಲಿ ಕೊಹೆನ್ ಅವರ ದೇಹವನ್ನು ಮರುಪಡೆಯುವುದನ್ನು ತಡೆಯುವುದಕ್ಕಾಗಿ ಸಿರಿಯಾದ ಅಧಿಕಾರಿಗಳು ಅವರ ದೇಹವನ್ನು ಹಲವು ಬಾರಿ ಸ್ಥಳಾಂತರಿಸಿದ್ದಾರೆ ಹೀಗಾಗಿ ಇಷ್ಟು ವರ್ಷ ಕಳೆದರೂ ಅವರ ಮೃತದೇಹ ಎಲ್ಲಿದೆ ಎಂಬುದು ಇಸ್ರೇಲ್‌ಗೆ ತಿಳಿಯಲಾಗಿಲ್ಲ ಎಂದು ವರದಿಯಾಗಿದೆ.
ಈಜಿಪ್ಟ್‌ನ ಯಹೂದಿ ಕುಟುಂಬದಲ್ಲಿ ಜನನ
ಕೊಹೆನ್ 1924 ರಲ್ಲಿ ಈಜಿಫ್ಟ್‌ನ ಅಲೆಕ್ಸಾಂಡ್ರಿಯಾದಲ್ಲಿರುವ ಈಜಿಪ್ಟಿನ ಯಹೂದಿ ಕುಟುಂಬದಲ್ಲಿ ಜನಿಸಿದರು. 1948 ರಲ್ಲಿ ಇಸ್ರೇಲ್ ಸ್ಥಾಪನೆಯಾದ ನಂತರ, ಕೊಹೆನ್ ಅವರ ಕುಟುಂಬವು ಹೊಸದಾಗಿ ಸ್ಥಾಪಿಸಲಾದ ತಮ್ಮ ತಾಯ್ನಾಡಿಗೆ ವಲಸೆ ಬಂದಿತು. ಇಸ್ರೇಲ್‌ಗೆ ಈಜಿಪ್ಟ್ ಯಹೂದಿಗಳ ಗುಪ್ತ ವಲಸೆಗೆ ಸಹಾಯ ಮಾಡುವ ಜಿಯೋನಿಸ್ಟ್ ಕ್ರಿಯಾವಾದವನ್ನು(Zionist activism)1957ರಲ್ಲಿ ಕೊಹೆನ್ ಸ್ವತಃ ಅನುಸರಿಸಿದ್ದರು.
ಇಸ್ರೇಲಿ ಮಿಲಿಟರಿ ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನಂತರ, ಕೊಹೆನ್ 1960 ರ ದಶಕದ ಆರಂಭದಲ್ಲಿ ಮೊಸಾದ್‌ಗೆ ನೇಮಕಗೊಂಡರು. ಅರೇಬಿಕ್, ಸ್ಪ್ಯಾನಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿಅವರಿಗಿದ್ದ ಸ್ಟಷ್ಟತೆ ಬಳಸಿಕೊಂಡು ಮೊಸ್ಸಾದ್, ಕೊಹೆನ್‌ಗಾಗಿ ವಿಸ್ತಾರವಾದ ಗುರುತನ್ನು ನಿರ್ಮಿಸಿತ್ತು. ಅಲ್ಲಿವರೆಗೆ ಎಲಿ ಕೊಹೆನ್ ಆಗಿದ್ದ ಅವರು ಕಮೆಲ್ ಅಮಿನ್ ಥಾಬೆಟ್ ಆಗಿ ಬದಲಾದರು. ಅರ್ಜೆಂಟಿನಾಗೆ ಕುಟುಂಬದೊಂದಿಗೆ ವಲಸೆ ಬಂದ ಸಿರಿಯನ್ ಉದ್ಯಮಿ ಎನಿಸಿದರು. ಇದಾದ ನಂತರ ಕೊಹೆನ್ ಬ್ಯೂನಸ್ ಐರಿಸ್‌ಗೆ ಸ್ಥಳಾಂತರಗೊಂಡರು. ಅಲ್ಲಿ ಅವರು ಅರಬ್ ಹಾಗೂ ಸಿರಿಯನ್ ಅನಿವಾಸಿಗಳ ಸಂಪರ್ಕ ಬೆಳೆಸಿಕೊಂಡರು, ಅವರ ವಿಶ್ವಾಸವನ್ನು ಗಳಿಸಿದರು. ಈ ಸಂಪರ್ಕ ನಂತರ ಅವರ ಗೂಢಾಚರ್ಯೆಯ ಕಾರ್ಯಕ್ಕೆ ಬಹಳ ಮಹತ್ವದೆನಿಸಿತು.
1962 ರಲ್ಲಿ, ಕೊಹೆನ್ ತಮ್ಮ ಈ ಉದ್ಯಮಿ ಎಂಬ ಗುರುತಿನ ಅಡಿಯಲ್ಲಿ ಡಮಾಸ್ಕಸ್‌ಗೆ ತೆರಳಿದರು. ಅಲ್ಲಿ ಅವರು ಸಿರಿಯನ್ ಸಮಾಜದೊಳಗೆ ಬಹಳ ವೇಗವಾಗಿ ಪ್ರಾಮುಖ್ಯತೆಯನ್ನು ಪಡೆದರು. ಪ್ರಭಾವಿ ರಾಜಕೀಯ ಮತ್ತು ಮಿಲಿಟರಿ ವ್ಯಕ್ತಿಗಳು ಭಾಗವಹಿಸುವ ಅದ್ದೂರಿ ಪಾರ್ಟಿಗಳನ್ನು ಆಯೋಜಿಸಲು ಯಶಸ್ವಿಯಾದರು. ಈ ಪಾರ್ಟಿಗಳಲ್ಲಿ ಕೊಹೆನ್ ಅಮೂಲ್ಯವಾದ ಗುಪ್ತಚರ ಮಾಹಿತಿಯನ್ನು ಹೊರತೆಗೆಯಲು ಯಶಸ್ವಿಯಾದರು. ಅವರ ಈ ಪ್ರಯತ್ನಗಳು ಗೋಲನ್ ಹೈಟ್ಸ್‌ನಲ್ಲಿ ಸಿರಿಯನ್ ಕೋಟೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿತು, ನಂತರ ಆರು ದಿನಗಳ ಯುದ್ಧದಲ್ಲಿ ಇಸ್ರೇಲ್ ಈ ಪ್ರದೇಶವನ್ನು ವಶಪಡಿಸಿಕೊಳ್ಳಲು ಕೊಹೆನ್ ನೀಡಿದ ಮಾಹಿತಿ ಸಹಾಯ ಮಾಡಿತು.
ಆದಾಗ್ಯೂ, ಕೊಹೆನ್ ಅವರ ಈ ಬೇಹುಗಾರಿಕೆ ಚಟುವಟಿಕೆಗಳು 1965 ರಲ್ಲಿ ಹಠಾತ್ ಅಂತ್ಯಗೊಂಡವು. ಇಸ್ರೇಲ್‌ಗೆ ಕೊಹೆನ್ ಕಳುಹಿಸಿದ್ದ ರಹಸ್ಯ ರೇಡಿಯೋ ಮಾಹಿತಿಗಳು ಸಿರಿಯನ್ ಗುಪ್ತಚರ ಇಲಾಖೆಗೆ ಸಿಕ್ಕಿತ್ತು. ಸೋವಿಯತ್ ಒಕ್ಕೂಟದ ಸಹಾಯದಿಂದ ಸಿರಿಯಾಗೆ ಈ ಮಾಹಿತಿಗಳು ಸಿಕ್ಕಿದ್ದವು. ಹೀಗಾಗಿ ಜನವರಿ 24, 1965 ರಂದು, ಸಿರಿಯನ್ ಅಧಿಕಾರಿಗಳು ಅವರ ಮನೆಯ ಮೇಲೆ ದಾಳಿ ಮಾಡಿದ ಕೋಹೆನ್‌ನನ್ನು ಬಂಧಿಸಿ, ವಿಚಾರಣೆ ನಡೆಸಿದರು ಹಾಗೂ ಬೇಹುಗಾರಿಕೆಯ ಅಪರಾಧಕ್ಕಾಗಿ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಕೊಹೆನ್‌ಗೆ ಕ್ಷಮೆ ನೀಡುವಂತೆ ಅಂತಾರಾಷ್ಟ್ರೀಯ ಮನವಿಗಳ ಹೊರತಾಗಿಯೂ, ಕೊಹೆನ್ ಅವರನ್ನು ಮೇ 18, 1965 ರಂದು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು.
ಅವನ ಮರಣದಂಡನೆಯ ನಂತರ ಕೊಹೆನ್‌ನ ದೇಹವು ಎಲ್ಲಿದೆ ಎಂಬುದು ಇಂದಿಗೂ ರಹಸ್ಯವಾಗಿದೆ ಅವರ ದೇಹಕ್ಕೆ ಪ್ರತಿಯಾಗಿ ಕೈದಿಗಳ ವಿನಿಮಯದ ಅನೇಕ ಕೊಡುಗೆಗಳನ್ನು ಇಸ್ರೇಲ್ ನೀಡಿದ್ದರೂ ಅದೆಲ್ಲವನ್ನು ಸಿರಿಯಾ ನಿರಂತರವಾಗಿ ತಿರಸ್ಕರಿಸಿದೆ. ಅವರ ದೇಹವನ್ನು ಮರಳಿ ಪಡೆಯಲು ಇಸ್ರೇಲ್ ಹಲವು ಪ್ರಯತ್ನಗಳನ್ನು ಮಾಡಿದ್ದನ್ನು ತಿಳಿದ ಸಿರಿಯಾ ಹಲವು ಬಾರಿ ಅವರ ದೇಹವನ್ನು ಸ್ಥಳಾಂತರಿಸಿದ್ದನ್ನು ಸಿರಿಯಾದ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ಆದರೂ 2018 ರಲ್ಲಿ, ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸ್ಸಾದ್ ಸಿರಿಯಾದಿಂದ ಕೊಹೆನ್ ಅವರ ಕೈಗಡಿಯಾರವನ್ನು ಹಿಂಪಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಈಗ ಇಸ್ರೇಲ್‌ನಲ್ಲಿ ಅಲ್ಲಿನ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ದೇಶ ಬಿಟ್ಟು ಓಡಿ ಹೋಗಿದ್ದು, ಇದರಿಂದ ದೇಶದಲ್ಲಿ ಅಸ್ಥಿರತೆ ನಿರ್ಮಾಣವಾಗಿದೆ. ಈ ಸಮಯವನ್ನೇ ಬಳಸಿಕೊಂಡಿರುವ ಇಸ್ರೇಲ್ ತನ್ನ ನೆಚ್ಚಿನ ಗೂಢಚಾರಿ ಕೊಹೆನ್ ದೇಹವನ್ನು 62 ವರ್ಷಗಳ ನಂತರ ಮತ್ತೆ ಪಡೆಯುವುದಕ್ಕೆ ಹೊಸ ಪ್ರಯತ್ನ ಮಾಡುತ್ತಿದೆ. ಹೀಗಾಗಿ ಮೊಸ್ಸಾದ್ ನಿರ್ದೇಶಕ ಡೇವಿಡ್ ಬರ್ನಿಯಾ ಸೇರಿದಂತೆ ಇಸ್ರೇಲಿ ಅಧಿಕಾರಿಗಳು ಅಸ್ಸಾದ್ ಸರ್ಕಾರದ ಮಾಜಿ ಸದಸ್ಯರೊಂದಿಗೆ ಈ ವಿಚಾರವಾಗಿ ನೇರವಾಗಿ ಮಾತುಕತೆಯಲ್ಲಿ ತೊಡಗಿದ್ದಾರೆ ಎಂದು ವರದಿಯಾಗಿದೆ.