ಇಸ್ರೇಲ್‌ನಿಂದ ಟೆಹ್ರಾನ್‌ ಅಣು, ಕ್ಷಿಪಣಿ ಘಟಕ ಉಡೀಸ್‌; ಇರಾನ್‌ ಆಂತರಿಕ ಭದ್ರತಾ ಸಂಸ್ಥೆ ಕಚೇರಿ ಕೂಡ ಧ್ವಂಸ

Published : Jun 19, 2025, 09:39 AM IST
iran israel war timeline

ಸಾರಾಂಶ

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ 6ನೇ ದಿನಕ್ಕೆ ಕಾಲಿಟ್ಟಿದ್ದು, ಪರಸ್ಪರ ಕ್ಷಿಪಣಿ ದಾಳಿಗಳು ಮುಂದುವರೆದಿವೆ. ಇರಾನ್ ಫಟಾಹ್-1 ಕ್ಷಿಪಣಿಗಳನ್ನು ಬಳಸಿದರೆ, ಇಸ್ರೇಲ್ ವಾಯುದಾಳಿ ನಡೆಸಿದೆ. 

ಟೆಹ್ರಾನ್/ಟೆಲ್‌ ಅವಿವ್‌: ಇಸ್ರೇಲ್- ಇರಾನ್‌ನ ನಡುವೆ ಸಮರ 6ನೇ ದಿನಕ್ಕೆ ಕಾಲಿಟ್ಟಿದ್ದು ಘನಘೋರ ಯುದ್ಧ ನಡೆದಿದೆ. ಇಸ್ರೇಲಿ ಯುದ್ಧ ವಿಮಾನಗಳಿಂದ ಇರಾನ್ ರಾಜಧಾನಿಯ ಮೇಲೆ ರಾತ್ರೋರಾತ್ರಿ ದಾಳಿ ನಡೆದಿದ್ದು, ಅಣು ಹಾಗೂ ಕ್ಷಿಪಣಿ ಘಟಕಗಳನ್ನು ನಾಶ ಮಾಡಲಾಗಿದೆ. ಇರಾನ್‌ ಆಂತರಿಕ ಭದ್ರತಾ ಸಂಸ್ಥೆ ಕಚೇರಿ ಕೂಡ ಧ್ವಂಸಗೊಂಡಿದೆ. ಇನ್ನೊಂದೆಡೆ ಇರಾನ್‌ ಕೂಡ ಪ್ರತೀಕಾರದ ದಾಳಿ ನಡೆಸಿದ್ದು, ಶಕ್ತಿಶಾಲಿ ಫಟಾಹ್‌-1 ಸೇರಿದಂತೆ ಸುಮಾರು 400 ಕ್ಷಿಪಣಿಗಳು ಮತ್ತು ನೂರಾರು ಡ್ರೋನ್‌ಗಳನ್ನು ಬಳಸಿ ಇಸ್ರೇಲ್ ರಾಜಧಾನಿ ಟೆಲ್‌ ಅವಿವ್ ಮೇಲೆ ದಾಳಿ ಮಾಡಿದೆ. ಒಟ್ಟಾರೆ ದಾಳಿಯಲ್ಲಿ ಇರಾನ್ ಹೆಚ್ಚು ಸಾವು-ನೋವು ಅನುಭವಿಸಿದೆ. ವಾಷಿಂಗ್ಟನ್ ಮೂಲದ ಇರಾನಿನ ಮಾನವ ಹಕ್ಕುಗಳ ಗುಂಪಿನ ಪ್ರಕಾರ ಇರಾನ್‌ನಲ್ಲಿ 239 ನಾಗರಿಕರು ಸೇರಿದಂತೆ ಕನಿಷ್ಠ 585 ಜನರು ಸಾವನ್ನಪ್ಪಿದ್ದಾರೆ ಮತ್ತು 1,300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆದರೆ ಇಸ್ರೇಲ್‌ನಲ್ಲಿ ಸಾವಿನ ಸಂಖ್ಯೆ 24 ಎಂದಷ್ಟೇ ಹೇಳಲಾಗಿದೆ.ಫಟಾಹ್‌ ಕ್ಷಿಪಣಿ ಬಳಸಿ ಇರಾನ್‌ ದಾಳಿ:

ಇರಾನ್ ಬುಧವಾರ ರಾತ್ರಿಯಿಡೀ ಇಸ್ರೇಲ್ ಮೇಲೆ ಫಟಾಹ್‌-1 ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಹೇಳಿಕೊಂಡಿದೆ. ಇದು ಶಕ್ತಿಶಾಲಿ ಕ್ಷಿಪಣಿ ಆಗಿದ್ದು ವಾಯುರಕ್ಷಣಾ ವ್ಯವಸ್ಥೆಯನ್ನೂ ಮೀರಿ ದಾಳಿ ಮಾಡುವ ಶಕ್ತಿ ಹೊಂದಿದೆ. ಒಟ್ಟಾರೆ ಇರಾನ್ 400 ಕ್ಷಿಪಣಿಗಳು ಮತ್ತು ನೂರಾರು ಡ್ರೋನ್‌ಗಳನ್ನು ಬಳಸಿ ದಾಳಿ ಮಾಡಿದೆ ಎಂದು ಹೇಳಲಾಗಿದೆ.

ಫಟಾಹ್‌-1 ಅನ್ನು ಇರಾನ್‌ ಬಳಸಿದ್ದು ಮೊದಲೇನಲ್ಲ. ಅಕ್ಟೋಬರ್ 1, 2024ರಂದು ಜೆರುಸಲೆಂ ವಿರುದ್ಧದ ಆಪರೇಷನ್ ಟ್ರೂ ಪ್ರಾಮಿಸ್ ವೇಳೆಯೂ ಇದನ್ನು ಬಳಸಿತ್ತು.

ಇಸ್ರೇಲ್‌ನಿಂದಲೂ ದಾಳಿ:

ಇದರ ನಡುವೆ ಇಸ್ರೇಲಿ ಯುದ್ಧ ವಿಮಾನಗಳಿಂದ ಇರಾನ್ ರಾಜಧಾನಿಯ ಮೇಲೆ ರಾತ್ರೋರಾತ್ರಿ ದಾಳಿ ನಡೆದಿದೆ. ಯುರೇನಿಯಂ ಸೆಂಟ್ರಿಫ್ಯೂಜ್‌ಗಳನ್ನು ತಯಾರಿಸಲು ಬಳಸುವ ಒಂದು ಘಟಕ ಮತ್ತು ಕ್ಷಿಪಣಿ ಘಟಕಗಳನ್ನು ತಯಾರಿಸುವ ಇನ್ನೊಂದು ಘಟಕ ಧ್ವಂಸ ಮಾಡಲಾಗಿದೆ. ಇರಾನ್‌ನ 10 ಕ್ಷಿಪಣಿಗಳನ್ನು ತಡೆಹಿಡಿಯಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.

12 ದಿನಕ್ಕಾಗುವಷ್ಟೇ ವಾಯುರಕ್ಷಣಾ ವ್ಯವಸ್ಥೆ!

ಆದರೆ ಇಸ್ರೇಲ್‌ನಲ್ಲಿ ವಾಯು ರಕ್ಷಣೆ ದುರ್ಬಲ ಆಗುವ ಆತಂಕ ಕಾಡುತ್ತಿದೆ. ಇಸ್ರೇಲ್‌ ಬಳಿ ವಾಯುರಕ್ಷಣಾ ಕ್ಷಿಪಣಿ ದಾಸ್ತಾನು ಕೇವಲ 10-12 ದಿನದ ಮಟ್ಟಿಗೆ ಇದೆ ಎಂದು ಗೊತ್ತಾಗಿದೆ.

ಯುದ್ಧದ ವಿರುದ್ಧ ಜಂಟಿ ಘೋಷಣೆಯಲ್ಲಿ ಜಿ7 ವಿಫಲ

ಕೆನಡಾದಲ್ಲಿ ಬುಧವಾರ ಮುಗಿದ ಜಿ-7 ಶೃಂಗಸಭೆಯು ವಿಶ್ವದಲ್ಲಿ ನಡೆದ 2 ಸಮರಗಳ ವಿರುದ್ಧ ಜಂಟಿ ಗೊತ್ತುವಳಿಯನ್ನು ಪಾಸು ಮಾಡುವಲ್ಲಿ ವಿಫಲವಾಗಿದೆ. ಪ್ರಸ್ತುತ ರಷ್ಯಾ-ಉಕ್ರೇನ್‌ ಹಾಗೂ ಇಸ್ರೇಲ್‌-ಇರಾನ್‌ ನಡುವೆ ಯುದ್ಧ ನಡೆದಿವೆ. ಈ ಬಗ್ಗೆ ಜಂಟಿ ಗೊತ್ತುವಳಿ ನಿರೀಕ್ಷಿಸಲಾಗಿತ್ತು. ಆದರೆ ಇರಾನ್ ವಿರೋಧಿ ನೀತಿ ಹಾಗೂ ರಷ್ಯಾ-ಉಕ್ರೇನ್‌ ವಿಚಾರದಲ್ಲಿ ದಿನಕ್ಕೊಂದು ನೀತಿ ಅನುಸರಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌, ಜಿ-7 ಆರಂಭದಲ್ಲೇ ಪ್ರವಾಸ ಮೊಟಕುಗೊಳಿಸಿ ಅಮೆರಿಕಕ್ಕೆ ಮರಳಿದರು. ಇನ್ನು ಇಸ್ರೇಲ್‌-ಇರಾನ್‌ ಯುದ್ಧದ ವಿಚಾರದಲ್ಲಿ ಫ್ರಾನ್ಸ್‌ ಅಧ್ಯಕ್ಷೆ ಎಮ್ಯಾನ್ಯುಯೆಲ್‌ ಮ್ಯಾಕ್ರಾನ್‌ ಅವರು ಇರಾನ್‌ ಪರ ಹಾಗೂ ಇಸ್ರೇಲ್‌ ವಿರೋಧಿ ನೀತಿ ಪ್ರದರ್ಶಿಸಿದರು. ಇದರಿಂದ ಯುದ್ಧದ ವಿಚಾರದಲ್ಲಿ ಒಮ್ಮತಕ್ಕೆ ಬರಲು ಸಭೆ ವಿಫಲವಾಯಿತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿರಿಯಾ: ಶುಕ್ರವಾರದ ನಮಾಜ್ ವೇಳೆ ಮಸೀದಿಯಲ್ಲಿ ಸ್ಫೋಟ, 8 ಸಾವು, 18 ಮಂದಿಗೆ ಗಾಯ, ಎಲ್ಲೆಡೆ ಆಂಬ್ಯುಲೆನ್ಸ್ ಸೈರನ್‌ಗಳದ್ದೇ ಸದ್ದು!
ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ