ಜಿ7 ಶೃಂಗದಲ್ಲಿ ಮೋದಿ: ಉಗ್ರವಾದಕ್ಕೆ ಕಡಿವಾಣ ಹಾಕಲು ಜಾಗತಿಕ ಕ್ರಮಕ್ಕೆ ಕರೆ

Published : Jun 19, 2025, 07:21 AM IST
Narendra Modi

ಸಾರಾಂಶ

ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಉಗ್ರವಾದವನ್ನು ಬೆಂಬಲಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಕರೆ ನೀಡಿದ್ದಾರೆ. ಜಾಗತಿಕ ದಕ್ಷಿಣ ದೇಶಗಳ ಕಳವಳಗಳಿಗೆ ಸ್ಪಂದಿಸುವಂತೆಯೂ ಮನವಿ ಮಾಡಿದ್ದಾರೆ. ಮೋದಿ ಮತ್ತು ಇಟಲಿ ಪ್ರಧಾನಿ ಮೆಲೋನಿ ನಡುವಿನ ಸ್ನೇಹಪರ ಭೇಟಿಯೂ ಗಮನ ಸೆಳೆಯಿತು.

ಕಾನನಸ್ಕಿಸ್: ಕೆನಡಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಉಗ್ರವಾದವನ್ನು ಹರುಡುವವರು ಮತ್ತು ಬೆಂಬಲಿಸುವವರ ವಿರುದ್ಧ ಜಾಗತಿಕ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಜಿ7 ದೇಶಗಳ ನಾಯಕರಿಗೆ ಕರೆ ನೀಡಿದ್ದಾರೆ.

‘ಜಾಗತಿಕ ಶಾಂತಿ ಮತ್ತು ಸಮೃದ್ಧಿಗಾಗಿ ನಮ್ಮ ವಿಚಾರ ಮತ್ತು ನೀತಿ ಸ್ಪಷ್ಟವಾಗಿರಬೇಕು. ಯಾವುದೇ ದೇಶ ಉಗ್ರವಾದವನ್ನು ಬೆಂಬಲಿಸಿದಲ್ಲಿ, ಅದು ತಕ್ಕ ಬೆಲೆ ತೆರಬೇಕು’ ಎಂದ ಮೋದಿ, ‘ಒಂದು ಕಡೆ ನಮ್ಮ ಸ್ವಂತ ಆದ್ಯತೆಗಳಿಗೆ ಅನುಸಾರವಾಗಿ ನಿರ್ಬಂಧಗಳನ್ನು ವಿಧಿಸಲು ಮುಂದಾಗುತ್ತೇವೆ. ಮತ್ತೊಂದೆಡೆ, ಭಯೋತ್ಪಾದನೆಯನ್ನು ಬಹಿರಂಗವಾಗಿ ಬೆಂಬಲಿಸುವ ದೇಶಗಳಿಗೆ ಬಹುಮಾನ ನೀಡಲಾಗುತ್ತದೆ’ ಎಂದರು. ಈ ಮೂಲಕ, ಭಾರತ ಸೇರಿದಂತೆ ವಿವಿಧ ದೇಶಗಳ ಆಮದಿನ ಮೇಲೆ ತೆರಿಗೆ ಹೇರಿದ ಮತ್ತುದುಗ್ರಪೋಷಕ ಪಾಕಿಸ್ತಾನದ ಸೇನಾ ಮುಖ್ಯಸ್ಥ ಮುನೀರ್‌ ಅವರನ್ನು ಔತಣಕ್ಕೆ ಆಹ್ವಾನಿಸಿದ ಅಮೆರಿಕದ ನಡೆಯನ್ನು ಕಟು ಶಬ್ದಗಳಲ್ಲಿ ಪರೋಕ್ಷವಾಗಿ ಟೀಕಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಇದೇ ವೇಳೆ, ಜಾಗತಿಕ ದಕ್ಷಿಣ(ಅಭಿವೃದ್ಧಿ ಹೊಂದುತ್ತಿರುವ) ದೇಶಗಳ ಕಳವಳ ಮತ್ತು ಆದ್ಯತೆಗಳ ಕಡೆಗೂ ಗಮನ ಹರಿಸುವಂತೆ ಕರೆ ನೀಡಿರುವ ಮೋದಿ, ಸುಸ್ಥಿರ ಯೋಜನೆಗಳ ಮೂಲಕ ಇಂಧನ ಭದ್ರತೆ ಸಾಧನೆ, ಎಐ ಕಳವಳಗಳ ನಿವಾರಣೆಯತ್ತ ಗಮನ ಹರಿಸುವಂತೆಯೂ ಸಲಹೆ ನೀಡಿದರು.

ನಾನು ನಿಮ್ಮಂತಾಗಲು ಪ್ರಯತ್ನಿಸುವೆ: ಮೋದಿಗೆ ಮೆಲೋನಿ

ಕಾನನಸ್ಕಿಸ್ (ಕೆನಡಾ): ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಬುಧವಾರ ಜಿ-7 ಶೃಂಗದ ವೇಳೆ ಸ್ನೇಹಪರತೆ ಪ್ರದರ್ಶಿಸಿ ಗಮನ ಸೆಳೆದರು.ಮೋದಿ ಅವರನ್ನು ಮೆಲೋನಿ ಭೇಟಿ ಆಗಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಂತೆ, ನೀವು ಅತ್ಯುತ್ತಮರು, ನಾನು ನಿಮ್ಮಂತೆಯೇ ಆರಲು ಪ್ರಯತ್ನಿಸುತ್ತಿದ್ದೇನೆ’ ಎಂದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಮೋದಿ ಅವರು ನಗುತ್ತಾ ಇಟಲಿ ಪ್ರಧಾನಿಗೆ ‘ಹೆಬ್ಬೆರಳು ಎತ್ತಿ’ ಸನ್ನೆ ಮಾಡುತ್ತಿರುವುದು ಕಂಡುಬಂದಿತು. ಬಳಿಕ ಮೆಲೋನಿ ಅವರೂ ಮೋದಿಯತ್ತ ತೋರು ಬೆರಳು ಸನ್ನೆ ಮಾಡಿ ಚಟಾಕಿ ಹಾರಿಸಿದರು.

ಇನ್ನು ಮೆಲೋನಿ ಟ್ವೀಟ್ ಮಾಡಿ, ‘ಇಟಲಿ ಮತ್ತು ಭಾರತ, ಉತ್ತಮ ಸ್ನೇಹದಿಂದ ಸಂಬಂಧ ಹೊಂದಿವೆ’ ಎಂದಿದ್ದಾರೆ. ಮೋದಿ ಕೂಡ ‘ಇಟಲಿಯೊಂದಿಗಿನ ಭಾರತದ ಸ್ನೇಹವು ಬಲಗೊಳ್ಳುತ್ತಲೇ ಇರುತ್ತದೆ, ನಮ್ಮ ಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ’ ಎಂದು ಬರೆದಿದ್ದಾರೆ.ಮ್ಯಾಕ್ರಾನ್ ಜತೆಗೂ ಚಟಾಕಿ:

ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ, ‘ಇತ್ತೀಚಿನ ದಿನಗಳಲ್ಲಿ ನೀವು ಟ್ವಿಟರ್‌ನಲ್ಲಿ ಜಗಳವಾಡುತ್ತಿದ್ದೀರಿ’ ಎಂದು ಹೇಳಿದರು. ಈ ಮೂಲಕ ಇರಾನ್‌ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಜತೆ ಜಗಳ ಆಡಿದ್ದನ್ನು ಉಲ್ಲೇಖಿಸಿದರು. ಇದಕ್ಕೆ ಮ್ಯಾಕ್ರಾನ್‌ ನಗುತ್ತಲೇ ಉತ್ತರಿಸಿದರು.ಇದೇ ವೇಳೆ, ಇತರ ಜಿ7 ನಾಯಕರ ಜತೆಗೂ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಭಾರತ-ಕೆನಡಾ ಸಂಬಂಧ ಸುಧಾರಣೆ: ಶೀಘ್ರ ರಾಯಭಾರಿ ಮರುನಿಯೋಜನೆ

ಖಲಿಸ್ತಾನಿ ಪ್ರತ್ಯೇಕವಾದಿ ನಾಯಕ ನಿಜ್ಜರ್‌ ಹತ್ಯೆ ಬಳಿಕ ಹದಗೆಟ್ಟಿದ್ದ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಒಂಬತ್ತು ತಿಂಗಳ ಬಳಿಕ ಮತ್ತೆ ಹಳಿಗೆ ಮರಳುವ ಸೂಚನೆಗಳು ಗೋಚರಿಸಿವೆ. ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೋ ಸರ್ಕಾರಾವಧಿಯಲ್ಲಿ ವಾಪಸ್‌ ಕರೆಸಿಕೊಂಡಿದ್ದ ರಾಯಭಾರಿಗಳನ್ನು ಆದಷ್ಟು ಶೀಘ್ರ ಮರು ನಿಯೋಜನೆಗೆ ಎರಡೂ ದೇಶಗಳು ಮುಂದಾಗಿವೆ.

ಈ ಮೂಲಕ ಕೆನಡಾದಲ್ಲಿ ಮಾರ್ಕ್‌ ಕಾರ್ನಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಎರಡೂ ದೇಶಗಳ ಸಂಬಂಧದಲ್ಲಿ ಧನಾತ್ಮಕ ಬದಲಾವಣೆ ಆರಂಭವಾಗಿದೆ.

ಇಲ್ಲಿ ನಡೆಯುತ್ತಿರುವ ಜಿ20 ಸಮ್ಮೇಳನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಕೆನಡಾ ಪ್ರಧಾನಿ ಮಾರ್ಕ್‌ ಕಾರ್ನೆ ಅವರು ಭೇಟಿಯಾಗಿದ್ದು, ಧನಾತ್ಮಕ ಮತ್ತು ರಚನಾತ್ಮಕವಾಗಿ ಮಾತುಕತೆ ನಡೆಸಿದ್ದಾರೆ. ಸಮಾನ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವ ಮತ್ತು ನೆಲದ ಕಾನೂನು, ಜನರ ನಡುವಿನ ಸಂಪರ್ಕ ಹಾಗೂ ಇತರೆ ಸಮಾನ ವಿಚಾರಗಳಲ್ಲಿ ಭಾರತ ಮತ್ತು ಕೆನಡಾ ಸಂಬಂಧದ ಮಹತ್ವದ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು ಎಂದು ವಿದೇಶಾಂಗ ಸಚಿವ ವಿಕ್ರಮ ಮಿಸ್ರಿ ಮಾಹಿತಿ ನೀಡಿದ್ದಾರೆ.

ಸಂಬಂಧ ಮರುಸ್ಥಾಪಿಸುವ ನಿಟ್ಟಿನಲ್ಲಿ ಮೊದಲ ಭಾಗವಾಗಿ ಎರಡೂ ದೇಶಗಳು ಆಯಾದೇಶಗಳ ರಾಯಭಾರಿಗಳನ್ನು ಶೀಘ್ರವಾಗಿ ನೇಮಿಸಲು ನಿರ್ಧಾರ ತೆಗೆದುಕೊಂಡಿವೆ. ಆ ಬಳಿಕ ಇತರೆ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ. ಇದೇ ವೇಳೆ, ಮೋದಿ ಅವರ ಆಡಳಿತ ಶೈಲಿಯನ್ನು ಕಾರ್ನೆ ಹೊಗಳಿದ್ದಾರೆ.

ಕಳೆದ ವರ್ಷ ಖಲಿಸ್ತಾನಿ ಪ್ರತ್ಯೇಕವಾದಿ ನಾಯಕ ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಹಿಂದೆ ಭಾರತದ ಕೈವಾಡದ ಕುರಿತು ಕೆನಡಾ ಆರೋಪ ಮಾಡಿತ್ತು. ಆ ಬಳಿಕ ಭಾರತ ಕೆನಡಾದಿಂದ ತನ್ನ ರಾಯಭಾರಿ ಕಚೇರಿ 5 ಅಧಿಕಾರಿಗಳನ್ನು ವಾಪಸ್‌ ಕರೆಸಿಕೊಂಡಿತ್ತು. ಜತೆಗೆ ದೆಹಲಿಯಲ್ಲಿರುವ ಕೆನಡಾದ ಐವರು ರಾಯಭಾರಿ ಕಚೇರಿ ಅಧಿಕಾರಿಗಳನ್ನೂ ವಾಪಸ್‌ ಕಳುಹಿಸಿತ್ತು.

ಮೋದಿ ಕ್ರೊವೇಷಿಯಾ ಭೇಟಿ: ದ್ವಿಪಕ್ಷ ಮಾತುಕತೆ ಯಶಸ್ವಿ

ಝಾಗ್ರೆಬ್‌ (ಕ್ರೊವೇಷಿಯಾ): 3 ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕ್ರೊವೇಷಿಯಾಗೆ ಭೇಟಿ ನೀಡಿದರು. ಈ ವೇಳೆ ಅಲ್ಲಿ ನಡೆದ ದ್ವಿಪಕ್ಷೀಯ ಸಭೆಗಳು ಫಲಪ್ರದವಾಗಿವೆ.

ಮೋದಿ ಅವರು ಕ್ರೊವೇಷಿಯಾಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿ. ಅವರನ್ನ ಪ್ರಧಾನಿ ಆ್ಯಂಡ್ರೆಜ್‌ ಪ್ಲೆಂಕೋವಿಕ್‌ ಅವರು ಖುದ್ದು ವಿಮಾನ ನಿಲ್ದಾಣಕ್ಕೆ ಬಂದು ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಪ್ರಧಾನಿ ಮೋದಿ ಅವರು ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಆಗಮಿಸುತ್ತಿದ್ದಂತೆ ಅಲ್ಲಿ ನೆಲೆಸಿರುವ ಭಾರತ ಮೂಲದ ನಾಗರಿಕರು ‘ವಂದೇ ಮಾತರಂ’, ‘ಭಾರತ್‌ ಮಾತಾ ಕೀ ಜೈ’ ಘೋಷಣೆ, ಸಾಂಸ್ಕೃತಿಕ ನೃತ್ಯ ಮಾಡುವ ಮೂಲಕ ಬರಮಾಡಿಕೊಂಡರು.ಬಳಿಕ ಕ್ರೊವೇಷಿಯಾ ಪ್ರಧಾನಿ ಪ್ಲೆಂಕೋವಿಕ್‌ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದರು. ಜೊತೆಗೆ ಅಲ್ಲಿನ ಅಧ್ಯಕ್ಷ ಝೊರಾನ್‌ ಮಿಲಾನೋವಿಕ್‌ ಅವರನ್ನು ಭೇಟಿ ಮಾಡಿದರು.

ಕ್ರೊವೇಷಿಯಾಗೂ ಮುನ್ನ ಮೋದಿ ಅವರು ಸೈಪ್ರಸ್‌ಗೆ ಭೇಟಿ ನೀಡಿ, ಬಳಿಕ ಕೆನಡಾದಲ್ಲಿ ಜಿ7 ಶೃಂಗದಲ್ಲಿ ಭಾಗಿಯಾಗಿ ಬಳಿಕ ಕ್ರೊವೇಷಿಯಾಗೆ ಭೇಟಿ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ