ಬಹುತೇಕ ಕೊರೋನಾ ಯುದ್ಧ ಗೆದ್ದ ಇಸ್ರೇಲ್‌!

By Kannadaprabha NewsFirst Published Apr 19, 2021, 7:56 AM IST
Highlights

ಕೊರೋನಾ ಯುದ್ಧ ಬಹುತೇಕ ಗೆದ್ದ ಇಸ್ರೇಲ್‌!| ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಕಡ್ಡಾಯ ನಿಯಮ ತೆರವು, ಶಾಲೆ ಪುನಾರಂಭ| ಶೇ.81ರಷ್ಟುಜನರಿಗೆ ಲಸಿಕೆ ವಿತರಣೆ ಬೆನ್ನಲ್ಲೇ ಸರ್ಕಾರದಿಂದ ನಿರ್ಬಂಧ ತೆರವು

ಜೆರುಸಲೆಂ(ಏ.19): ಕೊರೋನಾ ಲಸಿಕೆ ವಿತರಣೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಇಸ್ರೇಲ್‌ ಇದೀಗ, ಜನಸಾಮಾನ್ಯರು ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ತೊಡುವುದು ಕಡ್ಡಾಯ ಎಂಬ ನಿಯಮವನ್ನು ತೆಗೆದು ಹಾಕಿದೆ. ಜೊತೆಗೆ ದೇಶಾದ್ಯಂತ ಎಲ್ಲಾ ರೀತಿಯ ಶೈಕ್ಷಣಿಕ ಚಟುವಟಿಕೆಗಳ ಪುನಾರಂಭದ ಘೋಷಣೆ ಮಾಡಿದೆ. ವಿಶ್ವದ ಬಹುತೇಕ ದೇಶಗಳು ಸೋಂಕಿನ 2,3,4ನೇ ಅಲೆಯಲ್ಲಿ ಬೇಯುತ್ತಿರುವಾಗಲೇ ಇಸ್ರೇಲ್‌ ಕೈಗೊಂಡಿರುವ ನಿರ್ಧಾರ ಸಾಕಷ್ಟುಅಚ್ಚರಿ ಮತ್ತು ಚರ್ಚೆಗೆ ಗ್ರಾಸಮಾಡಿದೆ. ಇದು ಇಸ್ರೇಲ್‌ ದೇಶ ಬಹುತೇಕ ಕೊರೋನಾ ಯುದ್ಧ ಗೆದ್ದ ಸುಳಿವು ಎನ್ನಲಾಗಿದೆ.

ಇಸ್ರೇಲ್‌ನ 93 ಲಕ್ಷ ಜನಸಂಖ್ಯೆಯ ಪೈಕಿ ಶೇ.53ರಷ್ಟುಜನರು ಈಗಾಗಲೇ ಫೈಝರ್‌ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಇನ್ನು 16 ವರ್ಷ ಮೇಲ್ಪಟ್ಟವರಿಗೆ ನಾಗರಿಕರನ್ನು ಮಾತ್ರವೇ ಲೆಕ್ಕ ಹಾಕಿದರೆ ಒಟ್ಟು ಜನಸಂಖ್ಯೆಯಲ್ಲಿ ಶೇ.81ರಷ್ಟುಜನರು ಈಗಾಗಲೇ ಎರಡೂ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಅವರಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿದೆ ಎಂಬ ಕಾರಣಕ್ಕೆ ಕಳೆದ ವಾರವೇ ಇಸ್ರೇಲ್‌ ಸರ್ಕಾರ ಬಹುತೇಕ ನಿರ್ಬಂಧಗಳನ್ನು ತೆಗೆದು ಹಾಕಿತ್ತು.

ಇದೀಗ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಧರಿಸಬೇಕೆಂಬ ನಿಯಮವನ್ನು ತೆಗೆದು ಹಾಕಿದೆ. ಜೊತೆಗೆ ಭಾನುವಾರದಿಂದಲೇ ಎಲ್ಲಾ ರೀತಿಯ ಶೈಕ್ಷಣಿಕ ಚಟುವಟಿಕೆ ಪುನಾರಂಭ ಮಾಡಲಾಗಿದೆ. ಆದರೆ ಒಳಾಂಗಣ ಸ್ಥಳಗಳು ಮತ್ತು ಇನ್ನೂ ಲಸಿಕೆ ಪಡೆದ ಶೈಕ್ಷಣಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. ಜೊತೆಗೆ ಮೇ ತಿಂಗಳಿನಿಂದ ದೇಶವನ್ನು ವಿದೇಶಿಯರಿಗೆ ತೆರೆಯುವುದಾಗಿ ಸರ್ಕಾರ ಘೋಷಿಸಿದೆ.

ದೇಶದಲ್ಲಿ ಇದುವರೆಗೆ 8.36 ಲಕ್ಷ ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, 6331 ಜನರು ಸಾವನ್ನಪ್ಪಿದ್ದಾರೆ.

ಯುದ್ದ ಗೆದ್ದಿದ್ದು ಹೇಗೆ?

ಲಸಿಕೆ ವಿತರಣೆಗೆ ಸಂಪೂರ್ಣ ಡಿಜಿಟಲ್‌ ವ್ಯವಸ್ಥೆ ಬಳಕೆ.

ಲಸಿಕೆ ಕುರಿತು ಜನರಲ್ಲಿದ್ದ ಅನುಮಾನ ನಿವಾರಣೆಗೆ ಕ್ರಮ

ಗಣ್ಯರಿಂದಲೇ ಲಸಿಕೆ ಸ್ವೀಕಾರ ಮೂಲಕ ಅನುಮಾನಕ್ಕೆ ತೆರೆ

ಮೊದಲಿಗೆ 60 ವರ್ಷ ಮೇಲ್ಪಟ್ಟಆದ್ಯತಾ ವರ್ಗಕ್ಕೆ ಲಸಿಕೆ

ನಂತರ 60 ವರ್ಷ ಕೆಳಗಿನವರಿಗೆ ಲಸಿಕೆ ವಿತರಣೆ

ಮುಂದಿನ ದಿನಗಳಲ್ಲಿ 16 ವರ್ಷ ಕೆಳಗಿನ ಮಕ್ಕಳಿಗೂ ಲಸಿಕೆ

click me!