ಸಿನ್ವರ್ ಹತ್ಯೆಗೆ ಪ್ರತೀಕಾರಕ್ಕೆ ಇಳಿದ ಹಮಾಸ್; ಇಸ್ರೇಲ್ ಪ್ರಧಾನಿ ನಿವಾಸದ ಮೇಲೆ ಡ್ರೋನ್ ದಾಳಿ ಯತ್ನ

By Kannadaprabha News  |  First Published Oct 20, 2024, 7:42 AM IST

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮನೆಯನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆದಿದೆ. ಲೆಬನಾನ್‌ನಿಂದ ಡ್ರೋನ್ ಉಡಾವಣೆಯಾಗಿದ್ದು, ಹಿಜ್ಬುಲ್ಲಾ ಉಗ್ರರ ಕೈವಾಡ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.


ಜೆರುಸಲೇಂ: ಒಂದು ವರ್ಷದ ಹಿಂದೆ ಇಸ್ರೇಲ್‌ನಲ್ಲಿ ನಡೆದ 1200 ಮಂದಿಯ ನರಮೇಧದ ರೂವಾರಿ, ಹಮಾಸ್‌ ನಾಯಕ ಯಾಹ್ಯಾ ಸಿನ್ವರ್ ಹತ್ಯೆಗೆ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರು ಪ್ರತೀಕಾರಕ್ಕೆ ಇಳಿದಿದ್ದಾರೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಮನೆಯನ್ನು ಗುರಿಯಾಗಿಸಿಕೊಂಡು ಉಗ್ರರು ಡ್ರೋನ್‌ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಶನಿವಾರ ಬೆಳಗ್ಗೆ ಲೆಬನಾನ್‌ನಿಂದ ಡ್ರೋನ್‌ ಉಡಾವಣೆಯಾಯಿತು. ಕೂಡಲೇ ಸೈರನ್‌ಗಳು ಮೊಳಗಿದವು. ಅದನ್ನು ಸಿಸೇರಿಯಾದಲ್ಲಿರುವ ಪ್ರಧಾನಿ ಮನೆಯನ್ನು ಗುರಿಯಾಗಿಸಿಕೊಂಡು ಹಾರಿಬಿಡಲಾಗಿತ್ತು. ಆದರೆ ಆ ವೇಳೆ ಬೆಂಜಮಿನ್‌ ನೆತನ್ಯಾಹು ಆಗಲೀ ಅವರ ಪತ್ನಿಯಾಗಲೀ ಮನೆಯಲ್ಲಿರಲಿಲ್ಲ ಎಂದು ಇಸ್ರೇಲ್‌ ಸರ್ಕಾರ ತಿಳಿಸಿದೆ. ಈ ದಾಳಿ ನಡೆಸಿದ್ದು ಯಾರು ಎಂದು ಇಸ್ರೇಲ್‌ ಹೇಳಿಲ್ಲ. ಆದರೆ ಲೆಬನಾನ್‌ನಿಂದ ಡ್ರೋನ್‌ ಬಂದಿರುವ ಕಾರಣ ಹಿಜ್ಬುಲ್ಲಾ ಉಗ್ರರು ಡ್ರೋನ್‌ ಹಾರಿಬಿಟ್ಟಿರುವ ಶಂಕೆ ಇದೆ.

Tap to resize

Latest Videos

ಈ ಡ್ರೋನ್‌ ಪ್ರಧಾನಿ ಅವರ ಮನೆ ಬಳಿಯೇ ಬಿತ್ತೇ? ಅಥವಾ ಹೊಡೆದುರುಳಿಸಲಾಯಿತೇ ಎಂಬ ಯಾವುದೇ ಮಾಹಿತಿಯನ್ನು ಇಸ್ರೇಲ್‌ ನೀಡಿಲ್ಲ.

2023ರ ಅ.7ರಂದು ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ದಾಳಿ ನಡೆಸಿದ ಬಳಿಕ ಬೆಂಜಮಿನ್‌ ನೆತನ್ಯಾಹು ಅವರನ್ನು ಗುರಿಯಾಗಿಸಿಕೊಂಡು ನಡೆದ ಮತ್ತೊಂದು ದಾಳಿ ಇದಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ನೆತನ್ಯಾಹು ಅವರ ವಿಮಾನ ಇಳಿಯುವ ಸಂದರ್ಭದಲ್ಲಿ ಬೆನ್‌ ಗುರಿಯನ್‌ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ಯೆಮನ್‌ನ ಹೌತಿ ಉಗ್ರರು ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನು ಹಾರಿಬಿಟ್ಟಿದ್ದರು. ಆದರೆ ಅದನ್ನು ಇಸ್ರೇಲ್‌ ಮಾರ್ಗಮಧ್ಯವೇ ಹೊಡೆದುರುಳಿಸಿತ್ತು.

ಇಸ್ರೇಲ್ ದಾಳಿಗೆ 50 ಬಲಿ:

ಈ ನಡುವೆ ಉತ್ತರ ಗಾಜಾದ ಆಸ್ಪತ್ರೆಗಳು ಸೇರಿ ಕೆಲವು ಪ್ರದೇಶಗಳ ಮೇಲೆ ಇಸ್ರೇಲ್ ಶನಿವಾರ ವಾಯುದಾಳಿ ನಡೆಸಿದ್ದು, 50 ಜನ ಅಸುನೀಗಿದ್ದಾರೆ.

ಇಸ್ರೇಲ್‌ ವಿರುದ್ಧ ಹಮಾಸ್‌ ಹೋರಾಟ ನಿಲ್ಲಲ್ಲ: ಇರಾನ್‌

2023ರ ಅ.7ರ ದಾಳಿಯ ರೂವಾರಿಯಾಗಿರುವ ಹಮಾಸ್‌ ನಾಯಕ ಯಾಹ್ಯಾ ಸಿನ್ವರ್‌ನನ್ನು ಇಸ್ರೇಲ್‌ ಕೊಂದು ಹಾಕಿದ್ದರೂ, ಇಸ್ರೇಲ್‌ ವಿರುದ್ಧ ಹಮಾಸ್‌ ಹೋರಾಟ ಮುಂದುವರಿಯಲಿದೆ ಎಂದು ಇರಾನ್‌ನ ಪರಮೋಚ್ಚ ನಾಯಕ ಅಯತೋಲ್ಲಾ ಅಲಿ ಖಮೀನಿ ಹೇಳಿದ್ದಾರೆ.

‘ಸಿನ್ವರ್‌ ಸಾವು ನೋವು ತುಂಬಿದ ನಷ್ಟ. ಆದರೆ ಇತರೆ ಪ್ಯಾಲೆಸ್ತೀನ್‌ ನಾಯಕರ ಹತ್ಯೆಯಾದ ಬಳಿಕವೂ ಹಮಾಸ್‌ ದಾಳಿ ಮುಂದುವರಿಸಿತ್ತು. ಈಗಲೂ ಅಷ್ಟೆ. ಹಮಾಸ್‌ ಇದೆ. ಮುಂದೆಯೂ ಜೀವಂತವಾಗಿರುತ್ತದೆ’ ಎಂದು ತಿಳಿಸಿದ್ದಾರೆ.

ಬೆರಳು ಕತ್ತರಿಸಿದ ಇಸ್ರೇಲ್
ಹಮಾಸ್‌ ಉಗ್ರಗಾಮಿ ಸಂಘಟನೆಯನ್ನು ಮುನ್ನಡೆಸುತ್ತಿದ್ದ ಯಾಹ್ಯಾ ಸಿನ್ವರ್‌ ಹತನಾಗುತ್ತಿದ್ದಂತೆ ಆತನ ಶವಕ್ಕಾಗಿ ಹುಡುಕಾಡಿದ ಇಸ್ರೇಲ್‌ ಯೋಧರು ಮೃತದೇಹ ಸಿಕ್ಕ ಕೂಡಲೇ ಮೊದಲು ಮಾಡಿದ ಕೆಲಸವೆಂದರೆ, ಸಿನ್ವರ್‌ನ ತೋರುಬೆರಳು ಕತ್ತರಿಸಿದ್ದು!

ಅಚ್ಚರಿಯಾದರೂ ಇದು ನಿಜ. ತಮ್ಮೆದುರೇ ಶವವಾಗಿ ಮಲಗಿದ್ದ ವ್ಯಕ್ತಿ ಯಾಹ್ಯಾ ಸಿನ್ವರೇ ಹೌದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಆತನ ಎಡಗೈ ತೋರು ಬೆರಳನ್ನು ಯೋಧರು ಕತ್ತರಿಸಿದ್ದರು. ಅದನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಿದರು. ಗಾಜಾಪಟ್ಟಿಯ ರಫಾದಲ್ಲಿ ಸಿಕ್ಕ ಶವ ಯಾಹ್ಯಾನದ್ದೇ ಎಂಬುದು ಪರೀಕ್ಷೆಯಿಂದ ದೃಢಪಟ್ಟಿತು.

ಮನೆ ಮನೆ ಅಲೆಯುತ್ತಿದ್ದ ಸಿನ್ವರ್‌ನ ಹುಡುಕಿ ಹತ್ಯೆಗೈದ ಇಸ್ರೇಲ್‌- ಕೊನೇ ಕ್ಷಣ ಡ್ರೋನ್‌ ಕ್ಯಾಮೆರಾದಲ್ಲಿ ಸೆರೆ

2 ದಶಕಗಳ ಕಾಲ ಯಾಹ್ಯಾ ಇಸ್ರೇಲ್‌ ಜೈಲಿನಲ್ಲಿದ್ದ. 2011ರಲ್ಲಿ ಕೈದಿಗಳ ವಿನಿಮಯ ಒಪ್ಪಂದದ ಭಾಗವಾಗಿ ಆತ ಬಿಡುಗಡೆಯಾಗಿದ್ದ. ತನ್ನ ಜೈಲಿನಲ್ಲಿದ್ದಾಗ ಯಾಹ್ಯಾ ಡಿಎನ್‌ಎ ಮಾದರಿಯನ್ನು ಇಸ್ರೇಲ್‌ ಸಂಗ್ರಹಿಸಿಟ್ಟಿತ್ತು. ಆತನ ಹತ್ಯೆ ನಂತರ ಕತ್ತರಿಸಿದ ಬೆರಳನ್ನು ತನ್ನ ಬಳಿ ಮೊದಲೇ ಇದ್ದ ಮಾದರಿ ಜತೆ ಹೋಲಿಸಿ ಇಸ್ರೇಲ್‌ ಪರೀಕ್ಷೆ ನಡೆಸಿತು ಎಂದು ವರದಿಗಳು ತಿಳಿಸಿವೆ.

ಉಗ್ರರ ಹೊಸ ಮುಖ್ಯಸ್ಥ?
ಹಮಾಸ್‌ ಮುಖ್ಯಸ್ಥನಾಗಿದ್ದ ಇಸ್ಮಾಯಿಲ್‌ ಹನಿಯೇ ಅನ್ನು ಜುಲೈನಲ್ಲಿ ಇಸ್ರೇಲ್‌ ಕೊಂದು ಹಾಕಿತ್ತು. ಆನಂತರ ಯಾಹ್ಯಾ ಸಿನ್ವರ್‌ ಸಂಘಟನೆಯ ನೇತೃತ್ವ ಹೊತ್ತುಕೊಂಡಿದ್ದ. ಇದೀಗ ಆತನೂ ಹತ್ಯೆಗೀಡಾಗಿರುವ ಹಿನ್ನೆಲೆಯಲ್ಲಿ ಸಂಘಟನೆಗೆ ಹೊಸ ರಾಜಕೀಯ ನಾಯಕನನ್ನು ಆರಿಸಲು ಹಮಾಸ್‌ ಪ್ರಯತ್ನ ಆರಂಭಿಸಿದೆ. ಯಾಹ್ಯಾ ಸಿನ್ವರ್‌ ಸೋದರನಾಗಿರುವ ಮೊಹಮ್ಮದ್‌ ಸಿನ್ವರ್‌ ಸಂಘಟನೆಯ ನೇತೃತ್ವ ಹೊತ್ತುಕೊಂಡು, ಇಸ್ರೇಲ್‌ ವಿರುದ್ಧದ ದಾಳಿ ತೀವ್ರಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಈಗಾಗಲೇ ಇಸ್ರೇಲ್‌ ಹಮಾಸ್‌ನ ಪ್ರಮುಖ ನಾಯಕಗಣವನ್ನೇ ಹುಡುಕಿ ಹುಡುಕಿ ಹೊಡೆದು ಹಾಕಿದೆ. ಆದರ ಹಮಾಸ್‌ ಅತ್ಯಂತ ತ್ವರಿತವಾಗಿ ಹಾಗೂ ಪರಿಣಾಮಕಾರಿಯಾಗಿ ಪುಟಿದೇಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿಗಳು ತಿಳಿಸಿವೆ.

ಜಗತ್ತನ್ನೇ ಕಾಡುತ್ತಿದೆ ಮಹಾಯುದ್ಧದ ಭೀತಿ! ಮತ್ತೊಂದು ಯುದ್ಧಕ್ಕೆ ಮುನ್ನುಡಿ ಬರೆದ ಹುಚ್ಚುದೊರೆ!

click me!