ಗಾಜಾ ಆಸ್ಪತ್ರೆ ಮೇಲೆ ನಡೆದಿರುವ ಕ್ಷಿಪಣಿ ದಾಳಿ ಬಳಿಕ ಆರೋಪ ಪ್ರತ್ಯಾರೋಪ ಜೋರಾಗಿದೆ.ಆದರೆ ಅರಬ್ ರಾಷ್ಟ್ರಗಳು ಕೆರಳಿ ಕೆಂಡವಾಗಿದೆ. ಇದರ ಪರಿಣಾಮ ಅಮರಿಕ ಅಧ್ಯಕ್ಷ ಜೋ ಬೈಡೆನ್ ಜೊತೆಗಿನ ಮಾತುಕತೆಯನ್ನು ರದ್ದುಗೊಳಿಸಿದೆ.
ಜೋರ್ಡನ್(ಅ.18) ಗಾಜಾ ಆಸ್ಪತ್ರೆ ಮೇಲೆ ನಡೆದಿರುವ ಕ್ಷಿಪಣಿ ದಾಳಿ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದು ಇಸ್ರೇಲ್ ನಡೆಸಿದ ಭೀಕರ ದಾಳಿ ಎಂದು ಹಮಾಸ್ ಉಗ್ರರು ಹಾಗೂ ಪ್ಯಾಲೆಸ್ತಿನ್ ಹೇಳಿದ್ದರೆ, ಇತ್ತ ಇಸ್ರೇಲ್ ಸ್ಪಷ್ಟನೆ ನೀಡಿದೆ. ಹಮಾಸ್ ಉಗ್ರರು ಇಸ್ರೇಲ್‌ನತ್ತ ಹಾರಿಸಿದ ಕ್ಷಿಪಣಿ ಆಸ್ಪತ್ರೆ ಮೇಲೆ ಬಿದ್ದಿದೆ ಎಂದಿದೆ. ಈ ವಿವಾದ ಜೋರಾಗುತ್ತಿದ್ದಂತೆ ಅರಬ್ ರಾಷ್ಟ್ರಗಳು ಮತ್ತಷ್ಟು ಆಕ್ರೋಶಗೊಂಡಿದೆ. ಇಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮಾತುಕತೆಯನ್ನು ರದ್ದು ಮಾಡಿದೆ.
ಇಸ್ರೇಲ್ ಗಾಜಾದ ಮೇಲಿನ ದಾಳಿ ತೀವ್ರಗೊಳಿಸುತ್ತಿದ್ದಂತೆ ಇಂದು ಇಸ್ರೇಲ್‌ಗೆ ಜೋ ಬೈಡೆನ್ ಭೇಟಿ ಭಾರಿ ಮಹತ್ವ ಪಡೆದುಕೊಂಡಿದೆ. ಇದೇ ವೇಳೆ ಜೋರ್ಡನ್ ಸರಿದಂತೆ ಅರಬ್ ರಾಷ್ಟ್ರಗಳ ಜೊತೆ ಬೈಡೆನ್ ಮಾತುಕತೆ ನಡೆಸಿ ಸಂಧಾನದ ಮಹತ್ವ ಉದ್ದೇಶವೂ ಈ ಭೇಟಿ ಹಿಂದಿತ್ತು. ಆದರೆ ಗಾಜಾದ ಆಸ್ಪತ್ರೆ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ ಅನ್ನೋ ಆರೋಪ ಈ ಮಾತುಕತೆಯನ್ನು ರದ್ದು ಮಾಡಿದೆ.
ಜೋರ್ಡಾನ್ ವಿದೇಶಾಂಗ ಸಚಿವ ಆಯ್ಮಾನ್ ಸಫಾದಿ ಈ ಕುರಿತು ಅಧಿಕೃತ ಹೇಳಿಕೆ ನೀಡಿದ್ದಾರೆ. ಜೋ ಬೈಡೆನ್ ಜೊತೆಗೆ ಇಂದು ನಡೆಯಬೇಕಿದ್ದ ಮಹತ್ವದ ಸಭೆಯನ್ನು ರದ್ದು ಮಾಡಲಾಗಿದೆ. ಜೋರ್ಡಾನ್ ರಾಜ ಅಬ್ಬುಲ್ಲಾ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಇಲ್ ಸಿಸಿ, ಪ್ಯಾಲೆಸ್ತಿನ್ ಅಧ್ಯಕ್ಷ ಮೊಹಮ್ಮದ್ ಅಬಾಸ್ ಸೇರಿದಂತೆ ಇತರ ಅರಬ್ ಅಧಿಕಾರಿಗಳೊಂದಿಗೆ ಜೊ ಬೈಡೆನ್ ಮಹತ್ವದ ಸಭೆ ನಿಗಧಿಯಾಗಿತ್ತು. ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ದಾಳಿ ಅಂತ್ಯಗೊಳಿಸುವುದು. ಹಮಾಸ್ ಉಗ್ರರು ಒತ್ತೆಯಾಳಾಗಿಟ್ಟುಕೊಂಡಿರುವ ಇಸ್ರೇಲಿಗರನ್ನು ಬಿಡುಗಡೆಗೊಳಿಸುವುದು ಹಾಗೂ ಗಾಜಾ ಪಟ್ಟಿಗೆ ಆಹಾರ, ನೀರು, ವಿದ್ಯುತ್ ಸರಬರಾಜು ಪುನರ್ ಸ್ಥಾಪಿಸುವುದು ಈ ಮಾತುಕತೆಯ ಉದ್ದೇಶವಾಗಿತ್ತು. ಆದರೆ ಆಸ್ಪತ್ರೆ ಮೇಲಿನ ದಾಳಿಯಿಂದ ಈ ಸಭೆ ರದ್ದಾಗಿದೆ.
ಇಸ್ರೇಲ್‌ನ ಭೂದಾಳಿ ಎದುರಿಸಲು ನಾವು ಸಿದ್ಧ: ಹಮಾಸ್ ಘೋಷಣೆ: ಇಂದು ಬೈಡೆನ್ ಇಸ್ರೇಲ್‌ಗೆ
ಗಾಜಾದ ಅಲ್ ಅಹ್ಲಿ ಆಸ್ಪತ್ರೆ ಮೇಲೆ ಇಂದು ಕ್ಷಿಪಣಿ ದಾಳಿ ನಡೆದಿದೆ. ಪಾರ್ಕಿಂಗ್ ವಲಯದ ಮೇಲೆ ರಾಕೆಟ್ ದಾಳಿಯಾಗಿದೆ. ಇದು ಇಸ್ರೇಲ್ ನಡೆಸಿದ ಅತ್ಯಂತ ಭೀಕರ ದಾಳಿ. 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ತಿನ್ ಆರೋಪಿಸಿದೆ. ಆದರೆ ಈ ಕುರಿತು ವಿಡಿಯೋ ಹಾಗೂ ದಾಖಲೆ ಬಿಡುಗಡೆ ಮಾಡಿರುವ ಇಸ್ರೇಲ್ ಗೂಬೆ ಕೂರಿಸುವ ಯತ್ನ ಮಾಡಬೇಡಿ ಎಂದಿದೆ. ಹಮಾಸ್ ಭಯೋತ್ಪಾದಕರು ಇಸ್ರೇಲ್ ಮೇಲೆ ಹಾರಿಸಿದ ರಾಕೆಟ್ ವಿಫಲಗೊಂಡು ಆಸ್ಪತ್ರೆ ಮೇಲೆ ಬಿದ್ದಿದೆ. ಇಸ್ಲಾಮಿಕ್ ಭಯೋತ್ಪಾದಕರು ರಾಕೆಡ್ ದಾಳಿ ನಡೆಸುವ ಮುನ್ನ ಹಾಗೂ ನಂತರ ವಿಡಿಯೋವನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದೆ.