ಇಸ್ರೇಲ್‌-ಪ್ಯಾಲೆಸ್ತೀನ್‌ ಮಧ್ಯೆ ಪೂರ್ಣ ಯುದ್ಧ ಆರಂಭ?

By Kannadaprabha NewsFirst Published May 15, 2021, 8:22 AM IST
Highlights

* ಗಾಜಾ ಪಟ್ಟಿಪ್ರದೇಶದ ಮೇಲೆ ಇಸ್ರೇಲ್‌ನಿಂದ ಬಾರೀ ದಾಳಿ

* ಇಸ್ರೇಲ್‌-ಪ್ಯಾಲೆಸ್ತೀನ್‌ ಮಧ್ಯೆ ಪೂರ್ಣ ಯುದ್ಧ ಆರಂಭ?

* ಗಡಿಯಲ್ಲಿ ದಾಳಿಗೆ ಭಾರೀ ಪ್ರಮಾಣದ ಸೇನೆ ಜಮಾವಣೆ

-

ಜೆರುಸಲೇಂ(ಮೇ.15): ರಮ್ಜಾನ್‌ ವೇಳೆ ಇಲ್ಲಿನ ಪವಿತ್ರ ಸ್ಥಳದಲ್ಲಿ ಪ್ರಾರ್ಥನೆ ಸಂಬಂಧ ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಮುಸ್ಲಿಮರ ನಡುವೆ ಉಂಟಾಗಿದ್ದ ಸಂಘರ್ಷ ಇದೀಗ ಪೂರ್ಣಪ್ರಮಾಣದ ಯುದ್ಧಕ್ಕೆ ನಾಂದಿ ಹಾಡುವ ಭೀತಿ ಎದುರಾಗಿದೆ. ಕಳೆದೊಂದು ವಾರದಿಂದ ಉಭಯ ದೇಶಗಳ ನಡುವೆ ನಡೆಯುತ್ತಿರುವ ರಾಕೆಟ್‌, ಶೆಲ್‌ ದಾಳಿ ಇದೀಗ ಮತ್ತಷ್ಟುತೀವ್ರ ಸ್ವರೂಪ ಪಡೆದುಕೊಂಡಿದ್ದು, ಗುರುವಾರ ರಾತ್ರಿಯಿಂದೀಚೆಗೆ ಪ್ಯಾಲೆಸ್ತೀನ್‌ನ ಗಾಜಾಪಟ್ಟಿಪ್ರದೇಶದಲ್ಲಿನ ಹಮಾಸ್‌ ಉಗ್ರರ ನೆಲೆ ಮೇಲೆ ಇಸ್ರೇಲ್‌ ಭಾರೀ ಪ್ರಮಾಣದ ರಾಕೆಟ್‌ ದಾಳಿ ನಡೆಸಿದೆ. ಇದು, ಗಡಿ ಮೂಲಕ ಸೇನಾ ದಾಳಿಗೆ ಇಸ್ರೇಲ್‌ ನಡೆಸಿದ ಸಿದ್ಧತೆ ಎಂದು ವಿಶ್ಲೇಷಿಸಲಾಗಿದೆ.

ಈ ನಡುವೆ ಇಸ್ರೇಲ್‌ನ ಭಾರೀ ದಾಳಿಯ ಹಿನ್ನೆಲೆಯಲ್ಲಿ ಇಸ್ರೇಲ್‌ಗೆ ಹೊಂದಿಕೊಂಡಿರುವ ಗಾಜಾಪಟ್ಟಿಯ ಉತ್ತರ ಮತ್ತು ಪೂರ್ವ ಭಾಗದ ಸಾವಿರಾರು ಜನರು ಸ್ಥಳದಿಂದ ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ. ಕಳೆದೊಂದು ವಾರದಿಂದ ಇಸ್ರೇಲ್‌ ನಡೆಸಿದ ದಾಳಿಯಲ್ಲಿ 119 ಜನರು ಸಾವನ್ನಪ್ಪಿದ್ದರು, 850ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಭಾರೀ ದಾಳಿ:

ಗಾಜಾ ಪಟ್ಟಿಪ್ರದೇಶದಲ್ಲಿ ಹಮಾಸ್‌ ಉಗ್ರರ ಸುರಂಗಗಳ ಮೇಲೆ ಇಸ್ರೇಲ್‌ ಸೇನೆ ಗುರುವಾರ ರಾತ್ರಿಯಿಂದೀಚೆಗೆ ಸಾವಿರಾರು ರಾಕೆಟ್‌, ಶೆಲ್‌ ದಾಳಿ ನಡೆಸುವ ಮೂಲಕ ಅವುಗಳನ್ನು ಧ್ವಂಸಗೊಳಿಸುವ ಯತ್ನ ಮಾಡಿದೆ. ಅದಕ್ಕೆ ಪೂರಕವಾಗಿ ಗಡಿಯಲ್ಲಿ ಭಾರೀ ಪ್ರಮಾಣದ ಸೇನೆಯನ್ನು ನಿಯೋಜಿಸಿದೆ. ಅಲ್ಲದೆ 9000ದಷ್ಟಿರುವ ಮೀಸಲು ಸೇನೆಗೂ ಬುಲಾವ್‌ ನೀಡಿದೆ. ಇದೆಲ್ಲವೂ, ಮಿನಿ ಯುದ್ಧದ ಮೂಲಕ ಹಮಾಸ್‌ ಉಗ್ರರನ್ನು ಹೆಡೆಮುರಿ ಕಟ್ಟಲು ಇಸ್ರೇಲ್‌ ನಡೆಸಿದ ಪೂರ್ವಸಿದ್ಧತೆ ಎಂದು ಹೇಳಲಾಗುತ್ತಿದೆ.

ಮತ್ತೊಂದೆಡೆ ಹಮಾಸ್‌ ಉಗ್ರರು ಕೂಡಾ ಇಸ್ರೇಲ್‌ ಕಡೆಗೆ ಸತತವಾಗಿ ರಾಕೆಟ್‌ ದಾಳಿ ನಡೆಸುವ ಮೂಲಕ, ಯಾವುದೇ ಹೋರಾಟಕ್ಕೆ ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ. ಹೀಗಾಗಿ ಉಭಯ ದೇಶಗಳು ಮತ್ತೊಂದು ಯುದ್ಧದತ್ತ ಹೆಜ್ಜೆ ಹಾಕುತ್ತಿರುವ ಆತಂಕ ಎದುರಾಗಿದೆ.

ಯುದ್ಧಕ್ಕೆ ಕಾರಣವೇನು?

ಜೆರುಸಲೆಂ ಗುಡ್ಡದಲ್ಲಿರುವ ಅಲ್‌ ಅಕ್ಸಾ ಮಸೀದಿಯು ಯೆಯೂದಿ ಮತ್ತು ಮುಸ್ಲಿಮರಿಬ್ಬರಿಗೂ ಪವಿತ್ರ ಸ್ಥಳ. ಇಡೀ ಜೆರುಸಲೆಂ ತನ್ನ ರಾಜಧಾನಿಗೆ ಸೇರಿದ ಭಾಗ ಎಂಬುದು ಇಸ್ರೇಲ್‌ ವಾದ. ಆದರೆ ಪೂರ್ವ ಜೆರುಸಲೆಂ ತನಗೆ ಸೇರಿದ್ದು ಎಂಬುದು ಪ್ಯಾಲೆಸ್ತೀನ್‌ ಹಟ. ಈ ಜಾಗದಲ್ಲಿದ್ದ ಕೆಲ ಮನೆಗಳಿಂದ ಪ್ಯಾಲೆಸ್ತೀನ್‌ ಮುಸ್ಲಿಮರನ್ನು ಇಸ್ರೇಲ್‌ ಸೇನೆ ಕಳೆದ ವಾರ ತೆರವುಗೊಳಿಸಿತ್ತು. ಅದಾದ ಬಳಿಕ ಹಿಂಸಾಚಾರ ಭುಗಿಲೆದ್ದಿದೆ.

click me!