
ಟೆಲ್‌ಅವೀವ್: 1996ರಲ್ಲಿ ಹಿಜ್ಜುಲ್ಲಾ ಉಗ್ರರ ಕೈಗೆ ಸಿಕ್ಕಿ ಸಾವಿಗೀಡಾಗಿದ್ದ ತನ್ನ ಅಧಿಕಾರಿ ರಾನ್ ಅರಾಡ್‌ನ ಅಂತಿಮ ಅವಶೇಷ ವಾಪಸ್ ತರಲೆಂದೇ ಇಸ್ರೇಲ್ ಶನಿವಾರ ರಾತ್ರಿ ಲೆಬನಾನ್ ನೆಲದಲ್ಲಿ ಬೆಚ್ಚಿಬೀಳಿಸುವ ಸೇನಾ ಕಾರ್ಯಾಚರಣೆ ನಡೆಸಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಆದೇಶದಂತೆ ಲೆಬನಾನ್‌ನೊಳಗೆ ನುಗ್ಗಿದ ಇಸ್ರೇಲ್ ಕಮಾಂಡೋ ಪಡೆಗಳು ರಾನ್ ಆರಾಡ್‌ನನ್ನು ಸಮಾಧಿ ಮಾಡಲಾಗಿತ್ತು ಎನ್ನಲಾದ ಸ್ಥಳದಲ್ಲಿ ಅವಶೇಷಗಳಿಗಾಗಿ ಹುಡುಕಾಟ ನಡೆಸಿ ಕೊನೆಗೆ ಬರಿಗೈಯಲ್ಲಿ ವಾಪಸ್ ಬಂದಿವೆ. 1986ರ ಅ.16ರಂದು ಇಸ್ರೇಲ್ ಯುದ್ಧ ವಿಮಾನವೊಂದು ತಾಂತ್ರಿಕ ಕಾರಣಗಳಿಂದ ಲೆಬನಾನ್‌ನಲ್ಲಿ ಪತನವಾಗಿತ್ತು. ಆ ವೇಳೆ ಇಸ್ರೇಲ್‌ನ ಶಸ್ತ್ರಾಸ್ತ್ರ ಅಧಿಕಾರಿ ರಾನ್ ಅರಾಡ್ ನಾಪತ್ತೆಯಾಗಿದ್ದರೆ, ಪೈಲಟ್ ನನ್ನು ರಕ್ಷಣೆ ಮಾಡಲಾಗಿತ್ತು. ತರುವಾಯ ಅರಾಡ್ ಲೆಬನಾನ್ ಉಗ್ರರ ವಶದಲ್ಲಿರುವ ಫೋಟೋ ಬಹಿರಂಗವಾಗಿತ್ತು.
ಆತನ ಬಿಡುಗಡೆಗೆ ಯತ್ನ ನಡೆಯಿತಾದರೂ 1990ರ ಸುಮಾರಿಗೆ ಆತ ಉಗ್ರರ ವಶದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿತ್ತು. ಆತನನ್ನು ಜೀವಂತವಾಗಿ ವಾಪಸ್ ತರಲು ಸಾಧ್ಯವಾಗಿಲ್ಲ, ಆದರೆ, ಮೃತದೇಹದ ಅವಶೇಷವನ್ನಾದರೂ ವಾಪಸ್ ತರುವುದಾಗಿ ಹೇಳಿದ್ದ ನೆತನ್ಯಾಹು ಅವರು ಇರಾನ್ ಜತೆಗಿನ ಯುದ್ಧದ ನಡುವೆಯೇ ಶನಿವಾರ ರಾತ್ರಿ ವಿಶೇಷ ಕಾರ್ಯಾಚರಣೆಗೆ ಸೂಚನೆ ನೀಡಿದ್ದರು.
ಅದರಂತೆ ಇಸ್ರೇಲ್ ಕಮಾಂಡೋಗಳಿದ್ದ 4 ಕಾಪ್ಟರ್‌ಗಳು ರಾತ್ರಿ ಸಿರಿಯಾ-ಲೆಬನಾನ್ ಗಡಿಯಲ್ಲಿರುವ ಹಿಬ್ಬುಲ್ಲಾದ ಬಲಿಷ್ಠ ಕೋಟೆ ನಬಿಚಿಟ್ ನಗರಕ್ಕೆ ನುಗ್ಗಿ ಸಮಾಧಿ ಸ್ಥಳದಲ್ಲಿ ಅವಶೇಷಗಳಿಗಾಗಿ ಹುಡುಕಾಟ ನಡೆಸಿವೆ. ಹಲವು ಆಡಿ ಗುಂಡಿ ತೋಡಿ ಹುಡುಕಾಡಿದರೂ ಪ್ರಯೋಜನವಾಗದಾಗ ಬರಿಗೈಯಲ್ಲಿ ವಾಪಸ್ ಬಂದಿದೆ.
ಕಾರ್ಯಾಚರಣೆ ವೇಳೆ ಇಸ್ರೇಲ್ ಕಮಾಂಡೋಗಳು ಮತ್ತು ಉಗ್ರರ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದ್ದು, ಇದೇ ವೇಳೆ ಇಸ್ರೇನ್ ಸೇನೆ ಕಮಾಂಡೋಪಡೆಗಳ ಬೆನ್ನಿಗೆ ನಿಂತು ನಡೆಸಿದ ವೈಮಾನಿಕ ದಾಳಿಯಲ್ಲಿ 41ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇರಾನ್‌ನ ಯುರೇನಿಯಂ ವಶಕ್ಕೆ ಸ್ಪೆಷಲ್ ಆಪರೇಷನ್: ಯುರೇನಿಯಂ ವಶ, ಇಲ್ಲವೇ ನಾಶ
ವಾಷಿಂಗ್ಟನ್: ಇರಾನ್ ಅಣ್ಣಸ್ತವನ್ನು ಹೊಂದದಂತೆ ತಡೆಯುವುದನ್ನು ತಮ್ಮ ಪರಮಗುರಿಯೆಂದು ಪರಿಗಣಿಸಿರುವ ಅಮೆರಿಕ ಮತ್ತು ಇಸ್ರೇಲ್ ಇದೀಗ ಆ ದೇಶದಲ್ಲಿ ಇರುವ ಸಂಸ್ಕರಿತ ಯುರೇನಿಯಂ (ಎಚ್ ಇಯು) ಅನ್ನು ವಶಕ್ಕೆ ಪಡೆಯಲು ಜಂಟಿ ಕಮಾಂಡೋ ಕಾರ್ಯಾಚರಣೆ ನಡೆಸುವ ಕುರಿತು ಚಿಂತನೆ ನಡೆಸುತ್ತಿದೆ.
ಅಣ್ವಸ್ತ್ರ ತಯಾರಿಕೆಗೆ ಅಗತ್ಯವಾದ 450 ಕೆ.ಜಿ. ಯುರೇನಿಯಂ ಅನ್ನು ಇರಾನ್ ಸಂಗ್ರಹಿಸಿದೆ. ಈ ಪೈಕಿ ಶೇ.60 ರಷ್ಟು ಸಂಸ್ಕರಿತಗೊಂಡಿದೆ. ಅದು ಶೇ.90ರ ಮಟ್ಟಕ್ಕೆ ತಲುಪಿದರೆ ಕೆಲವೇ ವಾರಗಳಲ್ಲಿ ಇರಾನ್ 11 ಅಣು ಬಾಂಬ್ ತಯಾರಿಸಲು ಸಾಮರ್ಥ್ಯ ಪಡೆದು ಕೊಳ್ಳಲಿದೆ.
ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಇರಾನ್ ಮೇಲೆ ದಾಳಿ ಮಾಡಿ, ಸರ್ವೋಚ್ಚ ನಾಯಕ ಆಲಿ ಖಮೇನಿಯನ್ನು ಹತ್ಯೆ ಮಾಡಿದ್ದಾಗಿ ಅಮೆರಿಕ- ಇಸ್ರೇಲ್ ಹೇಳಿದವು. ಇದೀಗ ಅದರ ಭಾಗವಾಗಿ ಇರಾನ್‌ನ ಅಣ್ವಸ್ತ್ರ ಕೇಂದ್ರದ ಮೇಲೆ ಕಮಾಂಡೋ ಕಾರ್ಯಾಚರಣೆ ನಡೆಸಿ ಯುರೇನಿಯಂ ವಶಕ್ಕೆ ಪಡೆಯುವ ಯೋಜನೆ ಹಾಕಿಕೊಂಡಿವೆ.
ಇರಾನ್, ತನ್ನ ಇಸ್ಟಹಾನ್, ಫೊರ್ಡೋ ಮತ್ತು ನಟಾನ್ಸ್ ನ ಅಣು ಕೇಂದ್ರಗಳಲ್ಲಿ ಯುರೇನಿಯಂ ಸಂಸ್ಕರಿಸುವ ಕಾರ್ಯ ಆರಂಭಿಸಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಈಗಾಗಲೇ ನಟಾನ್ಸ್ ಅಣುಕೇಂದ್ರದ ಪ್ರವೇಶ ದ್ವಾರದ ಬಳಿ ಜಂಟಿ ಬಾಂಬ್ ದಾಳಿ ನಡೆಸಿ, ಅಲ್ಲಿರುವ ಯುರೇನಿಯಂ ಅನ್ನು ಹೊರಗೆ ಸಾಗಿಸಲು ಸಾಧ್ಯವಾಗದಂತೆ ಮಾಡಲಾಗಿದೆ.
2 ಆಯ್ಕೆಗಳು: ಇರಾನ್ ಬಳಿ ಇರುವ ಯುರೇ ನಿಯಂ ಸಂಗ್ರಹವನ್ನು ವಶಕ್ಕೆ ಪಡೆಯುವುದು ಅಥವಾ ಆ ಸ್ಥಳದಲ್ಲೇ ನಷ್ಟ ಮಾಡುವ 2 ಆಯ್ಕೆಗಳು ಸದ್ಯ ಇಸ್ರೇಲ್-ಅಮೆರಿಕದ ಮುಂದಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ