
ಟೆಲ್ ಅವೀವ್: ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಏಳನೇ ದಿನವಾದ ಗುರುವಾರ ಮತ್ತಷ್ಟು ತೀವ್ರ ಸ್ವರೂಪ ಪಡೆದಿದೆ. ಇರಾನ್‌ನ ಪರಮಾಣು ಸ್ಥಾವರ ಗುರಿಯಾಗಿಸಿ ಇಸ್ರೇಲ್ ಭೀಕರ ದಾಳಿ ನಡೆಸಿದ್ದರೆ, ಅದಕ್ಕೆ ಪ್ರತಿಯಾಗಿ ಇಸ್ರೇಲ್‌ನ ಸೇನಾ ಆಸ್ಪತ್ರೆ ಮತ್ತು ಷೇರುಮಾರುಕಟ್ಟೆ ಕೇಂದ್ರಗಳನ್ನು ಗುರಿಯಾಗಿಸಿ ಇರಾನ್ ಎರಗಿದೆ. ಜತೆಗೆ ‘ಇರಾನ್‌ನ ಸುಪ್ರೀಂ ನಾಯಕ ಆಯತೊಲ್ಲಾ ಅಲಿ ಖಮೇನಿ ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ. ಅವರು ಬದುಕಿರಬಾರದು. ಅವರ ನಿರ್ಮೂಲನೆಯೇ ನಮ್ಮ ಯುದ್ಧದ ಗುರಿ. ಅದನ್ನು ಸಾಧಿಸಲು ಈಗಾಗಲೇ ಸೇನೆಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ’ ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಘೋಷಿಸಿದ್ದಾರೆ. ಇದರೊಂದಿಗೆ ಮುಂಬರುವ ದಿನಗಳಲ್ಲಿ ಯುದ್ಧ ಮತ್ತಷ್ಟು ಘನಘೋರ ಸ್ವರೂಪ ಪಡೆದುಕೊಳ್ಳುವ ಆತಂಕ ಎದುರಾಗಿದೆ.
100 ಬಾಂಬ್ ಬಳಸಿ ದಾಳಿ:
ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗೆ 40 ಯುದ್ಧವಿಮಾನ, 100 ಬಾಂಬ್‌ಗಳನ್ನು ಬಳಸಿ ಇರಾನ್‌ನ ಅರಾಕ್ ಪರಮಾಣು ರಿಯಾಕ್ಟರ್ ಸೇರಿ ಹಲವೆಡೆ ಇಸ್ರೇಲ್ ಸೇನೆ ತೀವ್ರ ದಾಳಿ ನಡೆಸಿದೆ. ಟೆಹ್ರಾನ್‌ನಿಂದ 250 ಕಿ.ಮೀ. ದೂರದಲ್ಲಿರುವ ಅರಾಕ್ ಬೃಹತ್ ಭಾರ ಜಲ ರಿಯಾಕ್ಟರ್ ಇಸ್ರೇಲ್‌ನ ಪ್ರಮುಖ ಗುರಿಯಾಗಿತ್ತು. ಈ ರಿಯಾಕ್ಟರ್ ಮೂಲಕ ಪ್ಲುಟೋನಿಯಂ ಉತ್ಪಾದಿಸಿ ಅಣ್ವಸ್ತ್ರಗಳಲ್ಲಿ ಬಳಸುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿತ್ತು. ಬಂಕರ್ ಬಸ್ಟರ್ ಬಾಂಬ್ ಬಳಸಿ ನಡೆಸಿದ ಈ ದಾಳಿಯಲ್ಲಿ ಅಣು ಸಂಸ್ಕರಣಾ ಘಟಕ ಪೂರ್ಣ ನಾಶವಾಗಿದೆ ಎಂದು ಇಸ್ರೇಲ್ ಹೇಳಿದೆ.
1000 ಬೆಡ್‌ಗಳ ಆಸ್ಪತ್ಪೆಗೆ ಹಾನಿ:
ಇಸ್ರೇಲ್ ದಾಳಿಯ ಬೆನ್ನಲ್ಲೇ ಇರಾನ್ ಕೂಡಾ ಸೆಜ್ಜಿಲ್ ಸೇರಿದಂತೆ ಅತ್ಯಾಧುನಿಕ ಕ್ಷಿಪಣಿ, ಡ್ರೋನ್‌ಗಳನ್ನು ಬಳಸಿ ಇಸ್ರೇಲ್ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ರಾಜಧಾನಿ ಟೆಲ್ ಅವೀವ್‌ನಲ್ಲಿರುವ 1000 ಬೆಡ್ ಸಾಮರ್ಥ್ಯದ ಅತಿದೊಡ್ಡ ವೈದ್ಯಕೀಯ ಕೇಂದ್ರವಾದ ಸೊರೋಕಾ ಆಸ್ಪತ್ರೆಗೆ ಭಾರೀ ಹಾನಿಯಾಗಿದೆ. ದಾಳಿಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಇದರ ಜತೆಗೆ ಷೇರು ಮಾರುಕಟ್ಟೆ ಮುಖ್ಯಕಚೇರಿ ಮೇಲೂ ಕ್ಷಿಪಣಿ ದಾಳಿ ನಡೆಸಿದ್ದು ಅದು ಬಹುತೇಕ ಧ್ವಂಸಗೊಂಡಿದೆ. ವಾಯುದಾಳಿ ತಡೆಗೆಂದೇ ಇರುವ ಐರನ್ ಡೋಮ್ ವ್ಯವಸ್ಥೆಯನ್ನೂ ಭೇದಿಸಿ ಇರಾನ್ ಕ್ಷಿಪಣಿಗಳು ಇಸ್ರೇಲ್‌ನೊಳಗೆ ನುಗ್ಗಿ ದಾಳಿ ನಡೆಸುವಲ್ಲಿ ಯಶಸ್ವಿಯಾಗಿವೆ.
ಇರಾನ್‌ನಲ್ಲಿ 639 ಮಂದಿ ಸಾವು:
ಈ ಸಂಘರ್ಷ ಆರಂಭವಾದ ಬಳಿಕ ಇರಾನ್‌ನಲ್ಲಿ 263 ನಾಗರಿಕರು ಸೇರಿ 639 ಮಂದಿ ಬಲಿಯಾಗಿದ್ದಾರೆ. ಸುಮಾರು 1300 ಮಂದಿ ಗಾಯಗೊಂಡಿದ್ದಾರೆ. ಅದೇ ರೀತಿ ಇರಾನ್ 400ಕ್ಕೂ ಹೆಚ್ಚು ಕ್ಷಿಪಣಿಗಳು ಮತ್ತು ನೂರಾರು ಡ್ರೋನ್ ಬಳಸಿ ನಡೆಸಿದ ದಾಳಿಯಲ್ಲಿ ಇಸ್ರೇಲ್‌ನಲ್ಲಿ 24 ಮಂದಿ ಸಾವಿಗೀಡಾಗಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ವಾಷಿಂಗ್ಟನ್ ಮೂಲದ ಇರಾನ್‌ನ ಮಾನವಹಕ್ಕುಗಳ ಗುಂಪು ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ