ಇಸ್ರೇಲ್‌ ಈಗ ಹೊಸ ಕೊರೋನಾ ಹಾಟ್‌ಸ್ಪಾಟ್‌!

By Suvarna NewsFirst Published Sep 9, 2021, 9:05 AM IST
Highlights

* ಇಡೀ ಜಗತ್ತಿಗೆ ಕೊರೋನೋತ್ತರ ಸಂಘರ್ಷದ ಚಿತ್ರಣವಾದ ದೇಶ

* ಇಸ್ರೇಲ್‌ ಈಗ ಹೊಸ ಕೊರೋನಾ ಹಾಟ್‌ಸ್ಪಾಟ್‌!

* ಲಸಿಕೆ ವಿತರಣೇಲಿ ನಂ.1 ದೇಶವಾದ​ರೂ ಕೋವಿಡ್‌ ಹೆಚ್ಚ​ಳ

ಜೆರುಸಲೇಂ(ಸೆ.09): ಅತ್ಯಂತ ತೀವ್ರಗತಿಯಲ್ಲಿ ಕೋವಿಡ್‌ ಲಸಿಕೆ ವಿತರಿಸುವ ಮೂಲಕ ಇಡೀ ವಿಶ್ವದಲ್ಲೇ ನಂ.1 ಸ್ಥಾನದಲ್ಲಿದ್ದ ಇಸ್ರೇಲ್‌, ಇದೀಗ ಕೊರೋನಾ ಹೊಸ ಹಾಟ್‌ಸ್ಪಾಟ್‌! ಹೌದು, ಕಳೆದ ವಾರದ ಅಂಕಿ ಅಂಶ ಗಮನಿಸಿದರೆ, ಸರಾಸರಿ ಜನಸಂಖ್ಯೆಯಲ್ಲಿ ಅತಿ ಹೆಚ್ಚು ಹೊಸ ಕೋವಿಡ್‌ ಕೇಸು ದಾಖಲಿನಲ್ಲೂ ಇಸ್ರೇಲ್‌ ನಂ.1 ಆಗಿ ಹೊರಹೊಮ್ಮಿದೆ.

ಇದು ಕೋವಿಡ್‌ ಲಸಿಕೆಯ ಎರಡೂ ಡೋಸ್‌ ಪಡೆದರೆ ಪೂರ್ಣ ಸುರಕ್ಷಿತ ಎಂಬ ನಂಬಿಕೆಯಲ್ಲಿ ಇರುವವರಿಗೆ, ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸುವವರಿಗೆ ಮತ್ತೊಮ್ಮೆ ಎಚ್ಚರಿಕೆ ಕರೆಗಂಟೆ ಬಾರಿಸಿದೆ. ಜೊತೆಗೆ ವಿಶ್ವದ ಬಹುತೇಕ ದೇಶಗಳು ತಮ್ಮೆಲ್ಲಾ ನಾಗರಿಕರಿಗೆ ಪೂರ್ಣ ಕೋವಿಡ್‌ ಲಸಿಕೆ ವಿತರಿಸಿದರೂ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರಲಿದೆ ಎಂಬ ಚಿತ್ರಣವನ್ನು ಜಗತ್ತಿನ ಮುಂದಿರಿಸಿದೆ.

ಅಂದಾಜು 90 ಲಕ್ಷ ಜನಸಂಖ್ಯೆಯ ಇಸ್ರೇಲ್‌, ಜಗತ್ತಿನಲ್ಲೇ ಅತ್ಯಂತ ವೇಗವಾಗಿ ತನ್ನ ನಾಗರಿಕರಿಗೆ ಕೋವಿಡ್‌ ಲಸಿಕೆ ನೀಡಿದ ಸಾಧನೆ ಮಾಡಿತ್ತು. ಕಳೆದ ಏಪ್ರಿಲ್‌ ತಿಂಗಳಿನಲ್ಲಿ ಅಮೆರಿಕ ಮತ್ತು ಯುರೋಪ್‌ ದೇಶಗಳು ಕೋವಿಡ್‌ 2ನೇ ಅಲೆಯ ತುತ್ತ ತುದಿಗೆ ತಲುಪಿದ್ದಾಗ, ಹಲವು ಕೋವಿಡ್‌ ನಿರ್ಬಂಧಗಳನ್ನು ಸಡಿಸಿಲಿದ್ದ ಇಸ್ರೇಲ್‌, ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಿತ್ತು. ಜೊತೆಗೆ ದಿನಕಳೆದಂತೆ ಕೋವಿಡ್‌ ಲಸಿಕೆ ಪರಿಣಾಮ ಇಳಿಕೆಯಾಗುತ್ತಿದೆ ಎಂದು 3ನೇ ಅಥವಾ ಬೂಸ್ಟರ್‌ ಡೋಸ್‌ ನೀಡಲು ಆರಂಭಿಸಿತ್ತು. ಈಗಾಗಲೇ ಒಟ್ಟು ಜನಸಂಖ್ಯೆಯಲ್ಲಿ ಶೇ.27ರಷ್ಟುಜನರು ಬೂಸ್ಟರ್‌ ಡೋಸ್‌ ವಿತರಿಸಿದೆ.

ಕೋವಿಡ್‌ ಏರಿ​ಕೆಗೆ ಕಾರಣ ಏನು?

ಕೆಲ ಸಂಪ್ರದಾಯವಾದಿಗಳು ಲಸಿಕೆ ಪಡೆಯಲು ನಿರಾಕರಿಸುತ್ತಿರುವುದು, ಡೆಲ್ಟಾವೈರಸ್‌ ಲಸಿಕೆಯ ಪರಿಣಾಮಗಳನ್ನು ದಾಟಿ ಸೋಂಕು ಹಬ್ಬಿಸುತ್ತಿರುವುದೇ ಪ್ರಕರಣ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ. 2ನೇ ಅಲೆಯ ತೀವ್ರತೆ ಹೆಚ್ಚಿದ್ದ ಸಮಯದಲ್ಲಿದ್ದ ರೋಗಿಗಳ ಆಸ್ಪತ್ರೆ ದಾಖಲು, ಸಾವಿನ ಪ್ರಮಾಣ ಈಗ ಇರದೇ ಇದ್ದರೂ, ಮುಂದಿನ ದಿನಗಳಲ್ಲಿ ಕೋವಿಡ್‌ ಹೇಗೆ ಜಗತ್ತನ್ನು ಕಾಡಲಿದೆ ಎಂಬುದಕ್ಕೆ ಇಸ್ರೇಲ್‌ ಉದಾಹರಣೆಯಾಗಿ ಕಾಣಸಿಕ್ಕಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಹೀಗಾಗಿಯೇ ಟೆಲ್‌ ಹ- ಶೋಮರ್‌ನಲ್ಲಿರುವ ಶೆಬಾ ಮೆಡಿಕಲ್‌ ಸೆಂಟರ್‌ನ ಸಾಂಕ್ರಾಮಿಕ ರೋಗಗಳ ವಿಭಾಗದ ಪ್ರೊ. ಇಯಾಲ್‌ ಲೆಶೇಮ್‌ ‘ಲಾಕ್‌ಡೌನ್‌ ಇಲ್ಲದೆಯೇ ನೀವು ಜೀವನವನ್ನು ನಿರ್ವಹಿಸುತ್ತಿದ್ದೀರಿ ಮತ್ತು ಅತಿ ಹೆಚ್ಚಿನ ಸಂಖ್ಯೆಯ ಆಸ್ಪತ್ರೆ ದಾಖಲಾಗಿ ಹಾಗೂ ಸಾವನ್ನು ತಪ್ಪಿಸಲು ಯತ್ನಿಸುತ್ತಿದ್ದೀರಿ ಎಂದಾದಲ್ಲಿ ಕೋವಿಡ್‌ ಜೊತೆಗಿನ ಜೀವನ ಹೀಗಿರುತ್ತದೆ’ ಎಂದು ಇಸ್ರೇಲ್‌ನ ಪರಿಸ್ಥಿತಿಯನ್ನು ಬಣ್ಣಿಸಿದ್ದಾರೆ.

ದೇಶ​ದಲ್ಲಿ ನಿತ್ಯ 10 ಸಾವಿ​ರಕ್ಕೂ ಹೆಚ್ಚು ಕೇಸು

ಎಲ್ಲಾ ರಕ್ಷಣಾ ಕ್ರಮಗಳನ್ನು ದಾಟಿ ಮುನ್ನುಗ್ಗುತ್ತಿರುವ ಡೆಲ್ಟಾವೈರಸ್‌ ಇದೀಗ ಇಸ್ರೇಲ್‌ ಅನ್ನು ತೀವ್ರವಾಗಿ ಕಾಡತೊಡಗಿದೆ. ಅಲ್ಲಿ ದಿನೇ ದಿನೇ ಪ್ರಕರಣಗಳ ಸಂಖ್ಯೆ ಏರಿಕೆಯಾಗತೊಡಗಿದೆ. ನಿತ್ಯ ಸುಮಾರು 10 ಸಾವಿ​ರಕ್ಕೂ ಹೆಚ್ಚು ಕೇಸು ದಾಖ​ಲಾ​ಗು​ತ್ತಿ​ವೆ,. ಸೆ.2ರಂದು 11316 ಹೊಸ ಪ್ರಕರಣ ದಾಖಲಾಗಿದ್ದು, ಈವರೆಗಿನ ಸಾರ್ವಕಾಲಿಕ ದೈನಂದಿನ ಗರಿಷ್ಠ ಎನ್ನಿಸಿಕೊಂಡಿದೆ.

click me!