
ಇರಾಕ್‌ನಲ್ಲಿ ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಬೃಹತ್ ಎನ್ನಲಾದ ಭ್ರಷ್ಟಾಚಾರ ವಿರೋಧಿ ತನಿಖಾ ಕಾರ್ಯಾಚರಣೆ ನಡೆದಿದೆ. ಹಿರಿಯ ರಾಜಕಾರಣಿಗಳು, ಸಂಸತ್ ಸದಸ್ಯರು ಹಾಗೂ ಉನ್ನತಾಧಿಕಾರಿಗಳನ್ನು ಗುರಿಯಾಗಿಸಿಕೊಂಡು ನಡೆಸಲಾದ ಈ ರಹಸ್ಯ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ, ಇರಾಕಿ ದಿನಾರ್ ಹಾಗೂ ಅಪಾರ ಪ್ರಮಾಣದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ನಡುವೆ, ಇರಾಕ್ ಸಂಸದೆ ಹಿಂದ್ ಅಲ್ ಅಬ್ಬಾಸಿ ಮನೆಯಲ್ಲಿ ಚಿನ್ನದ ಒಳಉಡುಪು ಪತ್ತೆಯಾಗಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿದೆ.
ಇರಾಕ್ ಸಂಸದೆ ಹಿಂದ್ ಅಲ್ ಅಬ್ಬಾಸಿ ಅವರ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದ್ದು, ಅಲ್ಲಿ 57 ದಶಲಕ್ಷ ಅಮೆರಿಕನ್ ಡಾಲರ್ ನಗದು, 27 ಕೆ.ಜಿ ಶುದ್ಧ ಚಿನ್ನ ಹಾಗೂ ಚಿನ್ನ ಲೇಪಿತ ಒಳ ಉಡುಪುಗಳನ್ನು ಜಪ್ತಿ ಮಾಡಲಾಗಿದೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಜೊತೆಗೆ ಈಕೆಯ ಬಂಧನವಾಗಿದೆ ಎಂದು ವರದಿಯಾಗಿದೆ. ಚಿನ್ನದ ಒಳ ಉಡುಪು ಸೇರಿದಂತೆ ಅತ್ಯಂತ ದುಬಾರಿ ಐಷಾರಾಮಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅಂತರರಾಷ್ಟ್ರೀಯ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದರೂ, ವಶಪಡಿಸಿಕೊಂಡ ಸ್ವತ್ತುಗಳ ನಿಖರವಾದ ವಿವರಗಳು ಲಭ್ಯವಾಗಿಲ್ಲ. ಆದರೆ, ಇದೇ ವೇಳೆ ಇರಾಕ್‌ನ ಮತ್ತೋರ್ವ ಪ್ರಭಾವಿ ಮಹಿಳಾ ಶಾಸಕಿ ಅಲಿಯಾ ನಸೀಫ್ ಅವರ ನಿವಾಸದ ಮೇಲೆ ಭದ್ರತಾ ಪಡೆಗಳು ಭರ್ಜರಿ ದಾಳಿ ನಡೆಸಿರುವುದು ಈ ಭ್ರಷ್ಟಾಚಾರದ ಕಥೆಗೆ ಮುಖ್ಯ ಕಾರಣವಾಗಿದೆ.
ಇರಾಕ್‌ನ ಭಯೋತ್ಪಾದನಾ ನಿಗ್ರಹ ಸೇವೆಯ ಗಣ್ಯ ಘಟಕಗಳು ಬಾಗ್ದಾದ್‌ನ ಅತ್ಯಂತ ಭದ್ರತೆಯುಳ್ಳ ಹಸಿರು ವಲಯದಲ್ಲಿ (Green Zone) ನಡೆಸಿದ ಆಕಸ್ಮಿಕ ದಾಳಿಯಲ್ಲಿ, ಪ್ರಸಿದ್ಧ ಶಾಸಕಿ ಅಲಿಯಾ ನಾಸಿಫ್ ಮತ್ತು ಆಕೆಯ ಪುತ್ರನನ್ನು ಬಂಧಿಸಲಾಗಿದೆ. ದಾಳಿಯ ವೇಳೆ ಆಕೆಯ ಮನೆಯೊಳಗೆ ಕಂತೆ ಕಂತೆ ಹಣವನ್ನು ಗೋಪುರಗಳಂತೆ ಜೋಡಿಸಿಟ್ಟಿರುವುದು ಪತ್ತೆಯಾಗಿದೆ. ಅಧಿಕಾರಿಗಳು ಈ ನಿವಾಸದಿಂದ ಸುಮಾರು 20 ಬಿಲಿಯನ್ ಇರಾಕಿ ದಿನಾರ್‌ಗಳನ್ನು (ಅಂದಾಜು 15.5 ದಶಲಕ್ಷ ಅಮೆರಿಕನ್ ಡಾಲರ್ ಅಥವಾ ಸುಮಾರು ₹146 ಕೋಟಿ) ಮತ್ತು ಬೃಹತ್ ಪ್ರಮಾಣದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಅಲಿಯಾ ನಾಸಿಫ್ ಅವರು ಈ ಹಿಂದೆ ಮಾಜಿ ಪ್ರಧಾನಿ ಮೊಹಮ್ಮದ್ ಶಿಯಾ ಅಲ್ ಸುಡಾನಿ ಅವರ ಆಪ್ತ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು ಎಂಬುದು ಗಮನಾರ್ಹ.
ಹೆಸರು ಬಹಿರಂಗಪಡಿಸಲು ಇಚ್ಛಿಸದ ಭದ್ರತಾ ಮೂಲಗಳ ಪ್ರಕಾರ, ಈ ವ್ಯಾಪಕ ದಾಳಿಗಳು ಇರಾಕ್‌ನ ನೂತನ ಪ್ರಧಾನ ಮಂತ್ರಿ ಅಲಿ ಅಲ್ ಜೈದಿ ಅವರ ಆದೇಶದ ಮೇರೆಗೆ ನಡೆದಿವೆ. ಕಳೆದ ಮೇ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ತಕ್ಷಣವೇ, ದೇಶದಲ್ಲಿ ಬೇರೂರಿರುವ ಭ್ರಷ್ಟಾಚಾರದ ಜಾಲಗಳನ್ನು ಸಂಪೂರ್ಣವಾಗಿ ಹತ್ತಿಕ್ಕುವುದಾಗಿ ಪ್ರಧಾನಿ ಜೈದಿ ಪ್ರತಿಜ್ಞೆ ಮಾಡಿದ್ದರು. ಭಾನುವಾರ ಮುಂಜಾನೆ ನಡೆದ ಈ ಇಡೀ ಕಾರ್ಯಾಚರಣೆಯಲ್ಲಿ ಒಟ್ಟು 85 ದಶಲಕ್ಷ ಡಾಲರ್ (ಸುಮಾರು ₹805 ಕೋಟಿ) ಮೌಲ್ಯದ ಆಸ್ತಿಪಾಸ್ತಿಗಳು ಬೆಳಕಿಗೆ ಬಂದಿವೆ. ಅಪರಾಧಿಗಳು ಹಾಗೂ ಅವರ ಸಹಚರರಿಗೆ ಸೇರಿದ ಗುಪ್ತ ಸ್ಥಳಗಳಲ್ಲಿ ವಿದೇಶಿ ಕರೆನ್ಸಿ ಮತ್ತು ಚಿನ್ನದ ನಿಕ್ಷೇಪಗಳು ಪತ್ತೆಯಾಗಿವೆ.
ಭ್ರಷ್ಟಾಚಾರದ ತನಿಖೆಗಾಗಿ ಇರಾಕ್‌ನ ಸುಪ್ರೀಂ ಜ್ಯುಡಿಷಿಯಲ್ ಕೌನ್ಸಿಲ್ ಈಗಾಗಲೇ ಹಲವರ ವಿರುದ್ಧ ನ್ಯಾಯಾಂಗ ಬಂಧನ ವಾರಂಟ್‌ಗಳನ್ನು ಹೊರಡಿಸಿತ್ತು. ಕಳೆದ ಮೇ ತಿಂಗಳ ಅಂತ್ಯದಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಸಂಸ್ಕರಣಾ ವ್ಯವಹಾರಗಳ ಮಾಜಿ ಉಪ ತೈಲ ಸಚಿವ ಅದ್ನಾನ್ ಅಲ್ ಜುಮೈಲಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈ ಬೃಹತ್ ಜಾಲದ ರಹಸ್ಯಗಳು ಹೊರಬಿದ್ದಿವೆ. ಅವರು ನೀಡಿದ ಆಧಾರದ ಮೇಲೆ ವಿನಾಯಿತಿ ರದ್ದುಗೊಳಿಸಲಾದ ಹಲವು ಹಾಲಿ ಸಂಸದರು ಮತ್ತು ಹಿರಿಯ ಅಧಿಕಾರಿಗಳ ಹೆಸರುಗಳು ಬಹಿರಂಗಗೊಂಡಿವೆ. ದಾಳಿಯ ಸುಳಿವು ಸಿಗುತ್ತಿದ್ದಂತೆಯೇ ಕೆಲವು ಶಂಕಿತರು ಪರಾರಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹಸಿರು ವಲಯದ ಪ್ರವೇಶದ್ವಾರಗಳನ್ನು ಮುಚ್ಚಿ ಶೋಧ ಕಾರ್ಯ ಮುಂದುವರಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಇರಾಕ್ ಕಂಡ ಅತ್ಯಂತ ದೈತ್ಯ ಭ್ರಷ್ಟಾಚಾರ ತನಿಖೆ ಇದಾಗಿದ್ದು, ದುರುಪಯೋಗಪಡಿಸಿಕೊಂಡಿದ್ದ ಒಟ್ಟು 107 ದಶಲಕ್ಷ ಡಾಲರ್‌ಗಿಂತಲೂ (ಸುಮಾರು ₹1,000 ಕೋಟಿಗೂ ಹೆಚ್ಚು) ಅಧಿಕ ಮೊತ್ತದ ಸರ್ಕಾರಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಭ್ರಷ್ಟ ಅಧಿಕಾರಿಗಳು ತಮ್ಮ ಕಪ್ಪುಹಣವನ್ನು ಬಚ್ಚಿಡಲು ಅನುಸರಿಸಿದ ತಂತ್ರ ಕಂಡು ತನಿಖಾಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಪ್ರಮುಖ ಶಂಕಿತರು ತಮ್ಮ ಖಾಸಗಿ ಮನೆಗಳ ನೆಲದಡಿಯಲ್ಲಿ ಕೋಟ್ಯಂತರ ರೂಪಾಯಿ ನಗದು ಮತ್ತು ಚಿನ್ನವನ್ನು ಹೂತಿಟ್ಟಿದ್ದರು. ಕೆಲವು ಸಂಗ್ರಹಗಳನ್ನು ಎಷ್ಟು ಆಳವಾಗಿ ಹೂತುಹಾಕಲಾಗಿತ್ತೆಂದರೆ, ಆ ಕಪ್ಪುಹಣದ ಚೀಲಗಳನ್ನು ಅಗೆದು ಹೊರತೆಗೆಯಲು ಅಧಿಕಾರಿಗಳು ಭಾರೀ ಜೆಸಿಬಿ ಯಂತ್ರೋಪಕರಣಗಳನ್ನು ಬಳಸಬೇಕಾಯಿತು. ಹಣದ ಜೊತೆಗೆ ಭಾರಿ ಪ್ರಮಾಣದ ಕಾನೂನುಬಾಹಿರ ಬಂದೂಕುಗಳು ಮತ್ತು ಮದ್ದುಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಇರಾಕ್‌ನಲ್ಲಿ ಈ ಆಪರೇಷನ್ ಇನ್ನೂ ಮುಂದುವರಿಯುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ