
ಟೆಹ್ರಾನ್ (ಫೆ.1): ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡಗಳು ದಟ್ಟವಾಗುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರಣಿ ಬೆದರಿಕೆಗಳಿಗೆ ಇಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಪ್ರಬಲ ಪ್ರತ್ಯುತ್ತರ ನೀಡಿದ್ದಾರೆ. 'ಅಲ್ಲಾಹ ಬಯಸಿದರೆ ನಾವು ಅಮೆರಿಕದ ಕಿಡಿಗೇಡಿತನ ಮತ್ತು ದಬ್ಬಾಳಿಕೆಯನ್ನು ಕೊನೆಗೊಳಿಸುತ್ತೇವೆ' ಎಂದು ಗುಡುಗಿರುವ ಖಮೇನಿ, ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದರೆ ಅದು ಕೇವಲ ಎರಡು ದೇಶಗಳ ನಡುವಿನ ಸಂಘರ್ಷವಾಗಿ ಉಳಿಯುವುದಿಲ್ಲ, ಬದಲಿಗೆ ಇಡೀ ಪ್ರಾದೇಶಿಕ ಯುದ್ಧಕ್ಕೆ ನಾಂದಿ ಹಾಡಲಿದೆ ಎಂದು ಎಚ್ಚರಿಸಿದ್ದಾರೆ.
ಒಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವ ಇಂಗಿತ ವ್ಯಕ್ತಪಡಿಸುತ್ತಿದ್ದರೂ, ಮತ್ತೊಂದೆಡೆ ಇರಾನ್ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡುತ್ತಿದ್ದಾರೆ. ಈ ಇಬ್ಬಂದಿ ನೀತಿಗೆ ಪ್ರತಿಕ್ರಿಯಿಸಿದ ಇರಾನ್, 'ನಾವು ಯುದ್ಧ ಪ್ರಚೋದಕರಲ್ಲ ಅಥವಾ ಅತಿಕ್ರಮಣಕಾರರಲ್ಲ. ಆದರೆ ಇರಾನ್ ಮೇಲೆ ದಾಳಿ ಮಾಡಲ ಬರುವವರಿಗೆ ಚೇತರಿಸಿಕೊಳ್ಳಲಾಗದ ಹೊಡೆತ ನೀಡುವುದಂತೂ ಖಚಿತ. ಈ ಬಾರಿ ಯುದ್ಧ ಆರಂಭವಾದರೆ ಅದು ಸುಲಭವಾಗಿ ಕೊನೆಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಕಳೆದ 24 ಗಂಟೆಗಳಲ್ಲಿ ಇರಾನ್‌ನಾದ್ಯಂತ ಸೇನಾ ಚಟುವಟಿಕೆಗಳು ಹೆಚ್ಚುತ್ತಿವೆ. ಈ ಕುರಿತು ರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೇನಾ ಮುಖ್ಯಸ್ಥ ಅಮೀರ್ ಹತಾಮಿ, 'ಶತ್ರುಗಳ ಪ್ರತಿಯೊಂದು ಚಲನವಲನದ ಮೇಲೆ ನಾವು ಹದ್ದಿನ ಕಣ್ಣಿಟ್ಟಿದ್ದೇವೆ. ನಮ್ಮ ಸೇನೆಯ ಬೆರಳು ಈಗ ಟ್ರಿಗರ್ ಮೇಲಿದೆ. ಅಮೆರಿಕ ಏನಾದರೂ ತಪ್ಪು ಹೆಜ್ಜೆ ಇಟ್ಟರೆ, ಅದು ಕೇವಲ ಅಮೆರಿಕಕ್ಕೆ ಮಾತ್ರವಲ್ಲ, ಇಡೀ ಪ್ರಾದೇಶಿಕ ಭದ್ರತೆ ಹಾಗೂ ಇಸ್ರೇಲ್‌ನ ಅಸ್ತಿತ್ವಕ್ಕೆ ಆಪತ್ತು ತರಲಿದೆ' ಎಂದು ಪರೋಕ್ಷವಾಗಿ ಇಸ್ರೇಲ್ ಮೇಲಿನ ದಾಳಿಯ ಸುಳಿವು ನೀಡಿದ್ದಾರೆ.
ಜಾಗತಿಕ ಮಟ್ಟದಲ್ಲಿ ಹೆಚ್ಚಿದ ಆತಂಕ
ಕಳೆದ 12 ಗಂಟೆಗಳಲ್ಲಿ ಖಮೇನಿ ನೀಡುತ್ತಿರುವ ಎರಡನೇ ಎಚ್ಚರಿಕೆ ಇದಾಗಿದ್ದು, ಇದು ಅಮೆರಿಕದ ಮಿಲಿಟರಿ ತಂತ್ರಗಾರಿಕೆಗೆ ಸವಾಲಾಗಿದೆ. ಇರಾನ್‌ನ ಈ ಆಕ್ರಮಣಕಾರಿ ನಿಲುವು ತೈಲ ಮಾರುಕಟ್ಟೆ ಹಾಗೂ ಅಂತರರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ಸಂಚಲನ ಮೂಡಿಸಿದ್ದು, ಜಾಗತಿಕ ಸಮುದಾಯವು ಉದ್ವಿಗ್ನತೆ ಶಮನಕ್ಕೆ ಮನವಿ ಮಾಡುತ್ತಿದೆ. ಆದರೆ ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವಿನ ಈ ಶೀತಲ ಸಮರ ಈಗ ಸ್ಫೋಟಕ ಹಂತ ತಲುಪಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ