
ಟೆಹ್ರಾನ್ (ಮಾ.12): ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷವು 12ನೇ ದಿನಕ್ಕೆ ಕಾಲಿಟ್ಟಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತುತ್ತತುದಿಗೆ ತಲುಪಿದೆ. ಈ ನಡುವೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಯುದ್ಧವನ್ನು ಕೊನೆಗೊಳಿಸಲು ಮೂರು ಪ್ರಮುಖ ಷರತ್ತುಗಳನ್ನು ಮುಂದಿಟ್ಟಿದ್ದಾರೆ. ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ಮಾತನಾಡಿದ ಪೆಜೆಶ್ಕಿಯಾನ್, ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲು ಇರಾನ್ ಬದ್ಧವಾಗಿದೆ ಎಂದು ಪುನರುಚ್ಚರಿಸಿದ್ದಾರೆ. ಆದರೆ, ಯುದ್ಧ ನಿಲ್ಲಲು ಈ ಕೆಳಗಿನ ಷರತ್ತುಗಳನ್ನು ಅಮೆರಿಕ ಹಾಗೂ ಇಸ್ರೇಲ್ ಪಾಲಿಸುವುದು ಅತ್ಯಗತ್ಯ ಎಂದು ಹೇಳಿದ್ದಾರೆ.
ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಮಾನ್ಯ ಮಾಡಬೇಕು. ಯುದ್ಧದಿಂದಾದ ನಷ್ಟಕ್ಕೆ ಪರಿಹಾರ (Reparations) ಪಾವತಿಸಬೇಕು. ಭವಿಷ್ಯದಲ್ಲಿ ಇರಾನ್ ಮೇಲೆ ಯಾವುದೇ ಆಕ್ರಮಣ ನಡೆಯದಂತೆ ಅಂತರಾಷ್ಟ್ರೀಯ ಗ್ಯಾರಂಟಿ ನೀಡಬೇಕು. ಈ ಮೂರು ಷರತ್ತುಗಳಿಗೆ ಒಪ್ಪುವುದಾದರೆ, ಇರಾನ್ ಯುದ್ಧ ನಿಲ್ಲಿಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ. "ಅಮೆರಿಕ ಮತ್ತು ಜಿಯೋನಿಸ್ಟ್ ಆಡಳಿತ (ಇಸ್ರೇಲ್) ಹಚ್ಚಿದ ಈ ಬೆಂಕಿಯನ್ನು ನಂದಿಸಲು ಇದೊಂದೇ ದಾರಿ" ಎಂದು ಅವರು ಗುಡುಗಿದ್ದಾರೆ.
ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ನ ಕಮಾಂಡರ್-ಇನ್-ಚೀಫ್ ಸಲಹೆಗಾರ ಅಲಿ ಫದವಿ ಮಾತನಾಡಿ, "ಅಮೆರಿಕ ಮತ್ತು ಇಸ್ರೇಲ್ ದೀರ್ಘಕಾಲ ಯುದ್ಧಕ್ಕೆ ಸಿದ್ಧವಾಗಲೇಬೇಕು. ಈ ಯುದ್ಧವು ಇಡೀ ಅಮೆರಿಕದ ಆರ್ಥಿಕತೆ ಮತ್ತು ವಿಶ್ವದ ಆರ್ಥಿಕತೆಯನ್ನೇ ನಾಶಪಡಿಸಲಿದೆ" ಎಂದು ಎಚ್ಚರಿಸಿದ್ದಾರೆ. ವಿಶ್ವದ ಒಟ್ಟು ಕಚ್ಚಾ ತೈಲ ಮತ್ತು ಎಲ್‌ಪಿಜಿ ಪೂರೈಕೆಯ ಶೇ. 20ರಷ್ಟು ಭಾಗ ಸಾಗುವ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳು ಎರಡು ವಾಣಿಜ್ಯ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿವೆ.
ಲೈಬೀರಿಯಾ ಧ್ವಜದ 'ಎಕ್ಸ್‌ಪ್ರೆಸ್ ರೋಮ್' ಮತ್ತು ಥೈಲ್ಯಾಂಡ್‌ನ 'ಮಯೂರಿ ನಾರಿ' ಹಡಗುಗಳು ಇರಾನ್ ಪಡೆಯ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಜಲಸಂಧಿಯನ್ನು ಪ್ರವೇಶಿಸಿದ್ದರಿಂದ ಅವುಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಟೆಹ್ರಾನ್ ತಿಳಿಸಿದೆ. ಓಮನ್ ನೌಕಾಪಡೆಯು 20 ಸಿಬ್ಬಂದಿಯನ್ನು ರಕ್ಷಿಸಿದ್ದು, ಇನ್ನೂ ಮೂವರು ನಾವಿಕರು ಕಾಣೆಯಾಗಿದ್ದಾರೆ.
ಯುದ್ಧದ ಕಾರಣದಿಂದ ಫೆಬ್ರವರಿ 28 ರಿಂದ ತೈಲ ಬೆಲೆ ಗಗನಕ್ಕೇರಿದೆ. ಮಾರುಕಟ್ಟೆಯ ಏರುಪೇರನ್ನು ನಿಯಂತ್ರಿಸಲು ಅಂತರಾಷ್ಟ್ರೀಯ ಇಂಧನ ಸಂಸ್ಥೆ (IEA) ತನ್ನ ಸದಸ್ಯ ರಾಷ್ಟ್ರಗಳ ತುರ್ತು ಸಂಗ್ರಹದಿಂದ 400 ಮಿಲಿಯನ್ ಬ್ಯಾರೆಲ್ ತೈಲವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಪುನರಾರಂಭಗೊಳ್ಳುವುದು ಜಾಗತಿಕ ಇಂಧನ ಸ್ಥಿರತೆಗೆ ಅತಿ ಮುಖ್ಯ ಎಂದು ಐಇಎ ಮುಖ್ಯಸ್ಥ ಫಾತಿಹ್ ಬಿರೋಲ್ ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್ ಹೌಸ್‌ನಲ್ಲಿ ಮಾತನಾಡಿ, "ತೈಲ ಟ್ಯಾಂಕರ್‌ಗಳ ಸಂಚಾರಕ್ಕೆ ಶೀಘ್ರದಲ್ಲೇ ಹೆಚ್ಚಿನ ಭದ್ರತೆ ಒದಗಿಸಲಾಗುವುದು" ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, 'ಆಕ್ಸಿಯೋಸ್'ಗೆ ನೀಡಿದ ಸಂದರ್ಶನದಲ್ಲಿ, ಯುದ್ಧವು ಶೀಘ್ರದಲ್ಲೇ ಕೊನೆಗೊಳ್ಳಬಹುದು ಮತ್ತು ಅಮೆರಿಕದ ಪಡೆಗಳಿಗೆ ದಾಳಿ ಮಾಡಲು ಈಗ ಇರಾನ್‌ನಲ್ಲಿ "ಪ್ರಾಯೋಗಿಕವಾಗಿ ಏನೂ ಉಳಿದಿಲ್ಲ" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ