ಟ್ರಂಪ್‌ ಏನು ಮಾಡ್ತಾರೋ ಅದನ್ನೇ ನಾವೂ ಮಾಡ್ತೇವೆ: ಅಮೆರಿಕಾ ಜೊತೆ ಮಾತುಕತೆ ನಡೆದಿಲ್ಲ ಎಂದ ಇರಾನ್‌

Published : Mar 24, 2026, 07:18 AM IST
Trump Back Down from Iran

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ 48 ಗಂಟೆಗಳ ಗಡುವಿಗೆ ಇರಾನ್‌ ಬಗ್ಗಿಲ್ಲ. ನಮ್ಮ ವಿದ್ಯುತ್‌ ಘಟಕಗಳ ಮೇಲೆ ದಾಳಿ ನಡೆಸಿದರೆ, ನಾವೂ ಅದನ್ನೇ ಮಾಡುತ್ತೇವೆ ಮತ್ತು ಕೊಲ್ಲಿಯಲ್ಲಿ ಸಮುದ್ರ ಸ್ಫೋಟಕಗಳನ್ನು ಅಳವಡಿಸುತ್ತೇವೆ ಎಂದು ಇರಾನ್‌ ಪ್ರತಿಬೆದರಿಕೆ ಒಡ್ಡಿದೆ. 

ಟೆಹ್ರಾನ್‌: ಅಮೆರಿಕ-ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಸಮರ ತೀವ್ರವಾಗಿ ಮುಂದುವರಿಯುತ್ತಿರುವ ನಡುವೆಯೇ, ‘ನಮ್ಮ ವಿದ್ಯುತ್‌ ಘಟಕಗಳಿಗೆ ದಾಳಿ ಮಾಡಿದರೆ, ನಾವೂ ಅದನ್ನೇ ಮಾಡುತ್ತೇವೆ. ಕರಾವಳಿ ಮತ್ತು ದ್ವೀಪಗಳನ್ನು ಗುರಿಯಾಗಿಸಿದರೆ, ಪರ್ಷಿಯನ್‌ ಕೊಲ್ಲಿಯಾದ್ಯಂತ ಸಮುದ್ರ ಸ್ಫೋಟಕಗಳನ್ನು ಅಳವಡಿಸುತ್ತೇವೆ’ ಎಂದು ಸೋಮವಾರ ಇರಾನ್‌ ಗುಡುಗಿದೆ.

‘48 ಗಂಟೆಯ ಒಳಗೆ ಹೋರ್ಮುಜ್‌ ಜಲಸಂಧಿಯನ್ನು ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಇರಾನ್‌ನ ವಿದ್ಯುತ್‌ ಘಟಕಗಳ ಮೇಲೆ ದಾಳಿ ನಡೆಸಲಾಗುವುದು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಒಡ್ಡಿದ ಬೆದರಿಕೆಗೆ ಇರಾನ್‌ ಈ ಪ್ರತಿಬೆದರಿಕೆ ಒಡ್ಡಿದೆ.

ಟ್ರಂಪ್‌ ಗಡುವು ಮಂಗಳವಾರ ನಸುಕಿನ 5.14ಕ್ಕೆ ಅಂತ್ಯಗೊಳ್ಳಲಿದ್ದು, ಬೆದರಿಕೆಗೆ ಇರಾನ್‌ ಬಗ್ಗುತ್ತಿಲ್ಲ ಎಂಬುದು ಈ ಮೂಲಕ ಸಾಬೀತಾಗಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ (ಐಆರ್‌ಜಿಸಿ), ‘ಶತ್ರುಗಳು ನಮ್ಮ ವಿದ್ಯುತ್‌ ಘಟಕಕ್ಕೆ ಹಾನಿಯೆಸಗಿದರೆ, ನಾವು ಸಹ ವಿದ್ಯುತ್‌ ಘಟಕವನ್ನೇ ಹಾನಿಗೊಳಿಸುತ್ತೇವೆ’ ಎಂದಿದೆ.

ಇರಾನ್‌ ರಕ್ಷಣಾ ಮಂಡಳಿ ಕೂಡ ವೈರಿ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದು, ‘ನಮ್ಮ ಕರಾವಳಿ ಅಥವಾ ದ್ವೀಪಗಳ ಮೇಲೆ ದಾಳಿಗೆ ಯತ್ನಿಸಿದರೆ, ಕೊಲ್ಲಿಯಲ್ಲಿರುವ ಎಲ್ಲಾ ಪ್ರವೇಶ ಮಾರ್ಗಗಳಲ್ಲಿ ವಿವಿಧ ರೀತಿಯ ಸಮುದ್ರ ಸ್ಫೋಟಕಗಳನ್ನು ಅಳವಡಿಸುತ್ತೇವೆ. ಇದರಲ್ಲಿ ಕರಾವಳಿಯಿಂದ ಬಿಡುಗಡೆ ಮಾಡಬಹುದಾದ ತೇಲುವ ಸ್ಫೋಟಕಗಳೂ ಸೇರಿರುತ್ತವೆ. ಹೀಗೇನಾದರೂ ಆದರೆ ಇಡೀ ಕೊಲ್ಲಿಗೆ ಹೋರ್ಮುಜ್‌ಗಾದ ಸ್ಥಿತಿಯೇ ಬರುತ್ತದೆ. 1980ರ ದಶಕದಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿ ಕೆಲವು ಸಮುದ್ರ ಸ್ಫೋಟಕಗಳನ್ನು ತೆಗೆದುಹಾಕುವಲ್ಲಿ ವಿಫಲವಾದದ್ದನ್ನು ಯಾರೂ ಮರೆಯಬಾರದು’ ಎಂದು ಖಡಕ್‌ ಎಚ್ಚರಿಕೆ ನೀಡಿದೆ.

ಇಂದು ಇಂಧನ ಬೆಲೆ ಕುಸಿತಕ್ಕೆ ಅಮೆರಿಕದ ಮಾಡಿದ ತಂತ್ರ

ಟೆಹ್ರಾನ್: ‘ಕದನವಿರಾಮಕ್ಕೆ ಸಂಬಂಧಿಸಿದಂತೆ ಅಮೆರಿಕದೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ’ ಎಂದು ಇರಾನ್ ವಿದೇಶಾಂಗ ಇಲಾಖೆ ಹೇಳಿದೆ. ಅಲ್ಲದೆ, ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್‌ ಬಾಘೇರ್‌ ಕೂಡ ‘ನಮ್ಮ ಸರ್ಕಾರ ಮಾತುಕತೆ ನಡೆಸಿಲ್ಲ. ಇದು ಸುಳ್ಳು ಸುದ್ದಿ. ಕುಸಿದ ಮಾರುಕಟ್ಟೆಗಳನ್ನು ಚೇತರಿಸುವಂತೆ ಮಾಡಲು ಹಬ್ಬಿಸಿದ ಸುಳ್ಳು ಸುದ್ದಿ’ ಎಂದಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ 5 ದಿನದ ಕದನವಿರಾಮ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್‌ ವಿದೇಶಾಂಗ ಸಚಿವಾಲಯ, ‘ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವೆ ಯಾವುದೇ ಮಾತುಕತೆಗಳು ನಡೆದಿಲ್ಲ. ಟ್ರಂಪ್ ಅವರ ಹೇಳಿಕೆಯು, ಏರುತ್ತಿರುವ ಇಂಧನ ಬೆಲೆಗಳನ್ನು ಕಡಿಮೆ ಮಾಡುವ ತಂತ್ರವಾಗಿದೆ’ ಎಂದು ಸ್ಪಷ್ಟಪಡಿಸಿದೆ. ಇದಕ್ಕೂ ಮುನ್ನ, ’ಇರಾನ್‌ನ ಪ್ರತಿದಾಳಿ ಬೆದರಿಕೆಗೆ ಬಗ್ಗಿ ಟ್ರಂಪ್‌ ಕದನವಿರಾಮದ ಮಾತು ಆಡಿದ್ದಾರೆ’ ಎಂದು ಇರಾನ್‌ ಸರ್ಕಾರಿ ಟೀವಿ ವರದಿ ಮಾಡಿತ್ತು.

ಹಡಗು ಭಾರತದತ್ತ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆಯೇ ಭಾರತದ ಧ್ವಜ ಹೊತ್ತ ಮತ್ತೆರಡು ಎಲ್‌ಪಿಜಿ ಟ್ಯಾಂಕರ್‌ಗಳು ಪರ್ಷಿಯನ್‌ ಕೊಲ್ಲಿಯಿಂದ ಪ್ರಯಾಣ ಆರಂಭಿಸಿವೆ. ಪೈನ್ ಗ್ಯಾಸ್ ಮತ್ತು ಜಗ್ ವಸಂತ್ ಇರಾನ್‌ನ ಲಾರಕ್ ಮತ್ತು ಕೆಶ್ಮ್ ದ್ವೀಪಗಳ ಬಳಿ ಸಾಗುತ್ತಿರುವುದು ಕಂಡುಬಂದಿದೆ. ಹೋರ್ಮುಜ್‌ ದಾಟುವ ಮೊದಲು ಇರಾನಿನ ಅಧಿಕಾರಿಗಳಿಗೆ ತಮ್ಮ ಗುರುತನ್ನು ಸ್ಪಷ್ಟಪಡಿಸುವ ಸಲುವಾಗಿ ಅಲ್ಲಿ ನಿಧಾನಿಸಿರಬಹುದು ಎನ್ನಲಾಗಿದೆ. ಈಗಾಗಲೇ ಇದೇ ಮಾರ್ಗ ದಾಟಿ ಶಿವಾಲಿಕ್‌, ನಂದಾದೇವಿ, ಜಗ್‌ ಲಾಡ್ಕಿ, ಜಗ್‌ ಪ್ರಕಾಶ್‌ ಹಡಗುಗಳು ಭಾರತಕ್ಕೆ ಆಗಮಿಸಿವೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Israel Iran Conflict: ಇದ್ದಕ್ಕಿದ್ದಂತೇ 5 ದಿನ ಕದನವಿರಾಮ ಘೋಷಿಸಿ ಡೊನಾಲ್ಡ್ ಟ್ರಂಪ್ ನಿಗೂಢ ನಡೆ
ತುತ್ತು ಅನ್ನಕ್ಕಾಗಿ ಸುರಿಯುವ ಮಳೆ ಲೆಕ್ಕಿಸದೇ ಚಳಿಯಲ್ಲೇ ನಡುಗುತ್ತಾ ಸಾಲುಗಟ್ಟಿ ನಿಂತ ಪುಟ್ಟ ಮಕ್ಕಳು