
ಟೆಹ್ರಾನ್: ಸದ್ಯ ಜಾರಿಗೆ ಬಂದಿರುವ ಅಮೆರಿಕ, ಇರಾನ್ ಮತ್ತು ಇಸ್ರೇಲ್ ನಡುವಿನ ಕದನವಿರಾಮದ ಷರತ್ತುಗಳ ಪ್ರಕಾರ ದಿನಕ್ಕೆ 15 ನೌಕೆಗಳು ಹೋರ್ಮುಜ್ ಜಲಸಂಧಿಯ ಮೂಲಕ ಸಾಗಲು ಅನುಮತಿಸಲಾಗಿದೆ. ಈ ಬಗ್ಗೆ ಇರಾನ್ ಮಾಧ್ಯಮ ಮಾಡಿರುವ ವರದಿಯಲ್ಲಿ, 'ಯುದ್ಧಸ್ಥಗಿತದ ಭಾಗವಾಗಿ 15 ಹಡಗುಗಳು ಹೋರ್ಮುಜ್ ಮೂಲಕ ಸಾಗಬಹುದಾಗಿದೆ. ಆದರೆ ಅವುಗಳು ಇರಾನ್‌ನಿಂದ ಪೂರ್ವಾನುಮತಿಯನ್ನು ಪಡೆದಿರಬೇಕು. ಈ ಸಂಚಾರವು ಐಆರ್‌ಜಿಸಿಯ ನಿಗಾದಲ್ಲಿ ನಡೆಯಲಿದೆಯೇ ಹೊರತು ಪರಿಸ್ಥಿತಿಯು ಯುದ್ಧಪೂರ್ವ ಸ್ಥಿತಿಗೆ ಮರಳಲು ಸಾಧ್ಯವಿಲ್ಲ ಎನ್ನಲಾಗಿದೆ.
ಅತ್ತ, ಪರವಾನಗಿ ಪಡೆದು ಜಲಸಂಧಿಯನ್ನು ಸಾಗುವ ಹಡಗುಗಳಿಂದ ಶುಲ್ಕ ವಸೂಲಿ ಮಾಡಲಾಗುವುದು ಎಂದು ಇರಾನ್ ಘೋಷಿಸಿತ್ತು. ಆದರೆ ಬುಧವಾರ ರಾತ್ರಿ, ಲೆಬನಾನ್ ಮೇಲಿನ ಇಸ್ರೇಲ್ ದಾಳಿಗೆ ಪ್ರತಿಯಾಗಿ ಹೋರ್ಮುಜ್ ಅನ್ನು ಮತ್ತೆ ಮುಚ್ಚುವುದಾಗಿ ಇರಾನ್ ಹೇಳಿತ್ತು. ಆದಕಾರಣ ಆ ಜಲಸಂಧಿಯ ಸದ್ಯದ ಸ್ಥಿತಿಯ ಬಗ್ಗೆ ಸ್ಪಷ್ಟನೆಯಿಲ್ಲ.
ವಾಷಿಂಗ್ಟನ್: ಹೋರ್ಮುಜ್ ಜಲಸಂಧಿಯ ರಕ್ಷಣೆಗೆ ತಾವು ಕೈಗೊಳ್ಳಬಹುದಾದ ಕ್ರಮಗಳ ಕುರಿತು ವಿವರವಾದ ಯೋಜನೆಯನ್ನು ಕೆಲವೇ ದಿನಗಳ ಒಳಗಾಗಿ ಸಲ್ಲಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುರೋಪಿಯನ್ ದೇಶಗಳಿಗೆ (ಇಯು) ಕೇಳಿದ್ದಾರೆ. ಇರಾನ್ ವಿರುದ್ದ ಕದನ ವಿರಾಮ ಜಾರಿ ಯಾದರೂ ಹೋರ್ಮುಜ್ ಕುರಿತಾದ ಗೊಂದಲ ಇನ್ನೂ ಮುಂದುವರಿದಿದೆ. ಈ ನಡುವೆ ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ, ಜಲಸಂಧಿಯ ರಕ್ಷಣೆಗೆ ಮುಂದಾಗುವಂತೆ ಯುರೋಪಿಯನ್ ಮಿತ್ರ ರಾಷ್ಟ್ರಗಳಿಗೆ ಮತ್ತೊಮ್ಮೆ ಟ್ರಂಪ್ ಆದೇಶಿಸಿದ್ದಾರೆ. ಈಗಾಗಲೇ 40ಕ್ಕೂ ಅಧಿಕ ದೇಶಗಳನ್ನೊಳಗೊಂಡ ಇ.ಯು., ಜಪಾನ್, ಕೆನಡಾ ಹೋರ್ಮುಜ್ ರಕ್ಷಣೆಯಲ್ಲಿ ನೆರವಾಗುವುದಾಗಿ ಟ್ರಂಪ್ ಗೆ ವಾಗ್ದಾನ ಕೊಟ್ಟಿವೆ.
ಹೋರ್ಮುಜ್‌ನಲ್ಲಿ ಜಲಸ್ಫೋಟಕ ಇಟ್ಟಿದ್ದ ಇರಾನ್: ಚಾರ್ಟ್‌ನಿಂದ ದೃಢ
ದುಬೈ: ಹೋರ್ಮುಜ್‌ನಲ್ಲಿ ಹಡಗುಗಳ ಓಡಾಟವನ್ನು ನಿರ್ಬಂಧಿಸಿದ್ದ ಇರಾನ್, ಆ ಪ್ರದೇಶದಲ್ಲಿ ಜಲಸ್ಫೋಟಕಗಳನ್ನು ಇಟ್ಟಿತ್ತು. ಎಲ್ಲೆಲ್ಲಿ ಸ್ಫೋಟಕ ಇಡಲಾಗಿದೆ ಎಂಬ ಚಾರ್ಟ್ ಸಿದ್ದಪಡಿಸಿತ್ತು ಎಂದು ಇರಾನಿ ಮಾಧ್ಯಮ ವರದಿ ಮಾಡಿದೆ. ಇದಕ್ಕೆ ಪೂರಕವಾಗಿ ಚಿತ್ರ ಬಿಡುಗಡೆ ಮಾಡಿದ್ದು, ಅದರಲ್ಲಿ ನೌಕೆಗಳು ಸಾಗುವ ಮಾರ್ಗದಲ್ಲಿ ಅಪಾಯದ ಜಾಗಗಳು ಎಂಬ ಗುರುತು ಕಂಡು ಬರುತ್ತದೆ. ಆದರೆ ಕದನ ವಿರಾಮದ ಬಳಿಕ ಅವು ತೆರವಾಗಿವೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಕಳೆದ ತಿಂಗಳು, ಇರಾನ್ ಹೋರ್ಮುಜ್‌ನಲ್ಲಿ ಜಲಸ್ಪೋಟಕ ಇರಿಸಿದೆ ಎಂದಿದ್ದ ಅಮೆರಿಕ, ಅವನ್ನು ಅಳವಡಿಸುತ್ತಿದ್ದ ನೌಕೆಗಳನ್ನು ನಾಶ ಮಾಡಿದ್ದಾಗಿ ಹೇಳಿಕೊಂಡಿತ್ತು.
ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಕೇರಳ, ಪುದುಚೇರಿ, ಅಸ್ಸಾಂನಲ್ಲಿ ದಾಖಲೆಯ ಮತದಾನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ