ದಕ್ಷಿಣ ಚೀನಾ ಸಮುದ್ರಕ್ಕೆ ನೌಕೆ ಕಳಿಸಿ ಭಾರತ ಟಾಂಗ್| ಗಲ್ವಾನ್ ಸಂಘರ್ಷ ಬಳಿಕ ಬಿಸಿ ಮುಟ್ಟಿಸಿದ್ದ ಸರ್ಕಾರ
ನವದೆಹಲಿ(ಆ.31): ಜೂ.15ರಂದು ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ- ಚೀನಾ ಯೋಧರ ನಡುವಿನ ಭಾರೀ ಮುಖಾಮುಖಿ ಸೆಣಸಿನ ಬೆನ್ನಲ್ಲೇ, ಚೀನಾಕ್ಕೆ ಪಾಠ ಕಲಿಸಲು ಭಾರತ ಸರ್ಕಾರವು ದಕ್ಷಿಣ ಚೀನಾ ಸಮುದ್ರ ಪ್ರದೇಶಕ್ಕೆ ತನ್ನ ಮುಂಚೂಣಿ ಯುದ್ಧನೌಕೆ ರವಾನಿಸಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.
ಜೂ.15ರ ಘಟನೆಯಲ್ಲಿ ಭಾರತದ 20 ಯೋಧರು ಹತರಾಗಿದ್ದರೆ, ಚೀನಾದ 30ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದರು. ಈ ವೇಳೆ ಚೀನಾಕ್ಕೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ ಭಾರತ ಸರ್ಕಾರ, ಸದ್ದಿಲ್ಲದೇ ತನ್ನ ಮುಂಚೂಣಿ ಯುದ್ಧನೌಕೆಯೊಂದನ್ನು ವಿವಾದಿತ ದಕ್ಷಿಣ ಚೀನಾ ಸಮುದ್ರ ವಲಯಕ್ಕೆ ರವಾನಿಸಿತ್ತು. ಈ ವಲಯದಲ್ಲಿ ಕೃತಕ ದ್ವೀಪಗಳನ್ನು ನಿರ್ಮಿಸಿ, ಇಡೀ ವಲಯದ ಮೇಲೆ ತನ್ನ ಹಕ್ಕು ಸಾಧಿಸಲು ಯತ್ನಿಸುತ್ತಿರುವ ಚೀನಾಕ್ಕೆ ಭಾರತದ ಈ ದಿಢೀರ್ ಬೆಳವಣಿಗೆ ಭಾರೀ ಅಚ್ಚರಿಯನ್ನು ತಂದಿತ್ತು. ಈ ವಲಯದಲ್ಲಿ ಯಾವುದೇ ವಿದೇಶಿ ನೌಕೆಗಳ ಆಗಮನವನ್ನು ಚೀನಾ ವಿರೋಧಿಸುವ ಕಾರಣ, ಗಡಿ ಕ್ಯಾತೆ ಮುಂದುವರೆಸಿದ್ದ ಚೀನಾಕ್ಕೆ ಭಾರತ ಈ ರೀತಿಯಲ್ಲಿ ತಿರುಗೇಟು ನೀಡಿತ್ತು. ನಂತರ ಬಿಕ್ಕಟ್ಟು ಇತ್ಯರ್ಥಕ್ಕೆ ನಡೆದ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಹಂತದ ಮಾತುಕತೆ ವೇಳೆ, ಚೀನಾ ಈ ವಿಷಯದ ಬಗ್ಗೆ ತನ್ನ ಆಕ್ಷೇಪ ವ್ಯಕ್ತಪಡಿಸಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
undefined
ಜೊತೆಗೆ ಇಂಥದ್ದೊಂದು ನಿಯೋಜನೆ ವೇಳೆ ಸ್ಥಳದಲ್ಲೇ ಬೀಡುಬಿಟ್ಟಿದ್ದ ಅಮೆರಿಕದ ಯುದ್ಧನೌಕೆಗಳೊಂದಿಗೂ ಭಾರತೀಯ ನೌಕಾಪಡೆಯ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದರು. ಇಷ್ಟುಮಾತ್ರವಲ್ಲ, ಚೀನಾ ನೌಕೆಗಳು ಹಿಂದೂ ಮಹಾಸಾಗರವನ್ನು ಇದೇ ವಲಯದ ಮೂಲಕ ಪ್ರವೇಶಿಸುವ ಅಂಡಮಾನ್ ನಿಕೋಬಾರ್ ದ್ವೀಪಸಮೂಹದ ಬಲಿ ಬರುವ ಮಲಕ್ಕಾ ಜಲಸಂಧಿ ಬಳಿಯೂ ಭಾರತೀಯ ನೌಕಾಪಡೆಯು ತನ್ನ ಕೆಲ ನೌಕೆಗಳನ್ನು ನಿಯೋಜಿಸುವ ಮೂಲಕ ಚೀನಾದ ಮೇಲೆ ಕಣ್ಗಾವಲು ಇಟ್ಟಿತ್ತು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಕುರು ಕ್ಷೇತ್ರವಾಗುತ್ತಾ ಮಾನಸ ಸರೋವರ?: ಕುತಂತ್ರಿ ಚೀನಾಗೆ ಬುದ್ಧಿ ಕಲಿಸಲು ಮೋದಿ ಪ್ಲಾನ್!