ಸೌದಿಯಲ್ಲಿ ವೈದ್ಯನಾಗಿದ್ದ ಬೆಂಗಳೂರು ಉಗ್ರ!

By Kannadaprabha NewsFirst Published Aug 31, 2020, 10:05 AM IST
Highlights

ಸೌದಿಯಲ್ಲಿ ವೈದ್ಯನಾಗಿದ್ದ ಬೆಂಗಳೂರು ಉಗ್ರ| ಲುಕೌಟ್‌ ನೋಟಿಸ್‌ ಹೊರಡಿಸಿದ್ದ ಭಾರತ ಸರ್ಕಾರ| ಹೀಗಾಗಿ ವಶಕ್ಕೆ ಪಡೆದು ಗಡೀಪಾರು ಮಾಡಿದ ಸೌದಿ|  ವೈದ್ಯನ ವಿರುದ್ಧ ಬೆಂಗಳೂರಲ್ಲಿ ದಾಖಲಾಗಿತ್ತು ಕೇಸ್‌| ಪ್ರತಾಪ್‌ ಸಿಂಹ ಮೇಲೆ ದಾಳಿಗೆ ನೇಮಕಾತಿ ಪ್ರಕರಣ

ಬೆಂಗಳೂರು(ಆ.31): ದಿಲ್ಲಿಯಲ್ಲಿ ಶುಕ್ರವಾರ ರಾಷ್ಟ್ರೀಯ ತನಿಖಾ ದಳದಿಂದ (ಎನ್‌ಐಎ) ಬಂಧಿತನಾಗಿರುವ ಲಷ್ಕರ್‌ ಎ ತೊಯ್ಬಾ ಸಂಘಟನೆಯ ಭಯೋತ್ಪಾದಕ, ಬೆಂಗಳೂರು ಮೂಲದ ಡಾ

ಶಬೀಲ್‌ ಅಹ್ಮದ್‌, ಸೌದಿ ಅರೇಬಿಯಾದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಲಷ್ಕರ್‌ ಸಂಘಟನೆಗೆ ಭಾರತದಲ್ಲಿ ಶಬೀಲ್‌ ಉಗ್ರರ ನೇಮಕಾತಿ ನಡೆಸುತ್ತಿದ್ದ ಪ್ರಕರಣ ಸಂಬಂಧ ಆತನನ್ನು ವಶಕ್ಕೆ ಪಡೆದು ಭಾರತಕ್ಕೆ ಸೌದಿ ಸರ್ಕಾರ ಗಡೀಪಾರು ಮಾಡಿದೆ.

38 ವರ್ಷದ ಡಾ| ಶಬೀಲ್‌ ಅಹ್ಮದ್‌, 2007ರ ಬ್ರಿಟನ್‌ನ ಗ್ಲಾಸ್ಗೋ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 18 ತಿಂಗಳು ಶಿಕ್ಷೆ ಅನುಭವಿಸಿ ಭಾರತಕ್ಕೆ ಬಂದಿದ್ದ. ಆದರೆ, ಮರಳಿದ ಕೆಲವೇ ದಿನಗಳಲ್ಲಿ 2010ರಲ್ಲಿ ಭಾರತದಿಂದ ಸೌದಿ ಅರೇಬಿಯಾಗೆ ಪರಾರಿಯಾಗಿ ಅಲ್ಲಿನ ಕಿಂಗ್‌ ಫಹಾದ್‌ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ.

2012ರಲ್ಲಿ ಬೆಂಗಳೂರಿನಲ್ಲಿ ಲಷ್ಕರ್‌ ಎ ತೊಯ್ಬಾ ಸಂಘಟನೆಗೆ ಉಗ್ರರ ನೇಮಕ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ 25 ಮಂದಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದರಲ್ಲಿ ಡಾ| ಶಬೀಲ್‌ ಕೂಡ ಒಬ್ಬನಾಗಿದ್ದ. ಈ ಕಾರಣ ಆತನ ವಿರುದ್ಧ ಜಾಮೀನು ರಹಿತ ವಾರಂಟ್‌ ಹಾಗೂ ಲುಕ್‌ಔಟ್‌ ನೋಟಿಸ್‌ ಕೂಡ ಜಾರಿಯಾಗಿತ್ತು. ಈಗ ಇದೇ ಪ್ರಕರಣದ ಹಿನ್ನೆಲೆಯಲ್ಲಿ ಸೌದಿ ಸರ್ಕಾರ, ಡಾ| ಶಬೀಲ್‌ನನ್ನು ಭಾರತಕ್ಕೆ ಹಸ್ತಾಂತರಿಸಿದೆ.

ಅಂದು ಪತ್ರಕರ್ತರಾಗಿದ್ದ ಇಂದಿನ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಅವರ ಮೇಲೆ ದಾಳಿ ನಡೆಸುವ ಸಂಚು ರೂಪಿಸಿ ಈ ನೇಮಕ ನಡೆದಿತ್ತು ಎಂದು ಬೆಂಗಳೂರು ಪೊಲೀಸರು ಹೇಳಿದ್ದರು. ಈಗಾಗಲೇ ಈ ಪ್ರಕರಣದಲ್ಲಿ 17 ಮಂದಿಯನ್ನು ಬಂಧಿಸಲಾಗಿದ್ದು, 14 ಮಂದಿ ಶಿಕ್ಷೆ ಅನುಭವಿಸಿ ಬಿಡುಗಡೆ ಹೊಂದಿದ್ದಾರೆ.

ಡಾ| ಶಬೀಲ್‌ನನ್ನು ಲಷ್ಕರ್‌ ನೇಮಕ ಜಾಲಕ್ಕೆ ಪರಿಚಯಿಸಿದ್ದು ಆತನ ಬಂಧು ಇಮ್ರಾನ್‌ ಅಹ್ಮದ್‌ ಹಾಗೂ ಬೆಂಗಳೂರಿನ ಎಂಜಿನಿಯರ್‌ ಮೊಹಮ್ಮದ್‌ ಶಾಹಿದ್‌ ಫೈಸಲ್‌. 2013ರಲ್ಲೇ ಇಮ್ರಾನ್‌ನನ್ನು ನಕಲಿ ಪಾಸ್‌ಪೋರ್ಟ್‌ ಕೇಸಲ್ಲಿ ಬಂಧಿಸಲಾಗಿದ್ದರೆ, ಫೈಸಲ್‌ ನಾಪತ್ತೆಯಾಗಿದ್ದಾನೆ.

click me!