
ರಷ್ಯಾ ವಿರುದ್ಧ ಮತ ಹಾಕಿದ ಐಸಿಜೆ ಭಾರತೀಯ ಜಡ್ಜ್ ಭಂಡಾರಿ: ರಷ್ಯಾ ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ನಡೆಸಿದ ವಿಚಾರಣೆ ವೇಳೆ ಭಾರತೀಯ ನ್ಯಾಯಾಧೀಶ ದಲ್ವೀರ್ ಭಂಡಾರಿ ರಷ್ಯಾದ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. 15 ನ್ಯಾಯಾಧೀಶರಲ್ಲಿ 13 ನ್ಯಾಯಾಧೀಶರ ತೀರ್ಮಾನದ ಪ್ರಕಾರ ರಷ್ಯಾ ಆಕ್ರಮಣವನ್ನು ನಿಲ್ಲಿಸಬೇಕು ಎಂದು ಕೋರ್ಟ್ ಆದೇಶ ನೀಡಿತ್ತು. ಭಾರತೀಯ ನ್ಯಾಯಾಧೀಶರ ಆಯ್ಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ನ್ಯಾಯಾಧೀಶರು ತಮ್ಮ ವೈಯಕ್ತಿಕ ಸಾಮರ್ಥ್ಯದ ಮೇಲೆ ಈ ನಿರ್ಧಾರ ಪ್ರಕಟಿಸಿದ್ದಾರೆ. ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರು ಹಾಕುವ ಮತದ ಕುರಿತು ಹೇಳಿಕೆ ನೀಡುವುದು ಸಮಂಜಸವಲ್ಲ ಎಂದು ಹೇಳಿದೆ.
ಯುದ್ಧ ನಿಲ್ಲಿಸುವ ಅಂತಾರಾಷ್ಟ್ರೀಯ ಕೋರ್ಟ್ ಆದೇಶಕ್ಕೆ ರಷ್ಯಾ ತಿರಸ್ಕಾರ: ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ಆಕ್ರಮಣವನ್ನು ನಿಲ್ಲಿಸಬೇಕು ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿರುವ ಆದೇಶವನ್ನು ರಷ್ಯಾ ತಿರಸ್ಕರಿಸಿದೆ. ಈ ತೀರ್ಪನ್ನು ಜಾರಿಗೆ ತರಲು ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳು ಒಪ್ಪಿಗೆ ನೀಡಬೇಕು. ಆದರೆ ಯಾವುದೇ ಕಾರಣಕ್ಕೂ ರಷ್ಯಾ ಒಪ್ಪಿಗೆ ಸೂಚಿಸುವುದಿಲ್ಲ ಎಂದು ರಷ್ಯಾದ ಸರ್ಕಾರದ ವಕ್ತಾರ ಹೇಳಿದ್ದಾರೆ. ಅಲ್ಲದೆ, ಉಭಯ ದೇಶಗಳ ನಡುವೆ ಪ್ರತ್ಯೇಕ ಮಾತುಕತೆ ನಡೆದಿದೆ ಎಂದೂ ತಿಳಿಸಿದ್ದಾರೆ.
ಇದನ್ನೂ ಓದಿ: Russia-Ukraine war: ಮಕ್ಕಳು, ಗರ್ಭಿಣಿಯರ ಕಟ್ಟಡದ ಮೇಲೆ ವಾಯುದಾಳಿ.. ನಿಲ್ಲದ ರಷ್ಯಾ ಹಾವಳಿ
ರಷ್ಯಾ ಆದೇಶವನ್ನು ತಿರಸ್ಕರಿಸಿದ ಬೆನ್ನಲ್ಲೇ, ಅಮೆರಿಕ, ಬ್ರಿಟನ್, ಫ್ರಾನ್ಸ್, ಅಲ್ಬೇನಿಯಾ, ನಾರ್ವೆ ಮತ್ತು ಐರ್ಲೆಂಡ್‌ಗಳು ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ತುರ್ತು ಸಭೆ ನಡೆಸಲು ತೀರ್ಮಾನಿಸಿವೆ. ರಷ್ಯಾ ಯುದ್ಧಾಪರಾಧ ಮಾಡುತ್ತಿದೆ. ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ ಎಂದು ವಿಶ್ವ ಸಂಸ್ಥೆಯ ಬ್ರಿಟನ್ ರಾಯಭಾರಿ ಹೇಳಿದ್ದಾರೆ.
15-20 ಜನ ಇನ್ನೂ ಸಿಲುಕಿದ್ದರಾರೆ: ಭಾರತ ಸರ್ಕಾರ: ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಇನ್ನೂ 15-20 ಜನರಿದ್ದು ಅವರನ್ನು ‘ಅಪರೇಷನ್ ಗಂಗಾ’ ಅಡಿ ಕರೆತರುವ ಪ್ರಯತ್ನಗಳು ನಡೆಯುತ್ತವೆ. ಅಪರೇಷನ್ ಗಂಗಾ ಇನ್ನೂ ಕೂಡ ನಿಂತಿಲ್ಲ ಭಾರತಕ್ಕೆ ಬರಲು ಪ್ರಯತ್ನಿಸುತ್ತಿರುವ ಎಲ್ಲರಿಗೂ ನಾವು ಸಹಾಯ ಮಾಡಲಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಭಾರತಕ್ಕೆ ಬರಲು ಸಿದ್ಧವಿರುವ 15-20 ಮಂದಿ ಉಕ್ರೇನ್‌ನ ಖೇರ್ಸನ್‌ನಲ್ಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಯುದ್ಧ ಪ್ರಾರಂಭವಾದಾಗ ಉಕ್ರೇನ್‌ನಲ್ಲಿರುವ ಸುಮಾರು 20,000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾರತಕ್ಕೆ ಬರಲು ನೊಂದಾಯಿಸಿದ್ದರು.
ಪುಟಿನ್ ಯುದ್ಧಾಪರಾಧಿ: ಬೈಡೆನ್ ಕಟುಟೀಕೆ: ಉಕ್ರೇನ್ ಮೇಲೆ ಭೀಕರ ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಓರ್ವ ‘ಯುದ್ಧಾಪರಾಧಿ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕಟು ಟೀಕೆ ಮಾಡಿದ್ದಾರೆ. ಯುದ್ಧ ಆರಂಭವಾದ ಬಳಿಕ ಪುಟಿನ್ ವಿರುದ್ಧ ಬೈಡೆನ್ ನಾನಾ ರೀತಿಯ ಟೀಕೆ ಮಾಡಿದ್ದರಾದರೂ, ಇಂಥದ್ದೊಂದು ತೀವ್ರ ಸ್ವರೂಪದ ಪದ ಬಳಸಿ ಟೀಕೆ ಮಾಡಿದ್ದು ಇದೇ ಮೊದಲು.
ಇದನ್ನೂ ಓದಿ: ಸಹಾಯ ಮಾಡಿ: ಅಮೆರಿಕಕ್ಕೆ ಜೆಲೆನ್‌ಸ್ಕಿ ಮೊರೆ, 9/11 ದಾಳಿ ಉಲ್ಲೇಖ!
ಬೈಡೆನ್ ಹೇಳಿಕೆ ಬಗ್ಗೆ ತಿರುಗೇಟು ನೀಡಿರುವ ರಷ್ಯಾ, ‘ತಮ್ಮ ಬಾಂಬ್‌ಗಳಿಂದ ವಿಶ್ವದಾದ್ಯಂತ ಸಾವಿರಾರು ಜನರ ಸಾವಿಗೆ ಕಾರಣವಾದ ದೇಶವೊಂದರ ಅಧ್ಯಕ್ಷರ ಇಂಥ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲಾಗದು. ಇದು ಕ್ಷಮಿಸಲಾಗದ ಮಾತು’ ಎಂದು ಕಿಡಿಕಾರಿದೆ.
ಉಕ್ರೇನ್ ಟೆನಿಸ್ ಆಟಗಾರ ಮೆಡ್ವೆಡೆವ್, ಸ್ಟಕೋವ್‌ಸ್ಕೀ ಸೇನೆಗೆ ಸೇರ್ಪಡೆ: ರಷ್ಯಾ ಉಕ್ರೇನ್ ನಡುವಿನ ಯುದ್ಧ ಮುಂದುವರೆಯುತ್ತಿರುವುದರಿಂದ ಉಕ್ರೇನ್ ಸಾರ್ವಭೌಮತೆಯ ಪರವಾಗಿ ಹೋರಾಟ ನಡೆಸಲು ಖ್ಯಾತ ಟೆನಿಸ್ ಆಟಗಾರರಾದ ಆ್ಯಂಡ್ರಿ ಮೆಡ್ವೆಡೆವ್ ಮತ್ತು ಸೆರ್ಗೀ ಸ್ಟಕೋವ್‌ಸ್ಕೀ ಉಕ್ರೇನ್ ಸೈನ್ಯಕ್ಕೆ ಸೇರ್ಪಡೆಯಾಗಿದ್ದಾರೆ.
ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಮೆಡ್ವೆಡೆವ್ ಜೊತೆಗಿನ ಫೋಟೋ ಹಂಚಿಕೊಂಡಿರುವ ಸ್ಟಕೋವ್‌ಸ್ಕೀ, ‘ವಿಶ್ವದ ಟೆನಿಸ್ ದಂತಕತೆ ಆ್ಯಂಡ್ರಿ ಮೆಡ್ವೆಡೆವ್ ಕೀವ್‌ನಲ್ಲೇ ಇದ್ದಾರೆ ಮತ್ತು ಶತ್ರುಗಳನ್ನು ಎದುರಿಸಲು ಸಿದ್ಧವಾಗಿದ್ದಾರೆ. ಉಕ್ರೇನ್ ರಾಷ್ಟ್ರೀಯ ಟೆನಿಸ್ ತಂಡದ ನಾಯಕ ಸೈನ್ಯಕ್ಕೆ ಸೇರಿರುವುದು ಬಹಳ ಸಂತೋಷವಾಗಿದೆ’ ಎಂದು ಹೇಳಿದ್ದಾರೆ.
ಸ್ಟಕೋವ್‌ಸ್ಕೀ ಕೂಡ ಖ್ಯಾತ ಆಟಗಾರರಾಗಿದ್ದು, 2013ರಲ್ಲಿ ರೋಜರ್ ಫೆಡರರ್‌ರನ್ನು ಸೋಲಿಸಿದ್ದರು. ರಷ್ಯಾ ದಾಳಿಯ ನಂತರ ಉಕ್ರೇನ್ ಸೈನ್ಯವನ್ನು ಸೇರಿಕೊಳ್ಳಲು ಎಲ್ಲಾ ನಾಗರಿಕರಿಗೂ ಅಧ್ಯಕ್ಷ ಜೆæಲೆನ್‌ಸ್ಕಿ ಅವಕಾಶ ನೀಡಿದ್ದರು. ಹಾಗಾಗಿ ಸಾಮಾನ್ಯ ನಾಗರಿಕರ ಜೊತೆಗೆ ಹಲವು ಖ್ಯಾತ ಕ್ರೀಡಾಪಟುಗಳು ಸೈನ್ಯ ಸೇರಿಕೊಂಡು ರಷ್ಯಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ