
ವಾಷಿಂಗ್ಟನ್(ಮಾ.06): ‘ಭಾರತೀಯ ಅಮೆರಿಕನ್ನರು ಅಮೆರಿಕದ ಮೇಲೆ ನಿಯಂತ್ರಣ ಸಾಧಿಸುತ್ತಿದ್ದಾರೆ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಭಾರತೀಯ ಮೂಲದವರು ಅಮೆರಿಕದ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಜೋ ಬೈಡೆನ್ ಅವರ ನಂತರದ ಹುದ್ದೆಯಾದ ಅಮೆರಿಕ ಉಪಾಧ್ಯಕ್ಷ ಹುದ್ದೆಯನ್ನು ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಲಂಕರಿಸಿದ್ದಾರೆ. ಇನ್ನು ಅಧ್ಯಕ್ಷರಾದ ನಂತರ 55 ಭಾರತೀಯ ಅಮೆರಿಕನ್ನರನ್ನು ಉನ್ನತ ಹುದ್ದೆಗಳಿಗೆ ಬೈಡೆನ್ ನೇಮಕ ಮಾಡಿದ್ದರು. ಈ ನಡುವೆ, ಇತ್ತೀಚೆಗೆ ಅಮೆರಿಕ ಬಾಹ್ಯಾಕಾಶ ಸಂಸ್ಥೆ ‘ನಾಸಾ’, ಮಂಗಳ ಗ್ರಹಕ್ಕೆ ರೋವರ್ ಕಳಿಸಿ ವಿಕ್ರಮ ಸಾಧಿಸಿತ್ತು. ಇದರಲ್ಲಿ ಬೆಂಗಳೂರು ಮೂಲದ ವಿಜ್ಞಾನಿ ಡಾ| ಸ್ವಾತಿ ಮೋಹನ್ ಪ್ರಮುಖ ಪಾತ್ರ ವಹಿಸಿದ್ದರು.
ಈ ಹಿನ್ನೆಲೆಯಲ್ಲಿ ಗುರುವಾರ ನಾಸಾ ವಿಜ್ಞಾನಿಗಳ ಜತೆ ಆನ್‌ಲೈನ್‌ನಲ್ಲಿ ಸಂವಾದ ನಡೆಸಿದ ಬೈಡೆನ್, ‘ಭಾರತೀಯ ಅಮೆರಿಕನ್ನರು ನಮ್ಮ ದೇಶದ ಜವಾಬ್ದಾರಿ ಹೊರುತ್ತಿದ್ದಾರೆ. ಡಾ| ಸ್ವಾತಿ ಮೋಹನ್ ಅವರೇ, ನನ್ನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೇ, ನನ್ನ ಭಾಷಣ ಬರಹಗಾರ ವಿನಯ ರೆಡ್ಡಿ ಅವರೇ ಇದೋ ನಿಮಗೆ ಧನ್ಯವಾದಗಳು. ನೀವು ಅದ್ಭುತ’ ಎಂದು ಕೊಂಡಾಡಿದರು.
ಇದಕ್ಕೆ ಉತ್ತರಿಸಿದ ಡಾ| ಸ್ವಾತಿ ಮೋಹನ್, ನಾಸಾದಲ್ಲಿ ತಮ್ಮ ಅನುಭವಗಳನ್ನು ವಿವರಿಸಿ ಧನ್ಯವಾದ ಸಮರ್ಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ