
ವಾಷಿಂಗ್ಟನ್: ರಷ್ಯಾದಿಂದ ಭಾರತ ತೈಲ ಖರೀದಿಯನ್ನು ಪೂರ್ಣ ಪ್ರಮಾಣದಲ್ಲಿ ಸ್ಥಗಿತ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಭಾರತ ಈ ಕುರಿತು ಹೇಳಿಕೆ ನೀಡದೇ ಇದ್ದರೂ ಮೋದಿ ತಮಗೆ ಇಂಥದ್ದೊಂದು ಭರವಸೆ ನೀಡಿದ್ದಾರೆ ಎಂದು ಟ್ರಂಪ್ 6ನೇ ಸಲ ಹೇಳಿದ್ದಾರೆ.
ಮಲೇಷ್ಯಾದಲ್ಲಿ ನಡೆಯಲಿರುವ ಆಸಿಯಾನ್ ಶೃಂಗಕ್ಕೆ ತೆರಳುವ ವೇಳೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನೀವು ಇಂದು ನೋಡಿರಬಹುದು, ಚೀನಾ ರಷ್ಯಾದ ತೈಲ ಖರೀದಿಯನ್ನು ಗಣನೀಯವಾಗಿ ಕಡಿತಗೊಳಿಸುತ್ತಿದೆ ಮತ್ತು ಭಾರತವು ಸಂಪೂರ್ಣವಾಗಿ ನಿಲ್ಲಿಸುತ್ತಿದೆ. ನಾವು ರಷ್ಯಾದ ತೈಲ ಕಂಪನಿಗಳಾದ ರೋಸ್‌ನೆಫ್ಟ್ ಮತ್ತು ಲುಕಾಯ್ಲ್ ಮೇಲೆ ಸಂಪೂರ್ಣ ನಿರ್ಬಂಧ ಹೇರಿದ್ದೇವೆ’ ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಟ್ರಂಪ್ ಇಂಥದ್ದೇ ಹೇಳಿಕೆ ನೀಡಿದಾಗ, ‘ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಗೆ ತಕ್ಕಂತೆ ವ್ಯಾಪಾರ ಮಾಡುತ್ತದೆಯೇ ಹೊರತು, ಯಾರದೇ ಒತ್ತಡಕ್ಕೆ ಮಣಿಯುವುದಿಲ್ಲ’ ಎಂದು ಸ್ಪಷ್ಟಪಡಿಸಿತ್ತು.
ಟ್ರಂಪ್ ಹೇಳಿಕೆಯನ್ನಿಟ್ಟುಕ್ಕೊಂಡು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಿಪಕ್ಷ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ‘ಟ್ರಂಪ್ ಈ ಹಿಂದೆ ಭಾರತ ರಷ್ಯಾದ ತೈಲ ಖರೀದಿಯನ್ನು ಕಡಿಮೆ ಮಾಡಲಿದೆ ಎನ್ನುತ್ತಿದ್ದರು. ಆದರೆ ಈ ಬಾರಿ ಸಂಪೂರ್ಣವಾಗಿ ನಿಲ್ಲಿಸಲಿದೆ ಎಂದಿದ್ದಾರೆ. ಕೌಲಾಲಂಪುರದಲ್ಲಿ ಇಂದು ಮೋದಿಯವರ ಅಪ್ಪುಗೆಯ ತಂತ್ರ ಕಾಣಿಸದಿರುವುದು ಆಶ್ಚರ್ಯವೇನಲ್ಲ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ವ್ಯಂಗ್ಯವಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ