*ಲಂಕಾದಲ್ಲಿ ಕಾಗದ ಸಿಗದೆ ಪರೀಕ್ಷೆ ಮುಂದಕ್ಕೆ, ಪತ್ರಿಕೆ ಸ್ಥಗಿತ!
*ಆರ್ಥಿಕ ಕುಸಿತದ ಮತ್ತಷ್ಟುಕರಾಳ ಮುಖ ಅನಾವರಣ
*ಲಂಕಾಗೆ 40ಸಾವಿರ ಟನ್ ಡೀಸೆಲ್ ನೀಡಿ ನೆರವಾದ ಭಾರತ
ಕೊಲಂಬೋ (ಮಾ. 26): ಕಳೆದ 6-7 ದಶಕಗಳಲ್ಲೇ ಭೀಕರ ಆರ್ಥಿಕತೆ ಕುಸಿತದ ಸಮಸ್ಯೆಗೆ ಸಿಕ್ಕಿಬಿದ್ದಿರುವ ಶ್ರೀಲಂಕಾದಲ್ಲಿ ಇದೀಗ ಮುದ್ರಣ ಕಾಗದದ ಅಭಾವ ಉಂಟಾಗಿದೆ. ಹಣ ಇಲ್ಲದೆ ವಿದೇಶಗಳಿಂದ ಕಾಗದ ಆಮದು ಮಾಡಿಕೊಳ್ಳದ ಕಾರಣ ಶಾಲಾ ಮಕ್ಕಳ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇಷ್ಟೇ ಅಲ್ಲದೆ ಕಾಗದ ಸಿಗದೆ ದಿನಪತ್ರಿಕೆಗಳು ಮುದ್ರಣವನ್ನು ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಅಗತ್ಯ ಪ್ರಮಾಣದ ಪೇಪರ್ ಲಭ್ಯವಿಲ್ಲದ ಕಾರಣ, ಲಂಕಾದ ಎರಡು ಪತ್ರಿಕೆಗಳ ಮುದ್ರಣ ಆವೃತ್ತಿಯನ್ನು ಶುಕ್ರವಾರದಿಂದಲೇ ಸ್ಥಗಿತಗೊಳಿಸಲಾಗಿದೆ.
ಲಂಕಾದ ಪ್ರಮುಖ ಪತ್ರಿಕೆಗಳ ಪೈಕಿ ಒಂದಾದ ‘ದ ಐಲ್ಯಾಂಡ್’ ಇಂಗ್ಲೀಷ್ ಆವೃತ್ತಿ ಮತ್ತು ಅದರ ಸಿಂಹಳೀಯ ಭಾಷೆಯ ಆವೃತ್ತಿಯಾದ ‘ದಿವೈನಾ’ಗಳ ಮುದ್ರಣವನ್ನು ತಕ್ಷಣದಿಂದ ಸ್ಥಗಿತಗೊಳಿಸಲಾಗಿದೆ. ಇವು ಇನ್ನು ಆನ್‌ಲೈನ್ ಮಾದರಿಯಲ್ಲಿ ಮಾತ್ರ ಲಭ್ಯವಿರಲಿವೆ ಎಂದು ಸಂಸ್ಥೆ ಘೋಷಿಸಿದೆ.
ಇದನ್ನೂ ಓದಿ: ಶ್ರೀಲಂಕಾದಲ್ಲಿ ಆರ್ಥಿಕ ಸ್ಥಿತಿ ಭೀಕರ: ತಮಿಳುನಾಡಿನ ರಾಮೇಶ್ವರಂಗೆ 6 ನಿರಾಶ್ರಿತರ ಆಗಮನ!
ದೇಶದಲ್ಲಿ ಹಣದುಬ್ಬರ ಹೆಚ್ಚಾಗಿ, ಲಂಕಾ ರುಪಾಯಿ ಮೌಲ್ಯ ಕುಸಿತದ ಬಳಿಕ ಹಲವು ಪತ್ರಿಕೆಗಳು ತಮ್ಮ ಪುಟಗಳ ಸಂಖ್ಯೆ ಕಡಿತ ಮಾಡಿದ್ದವು. ಆದರೆ ಇದೀಗ ಮುದ್ರಣವನ್ನೇ ಸ್ಥಗಿತ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಪೇಪರ್ ಕೊರತೆ ಕಾರಣ ಸರ್ಕಾರ, ಈಗಾಗಲೇ 30 ಲಕ್ಷ ಮಕ್ಕಳ ಅಂತಿಮ ಪರೀಕ್ಷೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಹೀಗಾಗಿ ಮಕ್ಕಳು ಪರೀಕ್ಷೆಯನ್ನೂ ಬರೆಯಲಾಗದ ಸ್ಥಿತಿ ನಿರ್ಮಾಣವಾಗಿದೆ.
ಭಾರತದ ನೆರವು: ಈ ನಡುವೆ ಲಂಕಾದ ತೈಲ ಕೊರತೆ ನೀಗಲು ಈಗಾಗಲೇ ಸಾಲದ ರೂಪದಲ್ಲಿ ಸರಬರಾಜು ಮಾಡುತ್ತಿರುವ ಡೀಸೆಲ್ ಜೊತೆಗೆ ಹೆಚ್ಚುವರಿಯಾಗಿ 40000 ಟನ್‌ನಷ್ಟುಡೀಸೆಲ್ ಪೂರೈಕೆ ಮಾಡಲು ಭಾರತ ಒಪ್ಪಿಕೊಂಡಿದೆ. ಉಕ್ರೇನ್ ರಷ್ಯಾ ಯುದ್ಧದಿಂದಾಗಿ ಜಾಗತಿಕವಾಗಿ ಇಂಧನ ಪೂರೈಕೆಯಲ್ಲಿ ಕೊರತೆ ಉಂಟಾಗಿದ್ದರು ಹೆಚ್ಚುವರಿ ಡೀಸೆಲ್ ಪೂರೈಸಲು ಭಾರತ ಒಪ್ಪಿಕೊಂಡಿದೆ. ಆರ್ಥಿಕತೆ ಕುಸಿದಿರುವುದರಿಂದ ಶ್ರೀಲಂಕಾದಲ್ಲಿ ಕೆಲವು ವಾರಗಳಿಂದ ಡೀಸೆಲ್ ಕೊರತೆ ಹೆಚ್ಚಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: ಲಂಕಾದಲ್ಲಿ ಬಂಕ್, ಎಲ್‌ಪಿಜಿ ಮಳಿಗೆಗಳಿಗೆ ಸೇನೆ ಭದ್ರತೆ!
ಭಾರತಕ್ಕೆ ವಲಸೆ: ಲಂಕಾದಲ್ಲಿ ಜೀವನ ಮಾಡುವುದು ದಿನೇ ದಿನೇ ದುಸ್ತರವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಕೆಲ ದಿನಗಳಲ್ಲಿ 2000-4000 ನಿರಾಶ್ರಿತರು ತಮಿಳುನಾಡು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಭಾರತಕ್ಕೆ ಅಕ್ರಮವಾಗಿ ವಲಸೆ ಬರುವಾಗಿ ಪ್ರತಿಯೊಬ್ಬರು 50000 ರು.ವರೆಗೂ ಬೋಟ್ ಮಾಲೀಕರಿಗೆ ಹಣ ನೀಡುತ್ತಿರುವ ವಿಷಯ ಎರಡು ದಿನಗಳ ಹಿಂದಷ್ಟೇ ಬೆಳಕಿಗೆ ಬಂದಿತ್ತು.
ಏಕೆ ಆರ್ಥಿಕ ಬಿಕ್ಕಟ್ಟು?: ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ದೇಶದ ಪ್ರವಾಸೋದ್ಯಮ ಸ್ಥಗಿತಗೊಂಡು ಸಾಕಷ್ಟನಷ್ಟಉಂಟಾಗಿದೆ. ಈ ನಡುವೆ ದೇಶದ ರುಪಾಯಿ ಮೌಲ್ಯ ಕುಸಿತ ಕಂಡಿದೆ. ವಿದೇಶಗಳಲ್ಲಿರುವ ಶ್ರೀಲಂಕಾ ಪ್ರಜೆಗಳು ನೀಡುವ ಹಣದ ಪ್ರಮಾಣವೂ ಕುಸಿದಿದೆ. ಹೀಗಾಗಿ ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ತಲೆದೋರಿದೆ.
ತೈಲ ಖರೀದಿಗೆ ಸರದಿ ನಿಂತ ವೇಳೆ ಲಂಕಾದಲ್ಲಿ ಇಬ್ಬರು ನಾಗರಿಕರ ಸಾವು: ಕೊಲಂಬೊ: ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಮುಗ್ಗಟ್ಟಿನ ಪರಿಣಾಮವಾಗಿ ಹಣದುಬ್ಬರದಲ್ಲಿ ಭಾರೀ ಏರಿಕೆಯಾಗಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ ಪರಿಣಾಮ ಪೆಟ್ರೋಲ್ ಪಡೆಯಲು ಸರತಿಯಲ್ಲಿ ಂತಿದ್ದ ಇಬ್ಬರು ಪುರುಷರು ಕುಸಿದುಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಪ್ಪತ್ತು ವರ್ಷದ ಇಬ್ಬರು ಪುರುಷರು ಎರಡು ಬೇರೆ ಬೇರೆ ಪಟ್ಟಣಗಳಲ್ಲಿ ಸಾವನ್ನಪ್ಪಿದ್ದು ಒಬ್ಬರು ಪೆಟ್ರೋಲ್‌ಗಾಗಿ ಸರತಿ ಸಾಲಿನಲ್ಲಿ ನಿಂತಾಗ ಕುಸಿದುಬಿದ್ದು ಸಾವನ್ನಪ್ಪಿದ್ದರೆ, ಇನ್ನೊಬ್ಬರು ಸೀಮೆಎಣ್ಣೆಗಾಗಿ ಸಾಲಿನಲ್ಲಿ ನಿಂತಿದ್ದ ವೇಳೆ ಸಾವನ್ನಪ್ಪಿದ್ದಾರೆ. ಇಬ್ಬರೂ ಇಂಧನಕ್ಕಾಗಿ ಸುಮಾರು 4 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀಲಂಕಾದ ಪೆಟ್ರೋಲಿಯಂ ಘಟಕ ತನ್ನ ಕಾರ್ಯಚರಣೆಯನ್ನು ನಿಲ್ಲಿಸಿದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಜನರು ಇಂಧನವನ್ನು ಪಡೆದುಕೊಳ್ಳಲು ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಗಿದೆ.