ಚೀನಿ ಲ್ಯಾಪ್‌ಟಾಪ್, ಕ್ಯಾಮೆರಾ, ಬಟ್ಟೆಗೆ ಆಮದು ಸುಂಕ ಬರೆ?| ಆಮದಿಗೆ ಕಡಿವಾಣ ಹೇರಲು ಕೇಂದ್ರ ಚಿಂತನೆ
ನವದೆಹಲಿ(ಆ.12): ಗಲ್ವಾನ್ ಕ್ಯಾತೆಯ ಬಳಿಕ ಚೀನಾಕ್ಕೆ ಸರಣಿಯಾಗಿ ಆರ್ಥಿಕ ಪೆಟ್ಟು ನೀಡುತ್ತಿರುವ ಭಾರತ, ಇದೀಗ ಚೀನಾದಿಂದ ಭಾರೀ ಪ್ರಮಾಣದಲ್ಲಿ ಆಮದಾಗುವ ಕೆಲ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕ ಹೇರುವ ಮೂಲಕ ಪರೋಕ್ಷವಾಗಿ ಆಮದಿಗೆ ಕಡಿವಾಣ ಹಾಕುವ ಬಗ್ಗೆ ಚಿಂತನೆಯಲ್ಲಿದೆ.
ಲ್ಯಾಪ್‌ಟಾಪ್, ಕ್ಯಾಮೆರಾ, ಜವಳಿ, ಅಲ್ಯುಮಿನಿಯಂ ಸೇರಿದಂತೆ ಅಂದಾಜು 20 ಉತ್ಪನ್ನಗಳ ಮೇಲಿನ ಆಮದು ಸುಂಕ ಹೆಚ್ಚಿಸುವ ಮತ್ತು ಕೆಲ ಉಕ್ಕಿನ ಉತ್ಪನ್ನಗಳನ್ನು ಆಮದು ನಿಯಂತ್ರಣ ಪಟ್ಟಿಗೆ ಸೇರಿಸುವ ಪ್ರಸ್ತಾಪವೊಂದನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಸಿದ್ಧಪಡಿಸಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದೆ. ಹಿಂದೆ ಇಂಥ ಪ್ರಸ್ತಾಪ ತಿರಸ್ಕರಿಸಿದ್ದ ಹಣಕಾಸು ಸಚಿವಾಲಯ ಇದೀಗ ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
undefined
ಸುಂಕ ಏರಿಕೆಯ ಈ ಪ್ರಸ್ತಾಪವು ಕೇವಲ ಚೀನಾಕ್ಕೆ ಮಾತ್ರ ಸೀಮಿತವಾಗಿಲ್ಲವಾದರೂ, ಈ ಉತ್ಪನ್ನಗಳು ಹೆಚ್ಚಾಗಿ ಚೀನಾದಿಂದಲೇ ಆಗುವ ಕಾರಣ, ನಿಷೇಧದ ಪರಿಣಾಮ ಚೀನಾಕ್ಕೆ ಆಗುವ ಸಾಧ್ಯತೆ ಹೆಚ್ಚು ಎಂದು ಮೂಲಗಳು ತಿಳಿಸಿವೆ.
ಚೀನಾದಿಂದ ಉತ್ಪನ್ನ ಆಮದಿಗೆ ತಡೆ ಹೇರಿದರೆ, ಅಂಥ ಉತ್ಪನ್ನಗಳು ಆಮದು ದುಬಾರಿಯಾದರೂ ಕೂಡ ಚೀನಾದೊಂದಿಗೆ ವ್ಯವಹಾರ ನಡೆಸುವುದು ನಮಗೆ ಬೇಕಿಲ್ಲ. ಮೇಲಾಗಿ ಸರ್ಕಾರ ದೇಶೀಯವಾಗಿಯೇ ಇಂಥ ಉತ್ಪನ್ನಗಳ ತಯಾರಿಕೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಕಾರಣ ಸುಂಕ ಏರಿಕೆ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.