ಆಕ್ಸ್‌ಫರ್ಡ್‌ ಲಸಿಕೆಗೆ ಬ್ರಿಟನ್‌ ಒಪ್ಪಿಗೆ: ಸಂಗ್ರಹಕ್ಕೆ ಮೈನಸ್‌ 70 ಡಿಗ್ರಿ ಬೇಕಿಲ್ಲ, ಬೆಲೆಯೂ ಅಗ್ಗ!

By Suvarna News  |  First Published Dec 31, 2020, 9:28 AM IST

ಆಕ್ಸ್‌ಫರ್ಡ್‌ ಲಸಿಕೆಗೆ ಬ್ರಿಟನ್‌ ಒಪ್ಪಿಗೆ| ಜ.4ರಿಂದ ಲಸಿಕೆ ವಿತರಣೆ ಆರಂಭ| ಕೆಲ ದಿನಗಳಲ್ಲೇ ಭಾರತದಿಂದಲೂ ಅನುಮತಿ?| ಸಂಗ್ರಹಕ್ಕೆ ಮೈನಸ್‌ 70 ಡಿಗ್ರಿ ಬೇಕಿಲ್ಲ| ಬೆಲೆಯೂ ಅಗ್ಗ| ಭಾರತ ಅಪಾರ ನಿರೀಕ್ಷೆ


ಲಂಡನ್‌(ಡಿ.31): ಕೊರೋನಾ ಹೊಸ ಮಾದರಿಯಿಂದ ತತ್ತರಿಸಿರುವ ಬ್ರಿಟನ್‌ ಸರ್ಕಾರ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಲಸಿಕೆಯ ಮಾನವ ಬಳಕೆಗೆ ಬುಧವಾರ ಒಪ್ಪಿಗೆ ನೀಡಿದೆ. ಜ.4ರಿಂದಲೇ ಬ್ರಿಟನ್‌ನಲ್ಲಿ ಈ ಲಸಿಕೆಯ ವಿತರಣೆ ಆರಂಭವಾಗಲಿದೆ. ಭಾರತ ಕೂಡ ಈ ಲಸಿಕೆಯ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದೆ. ಇದೀಗ ಆಕ್ಸ್‌ಫರ್ಡ್‌ ಲಸಿಕೆಗೆ ಬ್ರಿಟನ್‌ ಅನುಮತಿ ಕೊಟ್ಟಿರುವ ಹಿನ್ನೆಲೆಯಲ್ಲಿ ಕೆಲವೇ ದಿನಗಳಲ್ಲಿ ಭಾರತ ಕೂಡ ಈ ಲಸಿಕೆಯ ಮಾನವ ಬಳಕೆಗೆ ಹಸಿರು ನಿಶಾನೆ ತೋರುವ ಸಾಧ್ಯತೆ ಹೆಚ್ಚಾಗಿದೆ.

ಬ್ರಿಟನ್‌ನಲ್ಲಿ ಈಗಾಗಲೇ ಅಮೆರಿಕದ ಫೈಝರ್‌-ಬಯೋಎನ್‌ಟೆಕ್‌ ಕಂಪನಿಯ ಲಸಿಕೆಯನ್ನು ಜನರಿಗೆ ನೀಡಲಾಗುತ್ತಿದೆ. ಇದೀಗ ಸ್ವದೇಶಿ ಲಸಿಕೆಯಾದ ಆಕ್ಸ್‌ಫರ್ಡ್‌ ಲಸಿಕೆಗೆ ಔಷಧ ಮತ್ತು ಆರೋಗ್ಯ ಸೇವೆ ಉತ್ಪನ್ನಗಳ ನಿಯಂತ್ರಣ ಪ್ರಾಧಿಕಾರ (ಎಂಎಚ್‌ಆರ್‌ಎ) ಒಪ್ಪಿಗೆ ನೀಡುವುದರೊಂದಿಗೆ ಬ್ರಿಟನ್‌ಗೆ ಎರಡು ಕೊರೋನಾ ಲಸಿಕೆಗಳು ಸಿಕ್ಕಂತಾಗಿದೆ.

Tap to resize

Latest Videos

ಆಕ್ಸ್‌ಫರ್ಡ್‌ ಯುನಿವರ್ಸಿಟಿಯ ವಿಜ್ಞಾನಿಗಳು ಹಾಗೂ ಆಸ್ಟ್ರಾಜೆನೆಕಾ ಔಷಧ ಕಂಪನಿ ಜಂಟಿಯಾಗಿ ಛಡಾಕ್ಸ್‌1 ಹೆಸರಿನ ಈ ಲಸಿಕೆ ಅಭಿವೃದ್ಧಿಪಡಿಸಿದ್ದಾರೆ. ಇದು ಆಕ್ಸ್‌ಫರ್ಡ್‌ ಲಸಿಕೆಯೆಂದೇ ಪ್ರಸಿದ್ಧಿ ಪಡೆದಿದ್ದು, ಭಾರತದಲ್ಲಿ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಕೋವಿಶೀಲ್ಡ್‌ ಹೆಸರಿನಲ್ಲಿ ಈ ಲಸಿಕೆಯನ್ನು ವಿತರಿಸುವ ಹಕ್ಕು ಪಡೆದಿದೆ. ಭಾರತದಲ್ಲಿನ್ನೂ ಈ ಲಸಿಕೆಗೆ ಒಪ್ಪಿಗೆ ದೊರೆತಿಲ್ಲವಾದರೂ ಸೀರಂ ಸಂಸ್ಥೆ ಈಗಾಗಲೇ ಈ ಲಸಿಕೆಯ 5 ಕೋಟಿ ಡೋಸ್‌ ತಯಾರಿಸಿಟ್ಟಿದೆ.

10 ಕೋಟಿ ಡೋಸ್‌ ಗುರಿ:

ಜ.4ರಿಂದ ಬ್ರಿಟನ್ನಿನಲ್ಲಿ ಆಕ್ಸ್‌ಫರ್ಡ್‌ ಲಸಿಕೆಯನ್ನು ಜನರಿಗೆ ನೀಡುವ ಅಭಿಯಾನ ಆರಂಭವಾಗಲಿದೆ. ಮಾಚ್‌ರ್‍ ಅಂತ್ಯದೊಳಗೆ 10 ಕೋಟಿ ಡೋಸ್‌ ಲಸಿಕೆ ತಯಾರಿಸಿ ಜನರಿಗೆ ವಿತರಿಸುವ ಗುರಿಯನ್ನು ಬ್ರಿಟನ್ನಿನ ಆರೋಗ್ಯ ಸೇವೆ (ಎನ್‌ಎಚ್‌ಎಸ್‌) ಹೊಂದಿದೆ. ಈ ಲಸಿಕೆಯ ಮೊದಲ ಡೋಸ್‌ ನೀಡಿದ ಮೇಲೆ 12 ವಾರದೊಳಗೆ ಎರಡನೇ ಡೋಸ್‌ ನೀಡಬೇಕಾಗುತ್ತದೆ. ಆಗ ಮನುಷ್ಯನ ದೇಹದಲ್ಲಿ ಕೊರೋನಾ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ.

ಪೈಝರ್‌ಗಿಂತ ಅಗ್ಗ, ಸುಲಭ:

ಆಕ್ಸ್‌ಫರ್ಡ್‌ ಲಸಿಕೆಯು ಅಮೆರಿಕದ ಫೈಝರ್‌ ಲಸಿಕೆಗಿಂತ ಸಾಕಷ್ಟುಅಗ್ಗದ ದರಕ್ಕೆ ಲಭಿಸುವ ಹಾಗೂ ಸುಲಭವಾಗಿ ವಿತರಿಸಬಹುದಾದ ಲಸಿಕೆಯಾಗಿದೆ. ಫೈಝರ್‌ ಲಸಿಕೆಯನ್ನು ಶೇಖರಿಸಲು ಅಗತ್ಯವಿರುವಷ್ಟುಕಡಿಮೆ ಉಷ್ಣಾಂಶ ಈ ಲಸಿಕೆಗೆ ಅಗತ್ಯವಿಲ್ಲ. ಈ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವುದು ಕೂಡ ಸುಲಭ ಎಂದು ತಜ್ಞರು ಹೇಳಿದ್ದಾರೆ.

ಇದು ನಿಜಕ್ಕೂ ಅದ್ಭುತ ಸುದ್ದಿ. ಬ್ರಿಟನ್ನಿನ ವಿಜ್ಞಾನಕ್ಕೆ ಸಂದ ಜಯ. ನಮ್ಮದೇ ಕೊರೋನಾ ಲಸಿಕೆಗೀಗ ಒಪ್ಪಿಗೆ ದೊರೆತಿದೆ. ನಾವೀಗ ಎಷ್ಟುಸಾಧ್ಯವೋ ಅಷ್ಟುಬೇಗ ಜನರಿಗೆ ಲಸಿಕೆ ವಿತರಿಸುತ್ತೇವೆ.

- ಬೋರಿಸ್‌ ಜಾನ್ಸನ್‌, ಬ್ರಿಟನ್‌ ಪ್ರಧಾನಿ

ಇಲ್ಲಿಯವರೆಗೆ ಒಪ್ಪಿಗೆ ಸಿಕ್ಕ ಪ್ರಮುಖ ಕೊರೋನಾ ಲಸಿಕೆಗಳು

- ಫೈಝರ್‌-ಬಯೋಎನ್‌ಟೆಕ್‌ (ಅಮೆರಿಕ)

- ಮಾಡೆರ್ನಾ (ಅಮೆರಿಕ)

- ಸ್ಪುಟ್ನಿಕ್‌-5 (ರಷ್ಯಾ)

- ಚೀನಾ ಲಸಿಕೆ (ಹೆಚ್ಚಿನ ಮಾಹಿತಿಯಿಲ್ಲ)

- ಆಕ್ಸ್‌ಫರ್ಡ್‌ (ಬ್ರಿಟನ್‌)

ಸಾಮಾನ್ಯ ಫ್ರಿಜ್‌ನಲ್ಲೇ ಇಡಬಹುದು

ಅಮೆರಿಕದ ಫೈಝರ್‌ ಕಂಪನಿಯ ಲಸಿಕೆಯನ್ನು ಮೈನಸ್‌ 70 ಡಿಗ್ರಿ ತಾಪಮಾನದಲ್ಲಿ ಸಂಗ್ರಹಿಸಿಡಬೇಕು ಎಂಬ ಅಂಶ ಆ ಲಸಿಕೆ ವಿತರಿಸಲು ಬಹುದೊಡ್ಡ ತೊಡಕಾಗಿದೆ. ಆದರೆ ಆಕ್ಸ್‌ಫರ್ಡ್‌ ವಿವಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ, ಆಸ್ಟ್ರಾಜೆನೆಕಾ ಕಂಪನಿ ಉತ್ಪಾದಿಸಿರುವ ಲಸಿಕೆಗೆ 2ರಿಂದ 8 ಡಿಗ್ರಿ ತಾಪಮಾನ ಸಾಕು. ಇದರರ್ಥ ಸಾಮಾನ್ಯ ರೆಫ್ರಿಜರೇಟರ್‌ನಲ್ಲೂ ಇದನ್ನು ಆರು ತಿಂಗಳ ಕಾಲ ಸಂಗ್ರಹಿಸಿಡಬಹುದು. ಹೀಗಾಗಿ ಇದನ್ನು ಎಲ್ಲಿಗೆ ಬೇಕಾದರೂ ಸುಲಭವಾಗಿ ಸಾಗಿಸಬಹುದಾಗಿದೆ. ಫೈಝರ್‌, ಮಾಡೆರ್ನಾ ಲಸಿಕೆಗೆ ಹೋಲಿಸಿದರೆ ಬೆಲೆಯೂ ಕಡಿಮೆ ಇದೆ. ಆದ ಕಾರಣ ಈ ಲಸಿಕೆಯ ಮೇಲೆ ಭಾರತವೂ ಅಪಾರ ನಿರೀಕ್ಷೆ ಹೊಂದಿದೆ.

ಆಕ್ಸ್‌ಫರ್ಡ್‌ ಲಸಿಕೆಯಲ್ಲಿ ಏನಿದೆ?

ಚಿಂಪಾಂಜಿಗಳಲ್ಲಿ ಸಾಮಾನ್ಯ ನೆಗಡಿಗೆ ಕಾರಣವಾಗುವ ಎಡೆನೋವೈರಸ್‌ನ ದುರ್ಬಲ ಅವತರಣಿಕೆಯಾದ ಛಡಾಕ್ಸ್‌1 ಎಂಬ ವೈರಸ್‌ನಿಂದ ಈ ಲಸಿಕೆ ತಯಾರಿಸಲಾಗಿದೆ. ಈ ವೈರಸ್ಸಿನ ವಂಶವಾಹಿನಿಯನ್ನು ಬದಲಾಯಿಸಲಾಗಿದ್ದು, ಇದು ಮನುಷ್ಯನ ದೇಹದಲ್ಲಿ ತನ್ನ ಸಂಖ್ಯೆಯನ್ನು ವೃದ್ಧಿಸಿಕೊಳ್ಳುವುದಿಲ್ಲ. ಬದಲಿಗೆ ಕೊರೋನಾ ವೈರಸ್‌ ನಮ್ಮ ದೇಹದೊಳಗೆ ಪ್ರವೇಶಿಸಿದರೆ ಅದರಲ್ಲಿನ ಸ್ಪೈಕ್‌ ಪ್ರೋಟೀನ್‌ ಕೋಶಗಳನ್ನು ನಾಶಪಡಿಸುವ ಶಕ್ತಿ ನಮ್ಮ ದೇಹದಲ್ಲಿ ಉತ್ಪಾದನೆಯಾಗುವಂತೆ ಮಾಡುತ್ತದೆ.

click me!