
ಮನಿಲಾ(ಜ.16): ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ಫಿಲಿಪ್ಪೀನ್ಸ್ ಸರ್ಕಾರ ನಿರ್ಧರಿಸಿದೆ. ಅಂದಾಜು 2800 ಕೋಟಿ ರು. ವೆಚ್ಚದಲ್ಲಿ ಯುದ್ಧ ನೌಕೆಗಳ ಮೇಲೆ ದಾಳಿ ನಡೆಸಬಲ್ಲ ನೌಕಾ ಮಾದರಿಯ 3 ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆ ಖರೀದಿಗೆ ಸರ್ಕಾರ ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.
ಒಪ್ಪಂದ ಜಾರಿಗೊಂಡಲ್ಲಿ, ಬ್ರಹ್ಮೋಸ್ ಏರೋಸ್ಪೇಷ್ ಪ್ರೈ.ಲಿ. ಯಾವುದೇ ದೇಶವೊಂದರಿಂದ ಕ್ಷಿಪಣಿ ವ್ಯವಸ್ಥೆ ಪೂರೈಕೆಗೆ ಮಾಡಿಕೊಂಡ ದೊಡ್ಡ ಒಪ್ಪಂದ ಎನ್ನಿಸಿಕೊಳ್ಳಲಿದೆ.
ಹಾಲಿ ಫಿಲಿಪ್ಪೀನ್ಸ್ ಬಳಿ, 2ನೇ ವಿಶ್ವ ಮಹಾಯುದ್ಧದ ವೇಳೆ ಅಮೆರಿಕ ಬಳಸಿದ ಯುದ್ಧ ನೌಕೆಗಳು ಮತ್ತು ಶಸ್ತ್ರಾಸ್ತ್ರಗಳಿಗೆ. ಅದನ್ನು ಅಧುನೀಕರಗೊಳಿಸಲು ಸರ್ಕಾರ ನಿರ್ಧರಿಸಿದ್ದು ಅದರಂತೆ ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚೀನಾ ಜೊತೆಗೆ ಫಿಲಿಪ್ಪೀನ್ಸ್ ಉತ್ತಮ ಸಂಬಂಧ ಹೊಂದಿದ್ದರೂ, ದಕ್ಷಿಣ ಸಮುದ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಚೀನಾ ಜೊತೆ ಭಿನ್ನಾಭಿಪ್ರಾಯ ಹೊಂದಿದೆ. ಅದರ ಬೆನ್ನಲ್ಲೇ ಸರ್ಕಾರ ಕ್ಷಿಪಣಿ ಖರೀದಿಗೆ ಮುಂದಾಗಿದೆ. ಬ್ರಹ್ಮೋಸ್ ಕ್ಷಿಪಣಿಗಳು ಫಿಲಿಪ್ಪೀನ್ಸ್‌ನ 200 ನಾಟಿಕಲ್ ಮೈಲು ವ್ಯಾಪ್ತಿಯ ಆರ್ಥಿಕ ವಲಯವನ್ನು ಯಾವುದೇ ನೌಕೆಗಳ ದಾಳಿಯಿಂದ ರಕ್ಷಿಸಬಲ್ಲ ಸಾಮರ್ಥ್ಯ ಹೊಂದಿವೆ.
ನೌಕಾ ಮಾದರಿ ಬ್ರಹ್ಮೋಸ್ ಕ್ಷಿಪಣಿ ಉಡಾವಣೆ ಯಶಸ್ವಿ
ಅತ್ಯಾಧುನಿಕ ಸೂಪರ್‌ಸಾನಿಕ್ ಬ್ರಹ್ಮೋಸ್ ನೌಕಾ ಮಾದರಿಯ ಕ್ಷಿಪಣಿ ಪರೀಕ್ಷೆಯನ್ನು ಮಂಗಳವಾರ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಇದನ್ನು ಐಎನ್‌ಎಸ್ ವಿಶಾಖಪಟ್ಟಣದದಿಂದ ಪರೀಕ್ಷಿಸಲಾಗಿದೆ. ಕ್ಷಿಪಣಿಯು ತನ್ನ ಗುರಿಯನ್ನು ನಿಖರವಾಗಿ ತಲುಪಿದೆ ಎಂದು ಡಿಆರ್‌ಡಿಒ ತಿಳಿಸಿದೆ.
ಕ್ಷಿಪಣಿಯ ಯಶಸ್ವಿ ಉಡಾವಣೆಯು ಭಾರತೀಯ ನೌಕಾಪಡೆಯ ಸನ್ನದ್ಧ ಸ್ಥಿತಿಯನ್ನು ಮತ್ತೊಮ್ಮೆ ದೃಢಪಡಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದು, ಭಾರತೀಯ ನೌಕಾಪಡೆಗೆ ಅಭಿನಂದನೆ ತಿಳಿಸಿದ್ದಾರೆ. ಭಾರತ ಮತ್ತು ರಷ್ಯಾ ಜಂಟಿ ಸಹಭಾಗಿತ್ವದಲ್ಲಿ ಈ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯನ್ನು ತಯಾರಿಸುತ್ತಿವೆ. ಈ ಕ್ಷಿಪಣಿಗಳು ಶಬ್ಧಕ್ಕಿಂತ 3 ಪಟ್ಟು ಹೆಚ್ಚು ವೇಗವಾಗಿ ಹಾರಬಲ್ಲ ಸಾಮರ್ಥ್ಯ ಹೊಂದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ