Boris Johnson: ಬ್ರಿಟನ್‌ ಪ್ರಧಾನಿಯ ಗುಂಡು ಪುರಾಣ: ಬಯಲಾದದ್ದು ಹೇಗೆ?

By Kannadaprabha NewsFirst Published Jan 16, 2022, 2:00 AM IST
Highlights

2019ರಲ್ಲಿ ಭಾರೀ ಬಹುಮತದೊಂದಿಗೆ ಬ್ರಿಟನ್‌ ಪ್ರಧಾನಿ ಹುದ್ದೆ ಏರಿದ್ದ ಬೋರಿಸ್‌ ಜಾನ್ಸನ್‌ ವಿವಾದಗಳಿಂದ ಸುದ್ದಿಯಾಗುತ್ತಿದ್ದಾರೆ. ಅವುಗಳ ಪೈಕಿ ಇತ್ತೀಚಿನದು ‘ಗುಂಡು ಪಾರ್ಟಿ’ ವಿವಾದ. 2020ರ ಈ ಪ್ರಕರಣ ಈಗ ಬಯಲಾದದ್ದು ಹೇಗೆ?

ಲಂಡನ್‌ (ಜ. 16): 2019ರಲ್ಲಿ ಭಾರೀ ಬಹುಮತದೊಂದಿಗೆ ಬ್ರಿಟನ್‌ ಪ್ರಧಾನಿ ಹುದ್ದೆ ಏರಿದ್ದ ಬೋರಿಸ್‌ ಜಾನ್ಸನ್‌ (Boris Johnson) ವಿವಾದಗಳಿಂದ (Controversy) ಸುದ್ದಿಯಾಗುತ್ತಿದ್ದಾರೆ. ಅವುಗಳ ಪೈಕಿ ಇತ್ತೀಚಿನದು ‘ಗುಂಡು ಪಾರ್ಟಿ’ (Alcohol Fuelled Party) ವಿವಾದ. 2020ರ ಈ ಪ್ರಕರಣ ಈಗ ಬಯಲಾದದ್ದು ಹೇಗೆ? ವಿವಾದ ಯಾಕಾಯ್ದು? ಜನ ಯಾಕೆ ಕ್ರುದ್ಧರಾದರು? ಕ್ಷಮೆ ಕೇಳಿದರೂ ರಾಜೀನಾಮೆಗೆ ಆಗ್ರಹ ವ್ಯಾಪಕವಾಗಲು ಏನು ಕಾರಣ? ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಏನಿದು ಗುಂಡು ಪುರಾಣ?: 2020ರಲ್ಲಿ ಕೊರೋನಾ (Coronavirus) ಮೊದಲನೇ ಅಲೆಗೆ ಇಡೀ ಜಗತ್ತೇ ತತ್ತರಿಸುತ್ತಿತ್ತು. ಆಗ ಬ್ರಿಟನ್‌ನಲ್ಲಿ ಬಿಗಿ ಲಾಕ್‌ಡೌನ್‌ (Lockdown) ಜಾರಿ ಮಾಡಲಾಗಿತ್ತು. ದುರಿತ ಕಾಲದಲ್ಲಿ ಪ್ರಧಾನಿ ಕಚೇರಿ ಪಾನಗೋಷ್ಠಿ ಆಯೋಜಿಸಿತ್ತು. ಪ್ರಧಾನಿಗಳ ಅಧಿಕೃತ ನಿವಾಸ ಡೌನಿಂಗ್‌ ಸ್ಟ್ರೀಟ್‌ನ ಉದ್ಯಾನದಲ್ಲಿ ಆಯೋಜಿಸಲಾಗಿದ್ದ ಮದ್ಯದ ಪಾರ್ಟಿಗೆ 100ಕ್ಕೂ ಹೆಚ್ಚು ಅಧಿಕಾರಿಗಳನ್ನು ಇ-ಮೇಲ್‌ ಮೂಲಕ ಆಹ್ವಾನಿಸಲಾಗಿತ್ತು. ಇದು ಇತ್ತೀಚೆಗೆ ಬಯಲಾಗಿ ಭಾರೀ ವಿವಾದ ಭುಗಿಲೆದ್ದಿದೆ.

ನಿಮ್ಮ ಮದ್ಯ, ನೀವೇ ತನ್ನಿ!: ಪ್ರಧಾನಿಯ ಖಾಸಗಿ ಕಾರ‍್ಯದರ್ಶಿ ಇ-ಮೇಲ್‌ ಮೂಲಕ ಆಹ್ವಾನ ಕಳುಹಿಸಿದ್ದರು. ‘ತೀರಾ ಬಿಡುವಿಲ್ಲದ ಅವಧಿಯ ನಂತರ ಸುಂದರವಾದ ವಾತಾವರಣದಲ್ಲಿ ಕುಳಿತು ಸಂಜೆ ಕಳೆಯಲು ನಂ.10 ಉದ್ಯಾನದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮದ್ಯ ಸೇವಿಸುವುದು ಒಳ್ಳೆಯದು ಎಂದು ನಾವು ಭಾವಿಸಿದ್ದೇವೆ. ದಯವಿಟ್ಟು ಸಂಜೆ 6 ಗಂಟೆಯಿಂದ ನಮ್ಮೊಂದಿಗೆ ಸೇರಿ. ನಿಮ್ಮ ಮದ್ಯವನ್ನು ನೀವೇ ತನ್ನಿ’ ಎಂದು ತಿಳಿಸಲಾಗಿತ್ತು. ಮೇ 20, 2020ರಂದು ನಡೆದ ಪಾರ್ಟಿಯಲ್ಲಿ ಸ್ವತಃ ಬೋರಿಸ್‌ ಜಾನ್ಸನ್‌ ಮತ್ತು ಅವರ ಪತ್ನಿ ಕ್ಯಾರಿ ಸೇರಿ ಸುಮಾರು 40 ಸಿಬ್ಬಂದಿ ಭಾಗಿಯಾಗಿದ್ದರು.

ಜಾನ್ಸನ್‌ಗೆ ಕಂಟಕವಾದ ಗುಂಡು ಪಾರ್ಟಿ, ಬ್ರಿಟನ್‌ ಪ್ರಧಾನಿ ರೇಸಲ್ಲಿ ಇನ್ಫಿ ಮೂರ್ತಿ ಅಳಿಯ ರಿಷಿ!

ಪ್ರಕರಣ ಬಯಲಾದದ್ದು ಹೇಗೆ?: ಬೋರಿಸ್‌ ಅವರು ವಜಾಗೊಳಿಸಿದ್ದ ಮಾಜಿ ಮುಖ್ಯ ಸಲಹೆಗಾರ ಡೊಮಿನಿಕ್‌ ಕಮ್ಮಿಂಗ್ಸ್‌ ಮೇ 2020ರಲ್ಲಿ ಡೌನಿಂಗ್‌ ಸ್ಟ್ರೀಟ್‌ ಗಾರ್ಡನ್‌ನಲ್ಲಿ ಮದ್ಯ ಪಾರ್ಟಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಬ್ರಿಟನ್ನಿನ ಐಟಿವಿ ಎಂಬ ಮಾಧ್ಯಮ ಡೌನಿಂಗ್‌ ಸ್ಟ್ರೀಟ್‌ನಿಂದ ರವಾನೆಯಾದ ಪಾರ್ಟಿಗೆ ಆಹ್ವಾನ ನೀಡಿದ್ದ ಇ-ಮೇಲ್‌ ಅನ್ನು ಬಹಿರಂಗಗೊಳಿಸಿದೆ.

ಯಾಕಿಷ್ಟು ವಿವಾದ?: ಪಾರ್ಟಿ ಆಯೋಜಿಸಿದ್ದ ವೇಳೆ ಬ್ರಿಟನ್ನಿನಲ್ಲಿ ಬಿಗಿ ಲಾಕ್‌ಡೌನ್‌ ಇತ್ತು. ಜನರ ಓಡಾಟಕ್ಕೆ ನಿರ್ಬಂಧ ಇತ್ತು. ಶಾಲೆ, ಪಬ್‌, ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿತ್ತು. ಮನೆಯಲ್ಲಿ ಇಬ್ಬರಿಗಿಂತ ಹೆಚ್ಚು ಜನ ಸೇರುವಂತಿಲ್ಲ. ಸಾರ್ವಜನಿಕವಾಗಿ ಒಬ್ಬರಿಗಿಂತ ಹೆಚ್ಚಿನ ಜನ ಒಟ್ಟಿಗೆ ಕಾಣಿಸಿಕೊಳ್ಳುವಂತಿಲ್ಲ ಎಂಬಂಥ ಕಠಿಣ ನಿರ್ಬಂಧ ವಿಧಿಸಲಾಗಿತ್ತು. ನಿಯಮ ಉಲ್ಲಂಘಿಸಿ ಪಾರ್ಟಿ ನಡೆಸಿದ, ಮೋಜು ಮಾಡಿದವರ ಮೇಲೆ ಕೇಸು ಜಡಿದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ದಂಡ ವಸೂಲಿ ಮಾಡಿದ್ದರು. ಕೊರೋನಾ ಮಾರ್ಗಸೂಚಿ ಪಾಲನೆಯ ಕಟ್ಟುನಿಟ್ಟಿನ ಅನುಷ್ಠಾನಕ್ಕಾಗಿ ಡ್ರೋನ್‌ ಮೂಲಕ ನಿಗಾ ವಹಿಸಲಾಗಿತ್ತು. ಹೀಗಿದ್ದೂ ಸ್ವತಃ ಪ್ರಧಾನಿ ಪಾರ್ಟಿ ನಡೆಸಿ ಮೋಜು ಮಾಡಿರುವುದೇ ಭಾರೀ ವಿವಾದಕ್ಕೆ ಕಾರಣವಾಗಿದೆ.

ಟೀಕೆಗಳ ಸುರಿಮಳೆ: ಡೌನಿಂಗ್‌ ಸ್ಟ್ರೀಟ್‌ನಲ್ಲಿ ನಡೆದ ಈ ಪಾರ್ಟಿ ಬಗ್ಗೆ ಸಾರ್ವಜನಿಕರು, ವಿಪಕ್ಷ ನಾಯಕರು ಮಾತ್ರವಲ್ಲದೆ ಸ್ವಪಕ್ಷೀಯರಿಂದಲೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರಧಾನಿಯ ವರ್ತನೆ ಮತ್ತು ಅಧಿಕಾರ ದುರುಪಯೋಗಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ. ‘ಬೋರಿಸ್‌ ಜಾನ್ಸನ್‌ ಅವರಿಗೆ ದೇಶದ ಅಧಿಕಾರ ನಡೆಸುವ ನೈತಿಕತೆ ಇಲ್ಲ. ಕೂಡಲೇ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ವಿರೋಧ ಪಕ್ಷ (ಲೇಬರ್‌)ದ ಮುಖಂಡ ಕೀರ್‌ ಸ್ಟಾರ್ಮರ್‌ ಒತ್ತಾಯಿಸಿದ್ದಾರೆ. ಅಲ್ಲದೆ ದೇಶದ ಶೇ.66ರಷ್ಟುಬ್ರಿಟನ್‌ ಯುವ ಜನತೆ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ ಎಂಬುದು ಸಮೀಕ್ಷೆ ಮೂಲಕ ಬಹಿರಂಗವಾಗಿದೆ.

ಕ್ಷಮೆ ಕೇಳಿದ ಜಾನ್ಸನ್‌: ಮೊದಲು ಪಾರ್ಟಿ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದ ಬೋರಿಸ್‌ ಜಾನ್ಸನ್‌ ವಿವಾದ ಭುಗಿಲೇಳುತ್ತಿದ್ದಂತೆಯೇ ಸಂಸತ್ತಿನಲ್ಲಿ ಕ್ಷಮೆಯಾಚಿಸಿದ್ದಾರೆ. ಕೆಲಸದ ನಿಮಿತ್ತ ಎಂದು ಭಾವಿಸಿ ಪಾರ್ಟಿಗೆ ಹೋಗಿದ್ದೆ ಎಂದು ಕ್ಷಮೆಯಾಚಿಸಿದ್ದಾರೆ.

Yogini Stolen Statue : ಮೇಕೆ ಮುಖದ ಯೋಗಿನಿಯ ವಿಗ್ರಹ ಭಾರತಕ್ಕೆ ವಾಪಸ್!

ರಾಜೀನಾಮೆಗೂ ಸಜ್ಜು?: ಹತ್ತು ಹಲವು ವಿವಾದಗಳ ಸರದಾರರಾಗಿರುವ ಬೋರಿಸ್‌ ದೇಶವ್ಯಾಪಿ ಆಕ್ರೋಶಕ್ಕೆ ತುತ್ತಾಗುತ್ತಿದ್ದಾರೆ. ಕ್ಷಮೆ ಕೇಳಿದ ಹೊರತಾಗಿಯೂ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕು ಎಂಬ ಆಗ್ರಹ ಹೆಚ್ಚುತ್ತಿದೆ. ಹೀಗಾಗಿ, ಬೋರಿಸ್‌ ರಾಜೀನಾಮೆಗೆ ಮಾನಸಿಕವಾಗಿ ಸಜ್ಜಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಹಾಗೊಂದು ವೇಳೆ ರಾಜಿನಾಮೆ ನೀಡಿದ್ದೇ ಆದಲ್ಲಿ, ಪಾನಗೋಷ್ಠಿಗೆ ಬಲಿಯಾದ ಪ್ರಧಾನಿ ಎಂಬ ಅಪರೂಪದ ಇತಿಹಾಸ ಸೃಷ್ಟಿಯಾಗುವುದರಲ್ಲಿ ಅನುಮಾನವಿಲ್ಲ.

ಎಡವಟ್ಟು ಒಂದಲ್ಲ, ಎರಡಲ್ಲ!
* 1988ರಲ್ಲಿ ಟೈಮ್‌ ಪತ್ರಿಕೆಯ ಟ್ರೈನಿ ಪತ್ರಕರ್ತರಾಗಿದ್ದ ಬೋರಿಸ್‌, ಲೇಖನವೊಂದರಲ್ಲಿ ಇತಿಹಾಸಕಾರರೊಬ್ಬರು ಹೇಳದೇ ಇದ್ದ ‘ಹೇಳಿಕೆ’ ಬರೆದು ವಜಾಗೊಂಡಿದ್ದರು.

* 2018ರಲ್ಲಿ ಪತ್ರಿಕೆಯೊಂದಕ್ಕೆ ಬರೆದಿದ್ದ ಲೇಖನದಲ್ಲಿ ‘ಮುಸ್ಲಿಂ ಮಹಿಳೆಯರು ಪೋಸ್ಟ್‌ ಬಾಕ್ಸ್‌ ಅಥವಾ ಬ್ಯಾಂಕ್‌ ಕಳ್ಳರಂತೆ ಕಾಣುತ್ತಾರೆ’ ಎಂದು ವಿವಾದ ಸೃಷ್ಟಿಸಿದ್ದರು.

* 2020ರಲ್ಲಿ ಲಾಕ್‌ಡೌನ್‌ ಇದ್ದಾಗ ಪ್ರಧಾನಿ ಕಚೇರಿ ಮತ್ತು ನಿವಾಸದಲ್ಲಿ ಎರಡೆರಡು ಬಾರಿ ಪಾರ್ಟಿ ನಡೆಸುವ ಮೂಲಕ ನಿಯಮ ಉಲ್ಲಂಘಿಸಿ ಎಡವಟ್ಟು ಮಾಡಿದ್ದರು.

* 2021ರಲ್ಲಿ ರಾಜಕುಮಾರ ಫಿಲಿಪ್‌ (ರಾಣಿ ಎಲಿಜಬೆತ್‌ರ ಪತಿ) ಅಂತ್ಯಕ್ರಿಯೆಗೆ ಕೆಲವೇ ಗಂಟೆ ಮುನ್ನ ಪಾನಗೋಷ್ಠಿಯಲ್ಲಿ ಪಾಲ್ಗೊಂಡು ಕುಣಿದು, ಕುಪ್ಪಳಿಸಿದ್ದರು.

click me!