ವಿಶ್ವಾಸಮತ ಗೆದ್ದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌: ಕುರ್ಚಿ ಇನ್ನಷ್ಟು ಗಟ್ಟಿ!

By Suvarna NewsFirst Published Mar 7, 2021, 8:36 AM IST
Highlights

ವಿಶ್ವಾಸಮತ ಗೆದ್ದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌| ಕುರ್ಚಿ ಇನ್ನಷ್ಟು ಗಟ್ಟಿ| ಸರ್ಕಾರ ರಚಿಸಿದಾಗ ಹೊಂದಿದ್ದಕ್ಕಿಂತ 6 ಹೆಚ್ಚು ಮತ

ಇಸ್ಲಾಮಾಬಾದ್‌(ಮಾ.07): ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಶನಿವಾರ ವಿಶ್ವಾಸಮತ ಗೆಲ್ಲುವ ಮೂಲಕ ತಮ್ಮ ಕುರ್ಚಿಯನ್ನು ಇನ್ನಷ್ಟುಭದ್ರಪಡಿಸಿಕೊಂಡಿದ್ದಾರೆ. ಪಾಕಿಸ್ತಾನ್‌ ತೆಹ್ರೀಕ್‌-ಎ-ಇನ್ಸಾಫ್‌ (ಪಿಟಿಐ) ನೇತೃತ್ವದ ಆಡಳಿತಾರೂಢ ಮೈತ್ರಿಕೂಟಕ್ಕೆ ಅಧಿಕಾರ ಉಳಿಸಿಕೊಳ್ಳಲು 172 ಮತಗಳ ಅಗತ್ಯವಿತ್ತು. ಆದರೆ, 178 ಮತಗಳು ಮೈತ್ರಿಕೂಟದ ಪರ ಚಲಾವಣೆಯಾಗಿ ಇಮ್ರಾನ್‌ ವಿಜಯಿಯಾದರು.

342 ಸದಸ್ಯಬಲದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಇಮ್ರಾನ್‌ ಖಾನ್‌ ಪಕ್ಷ 157 ಸದಸ್ಯರನ್ನು ಹೊಂದಿದೆ. ಎಂಕ್ಯುಎಂ, ಪಿಎಂಎಲ್‌-ಕ್ಯು, ಬಿಎಪಿ, ಜಿಡಿಎ, ಎಎಂಎಲ್‌ ಮುಂತಾದ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಅವರು ಪ್ರಧಾನಿಯಾಗಿದ್ದಾರೆ. 2 ವರ್ಷದ ಹಿಂದೆ ಸರ್ಕಾರ ರಚಿಸಿದಾಗ ವಿಶ್ವಾಸಮತಯಾಚನೆಯಲ್ಲಿ ಅವರು 172 ಮತ ಪಡೆದಿದ್ದರು. ಈಗ 178 ಮತ ಪಡೆದಿದ್ದಾರೆ. ಈ ವೇಳೆ ವಿಪಕ್ಷಗಳು ಸಭಾತ್ಯಾಗ ಮಾಡಿ ಕಲಾಪ ಬಹಿಷ್ಕರಿಸಿದವು.

ಇತ್ತೀಚೆಗೆ ಸೆನೆಟ್‌ ಸದಸ್ಯತ್ವಕ್ಕೆ ನಡೆದ ಚುನಾವಣೆಯಲ್ಲಿ ಇಮ್ರಾನ್‌ ಸಂಪುಟದ ವಿತ್ತ ಮಂತ್ರಿ ಅಬ್ದುಲ್‌ ಹಫೀಜ್‌ ಸೋತಿದ್ದರು. ಮಾಜಿ ಪ್ರಧಾನಿ ಯೂಸುಫ್‌ ರಾಜಾ ಗಿಲಾನಿ ಗೆದ್ದಿದ್ದರು. ಹೀಗಾಗಿ ಇಮ್ರಾನ್‌ ರಾಜೀನಾಮೆ ನೀಡಬೇಕೆಂದು ವಿಪಕ್ಷಗಳ ಮೈತ್ರಿಕೂಟ ಪಟ್ಟು ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ವಿಶ್ವಾಸಮತ ಯಾಚನೆಗೆ ಇಮ್ರಾನ್‌ ನಿರ್ಧರಿಸಿದ್ದರು.

click me!