
ವಾಷಿಂಗ್ಟನ್: ವಿದೇಶಿಗರು ಉದ್ಯೋಗಕ್ಕಾಗಿ ಅಮೆರಿಕಕ್ಕೆ ಬರುವುದನ್ನು ತಡೆಯಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್-1ಬಿ ವೀಸಾವನ್ನು ದುಬಾರಿಯಾಗಿಸಿರುವ ಹೊತ್ತಿನಲ್ಲಿ, ‘ಡಿ.1ರೊಳಗೆ ದೇಶ ತೊರೆಯಿರಿ ಅಥವಾ ಕೆಲಸವನ್ನೇ ಬಿಡಿ’ ಎಂದು ತನ್ನ ವಿದೇಶಿ ಉದ್ಯೋಗಿಗಳಿಗೆ ಟೆಕ್ ದೈತ್ಯ ಐಬಿಎಂ ಕಂಪನಿ ಸೂಚಿಸಿದೆ. ಕನ್ಸಲ್ಟಿಂಗ್ ವಿಭಾಗದ ನೌಕಕರಿಗೆ ಈ ಸಲಹೆ ನೀಡಲಾಗಿದ್ದು, ನೂರಾರು ಭಾರತೀಯರು ಸಂಕಟಕ್ಕೆ ಸಿಲುಕಿದ್ದಾರೆ.
ವಿದೇಶಿಗರಿಗೆ ಅಮೆರಿಕದಲ್ಲಿ ಉದ್ಯೋಗ ಮಾಡಲು ಅನುಮತಿಸುವ ಎಚ್-1ಬಿ ವೀಸಾ ಮತ್ತು ಅಲ್ಲಿ ಶಾಶ್ವತವಾಗಿ ನೆಲೆಸಲು ಅಗತ್ಯವಾದ ಗ್ರೀನ್ ಕಾರ್ಡ್‌ಗೆ ಪ್ರಾಯೋಜಕತ್ವ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲು ಐಬಿಎಂ ಮುಂದಾಗಿದೆ. ಈ ಹಿನ್ನೆಲೆಯಲ್ಲಿ, ‘ಇದೇ ವರ್ಷ ಡಿ.31ರೊಳಗೆ ಬೇರೆ ದೇಶದಲ್ಲಿರುವ ಕಚೇರಿಗಳಿಗೆ ತೆರಳಲು ಸಿದ್ಧರಾಗಬೇಕು ಅಥವಾ ಕೆಲಸಕ್ಕೆ ರಾಜೀನಾಮೆ ನೀಡಬೇಕಿದೆ. ಈ ಕುರಿತು ನಿರ್ಧಾರ ಕೈಗೊಳ್ಳಲು 3 ವಾರಗಳ ಕಾಲಾವಕಾಶ ನೀಡಲಾಗಿದೆ’ ಎಂದು ಕಂಪನಿ ಹೇಳಿದೆ.
ಐಬಿಎಂನ ಕನ್ಸಲ್ಟಿಂಗ್ ವಿಭಾಗದಲ್ಲಿ ವಿಶ್ವಾದ್ಯಂತ 1.50 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಇದ್ದು, ಇವರಲ್ಲಿ ಎಷ್ಟು ಮಂದಿಗೆ ಈ ಆದೇಶದಿಂದ ಸಮಸ್ಯೆಯಾಗಲಿದೆ ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ.
ಬದಲಾಗುತ್ತಿರುವ ಉದ್ಯಮದ ಅಗತ್ಯಗಳು ಮತ್ತು ಅಮೆರಿಕದಲ್ಲಿ ನುರಿತ ಉದ್ಯೋಗಿಗಳ ಲಭ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಐಬಿಎಂ ಈ ನಿರ್ಧಾರ ಕೈಗೊಂಡಿದೆ. ಈ ಹಿಂದೆ ಉದ್ಯೋಗಿಗಳ ಕೊರತೆ ನೀಗಿಸಲು ಎಚ್-1ಬಿ ವೀಸಾ ಕಾರ್ಯಕ್ರಮವನ್ನು ಅವಲಂಬಿಸಿದ್ದ ಕಂಪನಿ, ಇದೀಗ ಅಂತಹ ಅವಲಂಬನೆ ಕಡಿಮೆ ಮಾಡುತ್ತಿದೆ. ಅಲ್ಲದೆ, 2024ರಿಂದ ಕಂಪನಿಯ ಕನ್ಸಲ್ಟಿಂಗ್ ವಿಭಾಗದ ಬೆಳವಣಿಗೆಯೂ ಬಹುತೇಕ ಸ್ಥಗಿತಗೊಂಡಿರುವುದು ಈ ನಿರ್ಧಾರಕ್ಕೆ ಮತ್ತೊಂದು ಕಾರಣವಾಗಿದೆ.
ಕಂಪನಿಯ ಉಳಿದ ವಿಭಾಗಗಳ ನೌಕರರಿಗೆ ಯಾವುದೇ ಸಮಸ್ಯೆ ಇಲ್ಲ ಎನ್ನಲಾಗಿದೆ.
ಅಮೆರಿಕದಿಂದ ಹೊರಹೋಗುವವರಲ್ಲಿ ಹೆಚ್ಚಿನವರು ಭಾರತದತ್ತ ಮುಖಮಾಡುವ ಸಾಧ್ಯತೆ ಇದೆ. ಕಂಪನಿಯ ಪೋರ್ಟಲ್ ಪ್ರಕಾರ ಅಮೆರಿಕದ ಹೊರಗೆ 1,278 ಕನ್ಸಲ್ಟಿಂಗ್ ಹುದ್ದೆಗಳು ಖಾಲಿ ಇದ್ದು, ಅದರಲ್ಲಿ 1,125 ಹುದ್ದೆ ಭಾರತದಲ್ಲೇ ಇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ