ಇರಾನ್‌ ಮೇಲೆ ಭಾರೀ ದಾಳಿ : ಟ್ರಂಪ್‌, ನೆತನ್ಯಾಹು

Kannadaprabha News   | Kannada Prabha
Published : Mar 08, 2026, 07:51 AM IST
Israeli Prime Minister Benjamin Netanyahu and US President Donald Trump

ಸಾರಾಂಶ

ಕೊಲ್ಲಿ ರಾಷ್ಟ್ರಗಳ ಮೇಲೆ ಯುದ್ಧ ಮಾಡಿದ್ದಕ್ಕೆ ಇರಾನ್ ಪ್ರಧಾನಿ ಪೆಜೆಶ್ಕಿಯಾನ್ ಕ್ಷಮೆಯಾಚಿಸಿದರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ಗೆ ಮತ್ತೆ ಎಚ್ಚರಿಕೆ ನೀಡಿದ್ದು, ‘ಇರಾನ್‌ಗೆ ಇಂದು ಮತ್ತೆ ಭಾರೀ ಹೊಡೆತ ನೀಡಲಿದ್ದೇವೆ’ ಎಂದಿದ್ದಾರೆ.

ವಾಷಿಂಗ್ಟನ್‌: ಕೊಲ್ಲಿ ರಾಷ್ಟ್ರಗಳ ಮೇಲೆ ಯುದ್ಧ ಮಾಡಿದ್ದಕ್ಕೆ ಇರಾನ್ ಪ್ರಧಾನಿ ಪೆಜೆಶ್ಕಿಯಾನ್ ಕ್ಷಮೆಯಾಚಿಸಿದರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ಗೆ ಮತ್ತೆ ಎಚ್ಚರಿಕೆ ನೀಡಿದ್ದು, ‘ಇರಾನ್‌ಗೆ ಇಂದು ಮತ್ತೆ ಭಾರೀ ಹೊಡೆತ ನೀಡಲಿದ್ದೇವೆ’ ಎಂದಿದ್ದಾರೆ. ಮತ್ತೊಂದೆಡೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಕೂಡಾ ಇಂದು ರಾತ್ರಿ ಇರಾನ್‌ಗೆ ತಡೆಯಲಾಗದ ಪೆಟ್ಟು ನೀಡುತ್ತೇವೆ ಎನ್ನುವ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ಬಿ-1, ಬಿ-2, ಬಿ-52 ಸೇರಿದಂತೆ ಶಕ್ತಿಶಾಲಿ ಸ್ಟೆಲ್ತ್‌ ಬಾಂಬರ್‌ಗಳು ಬ್ರಿಟಿಷ್‌ ನೆಲೆ ಡಿಯೆಗೋ ಗಾರ್ಸಿಯಾ ಮತ್ತು ಆರ್‌ಎಎಫ್‌ ಫೇರ್‌ಫೋರ್ಡ್‌ಗೆ ಆಗಮಿಸಿದ ಬೆನ್ನಲ್ಲೇ ಟ್ರಂಪ್‌ ಈ ಹೇಳಿಕೆ ದೊಡ್ದ ಯುದ್ಧಕ್ಕೆ ನಾಂದಿ ಆಗಲಿದೆಯಾ ಎನ್ನುವ ಅನುಮಾನಕ್ಕೆ ಕಾರಣವಾಗಿದೆ.

ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್‌

ಈ ಬಗ್ಗೆ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್‌, ‘ಇರಾನ್‌ ಮಧ್ಯಪ್ರಾಚ್ಯವನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಆಳಲು ನೋಡುತ್ತಿದೆ. ಇರಾನ್‌ ಇನ್ನು ಮುಂದೆ ಮಧ್ಯಪ್ರಾಚ್ಯದ ಗೂಂಡಾ ಅಲ್ಲ. ಬದಲಿಗೆ ಅಲ್ಲಿ ಸೋತವರು. ಇಂದು ಇರಾನ್‌ ಮೇಲೆ ತೀವ್ರ ದಾಳಿ ನಡೆಯಲಿದೆ’ ಎಂದು ಹೇಳಿದ್ದಾರೆ.

ಕೊಲ್ಲಿ ಮೇಲೆ ಇನ್ನು ದಾಳಿ ನಡೆಸಲ್ಲ: ಇರಾನ್‌

ಟೆಹರಾನ್‌: ಇರಾನ್‌-ಇಸ್ರೇಲ್‌ ಯುದ್ಧಕ್ಕೆ ವಾರ ತುಂಬುತ್ತಿರುವ ಹೊತ್ತಿನಲ್ಲೇ ಕೊಲ್ಲಿ ರಾಷ್ಟ್ರಗಳ ಮೇಲೆ ಇದೇ ಮೊದಲ ಬಾರಿಗೆ ಇರಾನ್‌ ಮೃದು ಧೋರಣೆ ತಳೆದಿದೆ. ಆಯೆತೊಲ್ಲಾ ಅಲಿ ಖಮೇನಿ ಹತ್ಯೆ ಬಳಿಕ ಕೊಲ್ಲಿ ರಾಷ್ಟ್ರಗಳ ಮೇಲೆ ತಾನು ನಡೆಸಿದ ದಾಳಿಗೆ ಬಹಿರಂಗ ಕ್ಷಮೆ ಕೋರಿರುವ ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್‌ ಅವರು, ಇನ್ನು ಅವರಾಗಿ ದಾಳಿ ನಡೆಸದ ಹೊರತು ನಾವು ಕ್ಷಿಪಣಿ, ಡ್ರೋನ್‌ಗಳನ್ನು ಹಾರಿಸಲ್ಲ ಎಂದು ಭರವಸೆ ನೀಡಿದ್ದಾರೆ.

ಇದೇ ವೇಳೆ ಇರಾನ್‌ ಭೇಷರತ್ತಾಗಿ ಶರಣಾಗಬೇಕೆಂಬ ಅಮೆರಿಕದ ಎಚ್ಚರಿಕೆಗೆ ತಿರುಗೇಟು ನೀಡಿರುವ ಅವರು, ಅದೆಲ್ಲ ಕನಸಿನ ಮಾತು ಎಂದು ವ್ಯಂಗ್ಯವಾಡಿದ್ದಾರೆ.

ದೇಶದ ಪರಮೋಚ್ಚ ನಾಯಕ ಖಮೇನಿ ಹತ್ಯೆ ಬೆನ್ನಲ್ಲೇ ನೆರೆ ಹೊರೆಯ ಗಲ್ಫ್‌ ರಾಷ್ಟ್ರಗಳ ಮೇಲೆ ಇರಾನ್‌ ತೀವ್ರ ದಾಳಿ ನಡೆಸಿತ್ತು. ಅಮೆರಿಕದ ಸೇನಾ ನೆಲೆಗಳು, ರಾಯಭಾರ ಕಚೇರಿಗಳ ಜತೆಗೆ ಕೊಲ್ಲಿರಾಷ್ಟ್ರಗಳ ತೈಲ ಘಟಕಗಳ ಮೇಲೂ ದಾಳಿ ನಡೆಸಿತ್ತು. ಇರಾನ್‌ನ ಈ ನಡೆಗೆ ಕೊಲ್ಲಿ ರಾಷ್ಟ್ರಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇದೀಗ ಇರಾನ್‌ ಆ ದಾಳಿ ಕುರಿತು ಕ್ಷಮೆ ಕೋರಿದೆ.

ಇರಾನ್‌ ಪರವಾಗಿ ನಾನು ನೆರೆಹೊರೆಯ ಕೊಲ್ಲಿ ರಾಷ್ಟ್ರಗಳಲ್ಲಿ ಕ್ಷಮೆ ಕೋರುತ್ತೇನೆ. ದೇಶಧ ಮಧ್ಯಂತರ ನಾಯಕತ್ವ ಸಮಿತಿಯು ಇನ್ನು ಮುಂದೆ ಕೊಲ್ಲಿ ರಾಷ್ಟ್ರಗಳ ಮೇಲೆ ಯಾವುದೇ ದಾಳಿ ನಡೆಸದಿರುವ ತೀರ್ಮಾನಕ್ಕೆ ಬಂದಿದೆ. ಅದರಂತೆ ನೆರೆಯ ಗಲ್ಫ್‌ ದೇಶಗಳು ದಾಳಿ ಮಾಡದ ಹೊರತು ನಾವು ಯಾವುದೇ ದಾಳಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಸಂವಹನದ ಕೊರತೆ?:

ಇರಾನ್‌ ಅಧ್ಯಕ್ಷರ ಭರವಸೆ ಹೊರತಾಗಿಯೂ ಶನಿವಾರ ಬೆಳಗ್ಗೆಯೂ ಕೊಲ್ಲಿ ರಾಷ್ಟ್ರಗಳ ಮೇಲೆ ಭಾರೀ ದಾಳಿ ನಡೆದಿದೆ. ಈ ವಿಚಾರವಾಗಿ ಸಂವಹನದ ಕೊರತೆಯನ್ನು ಒಪ್ಪಿಕೊಂಡಿರುವ ಪೆಜೆಶ್ಕಿಯಾನ್‌ ಅವರು, ಇರಾನ್‌ನ ಮೂರು ಮಂದಿ ನಾಯಕತ್ವ ಸಮಿತಿ ಈ ವಿಚಾರವಾಗಿ ಮಿಲಿಟರಿ ನಾಯಕರ ಜತೆಗೆ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಮೆರಿಕದ ₹28000 ಕೋಟಿ ಥಾಡ್‌ ಕ್ಷಿಪಣಿ ವ್ಯವಸ್ಥೆ ನಾಶ
9 ದಾಳಿಯಲ್ಲಿ ಬಚಾವ್ ಆಗಿದ್ದ ಖಮೇನಿ ಆಪ್ತ ಖಾನಿ ಇಸ್ರೇಲ್‌ ಗೂಢಚರ ?