
ನವದೆಹಲಿ (ಅ.14): ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ಒಂದು ವಾರ ಕಳೆದಿದೆ. ಈ ನಡುವೆ, ಇಸ್ರೇಲ್ ರಕ್ಷಣಾ ಪಡೆ ಶನಿವಾರದಂದು ಬಹುದೊಡ್ಡ ಯಶಸ್ಸು ಪಡೆದುಕೊಂಡಿದ್ದಾಗಿ ಹೇಳಿದೆ. ಗಾಜಾ ಪಟ್ಟಿಯಲ್ಲಿ ರಾತ್ರಿಯಿಡೀ ನಡೆದ ವೈಮಾನಿಕ ದಾಳಿಯಲ್ಲಿ ಹಮಾಸ್ ಗುಂಪಿನ ಹಿರಿಯ ಸದಸ್ಯನನ್ನು ಕೊಂದಿರುವುದಾಗಿ ತಿಳಿಸಿದೆ. ಟೈಮ್ಸ್ ಆಫ್ ಇಸ್ರೇಲ್ ವರದಿಯ ಪ್ರಕಾರ, ಇಸ್ರೇಲ್ ರಕ್ಷಣಾ ಪಡೆಗಳು ಹಮಾಸ್‌ನ ಏರ್‌ಫೋರ್ಸ್‌ನ ಮುಖ್ಯಸ್ಥ ಅಬು ಮುರಾದ್ ವೈಮಾನಿಕ ದಾಳಿಯಲ್ಲಿ ಹತನಾಗಿದ್ದಾನೆಎಂದು ಹೇಳಿಕೊಂಡಿದೆ. ಭಯೋತ್ಪಾದಕ ಗುಂಪು ತನ್ನ ವೈಮಾನಿಕ ಚಟುವಟಿಕೆಯನ್ನು ನಿಯಂತ್ರಿಸುತ್ತಿದ್ದ ಪ್ರಧಾನ ಕಛೇರಿಯ ಮೇಲೆ ಇಸ್ರೇಲಿ ರಕ್ಷಣಾ ಪಡೆಗಳು ಶನಿವಾರ ಭಾರೀ ವೈಮಾನಿಕ ದಾಳಿ ನಡೆಸಿದೆ. ಕಳೆದ ವಾರ ಇಸ್ರೇಲ್ ಮೇಲೆ ನಡೆದ ಹಮಾಸ್ ದಾಳಿಯ ಸಂದರ್ಭದಲ್ಲಿ ಉಗ್ರರನ್ನು ನಿರ್ದೇಶಿಸುವಲ್ಲಿ ಅಬು ಮುರಾದ್ ಪ್ರಮುಖ ಪಾತ್ರ ವಹಿಸಿದ್ದ ಎಂದು ಟೈಮ್ಸ್ ಆಫ್ ಇಸ್ರೇಲ್ ಹೇಳಿದೆ. ಈತನ ಸೂಚನೆಯ ಮೇರೆಗೆ ಹಮಾಸ್ ಭಯೋತ್ಪಾದಕರು ಹ್ಯಾಂಗ್ ಗ್ಲೈಡರ್‌ಗಳ ಮೂಲಕ ಇಸ್ರೇಲ್‌ಗೆ ಲಗ್ಗೆ ಇಟ್ಟಿದ್ದರು. ಶನಿವಾರ ರಾತ್ರಿ ಪ್ರತ್ಯೇಕ ದಾಳಿಗಳಲ್ಲಿ ಅಕ್ಟೋಬರ್ 7 ರಂದು ಇಸ್ರೇಲ್‌ಗೆ ನುಸುಳಿದ ಹಮಾಸ್ ಕಮಾಂಡೋ ಪಡೆಗಳಿಗೆ ಸೇರಿದ ಡಜನ್‌ಗಟ್ಟಲೆ ಗುರಿಗಳನ್ನು ಟಾರ್ಗೆಟ್ ಮಾಡಲಾಗಿತ್ತು ಎಂದು ಐಡಿಎಫ್ ತಿಳಿಸಿದೆ.
ಇಲ್ಲಿಯವರೆಗೂ 3 ಸಾವಿರ ಸಾವು: ಅಕ್ಟೋಬರ್ 7 ರಂದು, ಹಮಾಸ್ ಇಸ್ರೇಲ್ ಮೇಲೆ ಬೃಹತ್ ರಾಕೆಟ್ ದಾಳಿ ನಡೆಸಿತ್ತು. ಇದರಲ್ಲಿ ನೂರಾರು ಜನರು ಸಾವನ್ನಪ್ಪಿದರು. ಅಂದಿನಿಂದ ಆರಂಭವಾದ ಇಸ್ರೇಲ್-ಹಮಾಸ್ ಯುದ್ಧದಲ್ಲಿ, ಇಸ್ರೇಲ್‌ನಲ್ಲಿ 1,300 ಕ್ಕೂ ಹೆಚ್ಚು ಜನರು ಸಾವು ಕಂಡಿದ್ದರೆ, ಮತ್ತು ಇಸ್ರೇಲಿ ಪ್ರತೀಕಾರದ ವೈಮಾನಿಕ ದಾಳಿಗಳು ಗಾಜಾದಲ್ಲಿ 1,530 ಕ್ಕೂ ಹೆಚ್ಚು ಜನರು ಸಾವು ಕಂಡಿದ್ದಾರಡ. ಇಸ್ರೇಲ್ ಒಳಗೆ ಸುಮಾರು 1,500 ಹಮಾಸ್ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಇಸ್ರೇಲ್ ತಿಳಿಸಿದೆ. ಶುಕ್ರವಾರ, ಇಸ್ರೇಲ್ ದೇಶ ಗಾಜಾದಲ್ಲಿ ವಾಸಿಸುವ ಜನರಿಗೆ 24 ಗಂಟೆಗಳ ಒಳಗೆ ಗಾಜಾವನ್ನು ತೊರೆಯುವಂತೆ ಆದೇಶ ನೀಡಿತ್ತು. ಇಸ್ರೇಲ್ ಹಮಾಸ್‌ನ ಟಾರ್ಗೆಟ್‌ಗಳ ಮೇಲೆ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿದೆ. ವಿಶ್ವಸಂಸ್ಥೆಯ ಪ್ರಕಾರ, 400,000 ಕ್ಕೂ ಹೆಚ್ಚು ಗಾಜಾ ಪ್ರಜೆಗಳನ್ನು ಗಾಜಾ ಪಟ್ಟಿಯ ದಕ್ಷಿಣ ಭಾಗಕ್ಕೆ ಸ್ಥಳಾಂತರಿಸಲಾಗಿದೆ. ಇಸ್ರೇಲ್ ಸೇನೆಯು ಈಗ ಗಾಜಾದಲ್ಲಿ ಎಲ್ಲಾ ಕಡೆಯಿಂದ ತನ್ನ ಸೇನಾಪಡೆಗಳನ್ನು ನುಗ್ಗಿಸಲು ಪ್ರಯತ್ನ ಮಾಡಲಿದೆ.
ಈ ನಡುವೆ, ಐಡಿಎಫ್ ತನ್ನ 120 ಕ್ಕೂ ಹೆಚ್ಚು ನಾಗರಿಕರು ಇನ್ನೂ ಗಾಜಾದಲ್ಲಿ ಹಮಾಸ್ ಭಯೋತ್ಪಾದಕರ ವಶದಲ್ಲಿದ್ದಾರೆ ಎಂದು ದೃಢಪಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಇಸ್ರೇಲ್ ಮುಂದಿರುವ ನಿಜವಾದ ಸವಾಲು ತನ್ನ ವಶದಲ್ಲಿರುವ ಪ್ರಜೆಗಳನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸುವುದಾಗಿದೆ. ಇಸ್ರೇಲಿ ಮಿಲಿಟರಿ ಹೇಳಿರುವ ಪ್ರಕಾರಾ, ಗಾಜಾ ಪ್ರದೇಶದಲ್ಲಿ ತನ್ನ ಹಿಂದಿನ ಎಲ್ಲಾ ಕಾರ್ಯಾಚರಣೆಗಳಿಗಿಂತ ಆಪರೇಷನ್ ಸ್ವಾರ್ಡ್ಸ್ ಆಫ್ ಐರನ್ ಬಹಳ ಭಿನ್ನವಾಗಿರಲಿದ್ದು, ಮಹತ್ವಾಕಾಂಕ್ಷೆಯದ್ದೂ ಆಗಿರಲಿದೆ ಎಂದು ಹೇಳಿದೆ.
ಗಾಜಾಪಟ್ಟಿ ತಲುಪಿದ ಇಸ್ರೇಲ್ ಟ್ಯಾಂಕ್: ಇಸ್ರೇಲಿ ಟ್ಯಾಂಕ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳು ಗಾಜಾದ ದಕ್ಷಿಣ ಗಡಿಯನ್ನು ತಲುಪಿವೆ. ಇಸ್ರೇಲ್‌ನ ಆಧುನಿಕ ಯುದ್ಧ ಟ್ಯಾಂಕ್ 'ಮರ್ಕವಾ' ಗಾಜಾ ಪಟ್ಟಿ ಪ್ರವೇಶಿಸುವ ಮುಂಭಾಗದಲ್ಲಿದೆ. ಭೂಸೇನೆಯ ಶಸ್ತ್ರಸಜ್ಜಿತ ವಾಹನಗಳು ಸೇರಿದಂತೆ ಸೇನೆಯ ಯಾಂತ್ರಿಕೃತ ಪಡೆಗಳು ಯುದ್ಧಕ್ಕೆ ಸಿದ್ಧವಾಗಿವೆ. ಇಸ್ರೇಲಿ ಸೇನೆಯ ಗುರಿ ಗಾಜಾದೊಳಗಿನ ಎಲ್ಲಾ ಪ್ರಮುಖ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದು ಮತ್ತು ಹಮಾಸ್ ಅನ್ನು ನಿರ್ಮೂಲನೆ ಮಾಡುವುದಾಗಗಿದೆ. ಹಮಾಸ್‌ನ ಸುರಂಗ ಜಾಲವನ್ನು ನಾಶಪಡಿಸಲು ಹೆಚ್ಚಿನ ಸಂಖ್ಯೆಯ ಬುಲ್ಡೋಜರ್‌ಗಳು, ಅರ್ಥ್ ಮೂವರ್ಸ್ ಮತ್ತು ಇತರ ಸಿಬ್ಬಂದಿಗಳನ್ನು ಸಜ್ಜುಗೊಳಿಸಲಾಗಿದೆ.
'ಒತ್ತೆಯಾಳಾಗಿ ನರಳೋದಕ್ಕಿಂತ ಸತ್ತಿದ್ದೆ ಒಳ್ಳೆಯದಾಯ್ತ..' 8 ವರ್ಷದ ಮಗಳ ಸಾವನ್ನು ಸ್ವಾಗತಿಸಿದ ಇಸ್ರೇಲ್ ಪ್ರಜೆ!
ಈ ಟ್ಯಾಂಕ್‌ಗಳನ್ನು ದಕ್ಷಿಣ ಗಡಿಯಲ್ಲಿ ಮಾತ್ರವಲ್ಲದೆ ಗಾಜಾದ ಉತ್ತರದ ಗಡಿಯಲ್ಲಿಯೂ ನಿಯೋಜಿಸಲಾಗಿದೆ. ಆದೇಶಗಳನ್ನು ಸ್ವೀಕರಿಸಿದ ತಕ್ಷಣ ಅದು ಗಾಜಾವನ್ನು ಪ್ರವೇಶಿಸಲಿದೆ. ಗಾಜಾದಂತಹ ಜನನಿಬಿಡ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆ ನಡೆಸುವಾಗ ಹಲವು ಸಮಸ್ಯೆಗಳು ಎದುರಾಗಬಹುದು. 2014 ರಲ್ಲಿ, ಗಾಜಾದಲ್ಲಿ ಇಸ್ರೇಲಿ ಭೂಸೇನೆ ಗಾಜಾಗೆ ಪ್ರವೇಶಿಸಿದ್ದಾಗ, ಆಂಟಿ ಟ್ಯಾಂಕ್ ಮೈನ್ಸ್‌ಗಳಿಂದ ಭಾರೀ ನಷ್ಟ ಎದುರಿಸಿದ್ದವು. ಅದರೊಂದಿಗೆ ಸ್ನೈಪರ್ ದಾಳಿ ಕೂಡ ನಡೆದಿತ್ತು.
ಗಾಜಾಗೆ ಮತ್ತೊಂದು ದೊಡ್ಡ ಶಾಕ್ ನೀಡಿದ ಇಸ್ರೇಲ್: ನೀರಿಲ್ಲ, ಕರೆಂಟಿಲ್ಲ, ಇಂಧನವೂ ಇಲ್ಲ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ