Sri Lanka food prices : ಹಸಿ ಮೆಣಸಿನಕಾಯಿ ಕೆಜಿಗೆ 710 ರೂಪಾಯಿ, ಬಟಾಟೆ ಕೆಜಿಗೆ 200 ರೂಪಾಯಿ!

By Suvarna NewsFirst Published Jan 12, 2022, 3:51 PM IST
Highlights

ಶ್ರೀಲಂಕಾದಲ್ಲಿ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿರುವ ತರಕಾರಿ ಬೆಲೆ
ಒಂದು ಕೆಜಿ ಹಸಿಮೆಣಸಿನ ಕಾಯಿಗೆ 710 ರೂಪಾಯಿ
ಇತರ ತರಕಾರಿಗಳ ಬೆಲೆಯಲ್ಲೂ  ಏರಿಕೆ

ನವದೆಹಲಿ (ಜ. 12): ದ್ವೀಪರಾಷ್ಟ್ರ ಶ್ರೀಲಂಕಾ (SriLanka) ಬಹುತೇಕ ಈ ವರ್ಷ ದಿವಾಳಿ (Bankrupt) ಘೋಷಣೆ ಮಾಡುವುದು ನಿಚ್ಚಳವಾಗಿದೆ. ದೇಶದಲ್ಲಿ ಆರ್ಥಿಕ ತುರ್ತುಪರಿಸ್ಥಿತಿಯ ಘೋಷಣೆಯನ್ನೂ ಈಗಾಗಲೇ ಮಾಡಲಾಗಿದೆ. ಆದರೆ, ದೇಶದ ಜನರ ಬವಣೆಯನ್ನು ಮಾತ್ರ ಹೇಳತೀರದಾಗಿದೆ. ತರಕಾರಿ, ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅತಿಯಾದ ಹಣದುಬ್ಬರ ಒಂದುಕಡೆಯಾದರೆ, ನಿರುದ್ಯೋಗ ಮತ್ತೊಂದೆಡೆ ತಾಂಡವವಾಡುತ್ತಿದೆ. ಶ್ರೀಲಂಕಾದ ಅಡ್ವೊಕಟಾ ಇನ್ಸ್ ಟಿಟ್ಯೂಷನ್ (Advocata Institute) ದೇಶದಲ್ಲಿನ ಹಣದುಬ್ಬರದ (Inflation)ಕುರಿತಾಗಿ ಮಾಹಿತಿಯನ್ನು ನೀಡಿದ್ದು, ಕಳೆದ ಡಿಸೆಂಬರ್ ತಿಂಗಳೊಂದರಲ್ಲೇ ಆಹಾರ ವಸ್ತುಗಳ ಬೆಲೆಯಲ್ಲಿ ಶೇ. 15ರಷ್ಟು ಏರಿಕೆಯಾಗಿದೆ. ಅದರಲ್ಲೂ ತರಕಾರಿಗಳ ಬೆಲೆಯಲ್ಲಂತೂ ನಿರೀಕ್ಷೆಗೂ ಮೀರಿ ಏರಿಕೆಯಾಗಿದೆ ಎಂದು ಹೇಳಲಾಗಿದೆ.

ಅಡ್ವೊಕಟಾ ಇನ್ಸ್ ಟಿಟ್ಯೂಷನ್ ನ ಬಾಥ್ ಕರಿ ಇಂಡಿಕೇಟರ್ (ಬಿಸಿಐ) (The Bath Curry Indicator) ದೇಶದಲ್ಲಿ ರಿಟೇಲ್ ಉತ್ಪನ್ನಗಳಲ್ಲಿ ಆಗಿರುವ ಹಣದುಬ್ಬರವನ್ನು ಬಿಡುಗಡೆ ಮಾಡಿದ್ದು, 2021ರ ನವೆಂಬರ್ ನಿಂದ 2021ರ ಡಿಸೆಂಬರ್ ವರೆಗೆ ಆಹಾರ ವಸ್ತುಗಳ ಬೆಲೆಯಲ್ಲಿ ಶೇ. 15ರಷ್ಟು ಏರಿಕೆಯಾಗಿದೆ. ಅದರಲ್ಲೂ ತರಕಾರಿ ಉತ್ಪನ್ನಗಳ ಬೆಲೆಯಲ್ಲಿ ದಿಢೀರನೆ ಏರಿಕೆಯಾಗಿದೆ. ನವೆಂಬರ್ ಗೂ ಮುನ್ನ 100 ಗ್ರಾಂ ಮೆಣಸಿನ ಕಾಯಿಗೆ (Green Chilli) 18 ರೂಪಾಯಿ ಇತ್ತು. ಆದರೆ, ಡಿಸೆಂಬರ್ ಅಂತ್ಯದಲ್ಲಿ 100 ಗ್ರಾಂ ಮೆಣಸಿನ ಕಾಯಿಯ ಬೆಲೆ 71 ರೂಪಾಯಿ ಆಗಿದೆ. ಅದರರ್ಥ ಒಂದು ಕೆಜಿ ಮೆಣಸಿನ ಕಾಯಿಗೆ ಬರೋಬ್ಬರಿ 710 ರೂಪಾಯಿ. ಒಂದೇ ತಿಂಗಳಲ್ಲಿ ಒಂದು ಕೆಜಿ ಮೆಣಸಿನ ಕಾಯಿಯ ಬೆಲೆಯಲ್ಲಿ 287 ರೂಪಾಯಿ ಏರಿಕೆ ಆದಂತಾಗಿದೆ.

ಇನ್ನು ಬದನೆಕಾಯಿಯ (Brinjal) ಬೆಲೆಯಲ್ಲಿ ಶೇ. 51ರಷ್ಟು ಏರಿಕೆಯಾಗಿದ್ದರೆ, ಈರುಳ್ಳಿ ಬೆಲೆಯಲ್ಲಿ ಶೇ.40, ಬೀನ್ಸ್ ಹಾಗೂ ಟೊಮಾಟೋ ದರದಲ್ಲಿ ಶೇ. 10ರಷ್ಟು ಏರಿಕೆಯಾಗಿದೆ. ಅದರಲ್ಲೂ ಒಂದು ಕೆಜಿ ಬಟಾಟೆಗೆ ಜನರು 200 ರೂಪಾಯಿ ಖರ್ಚು ಮಾಡಬೇಕಿದೆ. ಬೇರೆ ದೇಶಗಳಿಂದ ಆಮದಿನ ಮಿತಿ ಇರುವ ಕಾರಣ, ಹಾಲಿನ ಪೌಡರ್ ಅಭಾವವೂ ಶ್ರೀಲಂಕಾಗೆ ಕಾಡಿದೆ. ಬಹುತೇಕವಾಗಿ ಜನವರಿ ಅಂತ್ಯದವರೆಗೆ ಮಾತ್ರವೇ ಹಾಲಿನ ಪೌಡರ್ ದಾಸ್ತಾನು ದೇಶದಲ್ಲಿದೆ ಎಂದು ಹೇಳಲಾಗಿದೆ. 1 ಕೆಜಿ ಹಾಲಿನ ಪೌಡರ್ ದರ 1345 ರೂಪಾಯಿ ಆಗಿದ್ದರೆ, 400 ಗ್ರಾಂ ಪೌಡರ್ ನ ಬೆಲೆ 540 ರೂಪಾಯಿಗೆ ಏರಿಕೆಯಾಗಿದೆ ಎಂದು ಮಿಲ್ಕ್ ಪೌಡರ್ ಇಂಪೋರ್ಟರ್ಸ್ ಅಸೋಸಿಯೇಷನ್ ತಿಳಿಸಿದೆ.
 

Visit Daily Mirror Online for more: https://t.co/GOuyM2WvQU pic.twitter.com/yEiM9KyJ00

— DailyMirror (@Dailymirror_SL)


2019ಕ್ಕೆ ಹೋಲಿಕೆ ಮಾಡಿದರೆ, ಶ್ರೀಲಂಕಾದಲ್ಲಿ ತರಕಾರಿ ಬೆಲೆ ದುಪ್ಪಟ್ಟು ಆಗಿದ್ದರೆ, 2020ಕ್ಕೆ ಹೋಲಿಸಿದರೆ ಬೆಲೆಯಲ್ಲಿ ಶೇ. 37ರಷ್ಟು ಏರಿಕೆಯಾಗಿದೆ. 2020ರಲ್ಲಿ ವಾರದ ಆಹಾರ ಉತ್ಪನ್ನಗಳಿಗೆ 1165 ರೂಪಾಯಿ ಖರ್ಚು ಮಾಡುತ್ತಿದ್ದ ಒಂದು ಕುಟುಂಬ ಈಗ ಅದೇ ವಸ್ತುಗಳಿಗೆ 1600 ರೂಪಾಯಿ ಖರ್ಚು ಮಾಡಬೇಕಾಗಿದೆ.  ದೇಶದಲ್ಲಿನ ಆಹಾರ ವಸ್ತುಗಳ ಬೆಲೆಯಲ್ಲಿ ಆಗುತ್ತಿರುವ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು, ಈಗಾಗಲೇ ಅಧ್ಯಕ್ಷ ಗೋಟಬಯ ರಾಜಪಕ್ಷ ಆರ್ಥಿಕ ತುರ್ತುಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಇದರ ಅನ್ವಯ ದೇಶದಲ್ಲಿ ಆಹಾರ ವಸ್ತುಗಳ ವಿತರಣೆಯ ಹೊಣೆಯನ್ನು ಸೇನೆಗೆ ನೀಡಲಾಗಿದೆ.

Sri Lanka on the verge of Bankrupt : ತರಕಾರಿ ಮಾರ್ಕೆಟ್ ಅಲ್ಲಿ ಗ್ರಾಮ್ ಲೆಕ್ಕದಲ್ಲಿ ಮಾರಾಟ!
ಶ್ರೀಲಂಕಾದಲ್ಲಿ ತರಕಾರಿಗಳ ಬೆಲೆ: 1 ಕೆಜಿ ಟೊಮಾಟೋ, ಬೆಂಡೇಕಾಯಿ ಹಾಗೂ ಕ್ಯಾರಟ್ ನ ಬೆಲೆ ತಲಾ 200 ರೂಪಾಯಿ ಆಗಿದ್ದರೆ, 1 ಕೆಜಿ ಬದನೆಕಾಯಿ ಹಾಗೂ ಹಾಗಲಕಾಯಿಗೆ ತಲಾ 160 ರೂಪಾಯಿಯನ್ನು ವ್ಯಯ ಮಾಡಬೇಕಿದೆ. 1 ಕೆಜಿ ಬೀನ್ಸ್ ನ ಬೆಲೆ ಗಗನಕ್ಕೆ ಮುಟ್ಟಿದ್ದು 320 ರೂಪಾಯಿ ಕೆಜಿ ಆಗಿದೆ. ಇನ್ನು ಕ್ಯಾಬೇಜ್ ನ ಬೆಲೆ 240 ರೂಪಾಯಿ ಆಗಿದ್ದರೆ, ಬಾಳೆಕಾಯಿ ಕೆಜಿಗೆ 120 ರೂಪಾಯಿ ಆಗಿದೆ.

click me!