Grammys 2022: ಎರಡನೇ ಗ್ರ್ಯಾಮಿ ಪ್ರಶಸ್ತಿ ಗೆದ್ದ ಬೆಂಗಳೂರಿನ ರಿಕಿ ಕೇಜ್!

By Govindaraj S  |  First Published Apr 5, 2022, 3:30 AM IST

Second Grammy Award to Ricky Kej: ಬೆಂಗಳೂರಿನ ಪ್ರಸಿದ್ಧ ಸಂಯೋಜಕ ರಿಕಿ ಕೇಜ್‌ ಜಾಗತಿಕ ಸಂಗೀತ ಲೋಕದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯೆಂದು ಖ್ಯಾತಿ ಪಡೆದಿರುವ ಗ್ರ್ಯಾಮಿ ಪ್ರಶಸ್ತಿಯನ್ನು 2ನೇ ಬಾರಿ ತಮ್ಮದಾಗಿಸಿಕೊಳ್ಳುವ ಮೂಲಕ ಮಹತ್ಸಾಧನೆ ಮೆರೆದಿದ್ದಾರೆ.


ಲಾಸ್‌ ಏಂಜಲೀಸ್‌ (ಏ.05): ಬೆಂಗಳೂರಿನ (Bengaluru) ಪ್ರಸಿದ್ಧ ಸಂಯೋಜಕ ರಿಕಿ ಕೇಜ್‌ (Ricky Kej) ಜಾಗತಿಕ ಸಂಗೀತ ಲೋಕದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯೆಂದು ಖ್ಯಾತಿ ಪಡೆದಿರುವ ಗ್ರ್ಯಾಮಿ ಪ್ರಶಸ್ತಿಯನ್ನು (Grammys) 2ನೇ ಬಾರಿ ತಮ್ಮದಾಗಿಸಿಕೊಳ್ಳುವ ಮೂಲಕ ಮಹತ್ಸಾಧನೆ ಮೆರೆದಿದ್ದಾರೆ.

ಖ್ಯಾತ ಬ್ರಿಟಿಷ್‌ ಡ್ರಮ್ಮರ್‌ ಸ್ಟೆವಾರ್ಟ್‌ ಕೋಪ್‌ಲ್ಯಾಂಡ್‌ ಜೊತೆ ಸೇರಿ ರಿಕಿ ಕೇಜ್‌ ಸಂಯೋಜಿಸಿರುವ ‘ಡಿವೈನ್‌ ಟೈಡ್ಸ್‌’ ಎಂಬ ಒಂಭತ್ತು ಗೀತೆಗಳ ಆಲ್ಬಮ್‌ಗೆ ಅತ್ಯುತ್ತಮ ನ್ಯೂ ಏಜ್‌ ಆಲ್ಬಮ್‌ ವಿಭಾಗದಲ್ಲಿ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ. ಲಾಸ್‌ ವೆಗಾಸ್‌ನ ಎಂಜಿಎಂ ಗ್ರ್ಯಾಂಡ್‌ ಮಾಕ್ರ್ಯೂ ಬಾಲ್‌ರೂಮ್‌ನಲ್ಲಿ ಸೋಮವಾರ ನಡೆದ 64ನೇ ಗ್ರ್ಯಾಮಿ ಅವಾರ್ಡ್ಸ್ ಸಮಾರಂಭದಲ್ಲಿ ರಿಕಿ ಕೇಜ್‌ ಮತ್ತು ಸ್ಟೆವಾರ್ಟ್‌ ಕೋಪ್‌ಲ್ಯಾಂಡ್‌ ಜಂಟಿಯಾಗಿ ಪ್ರಶಸ್ತಿ ಸ್ವೀಕರಿಸಿದರು.

Wow.. speechless! To receive praise from the Hon'ble Prime Minister himself! Thank you ji, I hope I made you proud. You set me on the path of Environmental Consciousness 7 years ago when I won my 1st GRAMMY Award, and here I am today :-) Thanks for your blessings https://t.co/N6krPqVp2G

— Ricky Kej (@rickykej)

Tap to resize

Latest Videos

2015ರಲ್ಲಿ ತಮ್ಮ ‘ವಿಂಡ್ಸ್‌ ಆಫ್‌ ಸಂಸಾರ’ ಆಲ್ಬಮ್‌ಗೆ ಇದೇ ವಿಭಾಗದಲ್ಲಿ ರಿಕಿ ಕೇಜ್‌ ಮೊದಲ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದರು. ಈಗ 2ನೇ ಬಾರಿ ಜಾಗತಿಕ ಮಟ್ಟದ ಪ್ರತಿಷ್ಠಿತ ಪ್ರಶಸ್ತಿ ಪಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶ ಪೋಸ್ಟ್‌ ಮಾಡಿರುವ ಅವರು, ‘ನಮ್ಮ ಡಿವೈನ್‌ ಟೈಡ್ಸ್‌ ಆಲ್ಬಮ್‌ಗೆ ಗ್ರ್ಯಾಮಿ ದೊರೆತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಸಂಗೀತ ಲೋಕದ ದಂತಕತೆ ಸ್ಟೆವಾರ್ಟ್‌ ಕೋಪ್‌ಲ್ಯಾಂಡ್‌ ಜೊತೆ ಇದನ್ನು ಸ್ವೀಕರಿಸುವುದಕ್ಕೆ ಇನ್ನೂ ಖುಷಿಯಾಗುತ್ತಿದೆ. ಇದು ನನ್ನ 2ನೇ ಹಾಗೂ ಸ್ಟೆವಾರ್ಟ್‌ರ 6ನೇ ಗ್ರ್ಯಾಮಿ ಪ್ರಶಸ್ತಿ’ ಎಂದು ಹೇಳಿದ್ದಾರೆ.

RGV ನಿರ್ದೇಶನದ ಲೆಸ್ಬಿಯನ್‌ ಸಿನಿಮಾ 'ಖತ್ರಾ ಡೇಂಜರಸ್‌': ಏಪ್ರಿಲ್‌ 8ರಂದು ತೆರೆಗೆ

ಪ್ರಶಸ್ತಿ ಸ್ವೀಕರಿಸುವ ಮುನ್ನ ಸ್ಟೆವಾರ್ಟ್‌ರ ಕಾಲಿಗೆ ನಮಸ್ಕರಿಸಿ, ಪ್ರೇಕ್ಷಕರಿಗೆ ನಮಸ್ತೆ ಎಂದು ಶುಭ ಕೋರಿದ ರಿಕಿ ಕೇಜ್‌, ನಂತರ ವಸುಧೈವ ಕುಟುಂಬಕಂ ಎಂಬಂತೆ ಎಲ್ಲರಿಗೂ ಪ್ರೀತಿಯನ್ನೇ ಹಂಚುವುದು ನಮ್ಮ ಸಂಗೀತದ ಆಶಯವಾಗಿದೆ ಎನ್ನುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಜಾಗತಿಕ ವೇದಿಕೆಯಲ್ಲಿ ಸಾರುವ ಮೂಲಕ ಮೆಚ್ಚುಗೆ ಗಳಿಸಿದರು. ಇದೇ ವೇಳೆ ಬೆಂಗಳೂರು ಮೂಲದ ಲಹರಿ ಆಡಿಯೋ ಕಂಪನಿಗೆ ಕೃತಜ್ಞತೆ ಸಲ್ಲಿಸಿದರು.

ಯಾವ ಆಲ್ಬಮ್‌? ಅದರಲ್ಲಿ ಏನಿದೆ?: ಬ್ರಿಟನ್ನಿನ ಸ್ಟೆವಾರ್ಟ್‌ ಕೋಪ್‌ಲ್ಯಾಂಡ್‌ ಜೊತೆ ಸೇರಿ ರಿಕಿ ಕೇಜ್‌ ಸಂಗೀತ ಸಂಯೋಜಿಸಿರುವ ‘ಡಿವೈನ್‌ ಟೈಡ್ಸ್‌’ ಎಂಬ ಹಿಂದಿ ಆಲ್ಬಮ್‌ಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ. ಇದರಲ್ಲಿ ಒಂಭತ್ತು ಗೀತೆಗಳಿವೆ. ‘ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕನ್ನು ಹಂಚುವಲ್ಲಿ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯೂ ಮಹತ್ವದ ಪಾತ್ರ ವಹಿಸುತ್ತದೆ’ ಎಂಬ ಸಂದೇಶವನ್ನು ಈ ಗೀತೆಗಳು ಸಾರುತ್ತವೆ. 2021ರಲ್ಲಿ ಈ ಆಲ್ಬಮ್‌ ಬಿಡುಗಡೆಯಾಗಿ ಹಲವು ಜಾಗತಿಕ ಮಟ್ಟದ ಪ್ರಶಸ್ತಿಗಳನ್ನು ಪಡೆದಿದೆ.

ಆಲ್ಬಮ್‌ನಲ್ಲಿ ಇಬ್ಬರು ಕನ್ನಡಿಗರು: ಗ್ರ್ಯಾಮಿ ವಿಜೇತ ‘ಡಿವೈನ್‌ ಟೈಡ್ಸ್‌’ನಲ್ಲಿ ‘ಹಿಮಾಲಯಾಸ್‌’ ಎಂಬ ಗೀತೆಯೊಂದಿದೆ. ಅದರಲ್ಲಿ ಕನ್ನಡದ ಪ್ರಸಿದ್ಧ ಗಾಯಕರಾದ ಅರುಣ್‌ ಕುಮಾರ್‌ ಮತ್ತು ವಾರಿಜಾಶ್ರೀ ವೇಣುಗೋಪಾಲ್‌ ಹಾಡಿದ್ದಾರೆ.

ಗ್ರ್ಯಾಮಿ ಎಂದರೇನು?: ಅಮೆರಿಕದ ರೆಕಾರ್ಡಿಂಗ್‌ ಅಕಾಡೆಮಿ ಎಂಬ ಸಂಸ್ಥೆ ಕಳೆದ 62 ವರ್ಷಗಳಿಂದ ಅತ್ಯುತ್ತಮ ಸಂಗೀತ ಸಾಧಕರಿಗೆ ನೀಡುತ್ತಾ ಬಂದಿರುವ ಪ್ರತಿಷ್ಠಿತ ಪ್ರಶಸ್ತಿಯಿದು. ಗ್ರಾಮೋಫೋನ್‌ ಅವಾರ್ಡ್ಸ್ ಎಂಬುದು ಪೂರ್ಣ ಹೆಸರು. ಸಿನಿಮಾಕ್ಕೆ ಆಸ್ಕರ್‌ ಅಥವಾ ವಿವಿಧ ಕ್ಷೇತ್ರಗಳ ಸಾಧನೆಗೆ ನೊಬೆಲ್‌ ಇರುವಂತೆ ಸಂಗೀತಗಾರರಿಗೆ ಗ್ರ್ಯಾಮಿ ಪ್ರಶಸ್ತಿ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಪ್ರಶಸ್ತಿಯು ಗ್ರಾಮೋಫೋನ್‌ ರೂಪದ ಟ್ರೋಫಿಯನ್ನು ಒಳಗೊಂಡಿರುತ್ತದೆ.

ನಾನು ಚಿತ್ರರಂಗದಲ್ಲಿಯೇ ಉಳಿಯುತ್ತೇನೆಂದು ಅಂದುಕೊಂಡಿರಲಿಲ್ಲ; ದುಲ್ಕರ್ ಸಲ್ಮಾನ್

ರಿಕಿ ಕೇಜ್‌: ಅಮೆರಿಕದ ನಾರ್ತ್‌ ಕೆರೋಲಿನಾದಲ್ಲಿ ಭಾರತೀಯ ದಂಪತಿಗೆ 1981ರಲ್ಲಿ ಜನಿಸಿದ ರಿಕಿ ಕೇಜ್‌ ತಮ್ಮ 8ನೇ ವಯಸ್ಸಿನಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆಕ್ಸ್‌ಫರ್ಡ್‌ ಕಾಲೇಜಿನಿಂದ ದಂತ ವೈದ್ಯಕೀಯ ಪದವಿ ಪಡೆದಿರುವ ಇವರು ದಂತವೈದ್ಯರಾಗಿ ಕೆಲಸ ಮಾಡದೆ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು 30ಕ್ಕೂ ಹೆಚ್ಚು ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯ ಜೊತೆಗೂ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ 2003ರಿಂದ ‘ರೆವೊಲ್ಯೂಷನ್‌’ ಹೆಸರಿನ ಸ್ವಂತ ಸ್ಟುಡಿಯೋ ಹೊಂದಿದ್ದಾರೆ. 3000ಕ್ಕೂ ಹೆಚ್ಚು ಜಾಹೀರಾತು ಜಿಂಗಲ್‌ಗಳನ್ನು ರೂಪಿಸಿರುವ ಅವರು, ಕೆಲ ಕನ್ನಡದ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.

click me!