
ವಾಷಿಂಗ್ಟನ್(ಅ.03): ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್ ಸಾಂಕ್ರಾಮಿಕಕ್ಕೆ(Covid 19) ತುತ್ತಾಗಿರುವ ಅಮೆರಿಕದಲ್ಲಿ(USA), ಸೋಂಕಿಗೆ ಬಲಿಯಾದವರ ಸಂಖ್ಯೆ ಇದೀಗ 7 ಲಕ್ಷ ದಾಟಿದೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ಪೈಕಿ 1 ಲಕ್ಷ ಜನರು ಕಳೆದ ಮೂರು ತಿಂಗಳಲ್ಲಿ ಸಾವನ್ನಪ್ಪಿದ್ದಾರೆ.
ಡೆಲ್ಟಾ(Delta) ಹಾವಳಿಯಿಂದಾಗಿ ದೇಶದಲ್ಲಿ ಮತ್ತೊಮ್ಮೆ ಸೋಂಕು(Covid 19) ಮತ್ತು ಸಾವು ಏರಿಕೆ ಕಂಡು, ನಿಧಾನವಾಗಿ ಇಳಿಕೆಯ ಹಾದಿಯಲ್ಲಿ ಸಾಗುತ್ತಿರುವ ಸುಳಿವುಗಳು ಲಭ್ಯವಾಗಿರುವ ಬೆನ್ನಲ್ಲೇ, 7 ಲಕ್ಷ ಜನರ ಸಾವಿನ ನೋವಿನ ಅಂಕಿ ಅಂಶಗಳು ಹೊರಬಿದ್ದಿವೆ.
ದೇಶದಲ್ಲಿ ಇದುವರೆಗೆ 4.4 ಕೋಟಿ ಜನರಿಗೆ ಸೋಂಕು ತಗುಲಿದ್ದು, 7 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಇನ್ನೂ ಅಂದಾಜು 1 ಕೋಟಿ ಸಕ್ರಿಯ ಸೋಂಕಿತರಿದ್ದಾರೆ. ಈ ಪೈಕಿ 20000 ಜನರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆ ಇ್ನನಷ್ಟು ಏರುವ ಆತಂಕವೂ ಇದೆ.
ಈಗಲೂ ಅಮೆರಿಕದಲ್ಲಿ ನಿತ್ಯ ಸರಾಸರಿ 1.12 ಲಕ್ಷ ಕೇಸು ದಾಖಲಾಗುತ್ತಿದೆ 1800-1900 ಜನರು ಸಾವನ್ನಪ್ಪುತ್ತಿದ್ದಾರೆ. ಅಮೆರಿಕ 33 ಕೋಟಿ ಜನಸಂಖ್ಯೆ ಹೊಂದಿದ್ದು, ಇದುವರೆಗೆ 40 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ.
ವಿಶ್ವದಲ್ಲಿ 50 ಲಕ್ಷ ದಾಟಿದ ಕೋವಿಡ್ ಮೃತರ ಸಂಖ್ಯೆ
ವಿಶ್ವದಲ್ಲಿ ಕೋವಿಡ್ 19 ಸಾಂಕ್ರಾಮಿಕದಿಂದ ಸಾವೀಗೀಡಾವರ ಸಂಖ್ಯೆ 50 ಲಕ್ಷದಾಟಿದೆ. ಮೊದಲ 25 ಲಕ್ಷ ಸಾವುಗಳು ಒಂದು ವರ್ಷದ ಅವಧಿಯಲ್ಲಿ ಸಂಭವಿಸಿದ್ದರೆ, ನಂತರದ 25 ಲಕ್ಷ ಸಾವುಗಳು 8 ತಿಂಗಳಲ್ಲಿ ಘಟಿಸಿವೆ. ಕೋವಿಡ್ ಸೋಂಕಿನಿಂದಾಗಿ 2020ರ ಜನವರಿ 9ರಂದು ವುಹಾನ್‌ನಲ್ಲಿ ಮೊದಲ ಸಾವು ಸಂಭವಿಸಿತ್ತು. ಭಾರತದಲ್ಲಿ ಮೊದಲ ಕೋವಿಡ್ ಸಾವು 2020ರ ಮಾ.10ರಂದು ಕರ್ನಾಟಕದಲ್ಲಿ ಸಂಭವಿಸಿತ್ತು.
ಅತಿ ಹೆಚ್ಚಿನ ಸಾವಿನ ಟಾಪ್ 3 ದೇಶಗಳು
ಅಮೆರಿಕ 7.00 ಲಕ್ಷ
ಬ್ರೆಜಿಲ್ 5.97 ಲಕ್ಷ
ಭಾರತ 4.48 ಲಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ