ಲಡಾಖ್‌ ಗಡಿಯಲ್ಲಿ ಚೀನಾ ಸೇನೆ ಟೆನ್ಷನ್‌!

By Suvarna NewsFirst Published Oct 3, 2021, 8:20 AM IST
Highlights

* ಕೆಲ ತಿಂಗಳಿಂದ ಭಾರಿ ಸೈನಿಕರ ಜಮಾವಣೆ

* ಇದು ಕಳವಳಕಾರಿ: ಭೂಸೇನಾ ಮುಖ್ಯಸ್ಥ

* ಲಡಾಖ್‌ ಗಡಿಯಲ್ಲಿ ಚೀನಾ ಸೇನೆ ಟೆನ್ಷನ್‌

ಲಡಾಖ್‌(ಅ.03): ಕಳೆದ ಕೆಲ ತಿಂಗಳನಿಂದ ಪೂರ್ವ ಲಡಾಖ್‌(Ladakh) ಗಡಿಯಲ್ಲಿ ಚೀನಾ ತನ್ನ ಸೇನಾ ಜಮಾವಣೆಯನ್ನು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿಸಿದೆ. ಇದು ಕಳವಳಕಾರಿ ಬೆಳವಣಿಗೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜ.ಎಂ.ಎಂ.ನರವಣೆ ಹೇಳಿದ್ದಾರೆ. ಆದರೆ ಇದೇ ವೇಳೆ, ನಾವು ಕೂಡಾ ಅವರಿಗೆ ಸಮನಾದ ಪ್ರಮಾಣದಲ್ಲಿ ಸೇನೆ ಜಮಾವಣೆ ಮಾಡಿದ್ದೇವೆ. ಯಾವುದೇ ಪರಿಸ್ಥಿತಿ ಎದುರಿಸಲು ನಾವು ಸಿದ್ಧ ಎಂದು ಹೇಳುವ ಮೂಲಕ ಚೀನಾಕ್ಕೆ(China) ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.

ಪೂರ್ವ ಲಡಾಖ್‌ನಲ್ಲಿನ(East Ladakh) ಸೇನೆಯ ಸನ್ನದ್ಧ ಸ್ಥಿತಿ ಪರಿಶೀಲನೆಗಾಗಿ ಆಗಮಿಸಿದ್ದ ವೇಳೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ನರವಣೆ, ‘ಪೂರ್ವ ಲಡಾಖ್‌ ಮತ್ತು ಉತ್ತರ ಭಾಗದಲ್ಲಿ ಚೀನಾ ಸೇನೆ ಗಮನಾರ್ಹ ಪ್ರಮಾಣದಲ್ಲಿ ಸೇನಾ ನಿಯೋಜನೆ ಹೆಚ್ಚಿಸಿದೆ. ಮುಂಚೂಣಿ ನೆಲೆಗಳಲ್ಲಿ ಅವರ ಸೇನೆ ಜಮಾವಣೆ ಪ್ರಮಾಣ ಹೆಚ್ಚಳ, ಸಹಜವಾಗಿಯೇ ನಮಗೆ ಕಳವಳದ ವಿಷಯ. ಆದರೆ ಕಳೆದ 6 ತಿಂಗಳಿನಿಂದ ಗಡಿಯಲ್ಲಿ ಪರಿಸ್ಥಿತಿ ಸಹಜವಾಗಿದೆ’

‘ನಾವು ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಮಗೆ ಏನೆಲ್ಲಾ ಮಾಹಿತಿಗಳು ಲಭ್ಯವಾಗುತ್ತಿವೆಯೋ ಅದನ್ನು ಆಧರಿಸಿ ನಾವು ಕೂಡಾ ಅದಕ್ಕೆ ಸಮನಾದ ಮೂಲಸೌಕರ್ಯ, ಸೇನಾ ಜಮಾವಣೆ ಹೆಚ್ಚಿಸಿಕೊಳ್ಳುತ್ತಿದ್ದೇವೆ. ಈ ಹಂತದಲ್ಲಿ ನಾವು ನಮಗೆ ಎದುರಾಗಬಹುದಾದ ಯಾವುದೇ ಪರಿಸ್ಥಿತಿ ಎದುರಿಸಲು ಫäರ್ಣ ಸಜ್ಜಾಗಿದ್ದೇವೆ. ಆದರೆ ಯಾವುದೇ ಪ್ರದೇಶದಲ್ಲಿ ನಮ್ಮ ವಿರುದ್ಧ ಆಕ್ರಮಣಶೀಲ ನಡತೆ ತೋರುವ ಬಗ್ಗೆ ಅನುಮಾನವಿದೆ’ ಎಂದು ಹೇಳಿದ್ದಾರೆ.

ಕಳೆದ ವರ್ಷ ಪೂರ್ವ ಲಡಾಖ್‌ನಲ್ಲಿ ಚೀನಾ ಯೋಧರು, ಭಾರತದ ಕಣ್ಗಾವಲಿಗೆ ಒಳಪಟ್ಟಪ್ರದೇಶವನ್ನು ಪ್ರವೇಶಿಸಿ ಸಂಘರ್ಷಕ್ಕೆ ಕಾರಣವಾಗಿದ್ದರು. ಈ ವೇಳೆ ಉಭಯ ಸೇನೆಗಳ ನಡುವೆ ನಡೆದ ಮುಷ್ಠಿಕಾಳಗದಲ್ಲಿ ಚೀನಾದ 40ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿ, ಅದು ಭಾರೀ ಮುಖಭಂಗ ಎದುರಿಸಿತ್ತು. ನಂತರದಲ್ಲಿ ಉಭಯ ದೇಶಗಳು ಲಕ್ಷಾಂತರ ಸಂಖ್ಯೆಯಲ್ಲಿ ಯೋಧರು, ಅತ್ಯಾಧುನಿಕ ಶಸ್ತ್ರಾಸ್ತ್ರ ನಿಯೋಜಿಸಿದ್ದವು. ಹೀಗಾಗಿ ಇನ್ನೇನು ಯುದ್ಧ ನಡೆದೇ ಹೋಯ್ತು ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೆ ಉಭಯ ದೇಶಗಳ ನಡುವೆ ಹಲವು ಸುತ್ತಿನ ಮಾತುಕತೆ ಬಳಿಕ ಹಂತಹಂತವಾಗಿ ಸೇನಾ ವಾಪಸಾತಿ ಬಗ್ಗೆ ಎರಡೂ ದೇಶಗಳು ಒಪ್ಪಿದ್ದವು. ಆದರೆ ಒಂದೆಡೆ ಸೇನೆ ಹಿಂದಕ್ಕೆ ಕರೆಸಿಕೊಂಡಂತೆ ಮಾಡುತ್ತಿರುವ ಚೀನಾ, ಮತ್ತೊಂದು ಪ್ರದೇಶದಲ್ಲಿ ಸೇನಾ ಜಮಾವಣೆ ಹೆಚ್ಚಿಸುವ ಮೂಲಕ ತನ್ನ ಕುಠಿಲ ಬುದ್ದಿ ಪ್ರದರ್ಶಿಸುತ್ತಿದೆ.

ಲಡಾಖ್‌ ಗಡಿಗೆ ಹೌವಿಟ್ಜರ್‌ ಗನ್‌ ನಿಯೋಜಿಸಿದ ಭಾರತ

ಲಡಾಖ್‌ ಗಡಿಯಲ್ಲಿ ಚೀನಾ ಸೇನೆ ಜಮಾವಣೆ ಹೆಚ್ಚಾದ ಬೆನ್ನಲ್ಲೇ ಕೇಂದ್ರ ಸರ್ಕಾರ, ಕೆ9-ವಜ್ರ ಸ್ವಯಂಚಾಲಿತ ಹೌವಿಟ್ಜರ್‌ ಪಡೆಯನ್ನು ಮುಂಚೂಣಿ ಸೇನಾ ನೆಲೆಗಳಿಗೆ ರವಾನಿಸುವ ಮೂಲಕ ಚೀನಾಕ್ಕೆ ಸಡ್ಡು ಹೊಡೆದಿದೆ. 50 ಕಿ.ಮೀ. ದೂರದವರೆಗೆ ಬಾಂಬ್‌ ದಾಳಿ ನಡೆಸುವ ಸಾಮರ್ಥ್ಯವನ್ನು ಈ ಗನ್‌ಗಳನ್ನು ಹೊಂದಿವೆ. ಎತ್ತರದ ಪ್ರದೇಶಗಳಲ್ಲೂ ಈ ಗನ್‌ಗಳು ಕೆಲಸ ಮಾಡಬಲ್ಲವು. ಪ್ರಾಯೋಗಿಕ ಪರೀಕ್ಷೆ ಅತ್ಯಂತ ಯಶಸ್ವಿಯಾಗಿದೆ. ಹೀಗಾಗಿ ಇಡೀ ತುಕಡಿಯನ್ನು ನಿಯೋಜನೆ ಮಾಡಲಾಗಿದ್ದು, ಇದರಿಂದ ನಮಗೆ ನೆರವಾಗಲಿದೆ ಎಂದು ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಮುಕುಂದ್‌ ನರವಣೆ ಅವರು ತಿಳಿಸಿದ್ದಾರೆ. ಹೌವಿಟ್ಜರ್‌ ಗನ್‌ಗಳನ್ನು ಮುಂಬೈ ಮೂಲದ ಲಾರ್ಸನ್‌ ಅಂಡ್‌ ಟ್ಯೂಬ್ರೂ ಕಂಪನಿ ಉತ್ಪಾದಿಸಿದೆ.

click me!